ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಕೇಂದ್ರ ಬಜೆಟ್‌ನಲ್ಲಿ ರೂ. 200 ಕೋಟಿ ಮೀಸಲು

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022ರ ತಾಲಿಬಾನ್‌ಗಳ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆ ದೇಶಕ್ಕಾಗಿ ರೂ. 200 ಕೋಟಿ ಖರ್ಚು ಮಾಡಲಿದೆ.

ಭಾರತವು ಕಾಬೂಲ್‌ನಲ್ಲಿ ರಾಜತಾಂತ್ರಿಕ ಅಧಿಕಾರಿಯನ್ನು ಹೊಂದಿಲ್ಲ ಎಂಬುದು ಗಮನಾರ್ಹ. 2021ರ ಆಗಸ್ಟ್‌ನಲ್ಲಿ ಅಫ್ಘಾನ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ, ಅಲ್ಲಿದ್ದ ಭಾರತದ ರಾಯಭಾರಿ ಕಚೇರಿ ಮುಚ್ಚಲಾಗಿದೆ. ಅಫ್ಘಾನಿಸ್ತಾನವು ಕಳೆದ ಎರಡು ದಶಕಗಳಿಂದ ಭಾರತದ ಅನುದಾನ ಸ್ವೀಕರಿಸುತ್ತಿದೆ. ಕಳೆದ ವರ್ಷ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸರ್ಕಾರ ಭಾರತದಿಂದ ರೂ. 348 ಕೋಟಿ ಸ್ವೀಕರಿಸಿದೆ.

ಮಾನವೀಯ ನೆರವು

ಕಳೆದ ಎರಡು ತಿಂಗಳುಗಳಲ್ಲಿ, ಭಾರತವು ಅಫ್ಘಾನಿಸ್ತಾನಕ್ಕೆ ಹಲವಾರು ಔಷಧಿ ಮತ್ತು ಮಾನವೀಯ ನೆರವನ್ನು ಕಳುಹಿಸಿದೆ. ಮುಂಬರುವ ವಾರಗಳಲ್ಲಿ ಕಾಬೂಲ್‌ಗೆ ದೊಡ್ಡ ಪ್ರಮಾಣದ ಗೋಧಿಯನ್ನು ರವಾನಿಸುವ ನಿರೀಕ್ಷೆಯಿದೆ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಂಚಿಕೆಯ ಮೊತ್ತವನ್ನು ಈ ವರ್ಷ ಇದೇ ರೀತಿಯ ಸಹಾಯಕ್ಕಾಗಿ ಖರ್ಚು ಮಾಡುವ ನಿರೀಕ್ಷೆಯಿದೆ.

ಭೂತಾನ್‌ಗೆ ರೂ. 2266.24 ಕೋಟಿ ಮೀಸಲಿಟ್ಟಿದ್ದು, ಭೂತಾನ್ ಅತಿದೊಡ್ಡ ಹಂಚಿಕೆಯನ್ನು ಪಡೆದುಕೊಂಡಿದೆ. ಹಂಚಿಕೆಯ ಎರಡನೇ ಅತಿ ಹೆಚ್ಚು ಪಾಲನ್ನು (ರೂ. 900 ಕೋಟಿ) ಮಾರಿಷಸ್ ಪಡೆದಿದೆ. ಸಚಿವಾಲಯವು ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಕ್ರಮವಾಗಿ ರೂ. 300 ಕೋಟಿ ಮತ್ತು ರೂ.750 ಕೋಟಿ ನೀಡಲಿದೆ.

ಫೆಬ್ರವರಿ 2021ರ ಮಿಲಿಟರಿ ದಂಗೆಯ ನಂತರ ಪ್ರಸ್ತುತ ಅಂತರ್ಯುದ್ಧದಲ್ಲಿ ನಲುಗುತ್ತಿರುವ ಮ್ಯಾನ್ಮಾರ್‌ಗೆ ರೂ. 600 ಕೋಟಿ ಮೀಸಲಿಡಲಾಗಿದೆ. ಭಾರತವು ಬಿಕ್ಕಟ್ಟುಪೀಡಿತ ಮ್ಯಾನ್ಮಾರ್‌ ದೇಶದೊಂದಿಗೆ ರಾಜತಾಂತ್ರಿಕ ಸಂಪರ್ಕ ಹೊಂದಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಕಳೆದ ವರ್ಷ ಮ್ಯಾನ್ಮಾರ್‌ಗೆ ಭೇಟಿ ನೀಡಿ, ಮ್ಯಾನ್ಮಾರ್‌ನಲ್ಲಿ ಆಗುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದರು.

ಆಫ್ರಿಕಾದಲ್ಲಿ ಹೊಸ ರಾಯಭಾರ ಕಚೇರಿಗಳನ್ನು ತೆರೆಯುವ ಗುರಿ ಹೊಂದಿರುವ ಭಾರತದ ವಿದೇಶಾಂಗ ಸಚಿವಾಲಯವು ಆಫ್ರಿಕಾ ಖಂಡಕ್ಕೆ ರೂ. 250 ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ.

Please follow and like us: