ವಿಶ್ವಪರಂಪರೆ ಪಟ್ಟಿಗೆ ಹೊಯ್ಸಳ ದೇಗುಲಗಳು

ಭಾರತದಿಂದ 2022- 2023ರ ಸಾಲಿನ ವಿಶ್ವಪರಂಪರೆಯ ಪಟ್ಟಿಗೆ ರಾಜ್ಯದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನು ನಾಮನಿರ್ದೇಶನ ಮಾಡುವ ಮೂಲಕ ಅಂತಿಮಗೊಳಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಸೋಮವಾರ ತಿಳಿಸಿದೆ.

ದೇಶದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾದ ಹೊಯ್ಸಳರ ಕಾಲದ ಐತಿಹಾಸಿಕ ಪವಿತ್ರ ಸ್ಥಳಗಳ ಸಮಷ್ಠಿ ಎಂದೇ ಹೆಸರಾದ ಈ ದೇಗುಲಗಳ ಪಟ್ಟಿ 2014 ಏಪ್ರಿಲ್ 15 ರಿಂದ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಯುನೆಸ್ಕೋದ ಖಾಯಂ ಪ್ರತಿನಿಧಿಯಾಗಿರುವ ಭಾರತದ ವಿಶಾಲ್ ವಿ ಶರ್ಮಾ, ಸೋಮವಾರ ಔಪಚಾರಿಕವಾಗಿ ಹೊಯ್ಸಳ ದೇವಾಲಯಗಳನ್ನು ನಾಮನಿರ್ದೇಶನ ಮಾಡಿ ಯುನೆಸ್ಕೋ ವಿಶ್ವಪರಂಪರೆಯ ನಿರ್ದೇಶಕ ಲಾಜರೆ ಎಲೌಂಡೌರಿಗೆ ಸಲ್ಲಿಸಿದ್ದಾರೆ. ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದ ನಂತರ ಈ ಕುರಿತ ತಾಂತ್ರಿಕ ಪರಿಶೀಲನೆ ನಡೆಯಲಿದೆ.

“ಹೊಯ್ಸಳರ ಪವಿತ್ರ ಸ್ಥಳಗಳ ಸಮಷ್ಠಿಯನ್ನು ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಗೆ ನಾಮನಿರ್ದೇಶನ ಮಾಡಲು ಭಾರತ ಹೆಮ್ಮೆಪಡುತ್ತದೆ. ಹೊಯ್ಸಳ ಸಾಮ್ರ್ಯಾಜ್ಯದ ಕಲಾವೈಭವಕ್ಕೆ ಪ್ರತೀಕವಾಗಿರುವ ಪವಿತ್ರ ಸ್ಥಳಗಳ ಕಲಾಗುಚ್ಛವನ್ನು ಏಷ್ಯಾದ ಮೇರುಶಿಲ್ಪಕಲೆಗಳಲ್ಲಿ ಒಂದೆಂದು ಇತಿಹಾಸತಜ್ಞರು ಗುರುತಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸ್ಥಳ ಮೌಲ್ಯಮಾಪನ ನಡೆಯಲಿದೆ. ಮುಂದಿನ ವರ್ಷದ ಜುಲೈ-ಆಗಸ್ಟ್‌ನಲ್ಲಿ ದಾಖಲೆ-ಪತ್ರಗಳ ಪರಿಶೀಲನೆ ನಡೆಯಲಿದೆ ಎಂದು ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ.

ಈಶಾನ್ಯ ರಾಜ್ಯಗಳ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ, ಸಂಸ್ಕೃತಿ ಖಾತೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಮಾತನಾಡಿ, ಹೊಯ್ಸಳರ ಕಾಲದ ದೇವಾಲಯಗಳ ಪವಿತ್ರ ಸ್ಥಳಗಳ ಸಮಷ್ಠಿಯನ್ನು ವಿಶ್ವಪರಂಪರೆ ಪಟ್ಟಿಗೆ ಸಲ್ಲಿಸಿರುವುದು ಭಾರತಕ್ಕೆ ಪಾಲಿಗೆ ಅದ್ಭುತ ಕ್ಷಣ. ಕೇಂದ್ರ ಸರ್ಕಾರ, ‘ವಿಕಾಸ್’ (ಅಭಿವೃದ್ಧಿ) ಮತ್ತು ‘ವಿರಾಸತ್’ (ಪರಂಪರೆ) ಎರಡರ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ಮೂರು ಹೊಯ್ಸಳ ದೇವಾಲಯಗಳು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಮೇಲ್ವಿಚಾರಣೆಯಲ್ಲಿರುವ ಸ್ಮಾರಕಗಳಾಗಿದ್ದು, ಇವುಗಳ ಸಂರಕ್ಷಣೆ ಹಾಗೂ ನಿರ್ವಹಣೆ ಕೆಲಸ ನಡೆಯುತ್ತಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

Please follow and like us: