ವಿಜ್ಞಾನಿಗಳ ನಿದ್ದೆಗೆಡಿಸಿರುವ ರೇಡಿಯೋ ತರಂಗ ಸೂಸುವ ಅಪರಿಚಿತ ಶಕ್ತಿಪುಂಜ

ವಿಸ್ಮಯಗಳಿಂದ ತುಂಬಿರುವ ನಭೋಮಂಡಲದಲ್ಲಿ ಇತ್ತೀಚೆಗೆ ಕಂಡುಬಂದಿರುವ ವಿದ್ಯಮಾನವೊಂದು ಜಾಗತಿಕವಾಗಿ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆಕಾಶದಲ್ಲಿ ದೈತ್ಯ ಶಕ್ತಿಪುಂಜವಾಗಿ ಕಾಣುವ ಕಾಯವೊಂದರಿಂದ ನಿರಂತರವಾಗಿ ರೇಡಿಯೋ ಸಿಗ್ನಲ್ ಬರುತ್ತಿರುವುದಾಗಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಮೊದಲ ಬಾರಿಗೆ ಆವಿಷ್ಕರಿಸಿದ್ದರು.

ಆಸ್ಟ್ರೇಲಿಯಾದ ಖಗೋಳ ಭೌತಶಾಸ್ತ್ರಜ್ಞ ನತಾಶಾ ಹರ್ಲಿ-ವಾಕರ್ ಈ ಕೌತುಕವನ್ನು ಆವಿಷ್ಕರಿಸಿದ್ದು, ಈ ರೇಡಿಯೋ ತರಂಗಗಳು ಪ್ರತಿ 18 ನಿಮಿಷ 18 ಸೆಕೆಂಡಿಗೆ ಒಮ್ಮೆ ನಿರಂತರವಾಗಿ ಬಿತ್ತರವಾಗುತ್ತಿವೆ ಎಂದು ತಿಳಿಸಿದ್ದಾರೆ. ಗಂಟೆಗೆ ಮೂರು ಬಾರಿ ಬರುತ್ತಿರುವ ರೇಡಿಯೋ ಸಂದೇಶಗಳ ಮೂಲ ಪತ್ತೆಯಾಗದೆ, ಖಗೋಳ ವಿಜ್ಞಾನಿಗಳ ಮಟ್ಟಿಗೆ ಈ ವಿದ್ಯಮಾನ ಅಕ್ಷರಶಃ ಭೂತಚೇಷ್ಟೆ ಕಂಡಂತಾಗಿದೆ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹೊಸ ಆವಿಷ್ಕಾರದ ಸುದ್ದಿ ವೈಜ್ಞಾನಿಕ ಸಮುದಾಯದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು, ವಿಜ್ಞಾನಿಗಳು ಈ ವಿದ್ಯಮಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ರೇಡಿಯೋ ತರಂಗಗಳನ್ನು ಬಿಡುಗಡೆ ಮಾಡುತ್ತಿರುವ ಕಾಯವು ಭೂಮಿಯಿಂದ ಸುಮಾರು 4,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದು, ಬಲವಾದ ಕಾಂತೀಯ ಬಲವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Please follow and like us: