ಉತ್ತರ ಯುರೋಪ್ ಮೇಲೆ ಚಂಡಮಾರುತವು ತೀವ್ರವಾಗಿ ಅಪ್ಪಳಿಸಿದ್ದು, ಅಲ್ಲಿನ ಕರಾವಳಿ ಭಾಗದ ಪರಿಸ್ಥಿತಿ ಬಿಗಡಾಯಿಸಿದೆ. ಹಲವರು ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ರದ್ದುಗೊಳಿಸಲಾಗಿದೆ.
ಜರ್ಮನಿಯಲ್ಲಿ ನಾಡಿಯಾ ಮತ್ತು ಇತರ ದೇಶಗಳಲ್ಲಿ ಮಲಿಕ್ ಎಂದು ಕರೆಯಲ್ಪಡುವ ಚಂಡಮಾರುತದ ಅಬ್ಬರವು ಶನಿವಾರದಿಂದಲೇ ತೀವ್ರಗೊಂಡಿದೆ. ಚಂಡಮಾರುತವು ಪೂರ್ವಾಭಿಮುಖವಾಗಿ ಅಪ್ಪಳಿದ ಬೆನ್ನಲ್ಲೇ, ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ಅಗ್ನಿಶಾಮಕ ಇಲಾಖೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಮತ್ತು ಜನರು ಸಾಧ್ಯವಾದಷ್ಟೂ ಮನೆಯಿಂದ ಹೊರಬರದಂತೆ ಆದೇಶಿಸಿದೆ.
ಸ್ಕಾಟ್ಲೆಂಡ್ನಲ್ಲಿ ಗಂಟೆಗೆ 160 ಕಿಲೋಮೀಟರ್ ವೇಗವಾಗಿ ಗಾಳಿ ಬೀಸುತ್ತಿದೆ. ಇಂಗ್ಲೆಂಡಿನಲ್ಲಿ ಹಲವು ವಿದ್ಯುತ್ ಕಂಬಗಳ ಉರುಳಿದ್ದು, ಸುಮಾರು 1,30,000 ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ದೇಶದಾದ್ಯಂತ 6,80,000 ಕ್ಕೂ ಹೆಚ್ಚು ಜನರು ವಿದ್ಯುತ್ ಇಲ್ಲದೆ ಪರಿತಪಿಸಿದ್ದಾರೆ.
ಜರ್ಮನಿ, ಸ್ಕಾಟ್ಲೆಂಡ್, ಪೋಲೆಂಡ್, ಇಂಗ್ಲೆಂಡ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್ನಲ್ಲಿ ಹಲವಾರು ಸಾವುಗಳು ವರದಿಯಾಗಿವೆ.
ಜರ್ಮನ್ನಲ್ಲಿರುವ ಎಲ್ಬೆ ನದಿಯು ತುಂಬಿ ಹರಿಯುತ್ತಿದ್ದು, ಹ್ಯಾಂಬರ್ಗ್ ನಗರವು ಭಾಗಶಃ ಜಲಾವೃತಗೊಂಡಿದೆ. ಉತ್ತರ ಜರ್ಮನ್ ಕರಾವಳಿಯ ಕುಕ್ಸ್ಹೇವನ್ ಬಂದರಿನಲ್ಲಿ ಸರಕು ಸಾಗಣೆಯ ಒಂದು ಖಾಲಿ ಹಡಗು ಬಲವಾದ ಗಾಳಿಯಿಂದಾಗಿ ಸಮುದ್ರದಲ್ಲಿ ತೇಲಿಹೋಗಿದೆ.
ಉತ್ತರ ಜರ್ಮನ್ ರಾಜ್ಯಗಳಾದ ಷ್ಲೆಸ್ವಿಗ್-ಹೋಲ್ಸ್ಟೈನ್ ಮತ್ತು ಮೆಕ್ಲೆನ್ಬರ್ಗ್-ವೆಸ್ಟರ್ನ್ ಪೊಮೆರೇನಿಯಾದ ಇತರ ಭಾಗಗಳೂ ಪ್ರವಾಹಕ್ಕೆ ಸಿಲುಕಲಿವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಮರಗಳು ಬಿದ್ದ ಪರಿಣಾಮ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಡ್ಯಾನಿಶ್ ರಾಜಧಾನಿ ಕೋಪನ್ ಹ್ಯಾಗನ್ ಇರುವ ಜಿಲ್ಯಾಂಡ್ನಲ್ಲಿ ಬಹುತೇಕ ಎಲ್ಲಾ ಪ್ರಾದೇಶಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.