
ಸ್ವಯಂ ಸೇವಾ ಮನೋಭಾವ ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಅಲ್ಲೊಂದು ಇಲ್ಲೊಂದು ಆದರ್ಶಗಳು ಹೊಸ ಸಾಧ್ಯತೆ ಭರವಸೆಯನ್ನು ಹುಟ್ಟು ಹಾಕುತ್ತಿರುತ್ತವೆ.
ಹಾಸನಕ್ಕೆ ಹೋದಾಗ ಸತ್ಯವಂಗಲ ಕೆರೆ ಏರಿ ಮೇಲೆ ಹಾಗೆಯೇ ವಾಕಿಂಗ್ ಹೋಗುವುದು ರೂಢಿ. ಕೆರೆಯ ಮೇಲೆ ವಾಕಿಂಗ್ ಮಾಡುವಾಗ ಊರಿನ ಜನರು ಎದುರಾದರು. ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಆತ್ಮೀಯರು ಮತ್ತು ಪರಿಚಯಸ್ಥರು.
ಹಾಗೆ ಅನ್ನಿಸತೊಡಗಿತು. ಮೂರು ದಶಕಗಳ ಹಿಂದೆ ನೋಡಿದ ಕೆರೆ ಇದೇನಾ? ಅನ್ನುವಷ್ಟರ ಮಟ್ಟಿಗೆ ಕೆರೆ, ಹಲವು ರೂಪಾಂತರ ಹೊಂದಿ, ತನ್ನ ಬದುಕಿನ ಮತ್ತೊಂದು ಮಗ್ಗಲು ಬದಲಿಸಿದೆ.
ಅಂದು, ಕೆರೆ ಊರ ಜನರ ಹೊಟ್ಟೆ ತುಂಬಿಸುತಿತ್ತು. ಅಷ್ಟು ಸಮೃದ್ಧ ಭತ್ತ ಬೆಳೆಯುತ್ತಿದ್ದ ಜಾಗ ಅದು. ಇಡೀ ಬಯಲು ಹಸಿರುಮಯವಾದಾಗ ನೋಡುವುದೇ ಒಂದು ಅಂದ. ಭತ್ತ ಸಸಿಯಿಂದ ಹಿಡಿದು ತೆನೆಕಟ್ಟಿ, ಕೊಯ್ಲಿಗೆ ಬರುವ ತನಕ ಅದರ ಭಾವ ಭಂಗಿಗೆ ಮಾರು ಹೋಗದವರಿಲ್ಲ. ತೆನೆ ತುಂಬಿ ಬೀಗುವಾಗ ಬಂಗಾರದ ಬೆಳೆ ವಯ್ಯಾರವನ್ನ ಎಷ್ಟು ನೋಡಿದರೂ ಸೌಂದರ್ಯದ ಹಸಿವು ಇಂಗುವುದಿಲ್ಲ.
ಇಂಥ ಭತ್ತದ ಸಣ್ಣ ತೊಟ್ಟಿಲು ಹೊಂದಿದ್ದ ಹೆಗ್ಗಳಿಕೆ ಸತ್ಯವಂಗಲ ಕೆರೆಯದ್ದು.
ಶತಮಾನಗಳ ಇತಿಹಾಸ ಹೊಂದಿ, ಬದುಕಿ ಬಾಳಿದ, ಜನ ಸಮುದಾಯದ ಬದುಕು ಹಸನು ಮಾಡಿದ ಹಾಸನದ ಸುತ್ತಲೂ ಇರುವ ಸತ್ಯವಂಗಲ ಕೆರೆ, ಚನ್ನಪಟ್ಟಣ ಕೆರೆ, ಹುಣಸಿನಕೆರೆ ಸೇರಿದಂತೆ ಹಲವು ಕೆರೆ ಅವಸಾನದ ಅಂಚಿಗೆ ಬಂದಿವೆ. ಕಾಂಕ್ರೀಟ್ ನಗರಿ ಕ್ರಮೇಣ ಕಟ್ಟೆಗಳನ್ನು ನುಂಗಿದ್ದಲ್ಲದೆ, ಕೆರೆಗಳನ್ನು ಆಕ್ರಮಿಸಿಕೊಂಡು ಜೀರ್ಣಿಸಕೊಂಡಿದೆ. ಬೆಂಗಳೂರು ಮಹಾ ಮಹಾನಗರಿಯೊಳಗೆ 168 ಕೆರೆಗಳು ನಾಪತ್ತೆಯಾದದ್ದು ಇನ್ನೂ ಪತ್ಯೆಯಾಗಿಲ್ಲ. ನಗರೀಕರಣದ ಮೋಹ, ಹಣದ ದಾಹ, ಅಷ್ಟು ಕೆರೆಗಳನ್ನು ನುಂಗಿ ಜೀರ್ಣಿಸಿಕೊಂಡಿರುವಾಗ ಇನ್ನು ಹಾಸನದ ಕೆರೆಗಳೇನು ಮಹಾ!?
ಇಂಥದ್ದೆ ನೂರಾರು, ಸಾವಿರಾರು ಕೆರೆಗಳ ಇತಿಹಾಸ ನಾಡಿನ ಉದ್ದಗಲಕ್ಕೂ ಹರಡಿಕೊಂಡಿವೆ. ಯಾವ ಪಟ್ಟಣ, ನಗರಕ್ಕೆ ಹೋದರೂ, ಇಂಥದೊಂದು ಕತೆ ಕಣ್ಣು ಮುಂದೆ ಬಂದು ನಿಲ್ಲುತ್ತದೆ.
ಹೀಗೆ,
ಅವಸಾನದ ಅಂಚಿಗೆ ಸರಿಯುತ್ತಿದ್ದ ಸತ್ಯವಂಗಲ, ಹುಣಸಿನಕೆರೆ ಉಳಿಸಿಕೊಳ್ಳಲು ಹಾಸನದ ನಾಗರಿಕ ಮನಸ್ಸುಗಳು ಮುಂದಾಗಿವೆ. ಹಸಿರು ಭೂಮಿ ಪ್ರತಿಷ್ಠಾನ ಅಭಿನಂದನಾರ್ಹ ಕೆಲಸ ಮಾಡುತ್ತಿದೆ.
ಅಲ್ಲಿ ಸತ್ಯವಂಗಲ ಕೆರೆ ಏರಿ ಮೇಲೆ ಶ್ರಮದಾನದಲ್ಲಿದ್ದ ಬೋರೇಗೌಡರು, ಪಾಪೇಗೌಡರು, ಗೌಡೇಗೌಡರು, ಗೋಪಾಲ್ ಸೇರಿದಂತೆ ಒಂದು ತಂಡವೇ ಅಲ್ಲಿತ್ತು. ಯಾವ ಹಮ್ಮು ಬಿಮ್ಮು ಇಲ್ಲದೆ ಪ್ರತಿ ಭಾನುವಾರ ಅಲ್ಲಿ ಸೇವೆ ಮಾಡುವ ಪರಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ನೂರು ಭಾಷಣಕ್ಕಿಂತ ಇಂಥದೊಂದು ಸಾರ್ಥಕ ಕಾಯಕ ಕೆಲಸವೇ ಲೇಸು.
ಭತ್ತ ಬೆಳೆದು ಬೀಗುತ್ತಿದ್ದ ಸತ್ಯವಂಗಲ ಕೆರೆ ಅಚ್ಚುಕಟ್ಟಿನ ಗದ್ದೆಗಳಲ್ಲಿ ಲೇಔಟ್ ಎದ್ದು ನಿಂತಿವೆ. ಕೆರೆಯೂ ಅಲ್ಲಲ್ಲಿ ಅತಿಕ್ರಮಣಕ್ಕೆ ಒಳಗಾಗುತ್ತಾ ಇನ್ನೇನು ಇದರ ಕತೆ ಮುಗಿಯಿತು ಎನ್ನುವಾಗ ಬೋರ್ ವೆಲ್ ಬತ್ತಿ ಹೋಗಿ ಹಾಸನದಲ್ಲಿ ತಲೆ ದೋರಿದ ಕುಡಿಯುವ ನೀರಿನ ಸಮಸ್ಯೆ ಕೆರೆಗಳನ್ನು ನೆನಪಿಸಿವೆ. ಈ ಕರುಣೆ ಸತ್ಯವಂಗಲ ಕೆರೆಯನ್ನು ಉಳಿಸಿದೆ.
ಕೆರೆ ಏರಿ ಮೇಲೆ ವಾಕಿಂಗ್ ಮಾಡುವುದೇ ಒಂದು ವಿಭಿನ್ನ ಅನುಭವ. ಸತ್ಯವಂಗಲ ಕೆರೆಯನ್ನು ಇನ್ನೂ ಚೆಂದವಾಗಿಸಿ, ಬದುಕಿಸಿಕೊಳ್ಳುವ ಪ್ರಯತ್ನ ಸಂಘಟಿತವಾಗಿ ನಡೆದಿದೆ.
ಕೆರೆಯ ಒಡಲಲ್ಲಿ ಈಗ ನೀರಿದೆ. ಬೆಳೆ ಬೆಳೆಯಲು ಗದ್ದೆಗಳಿಲ್ಲ. ಆದರೆ, ಹಾಸನದ ಒಂದಷ್ಟು ಭಾಗದಲ್ಲಿ ಅಂತರ್ ಜಲ ಮತ್ತೆ ಪುನರ್ಜೀವನಗೊಂಡಿದೆ. ಬೋರ್ ವೆಲ್ ಗಳಲ್ಲಿ ನೀರಿನ ಸೆಲೆ ಮತ್ತೆ ಚಿಗುರಿಸಿದ ಸಂತೃಪ್ತಿ ಸತ್ಯವಂಗಲ ಕೆರೆಗಿದೆ.