ನಾರಾಯಣ ಗುರು ಚಳುವಳಿ: ದಿನೇಶ್ ಅಮೀನಮಟ್ಟು (ಭಾಗ 1 )

• ನಾರಾಯಣ ಗುರುಗಳ ಮಹತ್ವ ಅರಿಯಬೇಕಾದರೆ, ಅವರಿಗಿಂತ ಹಿಂದಿನ ಕೇರಳದ ಸ್ಥಿತಿಯ ಸ್ಥೂಲ ಚಿತ್ರಣ ತಿಳಿದುಕೊಳ್ಳುವುದು ಅನಿವಾರ್ಯ. ದರಿದ್ರರಲ್ಲಿ, ರೋಗಿಗಳಲ್ಲಿ ದೇವರನ್ನು ಕಾಣಬೇಕೆಂದು ಹೇಳಿದ ವಿವೇಕಾನಂದರು ಕೇರಳ ಮನೋರೋಗಿಗಳ ಆಸ್ಪತ್ರೆ ಎಂದು ಹೇಳಿ ಕೈಚೆಲ್ಲಿ ಹೋಗಿದ್ದರು.
• ಜಾತಿ ವ್ಯವಸ್ಥೆ ಆ ರೀತಿಯ ಭೀಕರ ಮನೋರೋಗಿಯನ್ನು ಅಲ್ಲಿ ಸೃಷ್ಟಿಸಿತು. ದೇವಸ್ಥಾನ ಪ್ರವೇಶ ದೂರವೇ ಉಳಿಯಿತು. ಆದರೆ, ಎದುರಿನ ರಸ್ತೆಯಲ್ಲಿಯೂ ಅಸ್ಪøಶ್ಯರು ನಡೆಯುವಂತಿರಲಿಲ್ಲ. ಗಾಂಧೀಜಿ ಮತ್ತು ನಾರಾಯಣ ಗುರು ಮಾರ್ಗದರ್ಶನದಲ್ಲಿಯೇ ನಡೆದ ಐತಿಹಾಸಿಕ ವೈಕಂ ಸತ್ಯಾಗ್ರಹ ನಡೆದದ್ದು ದೇವಸ್ಥಾನ ಪ್ರವೇಶಕ್ಕಾಗಿ ಅಲ್ಲ, ಅದರ ಮುಂಭಾಗದ ರಸ್ತೆಯಲ್ಲಿ ನಡೆದಾಡುವ ಸ್ವಾತಂತ್ರ್ಯಕ್ಕಾಗಿ ಎಂಬುದು ಗಮನಾರ್ಹ


• ಕೆಳಜಾತಿ ಜನರು ಮಧ್ಯಾಹ್ನದ ಬಿಸಿಲಿನಲ್ಲಿ ಮಾತ್ರ ಹೊರಗಡೆ ಬರಬೇಕಿತ್ತು. ಯಾಕೆಂದರೆ, ಉಳಿದ ಸಮಯಗಳಲ್ಲಿ ಉದ್ದಕ್ಕೆ ಚಾಚಿಕೊಳ್ಳುವ ನೆರಳು ಎದುರಿಗೆ ಬರುವ ಸವರ್ಣಿಯರ ಮೇಲೆ ಬಿದ್ದು ಅಪವಿತ್ರವಾಗುವ ಭಯ. ಆತ ಕಾಲಿಗೆ ಚಪ್ಪಲಿ, ತಲೆಗೆ ವಸ್ತ್ರ ಹಾಕುವಂತಿರಲಿಲ್ಲ. ಬ್ಯಾಂಕ್ ಅಂಚೆ ಕಛೇರಿಗಳ ಒಳಗೆ ಸವರ್ಣೀಯರಿದ್ದರೆ, ಒಳ ಪ್ರವೇಶಿಸುವಂತಿರಲಿಲ್ಲ. ಕಥಕ್ಕಳಿಯಂತಹ ನೃತ್ಯದಲ್ಲಿ ಅವರು ದೇವರುಗಳ ಪಾತ್ರ ಮಾಡುವಂತಿರಲಿಲ್ಲ.


• ಕೆಳ ವರ್ಗದ ಮಹಿಳೆಯರ ಸ್ಥಿತಿ ಇನ್ನೂ ನರಕ ಸದೃಶ್ಯ. ಅವರು ಎದೆಯ ಮೇಲೆ ಬಟ್ಟೆ ಧರಿಸುವಂತಿರಲಿಲ್ಲ. ಇದನ್ನು ಪ್ರತಿಭಟಿಸಿದ ಸ್ವಾಭಿಮಾನಿ ಮಹಿಳೆಯೊಬ್ಬರು, ತನ್ನ ಸ್ತನಗಳನ್ನೇ ಕುಯ್ದು ಅರ್ಪಿಸಿ, ಪ್ರಾಣಾರ್ಪಣೆ ಮಾಡಿದ ಹೃದಯವಿಧ್ರಾವಕ ಘಟನೆ ಅಲ್ಲಿ ನಡೆದಿತ್ತು. ಅವರು ಹೂ ಮುಡಿಯುವಂತಿರಲಿಲ್ಲ. ಎಷ್ಟೋ ಕಡೆಗಳಲ್ಲಿ ಮದುವೆಯ ಮೊದಲು ರಾತ್ರಿಗಳನ್ನು ಊರಿನ ನಂಬೂದಿರಿ ನಾಯಕರ ಜೊತೆಯಲ್ಲಿ ಕಳೆಯಬೇಕಿತ್ತು.


• ಇವೆಲ್ಲದರ ಜೊತೆಗೆ ನೂರೆಂಟು ಮೂಡನಂಬಿಕೆಗಳು ಮತ್ತು ದುಂದುವೆಚ್ಚದ ಇಂತಹ ಸಂಪ್ರದಾಯಗಳನ್ನು ಅವರು ಕುತ್ತಿಗೆಗೆ ಗಂಟು ಹಾಕಲಾಗಿತ್ತು. ಮೈ ನೆರೆಯುವ ಮೊದಲೇ, ಯಾವುದಾದರೂ ಒಬ್ಬ ವ್ಯಕ್ತಿಯಿಂದ ತಾಳಿ ಕಟ್ಟಿಸುವ, “ತಾಳಿಕೆಟ್ಟು ಕಲ್ಯಾಣಂ” ಎಂಬ ಬಾಲ್ಯ ವಿವಾಹಗಿಂತಲೂ ಅಮಾನವನೀಯವಾದ ಸಂಪ್ರದಾಯವೊಂದು ಕೇರಳದಲ್ಲಿತ್ತು. ಬಾಲ್ಯ ವಿವಾಹದಲ್ಲಿ ಕನಿಷ್ಟ ಮದುವೆಯ ಒಪ್ಪಂದವಿತ್ತು. ಇಲ್ಲಿ ಅದೊಂದು ಅಣಕು ಮದುವೆ. ಮೈ ನೆರದದ್ದನ್ನು ಊರಿಗೆಲ್ಲ ಘೋಷಿಸುವ “ತಿರುಂಡಕಲಿ” ಗರ್ಭೀಣಿಯಾದ ಕೂಡಲೇ “ಪುಲೂಕೂಡಿ” ಎಂಬ ಸೀಮಂತ ನಡೆಸುವ ಸಂಪ್ರದಾಯ ಆಡಂಭರದ ಮದುವೆ ಈ ಸಂಪ್ರದಾಯಗಳ ಕಾರಣದಿಂದಾಗಿಯೇ ಈಳವ ಜನ ವಂಶ ಪಾರಂಪರ್ಯವಾಗಿ ನಂಬೂದಿರಿ ನಾಯರ್‍ಗಳ ಸಾಲಗಾರರಾಗಿ ಜೀತದ ಜೀವನ ಸಾಗಿಸಬೇಕಾಗಿತ್ತು.
• ಆದರೆ, ಇದೇ ಕೇರಳ ಹಿಂದೂ ದೇಶದಲ್ಲಿಯೇ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಪ್ರಗತಿಪರ ಚಿಂತಕರಿರುವ ಪ್ರಜಾಸತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ಹಾಗೂ ಜಗತ್ತಿನ ಎರಡನೇ ಕಮ್ಯೂನಿಷ್ಟ ಸರ್ಕಾರ ಅಸ್ತಿತ್ವಕ್ಕೆ ಬಂದದ್ದು ಕೇರಳದಲ್ಲಿ. ದೇಶ ವಿಭಜನೆ ಕಾಲದಲ್ಲಿ ಉತ್ತರ ಭಾರತ ಕೋಮುದಳ್ಳುರಿಯಲ್ಲಿ ಹತ್ತಿ ಉರಿಯುತ್ತಿದ್ದಾಗ ಶೇ.18ಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆಯೇ ಇರುವ ಕೇರಳ ಶಾಂತವಾಗಿತ್ತು. ಅಡ್ವಾನಿಯವರ ರಥಯಾತ್ರೆಯ ನಂತರ ದೇಶಾದ್ಯಂತ ಕೋಮುವಾದಿ ಚಟುವಟಿಕೆಗಳ ಬುಗಿಲೆದ್ದಾಗಲೂ ಇಲ್ಲಿ, ಯಾವ ಗಲಭೆಗಳು ನಡೆಯಲಿಲ್ಲ.


• ದಕ್ಷಿಣದ ರಾಜ್ಯಗಳಲ್ಲಿ ಪ್ರಯಾಸಪಟ್ಟು, ಪ್ರವೇಶ ಪಡೆದ ಬಿಜೆಪಿಯನ್ನು ಈಗಲೂ ಹೊಸಲಿನಾಚೆ ಸಲ್ಲಿಸಿರುವ ರಾಜ್ಯ ಕೇರಳ. ಇದು ಕೇವಲ ನೂರು ವರ್ಷಗಳ ಅವಧಿಯಲ್ಲಿ ನಡೆದ ಬದಲಾವಣೆ. ನಾರಾಯಣ ಗುರುಗಳು ಹುಟ್ಟಿ ಸರಿಯಾಗಿ ನೂರು ವರ್ಷಗಳ ಅವಧಿಯಲ್ಲಿ ನಡೆದ ಬದಲಾವಣೆ.


• ಅದೇ ನೂರು ವರ್ಷಗಳ ನಂತರ ಕೇರಳದಲ್ಲಿ ಮೊದಲ ಬಾರಿಗೆ ಕಮ್ಯೂನಿಷ್ಟ ಸರ್ಕಾರ ಅಸ್ತಿತ್ವಕ್ಕೆ ಬಂತೆಂಬುದು ಉಲ್ಲೇಖನಿಯ. ನಾರಾಯಣ ಗುರುಗಳು ಪ್ರಾರಂಭಿಸಿದ ಧಾರ್ಮಿಕ ಸುಧಾರಣಾ ಚಳವಳಿಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಅವರ ಕಾರ್ಯತಂತ್ರ ಉಳಿದ ಸಮಾಜ ಸುಧಾರಕರಿಗಿಂತ ಯಾಕೆ ಭಿನ್ನವಾಗಿತ್ತು ಎಂಬ ಪ್ರಶ್ನೆಗಳಿಗೆ ಈ ಹಿನ್ನೋಟದಲ್ಲಿ ಉತ್ತರ ಇದೆ.
• ನಾರಾಯಣ ಗುರು ಚಳವಳಿ, ಪ್ರಮುಖವಾಗಿ 5ಹಂತಗಳಲ್ಲಿ ನಡೆಯಿತು. ಮೊದಲನೇಯದು ನಾರಾಯಣ ಗುರುಗಳ ದೇವಾಲಯಗಳ ಸ್ಥಾಪನೆಯ ಧಾರ್ಮಿಕ ಸುಧಾರಣೆ, ಎರಡನೆಯದು ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಮೂರನೆಯದ್ದು ಕುಮಾರನ್ ಆಶಾನ್ ನೇತೃತ್ವದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ನಡೆದ ಚಳವಳಿ, ನಾಲ್ಕನೇಯದ್ದು ಟಿ.ಕೆ ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪøಶ್ಯತೆಯ ವಿರುದ್ಧ ನಡೆದ ಚಳವಳಿ ಹಾಗೂ ಕೊನೆಯದ್ದು, ಸಿ.ಕೇಶವನ್ ನೇತೃತ್ವದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಹೋರಾಟ. ಈ ಎಲ್ಲಾ ಹೋರಾಟಗಳು ನಾರಾಯಣ ಗುರುಗಳ ಸಿದ್ಧಾಂತ ನೆಲೆಗಟ್ಟಿನ ಮೇಲೆಯೇ ನಡೆದಿವೆ.
• ನಾರಾಯಣ ಗುರುಗಳದ್ದು ಕೇವಲ ಧಾರ್ಮಿಕ ಚಳುವಳಿಯಾಗಿರಲಿಲ್ಲ. ಧಾರ್ಮಿಕ ಸುಧಾರಣೆಯ ಮೂಲಕ ಪ್ರಾರಂಭಗೊಂಡ ನಾರಾಯಣ ಗುರು ಚಳವಳಿ ಕಾಲ ಸರಿದಂತೆ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಾ ಹೋಗಿದ್ದು ಕೇವಲ ಆಕಸ್ಮಿಕವಲ್ಲ. ಅದು ನಾರಾಯಣ ಗುರುಗಳೇ ರೂಪಿಸಿದ ಕಾರ್ಯ ತಂತ್ರವಾಗಿತ್ತು. ಸಮಾಜದ ಅಮೂಲಾಗ್ರ ಬದಲಾವಣೆ ಎಂದರೆ, ಪ್ರಮುಖವಾಗಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಎಂಬುದನ್ನು ನಾರಾಯಣ ಗುರು ಅರಿತಿದ್ದರು. ಇಂತಹ ಬದಲಾವಣೆಗೆ ಸಮುದಾಯದ ಮನಸ್ಸನ್ನು ಸಿದ್ದಗೊಳಿಸುವ ಪ್ರಾಥಮಿಕ ಕಾರ್ಯವನ್ನು ಅವರು ದೇವಾಲಯಗಳ ಸ್ಥಾಪನೆ ಮೂಲಕ ಮಾಡಿದರು.
• ಅವರದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ಅವರ ಹೋರಾಟದ ಎಲ್ಲಾ ಕಾರ್ಯತಂತ್ರಗಳನ್ನು ಅವಲೋಕಿಸುತ್ತಾ ಬಂದರೆ, ಅವರಲ್ಲೊಬ್ಬ ಜಾಣ ರಾಜಕಾರಣಿ ಇದ್ದನೆಂಬುದು ಸ್ಪಷ್ಟವಾಗುತ್ತದೆ. ಅವರು ಸಮಾಜ ಸುಧಾರಕನ ಕೆಲಸ ಮಾಡಲಿಕ್ಕೆಂದೇ ಸನ್ಯಾಸಿಯ ಪಾತ್ರವನ್ನು ಧರಿಸಿದರೇನೋ ಎಂಬ ಅನುಮಾನ ಬರುತ್ತದೆ.
• ಅವರು ದೇವಸ್ಥಾನ ಪ್ರವೇಶಾವಕಾಶದ ಬಗ್ಗೆ ಎಂದೂ ಗಂಭೀರವಾಗಿ ಪ್ರಯತ್ನ ನಡೆಸಲಿಲ್ಲ. ಅವರು ಸಾವಿನ ಎಂಟು ವರ್ಷಗಳ ನಂತರ ಕೇರಳ ಸರಕಾರ ದೇವಾಲಯ ಪ್ರವೇಶ ಘೋಷಣೆಯನ್ನು ಹೊರಡಿಸಿತ್ತು. ಆಗಲೇ ನಾರಾಯಣ ಗುರುಗಳು ಕೇರಳ, ಮದ್ರಾಸ್ ಮತ್ತು ಮಂಗಳೂರಿನಲ್ಲಿಯೂ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ನೂರಾರು ಗುರುಮಂದಿರ ಹಾಗೂ ಆಶ್ರಮಗಳು ಪ್ರಾರಂಭವಾಗಿದ್ದವು.
• ನಾರಾಯಣ ಗುರುಗಳದ್ದು ಮುಖಾಮುಖಿ ಹೋರಾಟವಲ್ಲ. ಅವರು ವೈದಿಕ ಶಾಹಿ ಏಕಸ್ವಾಮ್ಯಕ್ಕೆ ನೇರ ಸವಾಲು ಹಾಕಲಿಲ್ಲ. ಅದರ ಬದಲಿಗೆ ವೈದಿಕ ಅಧಿಪತ್ಯದ ಬೇರುಗಳನ್ನೇ ಅಲ್ಲಾಡಿಸಿದರು. ಸಂಸ್ಕøತವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅದನ್ನು ಅಧ್ಯಯನ ಮಾಡಿ ಶೂದ್ರರೂ ಅದನ್ನು ಕಲಿತು ಅರಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ವೇದಾಧ್ಯಯನಕ್ಕೆ ಜಾತಿ ಅಸ್ಪಶ್ಯವಲ್ಲ ಎಂದು ಸಾರಿದ ಗುರುಗಳು ಶಂಕರಾಚಾರ್ಯರ ಅಧ್ವೆತಾ ವೇದಾಂತವನ್ನು ಕಲಿತರು. ಆತ್ಮೋಪದೇಶ ಶತಕಂ ಸೇರಿದಂತೆ ಹಲವಾರು ಸಂಸ್ಕøತ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರದ ವಿಶ್ಲೇಷಣೆ ಮಾಡಿದ ಮೊದಲ ಅಸ್ಪಶ್ಯರು ಅವರು.

(ಚಿತ್ರದಲ್ಲಿರುವುದು ಕೇರಳದ ಶಿವಗಿರಿಯಲ್ಲಿರುವ ನಾರಾಯಣಗುರುಗಳ ಸಮಾಧಿ)
ಮುಂದುವರಿಯಲಿದೆ….1

Please follow and like us: