ಚುನಾವಣಾ ಸಮಯದಲ್ಲಿ ಬಿಜೆಪಿಯ ನೆಚ್ಚಿನ ಅಸ್ತ್ರ ED ದಾಳಿ: ಕೇಸರಿ ಪಡೆ ವಿರುದ್ದ ರಾಹುಲ್‌ ಕಿಡಿ!


ಮುಂದಿನ ತಿಂಗಳಿನಿಂದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಎಲ್ಲಾ ಪಕ್ಷಗಳು ಭಾರೀ ತಯಾರಿ ನಡೆಸುತ್ತಿವೆ. ಈ ನಡುವೆ, ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸಂಬಂಧಿಕರ ಮನೆ ಮೇಲೆ ಮಂಗಳವಾರ ಇಡಿ ದಾಳಿ ಮಾಡಿದೆ. ಈ ದಾಳಿಯ ಬಳಿಕ ಬಿಜೆಪಿ ವಿರುದ್ದ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಂತಹ ದಾಳಿಗಳಿಗೆ ಪಕ್ಷವು ಹೆದರುವುದಿಲ್ಲ ಎಂದಿದ್ದಾರೆ.

ಮಂಗಳವಾರ (ಜ.18) ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಮತ್ತು ಇತರ ಹಲವರ ಮನೆ ಮತ್ತು ಕಚೇರಿಗಳಿರುವ ಲುಧಿಯಾನ, ಮೊಹಾಲಿ ಮತ್ತು ಪಠಾಣ್‌ಕೋಟ್‌ನ ಸುಮಾರು 10 ಸ್ಥಳಗಳಲ್ಲಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

“ಇಡಿ ದಾಳಿ ನಡೆಸುವುದು ಬಿಜೆಪಿಯ ಅಚ್ಚುಮೆಚ್ಚಿನ ಅಸ್ತ್ರವಾಗಿದೆ, ಏಕೆಂದರೆ ಅವರಲ್ಲಿಯೇ ಮರೆಮಾಚಲು ವಿಷಯಗಳಿವೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮುಂದುವರಿದು, “ಎಲ್ಲರೂ ನಿಮ್ಮಂತೆಯೆ ಇರುವುದಿಲ್ಲ. ನಮಗೆ ಭಯವಿಲ್ಲ. ಕಾಂಗ್ರೆಸ್ ಮತ್ತು ಅದರ ನಾಯಕರು ಇಂತಹ ದಾಳಿಗಳಿಗೆ ಹೆದರುವುದಿಲ್ಲ” ಎಂದಿದ್ದಾರೆ.ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನಲ್ಲಿ ನಡೆಸಿದ ದಾಳಿಯಲ್ಲಿ 6 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ತಿಳಿಸಿದೆ.

ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ ಮನೆಯಿಂದ 4 ಕೋಟಿ ರೂಪಾಯಿ ಮತ್ತು ಸಂದೀಪ್ ಕುಮಾರ್ ಎಂಬುವವರ ಮನೆಯಿಂದ 2 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಇತ್ತ, ಸರ್ಕಾರಿ ಸಂಸ್ಥೆಯನ್ನು ‘ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಬಿಜೆಪಿಯನ್ನು ಟೀಕಿಸಿರುವ ಕಾಂಗ್ರೆಸ್, ದೇಶದ ಏಕೈಕ ದಲಿತ ಮುಖ್ಯಮಂತ್ರಿಗೆ ಬಿಜೆಪಿ ಹೇಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದೆ. ಜೊತೆಗೆ ಇಡಿ ಎಂದರೆ ಬಿಜೆಪಿಗೆ ‘ಚುನಾವಣಾ ಇಲಾಖೆ’ (‘Election Department) ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ, ”ದೇಶದ ಏಕೈಕ ದಲಿತ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ವಿರುದ್ಧ ಬಿಜೆಪಿ ಪೂರ್ವಾಗ್ರಹದಿಂದ ಕೆಲಸ ಮಾಡುತ್ತಿದೆ ಮತ್ತು ಸೇಡು ತೀರಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.

Please follow and like us: