ಉತ್ತರ ಪ್ರದೇಶ: ಚುನಾವಣಾ ಪ್ರಚಾರಕ್ಕೆ ಮ್ಯೂಸಿಕಲ್‌ ಸ್ಪರ್ಶ

ಪಂಚ ರಾಜ್ಯಗಳಲ್ಲಿ ಚುನಾವಣಾ ತಯಾರಿ ಬಿರುಸುಗೊಂಡಿದೆ. ಕೋವಿಡ್ ಕಾರಣಕ್ಕೆ ಪ್ರಚಾರ ಸಭೆಗಳು ರದ್ದಾಗಿದ್ದು, ಎಲ್ಲಾ ಪಕ್ಷಗಳು ವರ್ಚುವೆಲ್ ಪ್ರಚಾರ ನಡೆಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಪ್ರಚಾರವು ವರ್ಚುವಲ್ ಆಗಿರುವುದರಿಂದ, ಮತದಾರರ ಗಮನವನ್ನು ಸೆಳೆಯಲು ಪಕ್ಷಗಳ ನಡುವಿನ ಪೈಪೋಟಿ ಮಾತ್ರ ತೀವ್ರಗೊಂಡಿದೆ.

ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜನವರಿ 22 ರವರೆಗೆ ಚುನಾವಣಾ ರ್ಯಾಲಿಗಳಿಗೆ ನಿರ್ಬಂಧ ಹೇರಿದೆ.

ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್, ಸಮಾಜವಾದಿ ಪಕ್ಷದ ನಂತರ ಆಮ್ ಆದ್ಮಿ ಪಕ್ಷವೂ ಚುನಾವಣೆಗೆ ತನ್ನ ಥೀಮ್ ಹಾಡನ್ನು ಬಿಡುಗಡೆ ಮಾಡಿದೆ. ಚುನಾವಣೆಯ ಸಮಯದಲ್ಲಿ ಹಾಡುಗಳನ್ನು ಬಳಸುತ್ತಿದ್ದ ಪದ್ಧತಿ ಹಳೆಯದಾಗಿದ್ದರೂ, ಕೋವಿಡ್ ಕಾರಣದಿಂದ ಈ ಪದ್ದತಿ ಮತ್ತೆ ಮುನ್ನೆಲೆಗೆ ಬಂದಿದೆ.

ಆಡಳಿತಾರೂಢ ಬಿಜೆಪಿಯು ಪಕ್ಷದ ಥೀಮ್ ಸಾಂಗ್ ‘ಹಿಂದುತ್ವದ ಹೆಮ್ಮೆ’ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರದ ಅಡಿಯಲ್ಲಿ ಮಾಡಿದ ‘ಅಭಿವೃದ್ಧಿ’ ಯನ್ನು ಉಲ್ಲೇಖಿಸಿದ್ದರೆ, ಸಮಾಜವಾದಿ ಪಕ್ಷವು ಸಮಾಜವಾದಿ ಪಕ್ಷದ ಭಾವನೆಗಳು ಮತ್ತು ಅಖಿಲೇಶ್ ಯಾದವ್ ನೇತೃತ್ವದ ಹಿಂದಿನ ಸರ್ಕಾರದ ಸಾಧನೆಗಳನ್ನು ಪ್ರತಿಧ್ವನಿಸುತ್ತದೆ.

ಬಿಜೆಪಿ ಸಂಸದರು ಮತ್ತು ಭೋಜ್ಪುರಿ ನಟರಾದ ರವಿ ಕಿಶನ್ ಮತ್ತು ಮನೋಜ್ ತಿವಾರಿ ಅವರು ವಿವಿಧ ಹಾಡುಗಳ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.

‘ಚುನಾವಣಾ ಆಯೋಗವು ಜನವರಿ 22 ರವರೆಗೆ ಚುನಾವಣಾ ರ್ಯಾಲಿಗಳು ಮತ್ತು ಪ್ರಚಾರ ಸಭೆಗಳನ್ನು ನಿಷೇಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಹಾಡುಗಳ ಮೂಲಕ ಮತದಾರರ ಹೃದಯ ಮತ್ತು ಮನಸ್ಸಿನಲ್ಲಿ ಸ್ಥಾನ ಪಡೆಯಲು ಬಿಜೆಪಿ ಬಯಸಿದೆ. ಪಕ್ಷವು ತನ್ನ ಸಾಮಾಜಿಕ ಮಾಧ್ಯಮ ತಂಡದ ಮೂಲಕ ಈ ಹಾಡುಗಳನ್ನು ಪ್ರತಿಯೊಬ್ಬ ಮತದಾರರನ್ನು ತಲುಪಲಿದೆ’ ಎಂದು ಬಿಜೆಪಿಯ ರಾಜ್ಯ ಮಾಧ್ಯಮ ಉಸ್ತುವಾರಿ ಮನೀಶ್ ದೀಕ್ಷಿತ್ ಪಿಟಿಐಗೆ ತಿಳಿಸಿದರು.

ಸಮಾಜವಾದಿ ಪಕ್ಷವು ಸಮಾಜದ ಎಲ್ಲಾ ವರ್ಗಗಳ ಕಲ್ಯಾಣವನ್ನು ಹೇಗೆ ಖಾತ್ರಿಗೊಳಿಸುತ್ತದೆ ಎಂಬುದನ್ನು ಒತ್ತಿಹೇಳುತ್ತಾ, ಅಧಿಕಾರಕ್ಕೆ ಬಂದರೆ ಜನರ ಎಲ್ಲಾ ’ಸಂಕಟಗಳನ್ನು’ ಕೊನೆಗೊಳಿಸುವುದಾಗಿ ಭರವಸೆ ನೀಡುತ್ತಿವೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ವರ್ಮಾ, ‘ಈ ಹಾಡುಗಳು ನಿರುದ್ಯೋಗಿ ಯುವಕರು, ರೈತರು, ಕಾರ್ಮಿಕರು, ಮಹಿಳೆಯರು, ಶೋಷಿತ ಮತ್ತು ದೀನ ದಲಿತ ವರ್ಗಗಳ ಸಮಸ್ಯೆಗಳ ಬಗ್ಗೆ ತಿಳಿಸುತ್ತವೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಪಕ್ಷವು ಉದ್ದೇಶಿಸಿದೆ’ ಎಂದು ಹೇಳಿದರು.

ಮಹಿಳೆಯರನ್ನು ಮುಖ್ಯವಾಹಿನಿಯ ರಾಜಕೀಯಕ್ಕೆ ಕರೆತರಲು ತಾನು ಚುನಾವಣೆಯಲ್ಲಿ ಹೋರಾಡುತ್ತಿರುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ನ ಥೀಮ್ ಸಾಂಗ್ ಎಲ್ಲೆಡೆ ಸದ್ದು ಮಾಡುತ್ತಿದೆ.