ರೋಹಿತ್ ವೇಮುಲಾ… ನಿಮ್ಮ ತ್ಯಾಗ ವ್ಯರ್ಥವಾಗಲಿಲ್ಲ

ಅನ್ಯಾಯದ ವಿರುದ್ಧದ ಹೋರಾಟಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಸಿದ್ದ ಮತ್ತು ಅಂತಿಮವಾಗಿ ತನ್ನ ಜೀವನವನ್ನೂ ತ್ಯಾಗ ಮಾಡುವ ಯಾವುದೇ ವ್ಯಕ್ತಿಯು ಹುತಾತ್ಮರೆಂದು ಕರೆಸಿಕೊಳ್ಳಲು ಅರ್ಹರು. ರೋಹಿತ್ ವೇಮುಲರ ಮರಣದ ಆರನೇ ವಾರ್ಷಿಕೋತ್ಸವದ ಈ ಸಮಯದಲ್ಲಿ ಇಂತಹ ಅನೇಕ ಆಲೋಚನೆಗಳು ನೆನಪಿಗೆ ಬರುತ್ತವೆ.

ಶೈಕ್ಷಣಿಕ ಕ್ಷೇತ್ರ ಮತ್ತು ಸಮಾಜ
ರೋಹಿತ್ ವೇಮುಲ ಅವರು ವಿಶ್ವವಿದ್ಯಾನಿಲಯವು ಆತ್ಮಾವಲೋಕನ ಮಾಡಿಕೊಳ್ಳಲು ತಮ್ಮ ಜೀವನದ ಅಂತಿಮ ತ್ಯಾಗವನ್ನು ಮಾಡಿದರು. ಅವರ ಬಲಿದಾನವು ಶೈಕ್ಷಣಿಕ ಸ್ಥಳಗಳಲ್ಲಿ ಚಾಲ್ತಿಯಲ್ಲಿರುವ ದಲಿತರ ಮೇಲಿನ ವ್ಯಾಪಕ ದೌರ್ಜನ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ವ್ಯವಸ್ಥೆಯು ಎಷ್ಟು ಕಠೋರವಾಗಿದೆಯೆಂದರೆ ಅದನ್ನು ಅಲುಗಾಡಿಲು ಅಥವಾ ಬಹಿರಂಗ ಪಡಿಸಲು ಜೀವ ತ್ಯಾಗಕ್ಕಿಂತ ಬೇರಾವುದೇ ಮಾರ್ಗವಿಲ್ಲ ಎಂದು ಅವರು ಭಾವಿಸಿರಬಹುದು. ಶೈಕ್ಷಣಿಕ ಸಂಸ್ಥೆಗಳಲ್ಲಿ ಆತನಿಗಿಂತ ಮೊದಲು ಮತ್ತು ನಂತರದಲ್ಲಾದ ಇತರ ಘಟನೆಗಳಂತೆಯೇ ರೋಹಿತ್‌ನ ಸಾವಿನಿಂದ ವ್ಯವಸ್ಥೆಯು ಆಘಾತಕ್ಕೊಳಗಾಯಿತು. ಆದರೆ ಅದು ನಿಸ್ಸಂಶಯವಾಗಿ ಅಲುಗಾಡಲಿಲ್ಲ. ವ್ಯವಸ್ಥೆಯು ತನ್ನ ಕ್ರೂರ ಆಚರಣೆಗಳನ್ನು ಮುಂದುವರೆಸಿದೆ ಎಂಬುದನ್ನು ದೀಪಾ ಮೋಹನನ್ ಮತ್ತು ವಿಪಿನ್ ಪಿ. ವೀಟಿಲ್ ಪ್ರಕರಣಗಳು ವಿವರಿಸುತ್ತವೆ. ಸ್ಕಾಲರ್‌ಶಿಪ್‌ಗಳನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ತಪ್ಪಿಸಿವುವುದು ಮುಂದುವರಿದಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ SC/ST ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.

ಆದ್ದರಿಂದ, ರೋಹಿತ್ ವೇಮುಲನ ತ್ಯಾಗದಿಂದ ನಾವು ಕಲಿಯಬಹುದಾದ ಪ್ರಮುಖ ಪಾಠವೆಂದರೆ, ಶ್ರೇಷ್ಠತೆ ಮತ್ತು ಶೈಕ್ಷಣಿಕ ಸ್ವಾಯತ್ತತೆಯ ಹೆಸರಿನಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಸೂಕ್ಷ್ಮ ದೌರ್ಜನ್ಯಗಳ ವಿರುದ್ಧ ಹೋರಾಡುವುದು ನಿರ್ಣಾಯಕವಾಗಿದೆ. ಅನೇಕ ವಿದ್ಯಾರ್ಥಿಗಳ ಜೀವವನ್ನು ಬಲಿ ಪಡೆಯುವ ಶೈಕ್ಷಣಿಕ ಶ್ರೇಷ್ಠತೆ ಹುನ್ನಾರ ಏನು? ಶಿಕ್ಷಣ ಸಂಸ್ಥೆಗಳಲ್ಲಿ ಬಹುಸಂಖ್ಯಾತರ ಶ್ರೇಷ್ಠತೆ ಎಂದು ಕರೆಯಲ್ಪಡುವುದನ್ನು ಅಲ್ಪಸಂಖ್ಯಾತ ಮತ್ತು ದಲಿತ ವಿದ್ವಾಂಸರು ಯಾವುದೇ ರೀತಿಯಲ್ಲಿ ತಡೆಯಲು ಸಾಧ್ಯವಿಲ್ಲವೇ? ವಾಸ್ತವವೇನೆಂದರೆ, ಶ್ರೇಷ್ಠತೆಯನ್ನು ಅನುಸರಿಸುವ ಪ್ರಶ್ನೆಯಲ್ಲ, ಆದರೆ ದಲಿತರನ್ನು ನಿಗ್ರಹಿಸುವ ಹಳೆಯ ಪರಂಪರೆ. ದಲಿತರ ಏಳಿಗೆಯನ್ನು ತಡೆಯಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸುವುದು ಶೈಕ್ಷಣಿಕ ಕ್ಷೇತ್ರದಲ್ಲಿ “ಶ್ರೇಷ್ಠತೆ”ಯಾಗಿ ಉಳಿದುಹೋಗಿದೆ.

ಭಾರತದಲ್ಲಿನ ವಿಜ್ಞಾನ ತಂತ್ರಜ್ಞಾನ ಇಂಜಿನಿಯರಿಂಗ್ ಮತ್ತು ಗಣಿತ (STEM) ಶಿಕ್ಷಣವು ಜಾತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿಕೊಳ್ಳಲಾಗುತ್ತದೆ. ಆದರೆ, ಜಾಣತನದಿಂದ, ಸಮಾಜ ವಿಜ್ಞಾನ ಅಕಾಡೆಮಿಗಳು ಕೂಡ ಜಾತಿ ಪ್ರಶ್ನೆಯನ್ನು ತಪ್ಪಿಸುತ್ತಿವೆ ಅಥವಾ ವಿರೂಪಗೊಳಿಸುತ್ತಿವೆ. ಅವರು ಜಾತಿಯ ಪ್ರಶ್ನೆಯನ್ನು “ವಿಂಟೇಜ್ ಅಕಾಡೆಮಿಕ್ ಫ್ಯಾಶನ್” ಎಂದು ಕರೆಯಬಹುದು. ಅವರು ನಿರ್ಣಾಯಕ ಜನಾಂಗದ ಸಿದ್ಧಾಂತವನ್ನು ಭಾರತೀಯ ಸಂದರ್ಭದೊಂದಿಗೆ ನೋಡುವುದಿಲ್ಲ. ಅದು ಬಿಆರ್ ಅಂಬೇಡ್ಕರ್ ಅವರ “ನೀವು ಇಷ್ಟಪಡುವ ಯಾವುದೇ ದಿಕ್ಕಿಗೆ ತಿರುಗಿ, ನಿಮ್ಮ ಹಾದಿಯಲ್ಲಿ ಜಾತಿ ಎಂಬ ದೈತ್ಯಾಕಾರವು ಅಡ್ಡಿ ಬರುತ್ತದೆ” ಎಂಬ ಹೇಳಿಕೆಗೆ ಭಿನ್ನವಾಗಿರುವುದಿಲ್ಲ.

ಪ್ರಪಂಚವು ವೇಗವಾಗಿ ಬದಲಾಗುತ್ತಿರುವಾಗ, ಭಾರತದಲ್ಲಿನ ಶಿಕ್ಷಣವು ಇನ್ನೂ ಹಳೇ ಕಾಲದ ಶೈಕ್ಷಣಿಕ ಪದ್ದತಿಯೊಂದಿಗೆ ಅಂಟಿಕೊಂಡಿದೆ. ಅನೇಕ ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರು ಈ ಪದ್ದತಿಯನ್ನು ವಸ್ತುವೆಂದು ತಪ್ಪಾಗಿ ಗ್ರಹಿಸುತ್ತಾರೆ. ಈ ಮೂಲಕ ಶೈಕ್ಷಣಿಕ ಪ್ರಪಂಚ ಮತ್ತು ಹೊರಗಿನ ಪ್ರಪಂಚದ ನಡುವೆ ವಿಶಾಲವಾದ ಅಂತರವನ್ನು ಸೃಷ್ಟಿಸುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ, ಒಂದು ರಾಷ್ಟ್ರವು ತನ್ನ ಸಮಸ್ಯೆಗಳನ್ನು ಮರೆಮಾಚುವ ಮೂಲಕ ತನ್ನನ್ನು ತಾನು ಉತ್ತಮಗೊಳಿಸಲು ಸಾಧ್ಯವಿಲ್ಲ. ಆದರೆ, ಅವುಗಳನ್ನು ಮುಂಗಡವಾಗಿ ಗುರುತಿಸುವ ಮೂಲಕ ಇದು ಸಾಧ್ಯವಾಗುತ್ತದೆ. ಆದ್ದರಿಂದ, ಶಿಕ್ಷಣದಲ್ಲಿ ಜಾತಿಯನ್ನು ಗುರುತಿಸುವುದು ಸಮಸ್ಯೆಯನ್ನು ನೇರವಾಗಿ ಗುರುತಿಸುವುದಾಗುತ್ತದೆ. ಜಾತಿ ಗಣತಿಯು ಭಾರತದ ಸಮಸ್ಯೆಗಳಿಗೆ ಅಂತಿಮ ಮನ್ನಣೆಯಾಗಿದೆ!

ಕಲೆ ಮತ್ತು ವಿಜ್ಞಾನ

ಬುದ್ಧನು ವಿಪರೀತಗಳನ್ನು ತಪ್ಪಿಸುವ ಮಧ್ಯಮ ಮಾರ್ಗವನ್ನು ಸೂಚಿಸಿದನು. ಉದಾರವಾದ – ಪ್ರಜಾಸತ್ತಾತ್ಮಕವಾದ ಭಾರತೀಯ ಸಂವಿಧಾನವು ಕ್ರಾಂತಿಕಾರಿ ಅಥವಾ ಸಂಪ್ರದಾಯವಾದಿ ಅಲ್ಲ, ಆದರೆ ಮಧ್ಯಮ ಮಾರ್ಗವನ್ನು ಅನುಸರಿಸುತ್ತದೆ. ಅಂಬೇಡ್ಕರ್ ಅವರ ಹೋರಾಟದ ತಂತ್ರವನ್ನು ಗಮನಿಸಿದರೆ, ಅವರು ಮಧ್ಯಮ ಮಾರ್ಗವನ್ನು ಅನುಸರಿಸಿದರು ಮತ್ತು ವಿಪರೀತತೆಯನ್ನು ತಪ್ಪಿಸುವ ಮಾರ್ಗವನ್ನು ಅನುಸರಿಸಿದರು. ಅಂಬೇಡ್ಕರ್ ವಾಸ್ತವಿಕವಾದವನ್ನು ಆಚರಿಸಿದರು ಎಂದು ಹೇಳಲಾಗುತ್ತದೆ, ಅದು ಅವಕಾಶವಾದವಲ್ಲ.

ಪ್ರತಿಭಟನೆಯ ಯೋಜನೆಯಲ್ಲಿ ಅಂಬೇಡ್ಕರ್ ಕಾನೂನಿಗೆ ಹೆಚ್ಚಿನ ಮಹತ್ವವನ್ನು ನೀಡಿದರು; ಪ್ರತಿಭಟನೆಯು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಅದು ಕಲೆ ಮತ್ತು ವಿಜ್ಞಾನ ಎರಡೂ ಆಗಿರಬೇಕು. ಬೀದಿ ಮತ್ತು ನ್ಯಾಯಾಲಯಗಳಲ್ಲಿನ ಪ್ರತಿಭಟನೆಗಳ ವಿವೇಚನಾಯುಕ್ತ ಸಮ್ಮಿಲನವು ಪ್ರಾಯೋಗಿಕ ತಂತ್ರವೆಂದು ತೋರುತ್ತದೆ.

ರೋಹಿತ್ ವೇಮುಲಾ ಅವರ ಮರಣದ ನಂತರ, ಅನೇಕರು ಶೈಕ್ಷಣಿಕ ಸಂಸ್ಥೆಗಳಲ್ಲಿ ದೌರ್ಜನ್ಯವನ್ನು ಎದುರಿಸಲು ರೋಹಿತ್ ಹೆಸರಿನಲ್ಲಿ ಕಾನೂನನ್ನು ಪ್ರಸ್ತಾಪಿಸಿದರು. ಅಂತಹ ಕಾಯಿದೆಯ ರಚನೆಯಲ್ಲಿರಬೇಕಾದ ವಿಷಯಗಳನ್ನು ಯಾರೂ ವ್ಯಾಖ್ಯಾನಿಸದಿದ್ದರೂ, ವಿಷಯದ ತಿರುಳು ಪರೋಕ್ಷ ತಾರತಮ್ಯವಾಗಿತ್ತು. ಲೆಫ್ಟಿನೆಂಟ್ ಕರ್ನಲ್ ನಿತಿಶಾ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪರೋಕ್ಷ ತಾರತಮ್ಯವನ್ನು ವ್ಯಾಖ್ಯಾನಿಸಿತು. ಹಾಗಾಗಿ ರೋಹಿತ್ ತ್ಯಾಗ ವ್ಯರ್ಥವಾಗಿಲ್ಲ. ಅವರ ಮರಣದ ನಂತರ ನಡೆದ ಸಾಮಾಜಿಕ ಸಂಚಲನವು ಬದಲಾವಣೆಗೆ ಕಾರಣವಾಗಿದೆ.

ಮೂಲ: ನ್ಯೂಸ್‌ಕ್ಲಿಕ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

Please follow and like us: