ಅತ್ಯಾಚಾರ ಪ್ರಕರಣ: ಸುದ್ದಿ ಪ್ರಸಾರ ತಡೆಯುವಂತೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಟ

ಅತ್ಯಾಚಾರ ಪ್ರಕರಣ: ಸುದ್ದಿ ಪ್ರಸಾರ ತಡೆಯುವಂತೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಟ ದಿಲೀಪ್

ಕೊಚ್ಚಿ: ನಟಿಯೊಬ್ಬರ ಮೇಲೆ ಲೈಂಗಿಕ ಹಲ್ಲೆ ಆರೋಪ ಎದುರಿಸುತ್ತಿರುವ ಮಲೆಯಾಳಂ ನಟ ದಿಲೀಪ್, ಪ್ರಕರಣದ ವರದಿ ಪ್ರಕಟಿಸುವುದು ಹಾಗೂ ಪ್ರಸಾರ ಮಾಡುವುದನ್ನು ನಿರ್ಬಂಧ ವಿಧಿಸುವಂತೆ ಕೋರಿ ಸೋಮವಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎರ್ನಾಕುಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಮಾಧ್ಯಮಗಳು ಉಲ್ಲಂಘಿಸಿವೆ. ಪ್ರಕರಣದ ವಿಚಾರಣೆ ವೇಳೆ ಇಂಡೋ ಏಷ್ಯನ್ ನ್ಯೂಸ್ ಚಾನೆಲ್ ಪ್ರೈವೇಟ್ ಲಿಮಿಟೆಡ್‌ನ ವರದಿಗಾರ ಕ್ಯಾಮೆರಾ ಬಳಸಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.

ಪ್ರಕರಣ ಕುರಿತಂತೆ ತನಿಖಾ ಹಂತದಿಂದಲೂ ತಮ್ಮ ವಿರುದ್ಧ ಸಾರ್ವಜನಿಕರನ್ನು ಪೂರ್ವಾಗ್ರಹಪೀಡಿತರನ್ನಾಗಿ ಮಾಡುವಂಥ ಸುಳ್ಳು ಮತ್ತು ಹೆಣೆದ ಕಥೆಗಳನ್ನು ತನಿಖಾ ಅಧಿಕಾರಿಗಳು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದ್ದಾರೆ ಎಂದು ದಿಲೀಪ್ ಆರೋಪಿಸಿದ್ದಾರೆ.

ತನ್ನ ವಿರುದ್ಧದ ತನಿಖೆಯ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲು ಅಧಿಕಾರಿಗಳು ವರದಿಯ ಆಯ್ದ ವಿಷಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆಂದು ದಿಲೀಪ್ ಆರೋಪಿಸಿದ್ದಾರೆ.

ವಿಚಾರಣೆ ಕುರಿತ ಮಾಹಿತಿ ಹಾಗೂ ದಾಖಲೆಗಳನ್ನು ಮಾಧ್ಯಮಗಳಿಗೆ ಸೋರಿಕೆಯಾಗದಂತೆ ಎಚ್ಚರಿಕೆವಹಿಸುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದ್ದರೂ, ಮಾಹಿತಿ ಸೋರಿಕೆಯಾಗುವುದು ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಹೀಗಾಗಿ, ತನಿಖಾಧಿಕಾರಿ ಹಾಗೂ ಟಿವಿ ವರದಿಗಾರನ ನೇತೃತ್ವದಲ್ಲಿ ನಾನು ಹಾಗೂ ಇತರ ಅರ್ಜಿದಾರರು ಮಾಧ್ಯಮಕ್ಕೆ ಸುದ್ದಿ ಸರಕಾಗುತ್ತಿದ್ದೇವೆ ಎಂದು ಅವರು ದೂರಿದ್ದಾರೆ.

ಪ್ರಕರಣದ ವಿಚಾರಣೆ ನಡೆದು ತೀರ್ಪು ಬರುವವರೆಗೆ ಆರೋಪಿಗಳು ಹಾಗೂ ಸಾಕ್ಷಿಗಳ ಕುರಿತ ವರದಿ ಪ್ರಕಟಣೆ ಹಾಗೂ ಪ್ರಸಾರದ ಮೇಲೆ ನಿರ್ಬಂಧ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಫೆಬ್ರವರಿ 17, 2017 ರ ರಾತ್ರಿ ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ನಟಿಯನ್ನು ದಿಲೀಪ್ ಅವರ ಗ್ಯಾಂಗ್ ಅಪಹರಿಸಿ ಕಾರಿನೊಳಗೆ 2 ಗಂಟೆ ಲೈಂಗಿಕ ಕಿರುಕುಳ ನೀಡಿತ್ತು. ಅಷ್ಟೇ ಅಲ್ಲದೇ ಕೃತ್ಯದ ದೃಶ್ಯಗಳನ್ನು ಚಿತ್ರೀಕರಿಸಿ ಬ್ಲಾಕ್ಮೇಲ್ ಮಾಡಲಾಗಿದೆ ಎಂಬ ಆರೋಪ ನಟ ದಿಲೀಪ್‌ ಮೇಲಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದೀಲಿಪ್ ಸೇರಿದಂತೆ 6 ಜನರನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

Please follow and like us: