ಕೊಹ್ಲಿ ನಂತರ ಯಾರು?; ರಾಹುಲ್ ಗೆ ಸಿಗುತ್ತಾ ಟೆಸ್ಟ್ ಕ್ಯಾಪ್ಟನ್‌ಶಿಪ್?

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಸೋಲುತ್ತಿದ್ದಂತೆ ಟೆಸ್ಟ್ ನಾಯಕತ್ವ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಆದರೆ, ವಿರಾಟ್ ಕೊಹ್ಲಿ ನಂತರ ಯಾರು? ಯಾರಿಗೆ ಟೆಸ್ಟ್ ನಾಯಕತ್ವವೆಂಬುದು ಪ್ರಸ್ತುತ ಚರ್ಚೆಯಾಗುತ್ತಿರುವ ವಿಚಾರ.

ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಗೆ ನಾಯಕತ್ವ ಒಲಿದು ಬರಬಹುದೇ ಎಂಬ ನಿರೀಕ್ಷೆ ಹಾಗೂ ಕಾತುರದಲ್ಲಿ ಕ್ರಿಕೆಟ್ ಪ್ರೇಮಿಗಳಿದ್ದಾರೆ. ವಿದಾಯದ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿ ನೀಡಿರುವ ಉತ್ತರ ಈ ಎಲ್ಲ ಊಹೆಗೆ ಇಂಬು ನೀಡಿದೆ. ಟೆಸ್ಟ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವೇಳೆ ಮುಂದಿನ ನಾಯಕ ಯಾರಾಗಬೇಕೆಂಬುದು ನಿಮ್ಮ ಅಭಿಪ್ರಾಯ ಮತ್ತು ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯ ಏನು? ಎಂಬ ಪ್ರಶ್ನೆಗಳನ್ನು ಪತ್ರಕರ್ತರು, ವಿರಾಟ್ ಕೊಹ್ಲಿ ಮುಂದಿಟ್ಟಿದ್ದರು.

ಇದಕ್ಕೆ ಉತ್ತರಿಸಿದ್ದ ಕೊಹ್ಲಿ, “ತಂಡದ ನಾಯಕ ಯಾರಾಗಬೇಕು? ತಂಡದ ಪರಿವರ್ತನೆ ಯಾವಾಗ ಆಗುತ್ತದೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಆದರೆ, ಕಾಲಕ್ಕೆ ತಕ್ಕಂತೆ ಪರಿವರ್ತನೆ ಎಂಬುದು ನಡೆಯುತ್ತಲೇ ಇರುತ್ತದೆ. ಆಟಗಾರರು ಅದಕ್ಕೆ ಒಗ್ಗಿಕೊಳ್ಳಬೇಕಷ್ಟೆ” ಎಂದು ಹೇಳುವ ಮೂಲಕ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮುಂದಿಟ್ಟಿದ್ದಾರೆ.

ರಾಹುಲ್‌ಗೆ ಟೆಸ್ಟ್ ನಾಯಕತ್ವ?

ರೋಹಿತ್ ಶರ್ಮಾ ಅವರನ್ನು ಈಗಾಗಲೇ ಏಕದಿನ ಮತ್ತು ಟಿ20 ಮಾದರಿಯ ವೈಟ್ ಬಾಲ್ ಕ್ರಿಕೆಟ್ ಗೆ ಪೂರ್ಣ ಪ್ರಮಾಣದ ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ, ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ರೂಪಿಸಲು ಮುಂದಾಗಿರುವ ಬಿಸಿಸಿಐಗೆ ಯುವ ಆಟಗಾರನೇ ಮುಂದಿನ ನಾಯಕನಾಗಬೇಕು ಎಂಬ ಉದ್ದೇಶ ಇದೆ. ಹೀಗಾಗಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಾಯಕನಾಗುವುದು ಬಹುತೇಕ ಅಸಂಭವ. ಹೀಗಾಗಿ ಮುಂದಿನ ನಾಯಕ ಯಾರು? ಎಂಬ ಪ್ರಶ್ನೆ ಮನೆ ಮಾಡಿದೆ.

ಈ ಹಿಂದೆ ಅಜಿಂಕ್ಯಾ ರಹಾನೆ ತಂಡದ ಉಪ ನಾಯಕನಾಗಿಯೂ, ಕೊಹ್ಲಿ ಅನುಪಸ್ಥಿತಿ ವೇಳೆ ನಾಯಕನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತಕ್ಕೆ ಸ್ಮರಣೀಯ ಟೆಸ್ಟ್ ಸರಣಿ ಗೆಲುವು ದಕ್ಕಿದ್ದು ರಹಾನೆ ನಾಯಕತ್ವದಲ್ಲೇ. ಹೀಗಾಗಿ ಅಜಿಂಕ್ಯಾ ರಹಾನೆ ಅವರಿಗೆ ಟೆಸ್ಟ್ ನಾಯಕತ್ವ ಒಲಿಯುತ್ತಾ? ಎಂಬ ಪ್ರಶ್ನೆ ಮೂಡಿದೆ.
ಚೇತೇಶ್ವರ ಪೂಜಾರ ಸಹ ಹಿರಿಯ ಆಟಗಾರನಾಗಿದ್ದು, ಅವರೂ ನಾಯಕತ್ವದ ರೇಸ್ ನಲ್ಲಿದ್ದಾರೆ.

ಆದರೆ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ ಇಬ್ಬರೂ ಫಾರ್ಮ್‌ನಲ್ಲಿ ಇಲ್ಲ. ಮುಂದಿನ ಟೆಸ್ಟ್ ಸರಣಿಗೆ ಈ ಇಬ್ಬರೂ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವುದೇ ಕಷ್ಟ ಎಂಬಂತಹ ಸ್ಥಿತಿ ಇದೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಜಿಂಕ್ಯಾ ರಹಾನೆ ಬದಲಿಗೆ ಕೆ.ಎಲ್. ರಾಹುಲ್ ಗೆ ಉಪ ನಾಯಕನ ಸ್ಥಾನ ನೀಡಲಾಗಿತ್ತು. ಹೀಗಾಗಿ ಭಾರತದ ಭವಿಷ್ಯದ ಟೆಸ್ಟ್ ತಂಡದ ನಾಯಕತ್ವ ಕೆ.ಎಲ್.ರಾಹುಲ್ ಅವರಿಗೆ ಒಲಿಯಲಿದೆ ಎನ್ನಲಾಗುತ್ತಿದೆ.

Please follow and like us: