ಚುನಾವಣೆ ವೇಳೆ ಸಂಚು ರೂಪಿಸಲು ಬಿಜೆಪಿ ಬೇರೆ ರಾಜ್ಯಗಳಿಂದ ಕಾರ್ಯಕರ್ತರನ್ನು ಕರೆತರುತ್ತಿದೆ: ಅಖಿಲೇಶ್


ಲಖನೌ: ಚುನಾವಣೆ ವೇಳೆ ಪಿತೂರಿ ನಡೆಸುವ ಸಲುವಾಗಿ ಗುಜರಾತ್ ಮತ್ತು ಇತರ ರಾಜ್ಯಗಳ ಬಿಜೆಪಿ ಕಾರ್ಯಕರ್ತರನ್ನು ಯುಪಿಗೆ ಕರೆತರಲಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭಾನುವಾರ ಹೇಳಿದ್ದಾರೆ. ಬಿಜೆಪಿಯ ಬಂಡಾಯ ಸಚಿವ ದಾರಾ ಸಿಂಗ್ ಚೌಹಾಣ್ ಮತ್ತು ಅಪ್ನಾ ದಳದ ಶಾಸಕ ಆರ್ಕೆ ವರ್ಮಾ ಅವರು ಎಸ್ಪಿಗೆ ಸೇರ್ಪಡೆಯಾದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಬಿಜೆಪಿ ತೊರೆದು ಸಮಾಜವಾದಿ ಪಾರ್ಟಿಗೆ ಸೇರ್ಪಡೆಯಾಗಿರುವ ಮಾಜಿ ಸಚಿವ ದಾರಾ ಸಿಂಗ್ ಭಾನುವಾರ ಲಕ್ನೋದಲ್ಲಿ ನಡೆದ ಸಮಾಜವಾದಿ ಸೇರ್ಪಡೆ ಸಮಾರಂಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ಪಕ್ಷವು ‘ಸಬ್ ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಘೋಷಣೆಗಳಿಂದ ಮೆರೆಯುತ್ತಿದೆ. ಆದರೆ, ಅಸಲಿಗೆ ಬಿಜೆಪಿ ಸರ್ಕಾರದ ಹಲವು ಯೋಜನೆಗಳು ಕೇವಲ ಕೆಲವು ಅಭಿವೃದ್ಧಿಯಷ್ಟೇ ಆಗುತ್ತಿದೆ” ಎಂದು ಕಿಡಿಕಾರಿದ್ದಾರೆ.ಇದೇ ಸಮಾರಂಭದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, “ಬಿಜೆಪಿ ಪಕ್ಷ ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ದ್ವೇಷ ರಾಜಕಾರಣ ನಡೆಸುತ್ತಿದೆ. ಆದರೆ, ಸಮಾಜವಾದಿ ಪಕ್ಷ ಮಾತ್ರ ಇಡೀ ಉತ್ತರಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ” ಎಂದಿದ್ದಾರೆ.

ಇದಲ್ಲದೆ, “ವಿಧಾನಸಭೆ ಚುನಾವಣೆಗೆ ಮುನ್ನ ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತಿಸ್ಗಢದಿಂದ ಉತ್ತರಪ್ರದೇಶಕ್ಕೆ ಬಿಜೆಪಿ ಕಾರ್ಯಕರ್ತರನ್ನು ಕರೆತರಲಾಗುತ್ತಿದೆ. ಗುಜರಾತ್ನಿಂದ ಬಿಜೆಪಿ ಕಾರ್ಯಕರ್ತರನ್ನು ಹೇಗೆ ಕರೆತರಲಾಗುತ್ತಿದೆ ಎಂಬುದರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಮತ್ತು ವೀಡಿಯೊಗಳಿವೆ. ಚುನವಣೆಗೆ ಸಂಬಂಧಿಸಿದಂತೆ ಅವರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಬಿಜೆಪಿ ಕಾರ್ಯರ್ಕರ ಮೂಲಕ ವದಂತಿಗಳನ್ನು ಹರಡುವ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ.

ಕೋವಿಡ್ ಸಂಕಷ್ಟದ ಕಾಲದಲ್ಲಿ ಒಂದು ರಾಜ್ಯದ ಜನರು ಮತ್ತೊಂದು ರಾಜ್ಯಕ್ಕೆ ಹೋಗಬಾರದು ಎಂಬ ನಿಯಮವಿದೆ. ಆದರೆ, ಬಿಜೆಪಿ ಕೋವಿಡ್-19 ಪ್ರೋಟೋಕಾಲ್ ಉಲ್ಲಂಘಿಸಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರನ್ನು ಅವರ ರಾಜ್ಯಕ್ಕೆ ವಾಪಸ್ ಕಳುಹಿಸಬೇಕು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ಸಮಾಜವಾದಿ ಕಾರ್ಯಕರ್ತರಿಗೂ ಎಚ್ಚರಿಕೆ ನೀಡಿರುವ ಅಖಿಲೇಶ್ ಯಾದವ್, “ಮುಂದಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹರಿದುಬರಲಿರುವ ಬಿಜೆಪಿ-ಪ್ರಾಯೋಜಿತ ಸಮೀಕ್ಷೆಗಳ ಬಗ್ಗೆ ಎಚ್ಚರದಿಂದಿರಿ. ಬಿಜೆಪಿ ಶಾಸಕರು ಮತ್ತು ಸಂಸದರ ಮೇಲೆ ಜನರು ಈಗಾಗಲೇ ಅಸಮಾಧಾನಗೊಂಡಿದ್ದಾರೆ ಎಂಬ ನೆಲದ ವಾಸ್ತವತೆಗೆ ಅವರ ಸಮೀಕ್ಷೆಗಳು ತೀವ್ರ ವ್ಯತಿರಿಕ್ತವಾಗಿರುತ್ತವೆ. ಕಳೆದ 5 ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಜನರ ಏಳಿಗೆಗಾಗಿ ಏನನ್ನೂ ಮಾಡಿಲ್ಲ. ಈ ಕಾರಣಕ್ಕಾಗಿಯೇ ಅವರು ಜನರನ್ನು ಭೇಟಿ ಮಾಡಲು ಹಿಂಜರಿಯುತ್ತಿದ್ದಾರೆ” ಎಂದು ಅಖಿಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಚುನಾವಣೆ ಎದುರಾಗಿದೆ. ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, ಸಮಾಜವಾದಿ ಪಕ್ಷ 5 ವರ್ಷಗಳ ನಂತರ ಮತ್ತೆ ಅಧಿಕಾರದ ತವಕದಲ್ಲಿದೆ. ಕಾಂಗ್ರೆಸ್ ಮತ್ತು ಬಹುಜನ ಸಮಾಜವಾದಿ ಪಕ್ಷ ಸಹ ಚುನಾವಣಾ ಕಣದಲ್ಲಿದ್ದು, ಒಟ್ಟಾರೆಯಾಗಿ ಉತ್ತರಪ್ರದೇಶ ಚುನಾವಣಾ ಕಣ ರಂಗೇರಿದೆ. ಅಲ್ಲದೆ, ಈ ಚುನಾವಣೆಯ ಫಲಿತಾಂಶ ಮುಂದಿನ ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Please follow and like us: