ದೇಶದ ಯಾವುದೇ ವ್ಯಕ್ತಿಗೆ ಬಲವಂತಾಗಿ ಲಸಿಕೆ ನೀಡುವುದಿಲ್ಲ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ

ದೇಶದ ಯಾವುದೇ ವ್ಯಕ್ತಿಗೆ ಅವರ ಒಪ್ಪಿಗೆ ಪಡೆಯದೆ ಬಲವಂತವಾಗಿ ಲಸಿಕೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ವಿಕಲಾಂಗ ಜನರ ಮನೆ-ಮನೆಗೆ ಹೋಗಿ, ಆದ್ಯತೆಯ ಕೊರೊನಾ ಲಸಿಕೆಯನ್ನು ಹಾಕಬೇಕು ಎಂದು ಕೋರಿ ಎನ್‌ಜಿಒ ಎವಾರಾ ಫೌಂಡೇಶನ್ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಒಕ್ಕೂಟ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ, ವ್ಯಕ್ತಿಯ ಒಪ್ಪಿಗೆ ಪಡೆಯದೇ ಲಸಿಕೆ ನೀಡುವುದಿಲ್ಲ ಎಂಬುದನ್ನು ಹೇಳಿದೆ.

ಕೊರೊನಾ ಲಸಿಕೆ ಪ್ರಮಾಣಪತ್ರಗಳನ್ನು ಪಡೆಯುವುದರಿಂದ ವಿಕಲಾಂಗ ವ್ಯಕ್ತಿಗಳಿಗೆ ವಿನಾಯಿತಿ ನೀಡುವ ವಿಷಯದ ಕುರಿತು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ್ದು, ಯಾವುದೇ ಉದ್ದೇಶಕ್ಕಾಗಿ ಲಸಿಕೆ ಪ್ರಮಾಣಪತ್ರವನ್ನು ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸುವ ಯಾವುದೇ ಮಾರ್ಗಸೂಚಿಯನ್ನು ಆರೋಗ್ಯ ಸಚಿವಾಲಯ ನೀಡಿಲ್ಲ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದೆ.

“ಭಾರತ ಸರ್ಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಿರುವ ನಿರ್ದೇಶನ ಮತ್ತು ಮಾರ್ಗಸೂಚಿಗಳಲ್ಲಿ ಸಂಬಂಧಪಟ್ಟ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯದೆ ಯಾವುದೇ ಬಲವಂತದ ಲಸಿಕೆಯನ್ನು ನೀಡುವುದಿಲ್ಲ ಎಂದಿದೆ” ಎಂದು ತಿಳಿಸಲಾಗಿದೆ.

“ಹೆಚ್ಚುತ್ತಿರುವ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವ್ಯಾಕ್ಸಿನೇಷನ್ ಒಂದು ದೊಡ್ಡ ಸಾರ್ವಜನಿಕ ಹಿತಾಸಕ್ತಿಯಾಗಿದೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

“ದೇಶದ ಎಲ್ಲಾ ನಾಗರಿಕರು ಲಸಿಕೆಯನ್ನು ಪಡೆಯಬೇಕು ಎಂದು ಅದಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಬಗ್ಗೆ ವಿವಿಧ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಲಹೆ, ಜಾಹೀರಾತು ಮತ್ತು ಸಂವಹನ ನಡೆಸಲಾಗಿದೆ. ಆದರೂ ಯಾವುದೇ ವ್ಯಕ್ತಿಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುವುದಿಲ್ಲ” ಎಂದು ಸಚಿವಾಲಯ ಹೇಳಿದೆ.

Please follow and like us: