ಆರ್ಥಿಕ ಉದಾರೀಕರಣ ಸಾಮಾಜಿಕ ನ್ಯಾಯಕ್ಕೆ ಮಾರಕ

ಪ್ರೊ. ಬಿ ಪಿ ಮಹೇಶ್ ಚಂದ್ರ ಗುರು

ಜಾಗತೀಕರಣ ಯುಗದಲ್ಲಿ ಜಗತ್ತಿನ ದಮನಿತ ಸಮುದಾಯಗಳ ಬದುಕು ಶೋಚನೀಯವಾಗಿದೆ. ಜಾಗತೀಕರಣವೆಂಬ ಪ್ರವಾಹದ ಎದುರು ಈಜಿ ದಡ ಸೇರುವ ಶಕ್ತಿಯನ್ನು ಅಲ್ಪಸಂಖ್ಯಾತ ಬಲಾಢ್ಯರು ಮಾತ್ರ ಹೊಂದಿದ್ದಾರೆ. ಆದರೆ ವಿದ್ಯೆ, ಅಧಿಕಾರ, ಸಂಪನ್ಮೂಲ ಮತ್ತು ಅವಕಾಶ ವಂಚಿತರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಡೀ ಜಗತ್ತಿನಲ್ಲಿ ಸಾಮ್ರಾಜ್ಯಶಾಹಿಗಳ ದಮನಕಾರಿ ಪ್ರವೃತ್ತಿಗಳಿಂದಾಗಿ ಪ್ರಜಾಸತ್ತೆ ಅಪಾಯಕ್ಕೆ ಸಿಲುಕಿದೆ. ಮಾರುಕಟ್ಟೆ ಮೌಲ್ಯಗಳು ವಿಜೃಂಭಿಸಿ ಸಾಂವಿಧಾನಿಕ ಮೌಲ್ಯಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ದುರ್ಬಲಗೊಂಡು ಸಾಮಾಜಿಕವಾಗಿ ಏಕತ್ವ ಪ್ರತಿಪಾದಕರು ಮತ್ತು ಆರ್ಥಿಕವಾಗಿ ಬಂಡವಾಳಶಾಹಿ ಶಕ್ತಿಗಳು ರಾಜ್ಯಾಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ನವ ವಸಾಹತುವಾದಿ ಶಕ್ತಿಗಳು ಆರ್ಥಿಕ ಉದಾರೀಕರಣವೆಂಬ ಅಸ್ತçವನ್ನು ಬಳಸಿಕೊಂಡು ಜಾಗತಿಕವಾಗಿ ಸಾಮಾಜಿಕ ನ್ಯಾಯ ವಿತರಣೆಗೆ ಗಂಭೀರ ಸ್ವರೂಪದ ಧಕ್ಕೆಯುಂಟು ಮಾಡಿದೆ. ಇದಕ್ಕೆ ಅಮೇರಿಕಾ, ಐರೋಪ್ಯ ಒಕ್ಕೂಟ, ಇಂಗ್ಲೇಂಡ್, ಭಾರತ ಮೊದಲಾದ ದೇಶಗಳು ಹೊರತಾಗಿಲ್ಲ. ಜಾಗತಿಕವಾಗಿ ಉತ್ತರ-ದಕ್ಷಿಣ ದೇಶಗಳ ನಡುವಿನ ಅಂತರ ಆರ್ಥಿಕ ಉದಾರೀಕರಣ ಯುಗದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಉತ್ತರದ ಕೆಲವೇ ಬಲಾಢ್ಯ ದೇಶಗಳು ದಕ್ಷಿಣದ ಬಹುಸಂಖ್ಯಾತ ಬಡರಾಷ್ಟ್ರಗಳ ಮೇಲೆ ನಿರಂತರವಾಗಿ ಕುದುರೆ ಸವಾರಿ ನಡೆಸುತ್ತಿವೆ. ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಮೊದಲಾದೆಡೆ ಬಹುಸಂಖ್ಯಾತ ದುರ್ಬಲ ಜನಸಮುದಾಯಗಳು ಬಡತನ ರೇಖೆಗಿಂತ ಕೆಳಗೆ ಬದುಕುತ್ತಿರಲು ಆರ್ಥಿಕ ಉದಾರೀಕರಣ ನೀತಿಯನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯಾಯವನ್ನು ನಿರ್ಲಕ್ಷಿಸುವ ಆಳುವ ವರ್ಗ ಪ್ರಮುಖ ಕಾರಣವಾಗಿದೆ. ಬಲಾಢ್ಯ ಶಕ್ತಿಗಳು ಇಂದು ಜಗತ್ತಿನೆಲ್ಲೆಡೆ ರಾಜಕೀಯವಾಗಿ ಮೇಲುಗೈ ಸಾಧಿಸಿ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸಿವೆ. ‘ಪ್ರಜಾಪ್ರಭುತ್ವಕ್ಕಿಂತ ಮಿಗಿಲಾದ ಆಡಳಿತ ವ್ಯವಸ್ಥೆ ಮತ್ತೊಂದಿಲ್ಲ’ ಎಂದು ನುಡಿದ ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್‌ರವರ ಮಾತುಗಳು ಆರ್ಥಿಕ ಉದಾರೀಕರಣ ಯುಗದಲ್ಲಿ ಮಹತ್ವ ಕಳೆದುಕೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ರಾಷ್ಟçಗಳಲ್ಲಿ ಸಂವಿಧಾನ ವಿಶೇಷ ಮಹತ್ವ ಹೊಂದಿದೆ. ‘ಸರ್ಕಾರಗಳು ಬರುತ್ತವೆ - ಸರ್ಕಾರಗಳು ಹೋಗುತ್ತವೆ, ಆದರೆ ಸಂವಿಧಾನ ಮಾತ್ರ ನಿರಂತರವಾಗಿ ಸಾರ್ವಜನಿಕ ಹಿತವನ್ನು ರಕ್ಷಿಸುವ ಶಕ್ತಿಯಾಗಿಯೇ ಉಳಿಯುತ್ತದೆ’ ಎಂಬ ಅಂಬೇಡ್ಕರ್ ಪ್ರತಿಪಾದನೆ ಕೂಡ ಪ್ರಸ್ತುತ ಸಂದರ್ಭದಲ್ಲಿ ದುರ್ಬಲಗೊಂಡಿದ್ದು ದಮನಿತ ಬಹುಜನ ಸಮುದಾಯಗಳನ್ನು ಅನಾಥಪ್ರಜ್ಞೆ ಕಾಡುತ್ತಿದೆ. ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಇಚ್ಛಾಶಕ್ತಿಗಳ ಕೊರತೆಯಿಂದಾಗಿ ನಮ್ಮನ್ನು ಇಂದು ಆಳುವವರು ಸಮಾನಾಂತರ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ರೂಪಿಸಲು ವಿಫಲರಾಗಿದ್ದಾರೆ. ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಕೂಡ ಗಣನೀಯವಾಗಿ ದುರ್ಬಲಗೊಂಡಿದ್ದು ಗಾಂಧಿ ಪ್ರಣೀತ ರಾಜಕೀಯ ವಿಕೇಂದ್ರೀಕರಣ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯಕೇಂದ್ರಿತ ಆರ್ಥಿಕ ವ್ಯವಸ್ಥೆಗಳು ಇಲ್ಲವಾಗಿದೆ. ‘ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳಿಂದ ನೊಂದ ಜನರು ನಾವು ಕಷ್ಟಪಟ್ಟು ರೂಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧ್ವಂಸಗೊಳಿಸುತ್ತಾರೆ’ ಎಂದು ಅಂಬೇಡ್ಕರ್ ನೀಡಿದ ಎಚ್ಚರಿಕೆ ಮಲಗಿದವರಂತೆ ನಾಟಕವಾಡುತ್ತಿರುವ ನಮ್ಮನ್ನು ಆಳುವವರಿಗೆ ಅರ್ಥವಾಗಿಲ್ಲ! ಆರ್ಥಿಕ ಉದಾರೀಕರಣ - ಸಾಮಾಜಿಕ ನ್ಯಾಯ ಎರಡೂ ಜೊತೆಯಲ್ಲಿ ಸಾಗುವಂತಾಗಲು ಪ್ರಬುದ್ಧ ರಾಜಕೀಯ ನಾಯಕತ್ವ ಅತ್ಯವಶ್ಯಕ. ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋಕ್ಯೂಬಾದಂತಹ ಪುಟ್ಟ ರಾಷ್ಟ್ರದಲ್ಲಿ ಇದನ್ನು ಸಾಧಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ. ಯೂರೋಪಿನಲ್ಲಿ ನಾರ್ವೆಯಂತಹ ಮತ್ತೊಂದು ಸಣ್ಣ ರಾಷ್ಟ್ರ ಮಾನವ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ನ್ಯಾಯವಿತರಣೆಗೆ ಪೂರಕವಾದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿದೆ. ದಕ್ಷಿಣ ಏಷ್ಯಾದಲ್ಲಿ ಭೂತಾನ್ ನಂತಹ ಮತ್ತೊಂದು ಚಿಕ್ಕದೇಶ ‘ಹಸಿರು ಆರ್ಥಿಕ ವ್ಯವಸ್ಥೆ’ಯನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಇಂತಹ ಶ್ರೇಷ್ಟ ಯಶೋಗಾಥೆಗಳು ಜಗತ್ತಿನ ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ಅಭಿವೃದ್ಧಿ ಹೊಂದಿದ ದೇಶಗಳ ನಾಯಕರಿಗೆ ಕಾಣಿಸುತ್ತಿಲ್ಲ. ಬಲಾಢ್ಯ ಅಭಿವೃದ್ಧಿ ಮಾದರಿಯ ಅಳವಡಿಕೆಯಿಂದಾಗಿ ಜಗತ್ತಿನೆಲ್ಲೆಡೆ ಆರ್ಥಿಕ ಅಸಮಾನತೆ ಹೆಚ್ಚಾಗಿದ್ದು ಸಾಮಾಜಿಕ ನ್ಯಾಯ ನಗಣ್ಯವಾಗಿದೆ. ಜಗತ್ತಿನ ಶೇ.೮೫ರಷ್ಟು ಸಂಪತ್ತು ಕೇವಲ ೧೫ ಬಲಾಢ್ಯ ರಾಷ್ಟ್ರಗಳ ಕೈಯಲ್ಲಿ ಕೇಂದ್ರೀಕೃತವಾಗಿರುವುದರಿಂದಲೇ ಇಂತಹ ದಯನೀಯ ಪರಿಸ್ಥಿತಿ ಸೃಷ್ಟಿಯಾಗಿದೆ. ಅಭಿವೃದ್ಧಿಯ ಎಲ್ಲ ಫಲಗಳನ್ನು ಮೇಲ್ಪದರದಲ್ಲಿರುವ ಶೇ.೧ರಷ್ಟು ಮಂದಿ ಮಾತ್ರ ಅನುಭವಿಸುತ್ತಿದ್ದಾರೆ. ಮಧ್ಯಮ ವರ್ಗದವರು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಮತ್ತು ಬಡವರು ‘ವ್ಯವಸ್ಥೆಯ ಗುಲಾಮರು’ ಎಂಬ ದಯನೀಯ ಸ್ಥಿತಿ ಜಗತ್ತಿನಲ್ಲಿ ನಿರ್ಮಾಣಗೊಂಡಿದೆ. ಪ್ರಜಾಸತ್ತೆ ಮತ್ತು ಧರ್ಮನಿರಪೇಕ್ಷತೆಗಳು ದುರ್ಬಲಗೊಂಡಾಗ ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಅರಾಜಕತೆಗಳು ಸಹಜವಾಗಿ ಸೃಷ್ಟಿಯಾಗುತ್ತವೆ. ಇವುಗಳು ಕೋವಿಡ್ ವೈರಾಣುಗಳಿಗಿಂತಲೂ ಭಯಂಕರ ವೈರಾಣುಗಳಾಗಿ ಮಿಲಿಯಾಂತರ ಬಡವರನ್ನು ಬಲಿ ತೆಗೆದುಕೊಳ್ಳುತ್ತಿವೆ. ಸಾಮಾನ್ಯ ಜನರ ಬದುಕನ್ನು ಹಸನುಗೊಳಿಸದ ಆರ್ಥಿಕತೆಯಿಂದಾಗಿ ಬಡತನ, ನಿರುದ್ಯೋಗ, ಹಸಿವು, ಅಪೌಷ್ಟಿಕತೆ, ಅನಾರೋಗ್ಯ, ಅಸುರಕ್ಷತೆ, ಅಸಹಾಯಕತೆ, ಆತ್ಮಹತ್ಯೆ ಮೊದಲಾದ ಸಂಕಷ್ಟಗಳು ಸೃಷ್ಟಿಯಾಗುತ್ತವೆ. ಆರ್ಥಿಕ ಉದಾರೀಕರಣದ ರೂವಾರಿಗಳು ಉದಾರೀಕರಣ ಸೃಷ್ಟಿಸಿರುವ ಸಾಮಾಜಿಕ ಅಸಮತೋಲನ ಮತ್ತು ಹೊರಗುಳಿಯುವಿಕೆ ಅಪಾಯಗಳತ್ತ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಆರ್ಥಿಕ ಉದಾರೀಕರಣದಿಂದ ಕಲ್ಯಾಣ ರಾಷ್ಟç ನಿರ್ಮಾಣ ಮಾಡಲು ಸಾಧ್ಯವಾಗದಂತಹ ಸ್ಥಿತಿ ಇಂದು ಉಂಟಾಗಿದೆ. ಮುಕ್ತ ವ್ಯಾಪಾರ ನೀತಿಯಿಂದ ಗಡಿ ರಹಿತ ವ್ಯಾಪಾರ ಮತ್ತು ಅಡೆತಡೆ ರಹಿತ ಶೋಷಣಾ ಪ್ರವೃತ್ತಿಗಳು ಹೆಚ್ಚುತ್ತಿವೆ. ಆರ್ಥಿಕತೆಯ ಖಾಸಗೀಕರಣಕ್ಕೆ ಜಾಗತೀಕರಣ ಯುಗದಲ್ಲಿ ಹೆಚ್ಚಿನ ಮಹತ್ವ ಲಭಿಸಿದೆ. ಸಾರ್ವಜನಿಕ ವಲಯದ ಅಭಿವೃದ್ಧಿಯಿಂದ ಶ್ರೀಸಾಮಾನ್ಯರಿಗೆ ಉದ್ಯೋಗಾವಕಾಶಗಳು, ಮೀಸಲಾತಿ ಸೌಲಭ್ಯ, ಸಾಮಾಜಿಕ ಬಂಡವಾಳ ಅಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ, ಜೀವನಮಟ್ಟ ಸುಧಾರಣೆ, ಸಾಮಾಜಿಕ ಸುರಕ್ಷತೆ, ಕೊಳ್ಳುವ ಶಕ್ತಿವರ್ಧನೆ ಮೊದಲಾದ ಅನುಕೂಲತೆಗಳು ಲಭಿಸುತ್ತವೆ. ಆದರೆ ಬಲಾಢ್ಯ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಂಡ ನಂತರ ಸಾರ್ವಜನಿಕ ವಲಯದ ಅಭಿವೃದ್ಧಿಗಿಂತ ಖಾಸಗಿ ವಲಯದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಲಭಿಸಿದೆ. ಖಾಸಗಿ ಸಂಸ್ಥೆಗಳು ಬಂಡವಾಳ ಹೂಡಿಕೆದಾರರು – ದಲ್ಲಾಳಿಗಳು – ಅಧಿಕಾರಿಗಳು – ರಾಜಕಾರಣಿಗಳು ಎಂಬ ಚಾತುರ್ವರ್ಣವನ್ನು ಸೃಷ್ಟಿಸಿ ಸರ್ವೋದಯ ಮೌಲ್ಯವನ್ನು ಬದಿಗೊತ್ತಿ ಕೆಲವೇ ಬಲಿಷ್ಠ ಜನರ ಅಭಿವೃದ್ಧಿಯೆಂಬ ಕೆಟ್ಟ ಶಕೆ ಆರಂಭಗೊAಡಿದೆ. ಉಳ್ಳವರು ಎಲ್ಲವನ್ನೂ ಕೊಳ್ಳುವ ಅವಕಾಶವನ್ನು ಪಡೆದರೆ ಬಡವರು ಬದುಕನ್ನೇ ಕಳೆದುಕೊಳ್ಳುವ ಅಸಹಾಯಕ ಸ್ಥಿತಿ ನಿರ್ಮಾಣಗೊಂಡಿದೆ. ಉಳ್ಳವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಕೌಶಲ್ಯ, ಸಾಮರ್ಥ್ಯ, ಉದ್ಯಮಶೀಲತೆ, ನಾಯಕತ್ವ, ಬಂಡವಾಳ ಹೂಡಿಕೆ ಅವಕಾಶ ಮೊದಲಾದವುಗಳು ಖಾಸಗೀಕರಣ ಯುಗದಲ್ಲಿ ಯಥೇಚ್ಛವಾಗಿ ಲಭಿಸುತ್ತಿವೆ. ಭಾರತದ ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ‘ಉಳ್ಳವರಿಗೆ ರಾಮಮಂದಿರ - ಬಡವರಿಗೆ ಅನಾಥಾಲಾಯ’ ಎಂಬ ಕೆಟ್ಟ ಶಕೆಯನ್ನು ಹುಟ್ಟು ಹಾಕಲು ಬದ್ಧವಾಗಿದೆ. ಬಡವರಿಗೆ ಖಾಸಗೀಕರಣ ಪ್ರಕ್ರಿಯೆ ಮೂಲಸೌಕರ್ಯಗಳು, ಅಭಿವೃದ್ಧಿ ಅವಕಾಶಗಳು, ಮಾನವ ಹಕ್ಕುಗಳು, ಒಳಗೊಳ್ಳುವ ಅಭಿವೃದ್ಧಿ ಅವಕಾಶಗಳನ್ನು ನೇರವಾಗಿ ವಂಚಿಸಿದೆ. ಶ್ರೀಮಂತರು ಪ್ರಕಾಶಿಸುತ್ತಿದ್ದರೆ, ದುರ್ಬಲ ಜನಸಮುದಾಯಗಳು ಸಾವಿನೆಡೆಗೆ ಚಲಿಸುತ್ತಿದ್ದಾರೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಗಳಿಂದಾಗಿ ಸಾಮಾಜಿಕ ನ್ಯಾಯ ಕಡೆಗಣಿಸಲ್ಪಟ್ಟು ಬಡವರ ಮೃತ್ಯು ಕೂಪಗಳು ಎಲ್ಲೆಡೆ ಸೃಷ್ಟಿಯಾಗಿದೆ. ವಿಶ್ವದಲ್ಲೆ ಬಹುದೊಡ್ಡ ಪ್ರಜಾಸತ್ತೆ ಎಂಬ ಹೆಗ್ಗಳಿಕೆ ಹೊಂದಿರುವ ಭಾರತ ಇಂದು ಆರ್ಥಿಕ ಅಸಮಾನತೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿರುವುದು ಮೋದಿ ಪ್ರಭುತ್ವದ ಮಹಿಮೆಯಾಗಿದೆ! ಆದಾಗ್ಯೂ, ಇತಿಹಾಸಪ್ರಜ್ಞೆಯಿಂದ ಶೋಷಿತ ಜನಸಮುದಾಯಗಳು ಜಾಗೃತರಾಗಿ ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಅನುಸರಿಸಿ ಅಸಮಾನತೆ ಮುಕ್ತ ಹೊಸ ಸಮಾಜ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ರೂಪಿಸಲು ಮುಂದಾಗಬೇಕಿದೆ. ವ್ಯವಸ್ಥೆಯೊಂದು ಪೂರ್ಣಪ್ರಮಾಣದಲ್ಲಿ ಹಳಸಿದಾಗ ಹೊಸ ವ್ಯವಸ್ಥೆ ಸಹಜವಾಗಿ ರೂಪುಗೊಳ್ಳುತ್ತದೆ ಎಂಬುದಕ್ಕೆ ಮನುಕುಲದ ಇತಿಹಾಸ ಹಲವಾರು ಪುರಾವೆಗಳನ್ನು ಒದಗಿಸುತ್ತದೆ. ಚೀನಾ ದೇಶದಲ್ಲಿ ಇಡೀ ಸಮಾಜವೇ ನಿಷ್ಕಿçಯತೆ ಮತ್ತು ಅಸಹಾಯಕತೆಗಳ ತುತ್ತತುದಿಯಲ್ಲಿದ್ದಾಗ ಮಾವೋತ್ಸೆ ತುಂಗ್ ಯುಗಪುರುಷನಾಗಿ ಜನರನ್ನು ಸಂಘಟಿಸಿ ಹೊಸ ಕ್ರಾಂತಿಯ ಮೂಲಕ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿದರು. ಇಂದು ಚೀನಾ ದೇಶ ಆರ್ಥಿಕತೆ ದೃಷ್ಟಿಯಿಂದ ಜಗತ್ತಿನ ದೊಡ್ಡಣ್ಣ ಅಮೇರಿಕಾಗೆ ಸೆಡ್ಡು ಹೊಡೆಯುವ ಶಕ್ತಿಶಾಲಿ ರಾಷ್ಟçವಾಗಿ ರೂಪುಗೊಂಡಿದೆ. ರಷ್ಯಾ ದೇಶದಲ್ಲಿ ಝರ್ ದೊರೆಗಳಾಗಿ ಅಟ್ಟಹಾಸದಿಂದ ಅರಾಜಕತೆ ತುಂಬಿ ತುಳುಕುತ್ತಿದ್ದಾಗ ಲೆನಿನ್, ಸ್ಟಾಲಿನ್ ಮೊದಲಾದ ಕ್ರಾಂತಿಕಾರಿ ನಾಯಕರು ಹುಟ್ಟಿ ರಷ್ಯಾ ದೇಶದ ಪುನರುಜ್ಜೀವನಕ್ಕೆ ಅನುವು ಮಾಡಿಕೊಟ್ಟರು. ಅಂದು ಬಡ ರಾಷ್ಟçವಾಗಿದ್ದ ರಷ್ಯಾ ಇಂದು ಜಗತ್ತಿನ ಬಲಾಢ್ಯ ಆರ್ಥಿಕತೆಯನ್ನು ಹೊಂದಿದೆ. ಯೂರೋಪಿನಲ್ಲಿ ಬಿಸ್ಮಾರ್ಕ್, ನೆಪೋಲಿಯನ್ ಮೊದಲಾದ ಸಾಮ್ರಾಜ್ಯಶಾಹಿಗಳು ಸೃಷ್ಟಿಸಿದ ಅರಾಜಕತೆಯನ್ನು ಪ್ರಜಾಸತ್ತಾತ್ಮಕ ಕ್ರಾಂತಿಯಿAದ ಜಾನ್ ಮಿಲ್ಟನ್ ನೇತೃತ್ವದ ಪ್ರಜಾಪ್ರಭುತ್ವವಾದಿಗಳು ಅಳಿಸಿ ಹಾಕಿದ್ದಾರೆ. ವಿಶ್ವವನ್ನೇ ಗೆದ್ದನೆಂದು ಬೀಗುತ್ತಿದ್ದ ಅಲೆಕ್ಸಾಂಡರ್ ದ ಗ್ರೇಟ್ ರಣಭೂಮಿಯಿಂದ ಶಿಬಿರಕ್ಕೆ ತೆರಳುವಾಗ ಅಸ್ವಸ್ಥತೆಗೆ ಈಡಾಗಿ ಸಾಯಬೇಕಾಯಿತು. ಇದನ್ನೇ ಪ್ರಕೃತಿ ಮಹಿಮೆ ಎಂದು ತಿಳಿಯಬೇಕು. ದ್ವಿತೀಯ ಮಹಾಯುದ್ಧ ನಡೆದದ್ದೇ ಸಾಮ್ರಾಜ್ಯಶಾಹಿಗಳು ಮತ್ತು ಪ್ರಜಾಪ್ರಭುತ್ವ ವಾದಿಗಳ ನಡುವೆ. ಜಗತ್ತು ಕಂಡ ಅತ್ಯಂತ ಕೆಟ್ಟ ಸಾಮ್ರಾಜ್ಯಶಾಹಿ ಹಿಟ್ಲರ್ ಅತಿಯಾದ ಪಾಪಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡನು. ಸಾಮ್ರಾಜ್ಯಶಾಹಿ ಸೋತು ಪ್ರಜಾಸತ್ತೆ ಗೆಲ್ಲಲು ಇಂಗ್ಲೇಂಡ್, ಅಮೇರಿಕಾ, ರಷ್ಯಾ, ಭಾರತ ಮೊದಲಾದ ದೇಶಗಳು ಶ್ರಮಿಸಿದ ಬಗೆ ಅನನ್ಯವಾದುದು. ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟಗಳ ಶೀತಲ ಯುದ್ಧ ಜಗತ್ತಿನಲ್ಲಿ ಬಂಡವಾಳಶಾಹಿ ಮತ್ತು ಸಮಾಜವಾದಿ ಎಂಬ ಎರಡು ಶಕ್ತಿ ಕೇಂದ್ರಗಳನ್ನು ಸೃಷ್ಟಿಸಿತು. ಅಮೇರಿಕಾ ಮತ್ತು ಯೂರೋಪ್‌ಗಳಲ್ಲಿ ಆರ್ಥಿಕ ಉದಾರೀಕರಣ ಯುಗದಲ್ಲಿ ಬಂಡವಾಳಶಾಹಿ ಶಕ್ತಿ ಸಮಾಜವಾದಿಗಳ ಮೇಲೆ ನಿಚ್ಚಳ ಮೇಲುಗೈ ಸಾಧಿಸಿತು. ೯೦ರ ದಶಕದಲ್ಲಿ ಜರುಗಿದ ಜಾಗತೀಕರಣ ಯುಗದಲ್ಲಿ ಕಮ್ಯುನಿಷ್ಟ್ ವ್ಯವಸ್ಥೆಯ ಕುಸಿತದೊಂದಿಗೆ ಸಮಾಜವಾದಕ್ಕೆ ತೀವ್ರ ಹಿನ್ನಡೆಯುಂಟಾಯಿತು. ಜಗತ್ತಿನ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ದುರ್ಬಲ ವರ್ಗಗಳ ರಕ್ಷಣೆ ಮತ್ತು ಸಬಲೀಕರಣಗಳಿಗೆ ಕಮ್ಯುನಿಷ್ಟರು ನೀಡಿದ ಕೊಡುಗೆ ಅಮೂಲ್ಯವಾದುದು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಸ್ತಿ ಹಕ್ಕುಗಳನ್ನು ನೀಡಿದರೂ ಸಹ ಬಂಡವಾಳಶಾಹಿ ಸಿದ್ಧಾಂತ ಸಾಮಾಜಿಕ ನ್ಯಾಯವಿತರಣೆಗೆ ಬಹುದೊಡ್ಡ ಅಡ್ಡಗಲ್ಲಾಗಿದೆ. ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಉದಾರೀಕೃತ ಶೋಷಣೆಯನ್ನು ಮಾರುಕಟ್ಟೆ ಶಕ್ತಿಗಳು ಎಗ್ಗಿಲ್ಲದೇ ಮುಂದುವರೆಸಿವೆ. ಇದರ ನಡುವೆಯೂ ವಾಲ್‌ಸ್ಟ್ರೀಟ್ ಮುತ್ತಿಗೆ ಚಳುವಳಿ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಸಮಾಜವಾದಿಗಳ ನೇತೃತ್ವದಲ್ಲಿ ಜರುಗಿ ಸಾಮಾಜಿಕ ನ್ಯಾಯವಿತರಣೆಗೆ ಬಲವಾದ ಹಕ್ಕೊತ್ತಾಯ ಮಂಡಿಸಿತು. ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ರೈತ-ಕಾರ್ಮಿಕರ ಸಂಘಟಿತ ಹೋರಾಟ ಜಗತ್ತಿನ ಗಮನ ಸೆಳೆಯಿತು. ಅಮೇರಿಕಾ ಮತ್ತು ಯೂರೋಪಿನಲ್ಲಿ ಪ್ರಜ್ಞಾವಂತ ಮತದಾರರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಸಂಖ್ಯೆ ಹೆಚ್ಚಿದ ಕಾರಣ ಅಲ್ಲಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಮೂಲಸೌಕರ್ಯಗಳು, ಜೀವನೋಪಾಯ ಮಾರ್ಗಗಳು, ಸಾಮಾಜಿಕ ಸುರಕ್ಷತಾ ಕ್ರಮಗಳು ಹೆಚ್ಚಿದ್ದು ಸಾಮಾಜಿಕ ನ್ಯಾಯವಿತರಣೆಗೆ ವಿಶೇಷ ಚಾಲನೆ ಲಭಿಸಿದೆ. ಹಲವಾರು ರಾಷ್ಟçಗಳು ನೂತನ ಸಹಸ್ರಮಾನದಲ್ಲಿ ಖಾಸಗಿ ಸಂಸ್ಥೆಗಳು ಸಮಾಜದ ಶ್ರೇಯಸ್ಸಿಗಾಗಿ ತಮ್ಮ ಗಳಿಕೆಯಲ್ಲಿ ಸೀಮಿತ ಪಾಲನ್ನು ವಿನಿಯೋಗಿಸಬೇಕೆಂಬ ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ’ ನೀತಿಯಡಿ ನಿರ್ಧಿಷ್ಟ ಕಾನೂನುಗಳನ್ನು ರೂಪಿಸಿದರು. ಸಾಮಾಜಿಕ ನ್ಯಾಯ ವಿತರಣೆ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಮೂಲಕ ಸಮಾಜದ ಋಣವನ್ನು ತೀರಿಸಬೇಕೆಂಬ ಕಾರ್ಪೊರೇಟ್ ವಲಯದ ನಿಲುವು ಇಂದು ಉತ್ತಮ ಹೆಜ್ಜೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರೀಮಂತರು - ಬಡವರು ಎಂಬ ಭೇದವಿಲ್ಲದೆ ಎಲ್ಲರ ಮಾನವ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಮಹತ್ವ ಲಭಿಸಿದೆ. ಆರ್ಥಿಕ ಬಂಡವಾಳಕ್ಕಿಂತ ಸಾಮಾಜಿಕ ಬಂಡವಾಳ ಅಭಿವೃದ್ಧಿ ಸಾಮಾಜಿಕ ನ್ಯಾಯವಿತರಣೆಗೆ ಅತ್ಯವಶ್ಯಕ ಎಂಬ ಹೊಸ ಪ್ರಜ್ಞೆ ಮೂಡಿ ಬಂದಿದೆ. ಇಂದು ಸುಸ್ಥಿರ ಅಭಿವೃದ್ಧಿ, ಮಾನವಾಭಿವೃದ್ಧಿ, ಸಾಮಾಜಿಕ ನ್ಯಾಯವಿತರಣೆ, ಒಳಗೊಳ್ಳುವ ಅಭಿವೃದ್ಧಿ, ಮಹಿಳೆಯರ ಸಬಲೀಕರಣ ಮನುಕುಲದ ಮುಂದಿರುವ ಬಹುದೊಡ್ಡ ಸವಾಲುಗಳಾಗಿವೆ. ಆರ್ಥಿಕ ಉದಾರೀಕರಣ ಮನುಷ್ಯರು, ಪ್ರಕೃತಿ ಮತ್ತು ಸಂವಿಧಾನಗಳಿಗೆ ಗಂಡಾಂತರ ಒಡ್ಡಿದೆ. ಪ್ರಾಕೃತಿಕ ಅಸಮತೋಲನ ಮತ್ತು ಆರ್ಥಿಕ ಅಸಮಾನತೆಗಳಿಗೆ ಕಾರಣಕರ್ತರಾಗಿರುವ ಮೂಲಭೂತವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು ಈಗಲಾದರೂ ಎಚ್ಚೆತ್ತುಕೊಂಡು ಪ್ರಕೃತಿಯ ಜೊತೆ ತಾವೂ ಉಳಿಯಬೇಕೆಂಬ ಸಮಷ್ಠಿಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬುದ್ಧರ ಮಧ್ಯಮಾರ್ಗ, ಗಾಂಧಿಯ ಅಹಿಂಸಾ ಮಾರ್ಗ, ಲೋಹಿಯಾರ ಸಾಮಾಜಿಕ ನ್ಯಾಯ, ಅಂಬೇಡ್ಕರರ ಅಂತ್ಯೋದಯ ಅಭಿವೃದ್ಧಿ ಮಾದರಿ ಮತ್ತು ಕುವೆಂಪುರವರ ಅನಿಕೇತನ ಚಿಂತನೆ ಜಗತ್ತನ್ನೇ ಒಗ್ಗೂಡಿಸುವ, ಉಳಿಸುವ ಮತ್ತು ಉದ್ಧರಿಸುವ ಶ್ರೇಷ್ಠ ಮಾರ್ಗೋಪಾಯಗಳಾಗಿವೆ.

  • ಪ್ರೊ. ಬಿ ಪಿ ಮಹೇಶ್ ಚಂದ್ರ ಗುರು
Please follow and like us: