ಚುನಾವಣೆಗೆ ಸಿದ್ಧ ಉತ್ತರ ಪ್ರದೇಶ ಅಖಾಡ; ಯೋಗಿ ಸರ್ಕಾರದ ಆರ್ಥಿಕ ಸಾಧನೆಗಳೇನು?

-ಸೋಮಶೇಖರ್ ಚಲ್ಯ

2019-20ರಲ್ಲಿ ಭಾರತದ ಸರಾಸರಿ ರೂ. 86,659 ನಷ್ಟಿದ್ದರೆ ಇದರ ಅರ್ಧದಷ್ಟು ಅಂದರೆ ರೂ. 41,023 ಉತ್ತರ ಪ್ರದೇಶದ ತಲಾ ಆದಾಯವಿತ್ತು.
ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಯುಪಿ ತಲಾ ಆದಾಯದ ಪಟ್ಟಿಯಲ್ಲಿ (2011-12ರ ಬೆಲೆಯಲ್ಲಿ) 32ನೇ ಸ್ಥಾನದಲ್ಲಿದೆ.

ಕೊರೊನಾ ಸೋಂಕು ಹರಡುವ ಮುನ್ನವೇ ಭಾರತದ ಒಟ್ಟು ದೇಸಿ ಉತ್ಪನ್ನದ ಬೆಳವಣಿಗೆ ಕುಸಿದಿದ್ದು, ಇದಕ್ಕೆ ಉತ್ತರ ಪ್ರದೇಶವೂ ಹೊರತಾಗಿರಲಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಯುಪಿಯಲ್ಲಿ ತಲಾ ಆದಾಯ ದ್ವಿಗುಣಗೊಂಡಿರುವುದಾಗಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಪ್ರಮುಖ ಪತ್ರಿಕೆಗಳ ಮೊದಲ ಪುಟದಲ್ಲಿ ಜಾಹೀರಾತು ನೀಡಿದೆ.
ಆದಾಗ್ಯೂ, ವಾಸ್ತವವೇನೆಂಬುದನ್ನು ಚಿತ್ರ 1 ರಲ್ಲಿ ನೋಡಬಹುದು ().

ಜಿಡಿಪಿ ಬೆಳವಣಿಗೆ

ಅಧಿಕೃತ ಅಂದಾಜಿನ ಪ್ರಕಾರ, ಉತ್ತರ ಪ್ರದೇಶದ ಒಟ್ಟು ರಾಜ್ಯದ ಆಂತರಿಕ ಉತ್ಪನ್ನ (GSDP) 2017-21 ರಲ್ಲಿ ವಾರ್ಷಿಕವಾಗಿ ಕೇವಲ ಶೇ.1.95 ರಷ್ಟು ಸಂಯುಕ್ತ ಬೆಳವಣಿಗೆ ದರದಲ್ಲಿ ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ (2012-17) ಬೆಳವಣಿಗೆ ದರ ಶೇ.6.92 ಇತ್ತು. ಆದಿತ್ಯನಾಥ್ ಸರ್ಕಾರದ ನಾಲ್ಕು ವರ್ಷಗಳ ಅಡಳಿತದ ಅವಧಿಯಲ್ಲಿ ತಲಾ ಆದಾಯ ಸರಾಸರಿ ಶೇ. 0.43% ರಷ್ಟು ಹೆಚ್ಚಿದೆ.

ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿ ಉತ್ಪಾದನೆಯು ಶೇ.3.34 ರಷ್ಟು ಕುಸಿತ ಕಂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಉತ್ಪಾದನೆ ಶೇ.14.64 ರಷ್ಟಿತ್ತು.

ಉದ್ಯೋಗ ಪ್ರವೃತ್ತಿಗಳು

ಕೆಳಗಿನ ನಂ. 2 ಮತ್ತು 3 ಚಿತ್ರಗಳು ಆದಿತ್ಯನಾಥ್ ಸರ್ಕಾರದ ನೀತಿಗಳ ಬೃಹತ್ ವೈಫಲ್ಯವನ್ನು ತೋರಿಸುತ್ತವೆ. 2012ಕ್ಕೆ ಹೋಲಿಸಿದರೆ ಒಟ್ಟಾರೆ ನಿರುದ್ಯೋಗ ದರ 2.5 ಪಟ್ಟು ಹೆಚ್ಚಾಗಿದೆ. ಮಾತ್ರವಲ್ಲ, ಯುವಕರ ನಿರುದ್ಯೋಗ ದರ ಅಂದಾಜು 5 ಪಟ್ಟು ಹೆಚ್ಚಾಗಿದೆ.

ಎಲ್ಲಾ ವಯೋಮಾನದವರ ಮತ್ತು ಯುವಜನರ (15-29 ವರ್ಷಗಳು) ನಿರುದ್ಯೋಗ ದರ – 2012 ಮತ್ತು 2019.

ಉತ್ತರ ಪ್ರದೇಶ, 2012 ಮತ್ತು 2019 ರಲ್ಲಿ ಶಿಕ್ಷಣ ಮತ್ತು ತರಬೇತಿಯ ಆಧಾರಿತ ಯುವಜನರ ನಿರುದ್ಯೋಗ ದರ

ಯುವಜನರ ನಿರುದ್ಯೋಗ ದರ ಒಟ್ಟಾರೆ ನಿರುದ್ಯೋಗ ದರಕ್ಕಿಂತ ಅಧಿಕ:
ಮಾಧ್ಯಮಿಕ ಶಿಕ್ಷಣ ಪಡೆದವರ ನಿರುದ್ಯೋಗ ದರ ಮೂರು ಪಟ್ಟು ಅಧಿಕವಾದರೆ, ಪ್ರೌಢ ಶಿಕ್ಷಣ ಪಡೆದವರಲ್ಲಿ ನಾಲ್ಕುಪಟ್ಟರಷ್ಟಿದೆ. ಪದವೀಧರರ ನಿರುದ್ಯೋಗ ದರ ಶೇ.21ರಿಂದ 51ಕ್ಕೆ ಏರಿತು. ತಾಂತ್ರಿಕ ಡಿಪ್ಲೊಮಾ ಪಡೆದವರಲ್ಲಿ ಶೇ.13ರಿಂದ ಶೇ.66ಕ್ಕೆ ಮತ್ತು ತಾಂತ್ರಿಕ ಪದವೀಧರರ ವಲಯದಲ್ಲಿ 19% ರಿಂದ 46% ಕ್ಕೆ ನಿರುದ್ಯೋಗ ದರವು ಏರಿಕೆಯಾಗಿದೆ.

ನಿರುದ್ಯೋಗ ದರದಲ್ಲಾದ ಏರಿಕೆ ಪ್ರಮಾಣ ಪ್ರಸಕ್ತ ಯುಪಿ ಚುನಾವಣೆಯಲ್ಲಿ ಮತದಾರರನ್ನು, ಮುಖ್ಯವಾಗಿ ಯುವಜನರನ್ನು ತಮ್ಮತ್ತ ಸೆಳೆಯಲು ಪ್ರತಿಪಕ್ಷಗಳ ಪಾಲಿನ ಅಸ್ತ್ರವಾಗಲಿದೆ.

ಯುಪಿ ಬಿಕ್ಕಟ್ಟು, ದೊಡ್ಡ ಹಿಂದಿ ಬೆಲ್ಟ್ ಬಿಕ್ಕಟ್ಟು

ಉತ್ತರ ಪ್ರದೇಶದ ಸಾಧನೆಯು ಬಿಜೆಪಿ ಆಡಳಿತದಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿದೆ. ಮೋದಿ ಮತ್ತು ಆದಿತ್ಯನಾಥ್ ಅವರ ‘ಡಬಲ್ ಇಂಜಿನ್’ನ ಹೊರತಾಗಿಯೂ, ಯುಪಿಯ ಇತಿಹಾಸದಲ್ಲಿ ಕಳೆದ ಮೂರು ದಶಕಗಳಲ್ಲಿ ಯಾವುದೇ ಸರ್ಕಾರವು ಹೊಂದಿದ್ದ ಅತಿದೊಡ್ಡ ಬಹುಮತವನ್ನು ಇಬ್ಬರೂ ಹೊಂದಿದ್ದಾರೆ. ಆದರೆ, ಇದು ಉತ್ತರ-ಪೂರ್ವ ಭಾರತದ ಹಿಂದಿ ಬೆಲ್ಟ್ ರಾಜ್ಯಗಳ ದೊಡ್ಡ ಬಿಕ್ಕಟ್ಟಿನ ಭಾಗವಾಗಿದೆ.

ಭಾರತದ ಹಿಂದಿ ಬೆಲ್ಟ್‌ನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಬಿಕ್ಕಟ್ಟಿನ ಮೂಲಗಳು ಯಾವುವು?

ಮೊದಲನೆಯದಾಗಿ, ಭಾರತದ ಉತ್ತರ ಭಾಗ (ಹಿಂದಿ ಬೆಲ್ಟ್‌) ಮತ್ತು ದಕ್ಷಿಣ ರಾಜ್ಯಗಳ ಆರ್ಥಿಕ ನೆಲೆಗಳು (ಕೆಲವು ಸರಳೀಕರಣದ ಅಪಾಯದಲ್ಲಿಯೂ ಸಹ) ಐತಿಹಾಸಿಕವಾಗಿ ವಿಭಿನ್ನವಾಗಿವೆ. ವಸಾಹತುಶಾಹಿ ಕಾಲದಿಂದ ಹಿಂದಿ ಬೆಲ್ಟ್‌ನ (ಕಲ್ಕತ್ತಾ ಪ್ರೆಸಿಡೆನ್ಸಿಯ ಭಾಗ) ಕೃಷಿ ವ್ಯವಸ್ಥೆಗಳು, ಮದ್ರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿ ಪ್ರಾಂತ್ಯಗಳಿಂದ ಗಮನಾರ್ಹವಾಗಿ ಭಿನ್ನವಾಗಿವೆ. ಹಿಂದಿ ಬೆಲ್ಟ್ (ಬಂಗಾಳ ಸೇರಿದಂತೆ) ಆದಾಯ ಸಂಗ್ರಹಣೆಯ ಜಮೀನ್ದಾರಿ ವ್ಯವಸ್ಥೆ (18ನೇ ಶತಮಾನ)ಯನ್ನು ಹೊಂದಿತ್ತು. ಇದು ತೆರಿಗೆ ಸಂಗ್ರಹಕ್ಕಾಗಿ ರೈತರು ಮತ್ತು ವಸಾಹತುಶಾಹಿ ರಾಜ್ಯದ ನಡುವಿನ ಮಧ್ಯವರ್ತಿಯನ್ನು ಒಳಗೊಂಡಿತ್ತು. ಈ ವ್ಯವಸ್ಥೆಯಲ್ಲಿ ರೈತರನ್ನು ಕ್ರೂರವಾಗಿ ಶೋಷಿಸಲಾಗುತ್ತಿತ್ತು.

ಮತ್ತೊಂದೆಡೆ, ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳಲ್ಲಿ, ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ, ರೈತವಾರಿ ವ್ಯವಸ್ಥೆಯು ಚಾಲ್ತಿಯಲ್ಲಿತ್ತು. ಇಲ್ಲಿ ರೈತ ಮತ್ತು ರಾಜನ ನಡುವೆ ಯಾವುದೇ ಮಧ್ಯವರ್ತಿ ಇರಲಿಲ್ಲ; ರೈತ ಮತ್ತು ರಾಜನ ನಡುವೆ ನೇರ ಸಂಪರ್ಕವಿತ್ತು. ರೈತರು ಭೂಮಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರು. ಅವರು ಭೂಮಿಯನ್ನು ಮಾರಾಟ ಮಾಡಬಹುದು, ಕೃಷಿ ಮಾಡಬಹುದು ಅಥವಾ ಗುತ್ತಿಗೆ ನೀಡಬಹುದಾಗಿತ್ತು. ತೆರಿಗೆ ದರಗಳು ಹೆಚ್ಚಿದ್ದರೂ (50-60%), ಖಚಿತತೆ ಇತ್ತು.

ಉತ್ತರ ಭಾರತದ ದಕ್ಷಿಣ ಮತ್ತು ಹೆಚ್ಚಿನ ಹಿಂದಿ ಬೆಲ್ಟ್ ನಡುವಿನ ಎರಡನೇ ವ್ಯತ್ಯಾಸವು ಸಾಮಾಜಿಕ ಸ್ವರೂಪದ್ದಾಗಿದೆ. ಕೆಳ ಜಾತಿಗಳ ಸಾಮಾಜಿಕ ಚಳವಳಿಗಳು ದಕ್ಷಿಣ ಮತ್ತು ಪಶ್ಚಿಮದ ಹೆಚ್ಚಿನ ಭಾಗಗಳಲ್ಲಿ ಹೆಚ್ಚು ಪ್ರಭಾವನ್ನು ಬೀರಿದ್ದವು. ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳು ವಸಾಹತುಶಾಹಿ ಕಾಲದಲ್ಲೂ ಸಹ ಕೆಳ ಜಾತಿಗಳ ವಿಮೋಚನಾ ಚಳವಳಿಗಳಿಗೆ ಫಲವತ್ತಾದ ನೆಲವಾಗಿದ್ದವು (ಕೇರಳದಲ್ಲಿ ನಾರಾಯಣ ಗುರು, ತಮಿಳುನಾಡಿನಲ್ಲಿ ಪೆರಿಯಾರ್, ಮಹಾರಾಷ್ಟ್ರದಲ್ಲಿ ಮಹಾತ್ಮ ಫುಲೆ). ಈ ಸಾಮಾಜಿಕ ಚಳವಳಿಗಳು (ಈ ಚಳವಳಿಗಳ ಬುನಾದಿ ಮೇಲೆ ರಾಜಕೀಯ ಪಕ್ಷಗಳು ಹೊರಹೊಮ್ಮಿದವು) ಸ್ವಾತಂತ್ರ್ಯದ ನಂತರ ಆಡಳಿತಗಾರರು ಸಾಮಾಜಿಕ ನೀತಿಗಳತ್ತ ಕೇಂದ್ರೀಕರಿಸುವ ಒತ್ತಡವನ್ನು ಉಂಟು ಮಾಡಿತ್ತು ಮತ್ತು ಅದು ಫಲ ನೀಡಿತು.

ಉತ್ತರದ ರಾಜ್ಯಗಳು ಪರಿಶಿಷ್ಟ ಜಾತಿಗಳು ಅಥವಾ ಇತರ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಸಾಮಾಜಿಕ ಚಳುವಳಿಗಳನ್ನು ಕಾಣಲಿಲ್ಲ. ಕಳೆದ 30 ವರ್ಷಗಳಲ್ಲಿ ಕೆಲವು ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳು ಉತ್ತರದ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಮುರಿಯಿತು. ಇವು ಅವಿಭಜಿತ ಯುಪಿ ಮತ್ತು ಬಿಹಾರದಲ್ಲಿ ಒಬಿಸಿಗಳಿಗಾಗಿ ಯಾದವ್ ನೇತೃತ್ವದ ಚಳುವಳಿ, ಜಾಟ್ ನಾಯಕರಾದ ಕಾನ್ಶಿ ರಾಮ್ ಮತ್ತು ಎಸ್‌ಸಿ ನಾಯಕಿ ಮಾಯಾವತಿಯವರು ಸಜ್ಜುಗೊಳ್ಳುವಿಕೆ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢ ಮತ್ತು ಬಿಹಾರದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಬುಡಕಟ್ಟು ಜನಾಂಗದವರ ಸಜ್ಜುಗೊಳಿಸುವಿಕೆಗಳು ಕಾಂಗ್ರೆಸ್‌ ಪ್ರಾಭಲ್ಯವನ್ನು ಮುರಿದವು.

ಆದಾಗ್ಯೂ, 1956 ರ ನಂತರದಲ್ಲಿ ಜಾರಿಗೆ ಬಂದ ಜಮೀನ್ದಾರಿ ನಿರ್ಮೂಲನೆ ಅಥವಾ ಭೂ ಸೀಲಿಂಗ್ ಕಾಯಿದೆಗಳು ಮತ್ತು ಈ ಸಾಮಾಜಿಕ ಚಳುವಳಿಗಳು ಈ ರಾಜ್ಯಗಳಲ್ಲಿ ಊಳಿಗಮಾನ್ಯ ಶಕ್ತಿಗಳ ಹಿಡಿತವನ್ನು ಮುರಿಯಲು ಸಾಧ್ಯವಾಗಲಿಲ್ಲ.

ಏನಿದ್ದರೂ, ಮೊದಲ ನಾಲ್ಕು ದಶಕಗಳಲ್ಲಿ ಕಾಂಗ್ರೆಸ್ ‘ಜಾತಿ ಹಿತಾಸಕ್ತಿಗಳ ಒಕ್ಕೂಟ’ದ ಪ್ರಾಬಲ್ಯವನ್ನು ಈ ರಾಜಕೀಯ ಪಕ್ಷಗಳು (ಕೆಲವು ಜಾತಿ ಗುಂಪುಗಳನ್ನು ಅವಲಂಬಿಸಿ) ಮುರಿದವು. ಆದರೆ ಉತ್ತರದ ಹಲವು ರಾಜ್ಯಗಳಲ್ಲಿ (ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶ) ಬಹು ಪಕ್ಷಗಳು ಹೊರಹೊಮ್ಮಿದವು. ಇವು ಪ್ರತಿಯೊಂದೂ ಒಬಿಸಿ ಮತ್ತು ಎಸ್‌ಸಿಗಳೊಳಗಿನ ನಿರ್ದಿಷ್ಟ ಉಪ-ಜಾತಿಗಳ ಹಿತಾಸಕ್ತಿಗಳನ್ನು ವ್ಯಕ್ತಪಡಿಸುತ್ತಿದ್ದವು. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಂಚಿನಲ್ಲಿರುವ ನಾಗರಿಕರ ಧ್ವನಿಯು ವಿಭಜನೆಯಾಯಿತು.

ಆದ್ದರಿಂದ, ಜಾತಿ ಗುಂಪಿನ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಈ ರಾಜಕೀಯ ಪಕ್ಷಗಳು ಎಸ್‌ಸಿಗಳೊಳಗಿನ ಪ್ರಬಲ ಜಾತಿಗಳ ಹಿತಾಸಕ್ತಿಗಳಿಗೆ (ಯುಪಿಯಲ್ಲಿ ಜಾಟ್‌ಗಳು 20% ಎಸ್‌ಸಿಗಳಲ್ಲಿ ಅರ್ಧದಷ್ಟು ಮತ್ತು ಓಬಿಸಿಗಳಲ್ಲಿ ಹೆಚ್ಚಿರುವ ಯಾದವರು) ಬಂಧಿಯಾದವು. ಇದರಿಂದಾಗಿ ಫಲಿತಾಂಶವು ಮತದ ವಿಘಟನೆನ್ನು ಕಂಡಿತು. ಅಂತರ್ಜಾತಿ ಪೈಪೋಟಿ ಮತ್ತು ಸೀಮಿತ ಸಂಪನ್ಮೂಲಗಳ ಸ್ಪರ್ಧೆಯು ಆಡಳಿತವನ್ನು ದುರ್ಬಲಗೊಳಿಸಿತು.

ಆದರೆ, ದಕ್ಷಿಣ ಭಾರತದಲ್ಲಿ ಸಾಮಾಜಿಕ ನೀತಿಯ ಮೇಲೆ ಈ ಸಾಮಾಜಿಕ ಚಳುವಳಿಗಳ ಪರಿಣಾಮಗಳು ಉತ್ತರದ ರಾಜ್ಯಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಸಾಮಾಜಿಕ ಚಳುವಳಿಗಳಿಂದ ಸಂಪೂರ್ಣ ಅಂಚಿನಲ್ಲಿದ್ದ ಸಮುದಾಯಗಳು ಲಾಭ ಪಡೆದವು. ಇದರ ಪರಿಣಾಮವಾಗಿ ಗಮನಾರ್ಹವಾದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಕಂಡುಬಂದಿತು. ದಕ್ಷಿಣದ ಹೆಚ್ಚಿನ ರಾಜ್ಯಗಳಲ್ಲಿ ಎರಡು ಪಕ್ಷ ಪ್ರಾಬಲ್ಯ ಅಥವಾ ಪೈಪೋಟಿ ವ್ಯವಸ್ಥೆಯು ಅವುಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ನೀತಿಯ ಸ್ಪರ್ಧೆಯನ್ನು ಜನಸಾಮಾನ್ಯರ ಹಿತಾಸಕ್ತಿಗಳೊಂದಿಗೆ ಹೆಚ್ಚು ಸ್ಥಿರವಾಗಿಸಿತು. ಪ್ರತಿ ಪಕ್ಷವು ಹೆಚ್ಚು ಸಮಾನತೆಯ ನೀತಿಗಳಿಗಾಗಿ ಕೆಲಸ ಮಾಡಿದವು. ಅಲ್ಲದೆ, ರಾಜಕೀಯ ಪಕ್ಷಗಳು ದಕ್ಷಿಣದಲ್ಲಿ ಸಾಮಾಜಿಕ ನೀತಿಯ ಕಾರ್ಯಸೂಚಿಯ ಮೇಲೆಯೇ ಚುನಾವಣೆಯಲ್ಲಿ ಸ್ಪರ್ಧಿಸಿದವು.ನಿರ್ದಿಷ್ಟವಾಗಿ ಯುಪಿಯನ್ನು ನೋಡುವುದಾದರೆ, ಯುಪಿಯಲ್ಲಿ ಬಿಜೆಪಿಯ ಯಶಸ್ಸು ಇಲ್ಲಿಯವರೆಗೆ ಜಾತಿ ಆಧಾರಿತ ಪಕ್ಷಗಳಾಗಿ ವಿಭಜಿಸಲ್ಪಟ್ಟ ಹಿಂದೂ ಮತಗಳನ್ನು ಒಗ್ಗೂಡಿಸುವುದರ ಮೇಲೆ ನಿರ್ಮಿಸಲ್ಪಟ್ಟಿರಬಹುದು. ಆದರೆ ಆರ್ಥಿಕ ಬೆಳವಣಿಗೆ, ಉದ್ಯೋಗ ಮತ್ತು ಹಣದುಬ್ಬರದ ಮೇಲೆ 2017ರಿಂದ ಸಂಭವಿಸಿದ ಭಯಾನಕ ಕುಸಿತವು ಆಡಳಿತಾರೂಢ ಬಿಜೆಪಿಗೆ ಈ ಭಾರಿ ಹಿನ್ನಡೆಯನ್ನು ಉಂಟು ಮಾಡುತ್ತದೆ. ಹೀಗಾಗಿ, ಬಿಜೆಪಿ ಈಗ ‘ಸುದ್ದಿ ತಯಾರಿಕೆ’ (ಸಾಮಾನ್ಯವಾಗಿ ನಕಲಿ ಸುದ್ದಿ)ಯನ್ನು ಆಶ್ರಯಿಸುತ್ತಿದೆ. ಅದೇ ರೀತಿಯಲ್ಲಿ, ಇತ್ತೀಚೆಗಿನ ಜಾಹೀರಾತುಗಳಲ್ಲಿ 2017 ರಿಂದ ನಾಲ್ಕು ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸಿರುವುದಾಗಿ ಹೇಳಿಕೊಳ್ಳುತ್ತಿವೆ.

ಯುಪಿ ಸರ್ಕಾರದ ಯಾವ ಇಲಾಖೆಗಳು ಈ ಉದ್ಯೋಗಗಳನ್ನು ಒದಗಿಸಿವೆ ಎಂಬ ಬಗ್ಗೆ ಯುವಜನರಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ಕುರಿತು ಭಾರತದ ವಿವಿಧ ಭಾಗಗಳಲ್ಲಿ (ವಿಶೇಷವಾಗಿ ಉತ್ತರ ಭಾರತ) ಹಲವಾರು ವರ್ಷಗಳಿಂದ ಅಭಿಯಾನ ನಡೆಸುತ್ತಿರುವ ಯುವ ವೇದಿಕೆ ‘ಯುವ ಹಲ್ಲಾ ಬೋಲ್’ ಸಂಘಟನೆಯು ಆರ್‌ಟಿಐ ಮೂಲಕ ಮಾಹಿತಿ ಕೇಳಿದೆ. ಆದರೆ, ಇದಕ್ಕೆ ಸರಿಯಾದ ಉತ್ತರ ಸರ್ಕಾರದಿಂದ ದೊರೆತಿಲ್ಲ. ಬಲದಾಗಿ, ಸಂಬಂಧಿತ ಇಲಾಖೆಗಳು/ಸರ್ಕಾರಿ ಏಜೆನ್ಸಿಗಳು ಅಂತಹ ಮಾಹಿತಿಯನ್ನು ಹೊಂದಿಲ್ಲದ ಕಾರಣ ಈ ಮಾಹಿತಿಯನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಲಾಗಿದೆ.ಉತ್ತರ ಪ್ರದೇಶ ರಾಜ್ಯದಲ್ಲಿ UPSC ಆಧಾರಿತ ನೇಮಕಾತಿಗಳ ಬಗ್ಗೆ UP ಸರ್ಕಾರ ಹೇಳಿಕೊಂಡಿರುವ ಅಂಕಿ-ಅಂಶಗಳ ಮೇಲೆಯೂ ಇದೇ ರೀತಿಯ ಪ್ರಶ್ನೆಗಳು ಎದ್ದಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ‘ತಾವು ಅಧಿಕಾರಕ್ಕೆ ಬಂದ 90 ದಿನಗಳಲ್ಲಿ ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು’ ಎಂಬುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕು.

Please follow and like us: