ಹಿಂದುತ್ವ-ಕಾರ್ಪೋರೇಟ್‌ ಮೈತ್ರಿಯ ಯಜಮಾನಿಕೆಯಿಂದಾಗಿ ನಿರುದ್ಯೋಗ, ಬಡತನ,ಹಸಿವು ಹೆಚ್ಚಳ-ಪ್ರಕಾಶ್ ಕಾರಟ್

ದೇಶದಲ್ಲಿ ಹಿಂದುತ್ವ-ಕಾರ್ಪೋರೇಟ್‌ ಮೈತ್ರಿಯ ಯಜಮಾನಿಕೆಯು ನವ-ಉದಾರವಾದಿ ನೀತಿಗಳನ್ನು ಫಲವಾಗಿ ನಿರುದ್ಯೋಗ ಹಸಿವು ಬಡತನ ಹೆಚ್ಚುತ್ತಿದ್ದು ಇವುಗಳನ್ನು ಹಿಮ್ಮೆಟ್ಟಿಸಲು ಎಡ-ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು ಎಂದು ಸಿಪಿಐ(ಎಂ) ಪಾಲಿಟ್‌ ಬ್ಯೂರೋ ಸದಸ್ಯ ಪ್ರಕಾಶ್‌ ಕಾರಟ್‌ ಹೇಳಿದರು

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜನವರಿ 2 ರಿಂದ 4ರವರೆಗೆ ನಡೆಯುತ್ತಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಕೋವಿಡ್‌ ಸಾಂಕ್ರಾಮಿಕದಿಂದಾಗಿ ಕೋಟ್ಯಾಂತರ ಜನ ಬಾಧಿತರಾಗಿದ್ದು ಲಕ್ಷಾಂತರ ಜನ ಅಸುನೀಗಿದ್ದಾರೆ. ಅತ್ಯಂತ ಮುಂದುವರೆದ ದೇಶಗಳಲ್ಲೂ ದಿನಂಪ್ರತಿ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಇದು ಸಾರ್ವಜನಿಕ ವ್ಯವಸ್ಥೆಯನ್ನು ಬಲಪಡಿಸದೆ ಖಾಸಗೀಕರಣ ಮಾಡಿದ್ದರ ಪರಿಣಾಮ ಈ ದುರಂತ ಎದುರಿಸಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ ಸಮಾಜವಾದಿ ಕ್ಯೂಬಾದಲ್ಲಿ ಸಾಂಕ್ರಾಮಿಕವನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಿದ್ದಲ್ಲದೆ, ಆರು ರೀತಿಯ ಲಸಿಕೆಗಳನ್ನ ಬಳಸಲಾಗುತ್ತಿದೆ. ಇದು ಸ್ಪಷ್ಟವಾಗಿ ಬಂಡವಾಳಶಾಹಿ ಮತ್ತು ಸಮಾಜವಾದಿ ವ್ಯವಸ್ಥೆಯ ನಡುವಿನ ಪ್ರಧಾನ ವೈರುಧ್ಯವಾಗಿದೆ.

ಬಡದೇಶಗಳು ಹಾಗೂ ಮುಂದುವರೆದ ದೇಶಗಳ ನಡುವಿನ ವೈರುಧ್ಯ ತೀವ್ರಗೊಳ್ಳುತ್ತಿರುವುದು ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಎದ್ದುಕಾಣುತ್ತಿದೆ. ಇಂದಿಗೂ ಆಫ್ರಿಕನ್‌ ದೇಶಗಳಲ್ಲಿ ಶೇಕಡ 70ರಷ್ಟು ಜನರಿಗೆ ಲಸಿಕೆ ಲಭ್ಯವಾಗಿಲ್ಲ ಎಂಬ ವರದಿಗಳಿವೆ. ಲಸಿಕೆಯ ಪೇಟೆಂಟ್‌ ಪಡೆದಿರುವ ಕಾರ್ಪೋರೇಟ್‌ ಕಂಪನಿಗಳು ತಮ್ಮ ಲಾಭಕೋರತನದಿಂದ ದುಬಾರಿ ದರಗಳನ್ನು ನಿಗದಿ ಮಾಡಿ ಬಹುಸಂಖ್ಯಾತ ಜನ ಲಸಿಕೆಯಿಂದ ವಂಚಿತರಾಗುವಂತೆ ಮಾಡಿದೆ.

ದೇಶದಲ್ಲಿ ಹಿಂದುತ್ವ ಪ್ರತಿಪಾದನೆಯ ಅಜೆಂಡಾಗಳನ್ನು ಕೋವಿಡ್‌ ಸಾಂಕ್ರಾಮಿಕದಲ್ಲೂ ಮುಂದುವರೆಸಿರುವ ಕೇಂದ್ರದ ಬಿಜೆಪಿ ಸರ್ಕಾರದ ನಡೆಯಿಂದಾಗಿ ದೇಶದ ಆರ್ಥಿಕ ಸ್ಥಿತಿಗತಿ ಪಾತಾಳಕ್ಕೆ ಕುಸಿದಿದೆ. ಭಾರೀ ಪ್ರಮಾಣದ ನಿರುದ್ಯೋಗ ತಲೆದೂರಿದೆ. ಮಧ್ಯಮ ವರ್ಗದ ಜನ ಬಡತನ ರೇಖೆಗೆ ತಳ್ಳಲ್ಪಟ್ಟಿದ್ದಾರೆ. ಅಮೇರಿಕ ಪ್ರೇರಿತ ಉದಾರವಾದಿ ನೀತಿಗಳ ಫಲವಾಗಿ ಇವು ನಡೆಯುತ್ತಿವೆ. ಇದರ ಬೆನ್ನಲ್ಲೇ ಚಿಲಿ ಸೇರಿದಂತೆ ಲ್ಯಾಟಿನ್‌ ಅಮೇರಿಕ ದೇಶಗಳಲ್ಲಿ ರೈತರು ಕಾರ್ಮಿಕರು ವಿದ್ಯಾರ್ಥಿ, ಯುವಜನರ ಪ್ರಬಲ ಪ್ರತಿಭಟನೆಗಳು ನವ-ಉದಾರವಾದಿ ನೀತಿಗಳ ವಿರುದ್ಧ ಎದ್ದುಬರುತ್ತಿವೆ. ಪರಿಣಾಮ ಎಡಪಂಥೀಯ ಸರ್ಕಾರಗಳು ಅಸ್ತಿತ್ವಕ್ಕೆ ಬರುತ್ತಿರುವುದು ಬಂಡವಾಳಶಾಹಿ ವ್ಯವಸ್ಥೆಗೆ ಸಮಾಜವಾದಿ ವ್ಯವಸ್ಥೆಯೇ ಪರ್ಯಾಯ ಎಂಬುದರ ಸಂಕೇತವಾಗಿದೆ.  ಬಲಪಂಥೀಯ ಸರ್ಕಾರಗಳ ವಿರುದ್ಧ ಜಗತ್ತಿನಾದ್ಯಂತ ಬೆಳೆದುಬರುತ್ತಿರುವ ಜನರ ಪ್ರತಿರೋಧ ಇತಿಹಾಸ ಚಕ್ರ ತಿರುಗುತ್ತಿರುವುದರ ಸ್ಪಷ್ಟ ಸಂದೇಶವಾಗಿದೆ.

ದೇಶ ಮತ್ತು ಏಷ್ಯಾದ ಅನೇಕ ದೇಶಗಳು ಅಮೇರಿಕಾದ ಸಾಮ್ರಾಜ್ಯಶಾಹಿ ಜೊತೆಗೆ ಮೈತ್ರಿಗೆ ಮುಂದಾಗಿವೆ. ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾಗೆ ಪೈಪೋಟಿ ನೀಡಲು ಹಾಗೂ ಅದರ ಆರ್ಥಿಕ ಶಕ್ತಿಯನ್ನು ದುರ್ಬಲಗೊಳಿಸಲು ಇಂತಹ ಮೈತ್ರಿ ಏರ್ಪಡುತ್ತಿದೆ.

ದೇಶದಲ್ಲಿ ಹಿಂದುತ್ವ-ಕಾರ್ಪೋರೇಟ್‌ ಮೈತ್ರಿಯ ಯಜಮಾನಿಕೆಯು ನವ-ಉದಾರವಾದಿ ನೀತಿಗಳನ್ನು ಹೇರುತ್ತಿದೆ. ಸಾರ್ವಜನಿಕ ರಂಗವನ್ನು ಸಂಪೂರ್ಣವಾಗಿ ನಾಶಪಡಿಸಿ, ಅವೆಲ್ಲವನ್ನು ಕಾರ್ಪೋರೇಟ್‌ ತೆಕ್ಕೆಗೆ ಸೇರಿಸುವ ಪ್ರಯತ್ನ ನಡೆದಿದೆ. ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್‌ ಮೂಲಕ ಇಂತವುಗಳನ್ನು ಮುಂದುವರೆಸಲಾಗುತ್ತಿದೆ. ಇದು ಹಿಂದುತ್ವ ಮತ್ತು ಕಾರ್ಪೋರೇಟ್‌ ಶಕ್ತಿಗಳು ಪರಸ್ಪರ ಅನುಕೂಲತೆಗಳಿಗೆ ತಮ್ಮ ಅಜೆಂಡಾಗಳನ್ನು ಜಾರಿ ಮಾಡಲು ಇಂತಹ ಅಪವಿತ್ರ ಮೈತ್ರಿ ಏರ್ಪಟ್ಟಿದೆ ಎಂಬುದು ಸ್ಪಷ್ಟ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನಿರಂತರ ಹಣಕಡಿತ ಹೆಚ್ಚುತ್ತಿರುವ ನಿರುದ್ಯೋಗ, ಹಸಿವು, ಬಡತನವು ಹಿಂದುತ್ವ-ಕಾರ್ಪೋರೇಟ್‌ ಮೈತ್ರಿ ಯಜಮಾನಿಕೆಯ ಫಲವಾಗಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ರೈತರು ನಡೆಸಿದ ಅಭೂತಪೂರ್ವ ಹೋರಾಟ ನವ-ಉದಾರವಾದಿ ನೀತಿಗಳ ವಿರುದ್ಧ ಜನರ ಆಕ್ರೋಶದ ಸಂಕೇತವಾಗಿದೆ.

ದೇಶದಲ್ಲಿ ಆರಂಭಗೊಂಡ ರೈತ-ಕಾರ್ಮಿಕರ ಜಂಟಿ ಹೋರಾಟಗಳು ನವ-ಉದಾರವಾದಿ ನೀತಿಗಳನ್ನು ಸಮರೋಪಾದಿಯಲ್ಲಿ ಜಾರಿ ಮಾಡುವ ಮೋದಿ ಸರ್ಕಾರದ ಪ್ರಯತ್ನಗಳಿಗೆ ಅಡ್ಡಿಯಾಗಿ ನಿಂತಿವೆ. ಹೀಗಾಗಿ ಜನತೆಯ ಪ್ರಬಲ ಹೋರಾಟಗಳೇ ನವ-ಉದಾರವಾದಿ ನೀತಿಗಳ ವಿರುದ್ಧದ ಅಸ್ತ್ರಗಳಾಗಿವೆ.

ಹಿಂದುತ್ವ ಕಾರ್ಪೋರೇಟ್‌ ಯಜಮಾನಿಕೆಗೆ ಪರ್ಯಾಯವನ್ನು ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ದೇಶದ ಅವಕಾಶವಾದಿ ಪಕ್ಷಗಳು ಇದಕ್ಕೆ ಪರ್ಯಾಯವಲ್ಲ. ಅದರಲ್ಲಿರುವ ರಾಜಿ ಮನೋಭಾವ ಇದಕ್ಕೆ ಅಡ್ಡಿಯಾಗಿದೆ. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಮಾತ್ರವೇ ಪರ್ಯಾಯವನ್ನು ರೂಪಿಸಲು ಸಾಧ್ಯ. ಇತಿಹಾಸದುದ್ದಕ್ಕೂ ಜನವಿರೋಧಿ ನೀತಿಗಳಿಗೆ ಪರ್ಯಾಯ ಶಕ್ತಿಯಾಗಿ ಹೋರಾಟದಲ್ಲಿರುವ ಸಿಪಿಐ(ಎಂ) ಪಕ್ಷವನ್ನು ಬಲಪಡಿಸದೆ, ಪರ್ಯಾಯ ರೂಪಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಿಪಿಐ(ಎಂ)ನ ಅಖಿಲ ಭಾರತ ಸಮ್ಮೇಳನದಲ್ಲಿ ಗಂಭೀರವಾಗಿ ಚರ್ಚೆ ನಡೆಸಲಿದ್ದೇವೆ.

ಮೋದಿ ಸರ್ಕಾರದ ನವಭಾರತ ನಿರ್ಮಾಣದ ಮಾತುಗಳು ಕೃತಿಯಲ್ಲಿ ಕಾಣುತ್ತಿಲ್ಲ. ಹಿಂದುತ್ವವಾದಿ ಅಜೆಂಡಾಗಳನ್ನು ಜಾರಿಮಾಡುವ ಅದರ ಪ್ರಯತ್ನದಿಂದಾಗಿ ನವಭಾರತದ ಬದಲು ದೇಶ ಹಿಮ್ಮುಖ ಚಲನೆಯನ್ನು ಕಾಣುತ್ತಿದೆ. ಕಾಶ್ಮೀರದಲ್ಲಿ ಕಲಂ 370 ತೆಗೆದದ್ದು ಇದಕ್ಕೊಂದು ಉದಾಹರಣೆ.  ರಾಮಮಂದಿರ ಅಡಿಗಲ್ಲು ಹಾಕುವ ಜೊತೆಯಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗಿರುವುದು ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ನೀತಿಯು ಸಂವಿಧಾನ ವಿರೋಧಿ ನಡೆಯಾಗಿದೆ. ಸಾಂವಿಧಾನಿಕ ಸಂಸ್ಥೆಗಳಲ್ಲಿ ಹಿಂದುತ್ವ ಅಜೆಂಡಾವನ್ನು ಹೇರುತ್ತಾ ಆ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಹೊಸ ಸಂಸತ್‌ ಭವನ ನಿರ್ಮಾಣ ಮಾಡುತ್ತಿರುವಾಗಲೇ ಈಗಿರುವ ಸಂಸತ್‌ ಭವನವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಮುಂದಾಗಿದೆ. ಇದರ ಅರ್ಥ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವವನ್ನು ಮ್ಯೂಸಿಯಂನಲ್ಲಿ ಬಂಧಿಸಲು ಹೊಂಚು ಹಾಕಲಾಗಿದೆ. ಈಗಾಗಲೇ ಸಂಸತ್‌ ಅನ್ನು ಅಮಾನತ್ತಿನಲ್ಲಿಟ್ಟು ಏಕಪಕ್ಷೀಯವಾಗಿ ನೀತಿಗಳನ್ನು ತರುತ್ತಿರುವುದು ಇದರ ಸ್ಪಷ್ಟ ಸಂದೇಶವಾಗಿದೆ.

ಕರ್ನಾಟಕ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಕ್ರಿಶ್ಚಿಯನ್ನರ ಮೇಲೆ ಧಾಳಿ ಮಾಡಲು ಮುಂದಾಗಿದೆ. ಮುಸ್ಲಿಮರು ಕ್ರಿಶ್ಚಿಯನ್ನರು ಮತ್ತು ಕಮ್ಯೂನಿಸ್ಟರು ದೇಶದ ಆಂತರಿಕ ಶತ್ರುಗಳು ಎಂಬ ಗೋಳ್ವಾಲ್ಕರ್‌ ಧೋರಣೆಯನ್ನು ಜಾರಿ ಮಾಡಲು ಪ್ರಯತ್ನ ನಡೆದಿದೆ. ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಕರ್ನಾಟಕ ಸರ್ಕಾರದ ನೀತಿಯು ದೇವಸ್ಥಾನಗಳ ಭಾಗವಾಗಿರುವ ಅಪಾರ ಪ್ರಮಾಣದ ಭೂಮಿ-ಆಸ್ತಿಯನ್ನು ಲಪಟಾಯಿಸಲು ಅನುಕೂಲವಾಗುವಂತೆ ನೀತಿಗಳಲ್ಲಿ ಮಾರ್ಪಾಡು ಮಾಡಲಾಗುತ್ತಿದೆ. ಜೊತೆಗೆ ದೇವಸ್ಥಾನಗಳನ್ನು ಆರ್‌ಎಸ್‌ಎಸ್‌ ಹಿಡಿತಕ್ಕೆ ವಹಿಸುವ ಪ್ರಯತ್ನದ ಭಾಗವಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿಂದುತ್ವ-ಕಾರ್ಪೋರೇಟ್‌ ಮೈತ್ರಿಯ ಯಜಮಾನೀಕೆಯ ವಿರುದ್ಧ ಹೋರಾಟಗಳನ್ನು ರೂಪಿಸಲು ರಾಜ್ಯ ಸಮ್ಮೇಳನ ಹಾಗೂ ಏಪ್ರಿಲ್‌ನಲ್ಲಿ ಕಣ್ಣೂರಿನಲ್ಲಿ ನಡೆಯುವ ಅಖಿಲ ಭಾರತ ಸಮ್ಮೇಳನದಲ್ಲಿ ತೀರ್ಮಾನಿಸಲಾಗುವುದು ಎಂದು ಕಾರಟ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿತ್ಯಾನಂದಸ್ವಾಮಿ ವಹಿಸಿದ್ದರು. ವೇದಿಕೆಯ ಮೇಲೆ ಪೊಲಿಟ್ ಬ್ಯೂರೋ ಸದಸ್ಯರಾದ ಎಂ.ಎ ಬೇಬಿ, ಬಿ.ವಿ. ರಾಘವಲು. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ,  ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ, ರಾಜ್ಯ ಮುಖಂಡರಾದ ಎಸ್. ವರಲಕ್ಷ್ಮಿ, ಕೆ.ಶಂಕರ್, ಜೆ.ಬಾಲಕೃಷ್ಣ ಶೆಟ್ಟಿ, ಮೀನಾಕ್ಷಿ ಸುಂದರಂ, ಕೆ.ಎನ್ ಉಮೇಶ್, ವಿಜೆಕೆ ನಾಯರ್, ಜಿ.ಎನ್. ನಾಗರಾಜ್, ವಸಂತ ಆಚಾರಿ, ಗಂಗಾವತಿ ತಾಲ್ಲೂಕ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಎಸ್,ಎಫ್,ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಬಾಳಪ್ಪ ಹುಲಿಹೈದರ,ಸಿದ್ದಪ್ಪ,ಮರಿನಾಗಪ್ಪ ಸೇರಿದಂತೆ ಅನೇಕರಿದ್ದರು. 

Please follow and like us: