ಸಿ.ಟಿ ರವಿ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳಿತು-ಸಿದ್ದರಾಮಯ್ಯ


ಕನ್ನಡನೆಟ್ ನ್ಯೂಸ್ :
ಬಿಜೆಪಿ ಸರ್ಕಾರದ ಸಚಿವರಾಗಿರುವ ಬೈರತಿ ಬಸವರಾಜ್ ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ನೀಡಿರುವ ಕುರಿತು ಶುಕ್ರವಾರ ನಾನು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೆ. ಈ ಪ್ರಕರಣದಲ್ಲಿ ಇಬ್ಬರು ರಾಜಕಾರಣಿಗಳು ಆರೋಪಿ ಸ್ಥಾನದಲ್ಲಿದ್ದಾರೆ‌. ಒಬ್ಬರು ಬೈರತಿ ಬಸವರಾಜ್, ಇನ್ನೊಬ್ಬರು ವಿಧಾನ ಪರಿಷತ್ ಸದಸ್ಯ ಶಂಕರ್. ಇವರ ವಿರುದ್ಧ ನಕಲಿ ಸಹಿ, ಆಸ್ತಿ ಕಬಳಿಕೆ, ಕ್ರಿಮಿನಲ್ ಚಟುವಟಿಕೆ ಮುಂತಾದ ಗಂಭೀರ ಪ್ರಕರಣವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಸುವರ್ಣ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಡಿ.ವೈ.ಎಸ್.ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಪ್ರಕರಣದ ನೈತಿಕ ಹೊಣೆ ಹೊತ್ತು ತಮ್ಮ ತಪ್ಪಿಲ್ಲದಿದ್ದರೂ ಕೆ.ಜೆ ಜಾರ್ಜ್ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರು ನ್ಯಾಯಾಲಯದ ಆದೇಶ ಇದ್ದರೂ ಭಂಡತನದಿಂದ ಇನ್ನೂ ರಾಜೀನಾಮೆ ನೀಡಿಲ್ಲ, ಈ ನಾಚಿಕೆಗೆಟ್ಟ ಸರ್ಕಾರ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕಿತ್ತು. ಅದನ್ನೂ ಮಾಡಿಲ್ಲ. ಈ ಪ್ರಕರಣವನ್ನು ತಾತ್ವಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕೆಂದು ತೀರ್ಮಾನ ಮಾಡಿದ್ದೆವು.

ಆದರೆ ನಮ್ಮ ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡಿದ್ದಾರೆ. ನಾವು ಚರ್ಚೆಗೆ ಅವಕಾಶ ನೀಡಿಲ್ಲ, ಮತ್ತು ಬೈರತಿ ಬಸವರಾಜ್ ರಾಜೀನಾಮೆ ಪಡೆಯಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಧರಣಿ ಪ್ರಾರಂಭ ಮಾಡಿದ್ದೆವು. ರಾಜ್ಯದಲ್ಲಿ ಸಾಕಷ್ಟು ಗಂಭೀರ ಸಮಸ್ಯೆಗಳಿವೆ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ದ್ವಂಸ ಮಾಡಲಾಗಿದೆ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಲಾಗಿದೆ, ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿದೆ, ಉತ್ತರ ಕರ್ನಾಟಕದ ಮಹದಾಯಿ, ಕೃಷ್ಣ ನದಿನೀರಿನ ವಿಚಾರ, ಎತ್ತಿನಹೊಳೆ ಯೋಜನೆ, ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಿಟ್ ಕಾಯಿನ್, 40% ಕಮಿಷನ್ ವಿಚಾರ ಮುಂತಾದ ಗಂಭೀರ ವಿಷಯಗಳ ಚರ್ಚೆ ನಡೆಸುವ ಉದ್ದೇಶದಿಂದ ಧರಣಿ ಕೈಬಿಟ್ಟಿದ್ದೇವೆ.

ಈ ಎಲ್ಲಾ ವಿಷಯಗಳ ಚರ್ಚೆಗೆ ಸಮಯಾವಕಾಶದ ಕೊರತೆ ಇರೋದರಿಂದ ಸದನವನ್ನು ಇನ್ನೂ ಒಂದು ವಾರ ಕಾಲ ವಿಸ್ತರಣೆ ಮಾಡುವಂತೆ ಪತ್ರ ಬರೆದು ಮನವಿ ಮಾಡಿದ್ದೆ, ಈ ಮನವಿಯನ್ನು ಅವರ ಒಪ್ಪದ ಕಾರಣಕ್ಕೆ, ಎಂ.ಇ.ಎಸ್ ನವರ ಪುಂಡಾಟಿಕೆ, ನಿಲುವಳಿ ಸೂಚನೆಯನ್ನು ತಿರಸ್ಕರಿಸಿರುವ ಕಾರಣಕ್ಕೆ ನಾವಿಂದು ಸಭಾತ್ಯಾಗ ಮಾಡಿದ್ದೇವೆ.ಅಧಿವೇಶನದ ಹೊರಗೆ ಈ ಎಲ್ಲಾ ವಿಚಾರಗಳ ಬಗ್ಗೆ ಪ್ರತಿಭಟನೆ ಮುಂದುವರೆಸುತ್ತೇವೆ ಮತ್ತು ಜನತಾ ನ್ಯಾಯಾಲಯಕ್ಕೆ ಇವನ್ನು ತೆಗೆದುಕೊಂಡು ಹೋಗುತ್ತೇವೆ.

ಕಳಂಕ ಹೊತ್ತಿರುವ ವ್ಯಕ್ತಿಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ಅವರನ್ನು ಉಳಿಸಿಕೊಂಡರೆ ಸರ್ಕಾರ ಮುಂದುವರೆಯಲು ಯಾವುದೇ ನೈತಿಕ ಹಕ್ಕುಗಳು ಇರುವುದಿಲ್ಲ.ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಖಂಡಿಸಲು ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಕಾಯ್ದೆ ಮಂಡನೆಗೆ ಮುಂದಾದರೆ ಅದರ ಪೀಠಿಕೆಗೆ ನಮ್ಮ ವಿರೋಧ ಇದೆ. ಚರ್ಚೆಯಲ್ಲಿ ಭಾಗವಹಿಸುವುದು ಬೇರೆ ಮಾತು.
ಬೆಳಗಾವಿಯಲ್ಲಿ ಪುಂಡರು ನಡೆಸಿರುವ ಕುಕೃತ್ಯದ ಹಿಂದೆ ಕಾಂಗ್ರೆಸ್ ಇದೆ ಎಂಬ ಸಿ.ಟಿ ರವಿ ಹೇಳಿಕೆ ಶುದ್ಧ ಸುಳ್ಳು ಮತ್ತು ಇದೊಂದು ರಾಜಕೀಯ ಪ್ರೇರಿತ ಹೇಳಿಕೆ. ಅವರು ಇದೇ ರೀತಿ ಕ್ಷುಲ್ಲಕ ಹೇಳಿಕೆ ನೀಡಿದರೆ ನಾವು ಕೂಡ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರೇ ಗಲಾಟೆ ಎಬ್ಬಿಸುತ್ತಿದ್ದಾರೆಂದು ಆರೋಪ ಮಾಡಬೇಕಾಗುತ್ತದೆ. ಸಿ.ಟಿ ರವಿ ಅವರಿಗೆ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳಿತು. ಆರೋಪ ಮಾಡಲು ನಮಗೂ ಬರುತ್ತದೆ ಎಂದು ಹೇಳಿದರು.

Please follow and like us: