ಮೂರನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ವಿರೂಪಾಕ್ಷಯ್ಯ ಹಿರೇಮಠ ಆಯ್ಕೆ


ಕೊಪ್ಪಳ: ಕುಕನೂರು ತಾಲೂಕಿನ ಇಟಗಿಯಲ್ಲಿ ಡಿ.೩೦, ೩೧ ಹಾಗೂ ೨೦೨೨ ರ ಜನೇವರಿ ೧ ರಂದು ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ ಮತ್ತು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ೧೮ನೇ ಇಟಗಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ೩೧ ರಂದು ನಡೆಯಲಿರುವ ಮೂರನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕುಕನೂರು ತಾಲೂಕಿನ ಗೊರ್ಲೆಕೊಪ್ಪದ ಕರಡಿ ಮಜಲಿನ ಜಾನಪದ ಕಲಾವಿದ, ಸಂಘಟಕ ಡಾ.ವಿರೂಪಾಕ್ಷಯ್ಯ ಮಲ್ಲಯ್ಯ ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಮಹೇಶಬಾಬಯ ಸುರ್ವೆ ತಿಳಿಸಿದ್ದಾರೆ.

ಇಂದು ಕೊಪ್ಪಳದಲ್ಲಿ ನಡೆದ ಇಟಗಿ ಉತ್ಸವದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ಈ ತಿರ್ಮಾನ ಕೈಕೊಳ್ಳಲಾಯಿತು. ಡಾ.ವಿರೂಪಾಕ್ಷಯ್ಯ ಹಿರೇಮಠ ಅವರು ಗ್ರಾಮೀಣ ಸೊಗಡಿನ ಜಾನಪದ ಕಲೆಯ ಉಳಿವಿಗಾಗಿ ಗ್ರಾಮೀಣ ಮಟ್ಟದಲ್ಲಿ ಇದ್ದುಕೊಂಡು, ಈ ಕಲೆಯ ತರಬೇತುದಾರರಾಗಿ ಕರಡಿ ಮಜಲಿನ ಕಲೆಯನ್ನು ಬೆಳೆಸುತ್ತಿದ್ದಾರೆ. ಇವರ ಜಾನಪದ ಸೇವೆಯನ್ನು ಪರಿಗಣಿಸಿ ಇವರಿಗೆ ಗೌರವ ಡಾಕ್ಟರೇಟ ಪದವಿಯನ್ನು ಸಹ ನೀಡಲಾಗಿದೆ. ಇವರು ಮೈಸೂರು ದಸರಾ, ಹಂಪಿ ಉತ್ಸವ, ಕೊಪ್ಪಳ ಜಿಲ್ಲಾ ಉತ್ಸವ, ಹೊರನಾಡಿನ ನಾಗಪೂರ ಉತ್ಸವ, ಬಾಂಬೆ ಉತ್ಸವ, ಗೋವಾ ಹಾಗೂ ಮಂತ್ರಾಲಯದ ನಡೆದ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ, ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡ ಜನಪದ ಜಾತ್ರೆ, ಇಟಗಿ ಉತ್ಸವ, ಆನೆಗೂಂದಿ ಉತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ತಮ್ಮ ತಂಡದೊಂದಿಗೆ ಜನಪದ ಕರಡಿ ಮಜಲಿನ ಪ್ರದರ್ಶನವನ್ನು ನೀಡಿ ಪ್ರಖ್ಯಾತರಾಗಿದ್ದಾರೆ. ಗೊರ್ಲೆಕೊಪ್ಪದ ಕಟ್ಟಿಬಸವಲಿಂಗೇಶ್ವರ ಜಾನಪದ ಕಲಾಸಂಘದ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಬುರ್ಗಿ ಆಕಾಶವಾಣಿ, ಹೊಸಪೇಟೆ ಆಕಾಶವಾಣಿ, ರಾಯಚೂರು ಆಕಾಶವಾಣಿಯ ಗ್ರೇಡ್ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ಯುವಕರಿಗೆ ಕರಡಿ ಮಜಲು ತರಭೇತಿಯನ್ನು ಸಹ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಇವರು ಜಾನಪದ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರನ್ನು ಮೂರನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮೊದಲ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಶರಣಯ್ಯ ಗೊರ್ಲೆಕೊಪ್ಪ, ಎರಡನೇ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಕೇಶಪ್ಪ ಶಿಳ್ಳಿಕ್ಯಾತರ ಮೋರನಾಳ ಇವರು ಆಯ್ಕೆಯಾಗಿದ್ದರು. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಉಪಾಧ್ಯಕ್ಷರಾದ ಸಿದ್ಧಪ್ಪ ಹಂಚಿನಾಳ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಸಂಘಟಕರಾದ ಎಂ.ಸಾಧಿಕ ಅಲಿ, ಜಿ.ಎಸ್.ಗೋನಾಳ, ಮಂಜುನಾಥ ಅಂಗಡಿ, ಶಿವಕುಮಾರ ಹಿರೇಮಠ, ಉಮೇಶ ಪೂಜಾರ, ಸುಶೀಲಾ ಎಂ.ಎಸ್., ಮಲ್ಲಯ್ಯ ಕೋಮಾರಿ, ಶರಣಯ್ಯ ಗೊರ್ಲೆಕೊಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us: