ರೈತರಿಗೆ ವಿಮೆ ಪಾವತಿಸಲು ವಿಮಾ ಕಂಪನಿಗಳು ವಿಳಂಬ ಮಾಡಬೇಡಿ : ವಿಕಾಸ್ ಕಿಶೋರ್ ಸುರಳ್ಕರ್

Kannadanet NEWS

ಅಕಾಲಿಕ ಹಾಗೂ ಹೆಚ್ಚಿನ ಮಳೆಯಿಂದ ಜಿಲ್ಲೆಯ ರೈತರು ಬೆಳೆದ ಬೆಳೆ ಹಾನಿಯಾಗಿದ್ದು, ವಿಮಾ ಕಂತು ಪಾವತಿಸಿದ ಎಲ್ಲ ರೈತರಿಗೂ ಸರಿಯಾದ ಸಮಯಕ್ಕೆ ವಿಮಾ ಸೌಲಭ್ಯವನ್ನು ಒದಗಿಸಬೇಕು. ವಿಮಾ ಕಂಪನಿಗಳು ರೈತರಿಗೆ ವಿಮೆ ಮೊತ್ತ ಪಾವತಿಸಲು ವಿಳಂಬ ಮಾಡಬೇಡಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಮಂಗಳವಾರದAದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2021-22ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನ ಮಧ್ಯದ ಅವಧಿಯಲ್ಲಿ ಸ್ಥಳೀಯ ಮತ್ತು ಕೊಯ್ಲೋತ್ತರ ಬೆಳೆ ಹಾನಿಗೆ ಸಂಬAಧಿಸಿದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯದಿಂದ ರಾಜ್ಯದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೊಯ್ಲಿಗೆ ಬಂದ ಬೆಳೆ ಮತ್ತು ಕೊಯ್ಲಿನ ನಂತರ ಜಮೀನಿನಲ್ಲಿಯೇ ಸಂಗ್ರಹಿಸಿದ್ದ ಅಪಾರ ಪ್ರಮಾಣದ ವಿವಿಧ ಬೆಳೆಗಳು ಹಾನಿಯಾಗಿವೆ. ಇದರಿಂದ ಉತ್ತಮ ಇಳುವರಿ ಮೂಲಕ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ ಉಂಟಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಜಿಲ್ಲಾಡಳಿತ ರೈತರ ಸಹಾಯಕ್ಕೆ ಮುಂದಾಗಿದ್ದು, ಈ ಪ್ರಕ್ರಿಯೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಕಂಪನಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಬೆಳೆಹಾನಿ ಕುರಿತ ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ಕೃಷಿ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಪ್ರತಿನಿಧಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವಿಮಾ ಕಂತು ಪಾವತಿಸಿದ ಹಾಗೂ ಬೆಳೆ ಹಾನಿಗೆ ಒಳಗಾದ ಜಮೀನಿನ ಅರ್ಹ ರೈತರ ಬಗ್ಗೆ ಹಾಗೂ ಹಾನಿಯಾದ ಬೆಳೆ, ಪ್ರಮಾಣದ ಬಗ್ಗೆ ಪರಿಹಾರ ತಂತ್ರಾAಶದಲ್ಲಿ ಮಾಹಿತಿಯನ್ನು ಅಪಲೋಡ್ ಮಾಡಬೇಕು. ಪರಿಹಾರ ತಂತ್ರಾAಶದಲ್ಲಿ ಮಾಹಿತಿ ಅಪ್‌ಲೋಡ್ ಮಾಡುವಲ್ಲಿ ಯಾವುದೇ ಎಡವಟ್ಟುಗಳು ಆಗದಂತೆ ಎಚ್ಚರ ವಹಿಸಬೇಕು. ಅರ್ಹ ರೈತರ ಮಾಹಿತಿಯನ್ನು ದಾಖಲಿಸಬೇಕು. ಸದ್ಯ ಮಳೆಯಿಂದ ಕೆಲ ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿನ ವಸ್ತು, ದಾಖಲೆಗಳು ಹಾನಿಯಾಗಿರುತ್ತವೆ. ಅಂತಹ ರೈತರಿಂದ ದಾಖಲೆಗಳನ್ನು ತರುವಂತೆ ಪದೇ ಪದೇ ರೈತರನ್ನು ಅಲೆದಾಡಿಸದೆ, ಪರ್ಯಾಯವಾಗಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ತಂತ್ರಾAಶದಲ್ಲಿ ದಾಖಲಿಸಿ. ಬೆಳೆ ಹಾನಿ ಉಂಟಾದ ಯಾವ ರೈತರ ಹೆಸರೂ ಬಿಟ್ಟು ಹೋಗಬಾರದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಖರೀಫ್ ಬೆಳೆಗಳಾದ ಭತ್ತ ಮತ್ತು ತೊಗರಿ ಬೆಳೆಗಳು ಹಾನಿಗೊಳಗಾಗಿದ್ದು, ಸರ್ವೇ ಆಧಾರದಲ್ಲಿ ಅಂದಾಜು ಹಾನಿಯ ಪ್ರಮಾಣವನ್ನು ಸರ್ಕಾರಕ್ಕೆ ವರದಿ ಮಾಡಲಾಗಿದೆ. ತಾಲ್ಲೂಕು ಕೃಷಿ ಅಧಿಕಾರಿಗಳು ವಿಮಾ ಘಟಕಗಳವಾರು ಬೆಳೆ ಹಾನಿ ಸಮೀಕ್ಷಾ ವರದಿಯನ್ನು ವಿಮಾ ಕಂಪನಿ ಪ್ರತಿನಿಧಿಗಳಿಗೆ ಒದಗಿಸಬೇಕು. ವಿಮಾ ಕಂಪನಿಯ ಮೇಲಾಧಿಕಾರಿಗೆ ಪತ್ರ ಬರೆದು ಜಿಲ್ಲೆಯಲ್ಲಿ ಬೆಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ವಾಸ್ತವಾಂಶವನ್ನು ಪರಿಶೀಲಿಸಿ ಅರ್ಹ ರೈತರಿಗೆ ವಿಮೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲು ಜಂಟಿ ಕೃಷಿ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಿಮಾ ಕಂಪನಿಗಳು ನೀಡಿದ ಟೋಲ್-ಫ್ರೀ ಸಂಖ್ಯೆಯು ರೈತರಿಗೆ ಅಗತ್ಯ ಸಮಯದಲ್ಲಿ ಸಿಗುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಸಾಧ್ಯವಾದಷ್ಟು ರೈತರಿಗೆ ಅಗತ್ಯ ಸಮಯದಲ್ಲಿ ವಿಮಾ ಕಂಪನಿ ಪ್ರತಿನಿಧಿಗಳು ಸಂಪರ್ಕಕ್ಕೆ ಲಭ್ಯವಿರಬೇಕು. ಒಂದು ವೇಳೆ ಟೋಲ್-ಫ್ರೀ ಸಂಖ್ಯೆಯಲ್ಲಿ ಪ್ರತಿನಿಧಿಗಳು ಸಿಗದಿದ್ದರೆ, ರೈತರು ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಬಹುದು. ಅಧಿಕಾರಿಗಳು ರೈತರ ಮನವಿಯನ್ನು ವಿಮಾ ಕಂಪನಿಗಳಿಗೆ ತಲುಪಿಸುತ್ತಾರೆ. ಇದರಿಂದ ಅನಗತ್ಯ ವಿಳಂಬ ಮತ್ತು ಗೊಂದಲ ತಪ್ಪುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಫ್ಯೂಚರ್ ಜನರಲ್ ಇನ್ಸುರನ್ಸ್ ಕಂಪನಿಯು ವಿಮಾ ಸೌಲಭ್ಯ ಒದಗಿಸುವ ಕಾರ್ಯ ಮಾಡುತ್ತಿದ್ದು, ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ವಿಮಾ ಮೊತ್ತ ತಲುಪಬೇಕು. ವಿಮಾ ಸೌಲಭ್ಯ ಒದಗಿಸುವ ಪ್ರಕ್ರಿಯೆಯಲ್ಲಿ ಅಗತ್ಯವಿದ್ದಲ್ಲಿ ವಿಮಾ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳನ್ನು ನಿಯೋಜಿಸಬೇಕು. ರೈತರು ಅಪಾರ ಸಂಕಷ್ಟದಲ್ಲಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಮಾ ಕಂಪನಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್‌ಕುಮಾರ್ ಎನ್., ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಶರಣಬಸವರಾಜ, ಜಂಟಿ ಕೃಷಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣ ಮೂರ್ತಿ ದೇಸಾಯಿ, ಸೇರಿದಂತೆ ಕೃಷಿ ವಿಜ್ಞಾನಿಗಳು, ವಿಮಾ ಕಂಪನಿ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು ಉಪಸ್ಥಿತರಿದ್ದರು.

Please follow and like us: