ಆಹಾರದ ಹಲ್ಲೆ- ಡಾ.ರಹಮತ್ ತರಿಕೇರಿ

ಕನ್ನಡನೆಟ್ ಸುದ್ದಿ :


ಒಮ್ಮೆ ನಾನೂ ರಂಗನಾಥ ಕಂಟನಕುಂಟೆಯವರೂ ಬೆಂಗಳೂರಿನ ಹೋಟೆಲೊಂದರಲ್ಲಿ ಬಿರಿಯಾನಿಗೆ ಆರ್ಡರ್ ಕೊಟ್ಟು ಕುಳಿತಿದ್ದೆವು. ಅಷ್ಟರಲ್ಲಿ ೪೦ರ ಪ್ರಾಯದ ಒಬ್ಬ ವ್ಯಕ್ತಿ ಹೊಕ್ಕನು. ಆತನ ಮುಖದಲ್ಲಿ ಅಪರಿಚಿತ ಜಾಗಕ್ಕೆ ಬಂದ ಗಾಬರಿಯಿತ್ತು. ಕೈಲ್ಲಿದ್ದ ಆಫೀಸ್ ಬ್ಯಾಗೂ ಜೇಬಲ್ಲಿದ್ದ ಹಲವು ಪೆನ್ನುಗಳನ್ನೂ ಕಂಡರೆ, ಯಾವುದೊ ಕಛೇರಿಯಲ್ಲಿ ಕ್ಲರ್ಕಿರಬಹುದು. ಆತ ಬೆಳಕಿಲ್ಲದ ಮೂಲೆ ಆರಿಸಿಕೊಂಡು ಕುಳಿತು, ಸಪ್ಲೈರನಿಗೆ ಪಿಸುದನಿಯಲ್ಲಿ ಚಿಕನ್ ಬಿರಿಯಾನಿ' ಎಂದನು. ಪರಿಚಿತರು ಇದ್ದಾರೆಯೇ ಎಂದು ಕಳ್ಳಗಣ್ಣಿಂದ ಅತ್ತಿತ್ತ ದಿಟ್ಟಿ ಹಾಯಿಸುತ್ತ, ಬೆದರಿದ ಹರಿಣದಂತೆ ಅಭದ್ರತೆಯಿಂದ ಚಡಪಡಿಸುತ್ತಿದ್ದ ಆತನನ್ನು ಕಿರುಗಣ್ಣಲ್ಲಿ ಗಮನಿಸುತ್ತ ನಾವು ಉಣ್ಣತೊಡಗಿದವು. ಅವನಿಗೂ ಹಬೆಯಾಡುವ ಬಿರಿಯಾನಿ ಬಂದಿತು. ಆತ ತಿನ್ನಲು ಚಮಚ ಬೇಕೆಂದು ಕೇಳಿದನು. ಬಿರಿಯಾನಿಯನ್ನು ಮಸಾಲೆ ಮತ್ತು ಮಾಂಸದ ತುಣುಕುಗಳ ಜತೆ ತಟ್ಟೆಯಲ್ಲೆ ಮಿದ್ದು, ತುತ್ತುಮಾಡಿ ಕೈಯಿಂದ ತಿನ್ನಬೇಕು. ತುಂಡನ್ನು ತೊಟ್ಟಿನಂತೆ ಎಲುಬು ಹೊರಟಿರುವ ಕಡೆ ಹಿಡಿದುಕೊಂಡು ಖಂಡಭಾಗ ಕಚ್ಚಿ ಎಳೆಯಬೇಕು. ಆದರೆ ಆತ ಇಡ್ಲಿಯಂತೆ ತುಂಡನ್ನು ಚಮಚದಲ್ಲಿ ತೆಗೆದು ತಿನ್ನಲೆತ್ನಿಸಿದನು. ಅದು ಚಮಚದಲ್ಲಿ ಸರಿಯಾಗಿ ಕೂರದೆ ಕೆಳಗೆ ಬೀಳುತ್ತಿತ್ತು. ಒಂದು ತುಂಡೇನೊ ಪ್ರಯಾಸದಿಂದ ಬಾಯೊಳಗೆ ಹೋಯಿತು. ಆದರೆ ನುರಿಯಲಾಗದೆ ಬಾಯಿ ತುಂಬ ಆವರಿಸಿಕೊಂಡು ದವಡೆಗೆ ಕಷ್ಟಕೊಡಲಾರಂಭಿಸಿತು. ಆತ ನಮ್ಮತ್ತ ದಿಟ್ಟಿ ಹಾಯಿಸಿದನು. ಜ್ಞಾನೋದಯವಾಯಿತು. ಚಮಚ ಪಕ್ಕಕ್ಕಿಟ್ಟು ತಟ್ಟೆಗೆ ಕೈಹಾಕಿ ತಿನ್ನತೊಡಗಿದನು. ಊಟಮುಗಿಸಿ ಬಿಲ್ಲಿನ ತಟ್ಟೆಗೆ ದುಡ್ಡಿಟ್ಟು, ಬಾಯೊರೆಸಿಕೊಳ್ಳುತ್ತ, ಯಾರಿಗೂ ಕಾಣಸದೆ ಪಾರಾಗ ಬಯಸುವಂತೆ ಮಳ್ಳಗೆ ಹೊರಬಿದ್ದು, ಗಾಂಧಿನಗರದ ಜನಜಂಗುಳಿಯಲ್ಲಿ ಕರಗಿಹೋದನು. ಇದು ಜಾತಿ-ಧರ್ಮಗಳು ಆಹಾರದ ವಿಷಯದಲ್ಲಿ ಸೃಷ್ಟಿಸಿರುವ ನಿರ್ಬಂಧಗಳ ಚರಿತ್ರೆ ಮತ್ತು ವಾಸ್ತವವನ್ನೆಲ್ಲ ಪಾತ್ರವೊಂದು ಅಭಿನಯಿಸಿ ಹೋದಂತಿತ್ತು. ಮಾಂಸಾಹಾರ ವಿರೋಧಿಗಳು ತಿನ್ನುಣ್ಣುವ ಸಮುದಾಯಗಳ ಮೇಲೆ ತಿರಸ್ಕಾರ ಹುಟ್ಟಿಸುವ ಕೆಲಸವಷ್ಟೇ ಮಾಡಿಲ್ಲ, ತಿನ್ನಲು ಬಯಸುವ ತಮ್ಮದೇ ಸಮುದಾಯಗಳ ಸದಸ್ಯರ ಮೇಲೂ ಹಿಂಸೆಯನ್ನೂ ಹೇರಿದ್ದರ ಪ್ರತೀಕದಂತಿತ್ತು. ಸಸ್ಯಾಹಾರಿಯೊಬ್ಬರು ಮಾಂಸಾಹಾರಿ ಆಗುವುದು ಅಥವಾ ಮಾಂಸಾಹಾರಿಗಳು ಅದನ್ನು ಕೈಬಿಡುವುದು ದೊಡ್ಡ ಸಂಗತಿಯಲ್ಲ. ಆದರೆ ಭಾರತದಲ್ಲಿ ಅದು ಪಾವಿತ್ರ್ಯ-ಶ್ರೇಷ್ಠತೆ ಕೀಳರಿಮೆ-ಹಲ್ಲೆ ಇತ್ಯಾದಿ ಸಂಗತಿಗಳಿಂದ ಕೂಡಿ ತಲೆಹೋಗುವ ವಿಷಯವಾಗಿದೆ. ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯವಾದಿ ಪಕ್ಷದ ನಾಯಕರೊಬ್ಬರು ವಿದೇಶದಲ್ಲಿ ಎಳೆಗರುವಿನ ಮಾಂಸ ಭಕ್ಷಿಸಿದ ಪ್ರಕರಣವು ವಿವಾದ ಹುಟ್ಟುಹಾಕಿತ್ತು. ಆಗವರುನಾನು ತಿಂದದ್ದು ಭಾರತದ ದನದ ಮಾಂಸವಲ್ಲ’ ಎಂದು ಸಮಜಾಯಿಶಿಯಿತ್ತು ಪಾರಾದರು. ಮಾಂಸಾಹಾರ ನಿಷೇಧಿಸಿಕೊಂಡಿರುವ ಸಮುದಾಯಗಳು, ಚರಿತ್ರೆಯ ಒಂದು ಘಟ್ಟದಲ್ಲಿ ಮಾಂಸಾಹಾರಿಗಳಾಗಿದ್ದವು, ದನದ ಮಾಂಸವನ್ನೂ ಭಕ್ಷಿಸುತ್ತಿದ್ದವು ಎಂಬುದಕ್ಕೆ ಸಿಗುವ ಸಂಸ್ಕೃತನ್ನೂ ಒಳಗೊಂಡಂತೆ ಭಾರತೀಯ ಭಾಷೆಯ ಪಠ್ಯಗಳಲ್ಲಿ ಸಾವಿರಾರು ನಿದರ್ಶನಗಳಿವೆ. ಆದರೆ ಈ ಚರಿತ್ರೆಯು ವರ್ತಮಾನದಲ್ಲಿ ಆಹಾರ ತರತಮದ ಭಾವವನ್ನು ನಿವಾರಿಸಲು ಸೋತುಹೋಗಿದೆ.
ಭಾರತದಲ್ಲಿ ಆಹಾರವು ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಭಾಗವೂ ಆಗಿದೆ. ಪ್ರಾಚೀನ ಗ್ರೀಕರು, ಮುಸ್ಲಿಮರು, ಪ್ರಾಚೀನ ಋಷಿಗಳು, ಬುಡಕಟ್ಟು ಜನರು ಒಳಗೊಂಡಂತೆ ಬಲಿ ಆಚರಣೆಯಿದ್ದ ಎಲ್ಲರಿಗೂ ಬಲಿಪ್ರಾಣಿಯ ಮಾಂಸವನ್ನು ತಿನ್ನುವುದು ಪವಿತ್ರವಾದ ಧಾರ್ಮಿಕ ಕ್ರಿಯೆ. ಯಾಗಕ್ಕೆ ಪ್ರಾಣಿಬಲಿ ಕೊಡುವುದು ೧೨ನೇ ಶತಮಾನದಲ್ಲೂ ಇತ್ತೆಂದು ಕಾಣುತ್ತದೆ. ವೇದಘನವೆಂಬನೆ ಪ್ರಾಣಿವಧೆಯ ಹೇಳುತ್ತಿದೆ' ಎಂಬ ಬಸವಣ್ಣನ ಮಾತು ಇದಕ್ಕೆ ಸಾಕ್ಷಿ. ಕಾರಂತರು ತಮ್ಮ ಆತ್ಮಚರಿತ್ರೆಯಲ್ಲಿ ಕೋಟದ ಬ್ರಾಹ್ಮಣರು ಅಜಯಾಗದಲ್ಲಿ ಹೋತ ಬಲಿಕೊಟ್ಟ ಪ್ರಕರಣವನ್ನು ದಾಖಲಿಸುತ್ತಾರೆ. ಪ್ರಾಚೀನ ಯಜ್ಞದ ಆಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು ೨೦ನೇ ಶತಮಾನದÀಲ್ಲೂ ಅಜಯಾಗ ಮಾಡಿರುವ ಘಟನೆಗಳು ನಡೆದಿವೆ. ಶ್ರೀಶೈಲದ ಮಲ್ಲಿಕಾರ್ಜುನನ ಗುಡಿಯ ಪ್ರಾಕಾರವು ಲಿಂಗದ ಮುಂದೆ ಪ್ರಾಣಿಗಳನ್ನು ಬಲಿಗೊಡುತ್ತಿರುವ ಶಿಲ್ಪಗಳಿಂದ ತುಂಬಿದೆ. ಗುಡಿಯಲ್ಲಿರುವ ಬಲಿಪೀಠ, ರುಧಿರ ಕುಂಡಗಳು ಒಂದು ಕಾಲಕ್ಕೆ ಅಲ್ಲಿದ್ದ ಬಲಿಪದ್ಧತಿಯ ಪುರಾವೆಗಳು. ಶಿವರೂಪಿಯಾದ ಭೈರವಾರಾಧನೆಯಲ್ಲೂ ಶಕ್ತಿರೂಪಗಳಾದ ಹೆಣ್ದೇವತೆಗಳ ಆಚರಣೆಗಳಲ್ಲೂ ಬಲಿ ಮತ್ತು ಮಾಂಸದಡಿಗೆಯಿದೆ. ಅಸ್ಸಾಂ ನೇಪಾಳ ಬಂಗಾಳಗಳಲ್ಲಿ ಈಗಲೂ ಶಕ್ತಿದೇವತೆಗೆ ಕುರಿಕೋಣವಲ್ಲದೆ, ಮೊಲ, ಜಿಂಕೆ, ಪಾರಿವಾಳಗಳನ್ನೂ ಅಲ್ಲಿ ಬಲಿಗೊಡಲಾಗುತ್ತದೆ. ಜಗತ್ತಿನಾದ್ಯಂತ ಪ್ರಾಣಿಬಲಿಯು ದೈವಾರಾಧನೆಯ ಭಾಗವಾಗಿದ್ದು ಆಹಾರ ಸಂಸ್ಕೃತಿಯಾಗಿ ರೂಪಾಂತರಗೊಂಡಿದೆ. ತಿನ್ನುವ ಕುಡಿವ ಸಮುದಾಯಗಳಲ್ಲಿ ಬಾಡೂಟವು

ಬದುಕಿನ ಸಂಭ್ರಮದ ಗಳಿಗೆಯಾಗಿದೆ. ಕೆಲವು ಹಬ್ಬ-ಜಾತ್ರೆಗಳಲ್ಲಿ ಮಾಂಸವಿರುತ್ತದೆ. ಪ್ರಿಯವಾದ ನಂಟರಿಷ್ಟರು ಬಂದಾಗ ಮಾಂಸದಡಿಗೆ ಮಾಡುವುದು ಅವರಿಗೆ ಸಲ್ಲಿಸುವ ಗೌರವದ ಸಂಕೇತವಾಗಿದೆ. ಮಾಂಸದಡಿಗೆ ಊಟಕ್ಕೆ ಕುಳಿತಾಗ ಏರ್ಪಡುವ ಸಂಭ್ರಮ ನಾಟಕೀಯವಾಗಿರುತ್ತದೆ. ಮೆತ್ತನೆಯ ತುಂಡನ್ನು ಹುಡುಕಿ ಹಲ್ಲಿಲ್ಲದವರಿಗೆ ಕೊಡುವುದು, ಅಳಿಯಂದಿರಿಗೆ ಕೋಳಿಯ ತೊಡೆ ಭಾಗವನ್ನು ಬಡಿಸುವುದು, ಮೀನಿನ ಮುಳ್ಳಿಲ್ಲದ ಭಾಗವನ್ನು ಮಕ್ಕಳಿಗೆ ಬಿಡಿಸಿಕೊಡುವುದು, ಮಾಂಸ ಕಡಿಮೆಯಿರುವ ತುಂಡು ಬಿದ್ದಾಗ ಸಂಬAಧಪಟ್ಟವರು ಮುಖ ಊದಿಸಿಕೊಳ್ಳುವುದು, ಬಡಿಸುವವರು ಅದನ್ನು ಪತ್ತೆಹಚ್ಚಿ ಬಾಬತ್ತಿನ ನಷ್ಟ ತುಂಬಿ ಕೊಡುವಂತೆ ಇನ್ನೊಂದು ತುಂಡು ಬಡಿಸುವುದು, ನಲ್ಲಿಕೊಳವೆ ಬಿದ್ದವರು ಟ್ರಾಫಿಕ್ ಪೋಲಿಸರಂತೆ ಬಾಯಿಗಿಟ್ಟು ಮಜ್ಜೆ ಎಳೆಯುವುದು, ಒಣಗಿದ ಮಾಂಸ ಹುರಿದು ನಡುನಡುವೆ ಕಟಕ್ಕೆಂದು ಕಡಿಯುತ್ತ ಮುದ್ದೆ ನುಂಗುವುದು-ಇತ್ಯಾದಿ ವರ್ಣರಂಜಿತ ಘಟನೆಗಳು ಅಲ್ಲಿವೆ. ಪಂಕ್ತಿಯಲ್ಲಿ ಕುಳಿತಾಗ ತಮ್ಮ ಪ್ರಿಯರಾದವರಿಗೆ ನಿರ್ದಿಷ್ಟ ತುಂಡುಗಳನ್ನು ಹುಡುಕಿಹಾಕುವ ಪಕ್ಷಪಾತ ನಡೆದು, ಕದನಗಳಿಗೆ ಕಾರಣವಾಗಿರುವುದುಂಟು. ಹೆಣ್ಣು ನೋಡಲು ಹೋದವರು, ತಮಗೆ ಸರಿಯಾದ ತುಂಡು ಬಡಿಸಲಿಲ್ಲವೆಂದು, ಸಂಬAಧ ಹರಿದುಕೊಂಡು ಬಂದಿರುವುದುಂಟು ಆದ್ದರಿಂದಲೇ ಅಡುಗೆಯನ್ನು ಉತ್ಸಾಹದಿಂದ ಮಾಡುವ ಹೆಂಗಸರು,ಯಾಕೆ ನಿಷ್ಠುರ ಕಟ್ಟಿಕೊಳ್ಳಬೇಕು’ ಎಂದು ಬಡಿಸಲು ಹಿಂಜರಿಯುತ್ತಾರೆ. ಸಂಸ್ಕೃತೀಕರಣಗೊಂಡಿರುವ ತಿನ್ನುವ ಸಮುದಾಯದ ಕೆಲವು ಕುಟುಂಬ ಮತ್ತು ವ್ಯಕ್ತಿಗಳು ಶುಭ' ಸಂದರ್ಭಗಳಲ್ಲಿ ಮಾಂಸದೂಟವನ್ನು ನಿವಾರಿಸಿಕೊಂಡಿರುವುದು ನಿಜ. ಆದರೆಶುಭ’ ಸಂದರ್ಭ ಮುಗಿದೊಡನೆ ಅದರ ಸಪ್ಪೆತನ ಕಳೆಯಲು ಬಾಡೂಟವು ನುಗ್ಗಿ ವಿಜೃಂಭಿಸುತ್ತದೆ. ಯುಗಾದಿಯ ಮಾರನೆ ದಿನ, ಬೇಟೆಯಾಡುವ ಮತ್ತು ಮಾಂಸದೂಟ ಮಾಡುವ ಸಂಪ್ರದಾಯವಿದೆ. ಮಂಡ್ಯ-ಹಾಸನ ಭಾಗದಲ್ಲಿ ಹರಿಸೇವೆ ಮಾಡುವವರು, ಕೊನೆಯ ದಿನ ಮಾಂಸದೂಟ ಇಟ್ಟುಕೊಳ್ಳುತ್ತಾರೆ. ಮಂಟೆಸ್ವಾಮಿ ಜಾತ್ರೆಯಲ್ಲಿ ಮಾಂಸದ ಸಾರು ಮುದ್ದೆ ಬಡಿಸುವ ಸಂಪ್ರದಾಯವಿದೆ. ಗುಲಬರ್ಗಾ ಜಿಲ್ಲೆಯಲ್ಲಿ ಎಷ್ಟು ಮರಿಗಳು ಬಿದ್ದವು ಎಂಬುದರ ಮೇಲೆ ಆಯಾ ಊರಿನ ಮೊಹರಂ ವೈಭವವನ್ನು ಅಳೆಯಲಾಗುತ್ತದೆ.
ಸಸ್ಯಾಹಾರಿ ಎನ್ನಲಾದ ಸಮುದಾಯಗಳಲ್ಲಿ, ಆಧುನಿಕ ತಲೆಮಾರಿನವರು ಮಾಂಸ ಮೀನು ಮೊಟ್ಟೆ ತಿನ್ನಲಾರಂಭಿಸಿದ್ದಾರೆ. ಹಳ್ಳಿಗಳಲ್ಲಿ ಈ ವ್ಯವಹಾರ ಕದ್ದುಮುಚ್ಚಿ ನಡೆಯುತ್ತದೆ. ತಿನ್ನುವ' ಅಭ್ಯಾಸವುಳ್ಳವರು ಈ ಕಾರ್ಯವನ್ನು ಪೇಟೆಗೆ ಬಂದಾಗ ಸಲೀಸಾಗಿ ನೆರವೇರಿಸುತ್ತಾರೆ. ಶಿಕ್ಷಣಕ್ಕೊ ಉದ್ಯೋಗಕ್ಕೊ ಅಮೆರಿಕ ಯೂರೋಪುಗಳಿಗೆ ಹೋದ ಬಹಳಷ್ಟು ಮೇಲ್ಜಾತಿಯ ಜನ ಮಾಂಸಾಹಾರಕ್ಕೆ ಒಗ್ಗಿಕೊಂಡಿದ್ದಾರೆ. ಕರ್ನಾಟಕದಲ್ಲಿ ಬಾರು ಮತ್ತು ಮಾಂಸಾಹಾರದ ಹೋಟೆಲುಗಳ ಸಂಖ್ಯೆ ಹೆಚ್ಚಾಗಿದೆ.ತಿನ್ನಬಾರದವರು ತಿಂತಿರೋದಕ್ಕೆ ಮಾಂಸದ ರೇಟು ಈಪಾಟಿ ಹೆಚ್ಚಿದೆ’ ಎಂದು ಸಾಂಪ್ರದಾಯಿಕ ಮಾಂಸಾಹಾರಿಗಳು ಗೊಣಗಿಕೊಳ್ಳುವಷ್ಟು ಪರಿಸ್ಥಿತಿ ಬದಲಾಗಿದೆ. ಸಸ್ಯಹಾರಿ ಹೋಟೆಲುಗಳು ತಮ್ಮ ಆಹಾರದ ಐಟಮ್ಮುಗಳಿಗೆ ಪಲಾವ್ ಬಿರಿಯಾನಿ ಕುರ್ಮ ಕುಫ್ತ ಎಂಬ ಅರಬಿ ಫಾರಸಿ ಭಾಷೆಯ ಮಾಂಸಾಹಾರ ಸೂಚಕ ವಿಶೇಷಣಗಳು ಸೇರಿಸುತ್ತಿವೆ. ಮಾಂಸಾನುಭವ ಕೊಡುವ ಸೋಯಾಬೀನಿನ ತುಣುಕುಗಳನ್ನು ಪಲಾವಿನಲ್ಲಿ ಹಾಕಲಾಗುತ್ತಿದೆ. ಇಂತಹ ಹೊತ್ತಲ್ಲೇ, ಆಹಾರದ ಮೇಲಿನ ಸಾಮಾಜಿಕ ನಿಷೇಧ ಮತ್ತು ಹಲ್ಲೆಗಳು ಕೂಡ ಹೆಚ್ಚಾಗುತ್ತಿವೆ. ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದ ದನದ ಮಾಂಸಾಹಾರ ಕುರಿತ ಕೃತಿಗಳನ್ನು ನಿಷೇಧಿಸಲಾಗುತ್ತಿದೆ. ಆ ಲೇಖಕರಿಗೆ ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ತಾವು ಮಾಂಸ ತಿನ್ನುತ್ತಿಲ್ಲವೆಂದು ಉಚ್ಚಜಾತಿಗಳು ಶ್ರೇಷ್ಠತೆ ತೋರುವುದು, ತಿನ್ನುಣ್ಣುವ ಜನ ಕದ್ದುಮುಚ್ಚಿ ತಿನ್ನುವುದು, ತಾವು ಮಾಂಸಾಹಾರ ಮಾಡುವುದಿಲ್ಲವೆಂದು ಸುಳ್ಳುಹೇಳಿ ಸಿಕ್ಕಿಬಿದ್ದು ಸಲ್ಲದ ಕೀಳರಿಮೆ ಅನುಭವಿಸುವುದು, ಸಾಮಾಜಿಕ ವೈರುಧ್ಯ ಮತ್ತು ಆಹಾರದ ಮೇಲೆ ನಡೆಯುತ್ತಿರುವ ಹಲ್ಲೆಯಾಗಿದೆ.
ಪ್ರಾಣಿ ಇಲ್ಲವೇ ಪಕ್ಷಿಯ ಬಲಿಯನ್ನೊ ಮಾಂಸಾಹಾರವನ್ನೊ ನಿರ್ದಿಷ್ಟ ಜಾತಿ ಸಮುದಾಯ ಅಥವಾ ವ್ಯಕ್ತಿಗಳು ವೈಯಕ್ತಿಕವಾಗಿ ನಿಷೇಧಿಸಿಕೊಳ್ಳುವುದು ಸಮಸ್ಯೆಯಲ್ಲ; ಆದರೆ ಅದು ಬಲಿಗೊಡುವವರ ಮತ್ತು ತಿನ್ನುವವರ ಮೇಲಣ ದೈಹಿಕ ಮತ್ತು ಸಾಂಸ್ಕೃತಿಕ ಹಲ್ಲೆಯಾಗಿ ಪರಿಣಮಿಸಿರುವುದು ಸಮಸ್ಯೆ; ತಿನ್ನುಣ್ಣುವ ಜನ ತಮ್ಮ ದೇವತೆಗಳಿಗೆ ಪ್ರಾಣಿಬಲಿ ಕೊಡುವುದನ್ನು ಅನಾಗರಿಕ ಕೃತ್ಯವೆಂಬAತೆ ಭಾವಿಸುವುದು ಸಮಸ್ಯೆ. ಕೆಲವು ಪತ್ರಿಕೆಗಳು ಹೆಣ್ದೇವತೆಗಳ ಜಾತ್ರೆಗಳ ಬಗ್ಗೆ ವರದಿಮಾಡುವಾಗ ಪೋಲಿಸರ ಸಮ್ಮುಖದಲ್ಲೇ ಪ್ರಾಣಿಗಳ ಕೊಲೆ'ಜಾತ್ರೆಯಲ್ಲಿ ಸಾವಿರಾರು ಪ್ರಾಣಿಗಳ ಬರ್ಬರ ಹತ್ಯೆ’ ಬಕ್ರೀದ್‌ದಿನ ಲಕ್ಷಾಂತರ ಮುಗ್ಧ ಪ್ರಾಣಿಗಳ ವಧೆ' ಎಂದು ಬರೆಯಲಾಗುತ್ತದೆ. ಬಲಿಯನ್ನು ಹತ್ಯೆ ಕೊಲೆ ವಧೆ ಎಂದು ಬಣ್ಣಿಸುವುದು ಅಸಾಂಸ್ಕೃತಿಕ ದೃಷ್ಟಿಕೋನವಾಗಿದೆ. ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಸರ್ಕಾರದ ಮೀನುಗಾರಿಕೆ ಇಲಾಖೆಯು ಅಂಗಡಿ ತೆರೆಯುವುದಕ್ಕೆ ನಿರ್ಧರಿಸಿದಾಗ, ಕೆಲವರು ಹೇವರಿಕೆಯಿಂದ ವಾಚಕರ ವಾಣಿಯಲ್ಲಿ ಪತ್ರ ಬರೆದಿದ್ದರು. ಇದು ಮೀನು ಮಾಂಸ ತಿನ್ನುವವರ ಆಹಾರದ ಹಕ್ಕಿನ ಪ್ರಶ್ನೆ ಮಾತ್ರವಲ್ಲ, ಮೀನುಗಾರರ ಮತ್ತು ಪಶುಪಾಲಕರ ಉದ್ಯೋಗದ ಪ್ರಶ್ನೆ ಕೂಡ. ಬಹುಸಂಖ್ಯಾತ ದುಡಿವ ಮಂದಿ ಮಾಂಸ ಮೀನು ಮೊಟ್ಟೆಗಳ ಸೇವಿಸುವ ವಿಷಯ ಬಂದಾಗ, ಯಾಕೆ ಹಿಂಸೆ ಕ್ರೂರ ಅಸಹ್ಯ ನುಡಿಗಟ್ಟಿನಲ್ಲಿ ಚರ್ಚಿಸಲಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಬಡಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ ಕೊಡಲು ಸರ್ಕಾರ ಯೋಚಿಸಿದ ಪ್ರಕರಣದಲ್ಲಿ, ಒಬ್ಬರಂತೂ ಮೊಟ್ಟೆ ಕೊಟ್ಟರೆ ಶಾಲೆಗಳಿಂದ ವೀರಪ್ಪನ್‌ಗಳು ಹುಟ್ಟುತ್ತಾರೆ ಎಂದೂ ಎಚ್ಚರಿಸಿದರು. ಇದರಿಂದ ಬಹುಸಂಖ್ಯಾತ ಬಡವರ ಹಳ್ಳಿಗಾಡಿನ ಮಕ್ಕಳು ಪೌಷ್ಟಿಕವಾದ ಆಹಾರ ಪಡೆಯುವ ಸಣ್ಣ ಅವಕಾಶವನ್ನು ಅಲ್ಪಸಂಖ್ಯಾತರೂ ಪ್ರಭಾವಶಾಲಿಗಳೂ ಆದ ಸಸ್ಯಾಹಾರಿಗಳಿಂದ ತಪ್ಪಿಹೋಯಿತು.

ಮಾಂಸಾಹಾರಕ್ಕೂ ವ್ಯಕ್ತಿಸ್ವಭಾವಕ್ಕೂ ಸಂಬಂಧ ಜೋಡಿಸಿ ರಾಕ್ಷಸೀಕರಿಸುವ ಮನೋಭಾವವು ವ್ಯಾಪಕವಾಗಿದೆ. ಇದು ರಾಕ್ಷಸರಿಗೆ ಕೋರೆಹಲ್ಲುಗಳಿದ್ದವು, ಅವರು ಮಾಂಸ ತಿನ್ನುತ್ತಿದ್ದರು ಎಂಬ ಪುರಾಣಗಳ ಆಧುನಿಕ ಆವೃತ್ತಿಗಳಂತಿವೆ. ಈಗಲೂ ಸಿನಿಮಾಗಳಲ್ಲಿ ಭೂಗತ ಜಗತ್ತಿನ ಕೇಡಿಗಳು ಬರುವ ದೃಶ್ಯಗಳಲ್ಲಿ ಅವರು ಮಾಂಸಖಂಡವನ್ನು ಕಚ್ಚಿ ಎಳೆಯುವ ದೃಶ್ಯಗಳಿರುತ್ತವೆ. ದನದ ಮಾಂಸ ತಿನ್ನುವವರ ಕೈಕಡಿಯಬೇಕು, ನಾಲಿಗೆ ಕತ್ತರಿಸಬೇಕು ಎಂಬ ಹುಕುಮುಗಳನ್ನು ಪಶುಪಾಲಕ ಸಮುದಾಯದಿಂದ ಬಂದ ಬಲಪಂಥೀಯ ಪಕ್ಷದ ನಾಯಕರು ಮಾಡಿಸಲಾಗುತ್ತದೆ. ಕನ್ನಡದ ಕೆಲವು ಕಾದಂಬರಿಗಳಲ್ಲಿ ಮಾಂಸ ತಿನ್ನುವ ಮೇಲ್ಜಾತಿ ವ್ಯಕ್ತಿ ನೀಚಪಾತ್ರವಾಗಿಯೂ ಮಾಂಸಾಹಾರವನ್ನು ಬಿಟ್ಟು ಶೂದ್ರಪಾತ್ರವು ಸಜ್ಜನನೆನಿಸುವ ಸನ್ನಿವೇಶಗಳಿವೆ. ಈ ಚಿತ್ರಣಗಳೂ ದನದ ಮಾಂಸ ಒಯ್ಯುತ್ತಿದ್ದ ವ್ಯಕ್ತಿಗಳನ್ನು ಹಿಡಿದು ಅರೆಬೆತ್ತಲೆ ಮೆರವಣಿಗೆ ಮಾಡಲಾದ ಘಟನೆಗಳ ಹಿಂದೆ ಕೆಲಸ ಮಾಡಿವೆ. ಮಾಂಸಾಹಾರದ ಮೇಲಿನ ಹಲ್ಲೆಯನ್ನು ಸಸ್ಯಾಹಾರವಾದಿ ಕ್ಲಬ್ಬು, ವೈದ್ಯರ ಹೇಳಿಕೆ, ಗೋರಕ್ಷಣ ಚಳುವಳಿ, ಪ್ರಾಣಿದಯಾ ಸಂಘಗಳ ಮೂಲಕ ಮಾಡಲಾಗುತ್ತಿದೆ. ವೈರುಧ್ಯವೆಂದರೆ ಹೀಗೆ ಪ್ರಾಣಿದಯೆ ತೋರುವ ಮಂದಿ, ಅಸ್ಪೃಶ್ಯಯನ್ನು ಸಮರ್ಥಿಸುವುದು. ಧರ್ಮ ರಕ್ಷಣೆಯ ನಡೆವ ಹಿಂಸೆಯನ್ನು ಬೆಂಬಲಿಸುವುದು. ಯುದ್ಧಗಳು ಮುಗ್ಧ ನಾಗರಿಕರನ್ನು ಕೊಲ್ಲುವುದನ್ನು ಶೌರ್ಯವೆಂದು ವ್ಯಾಖ್ಯಾನಿಸುವುದು; ದನದಮಾಂಸ ತಿನ್ನುತ್ತಿದ್ದ ಬ್ರಿಟಿಶರಿಗೆ ಊಳಿಗ ಮಾಡುವಾಗ ಬಾರದ ಕೋಪ, ದನದ ಮಾಂಸ ತಿನ್ನುವ ಸಮಾಜಗಳಿರುವ ದೇಶಗಳಿಗೆ ಹೋಗಿ ನೆಲೆಸುವಾಗ ಬಾರದ ದ್ವೇಷ, ತಮ್ಮ ಜತೆಯಲ್ಲಿ ಬದುಕುವ ಜನರ ಮೇಲೆ ಹುಟ್ಟುವುದು. ಆಹಾರದ ಮೇಲೆ ಹುಟ್ಟಿಸಲಾಗುವ ತಿರಸ್ಕಾರವು ಪರೋಕ್ಷವಾಗಿ ಮಾಂಸಾಹಾರಿ ಜನರ ಧರ್ಮ, ದೈವ, ಜೀವನಕ್ರಮ ಮತ್ತು ಚಿಂತನೆಗಳ ಮೇಲೆ ಸಾರಿದ ಯುದ್ಧವೂ ಆಗಿದೆ. ಜನ ತಮ್ಮ ಆಹಾರದ ಕಾರಣದಿಂದ ಮುಜುಗರಕ್ಕೆ ಈಡಾಗುವ, ಮನೆ ಬಾಡಿಗೆ ಸಿಗದೆ ಅಪಮಾನಿತರಾಗುವ ಮತ್ತು ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಿರುವ ಯಾವುದೇ ಸಮಾಜವು ಅಮಾನುಷವಾಗಿರುತ್ತದೆ. ಬಣ್ಣ, ಲಿಂಗ, ಸಿದ್ಧಾಂತ, ವಿಚಾರ, ರಾಜಕೀಯ ಪಕ್ಷ, ಜಾತಿ, ಧರ್ಮ ಭಾಷೆ, ವಲಸೆಗಳ ಹೆಸರಲ್ಲಿ ದ್ವೇಷ ಮತ್ತು ಹಲ್ಲೆಗಳು ಜಗತ್ತಿನಾದ್ಯಂತ ನಡೆದಿವೆ. ಇವುಗಳಲ್ಲಿ ಆಹಾರದ ಮೇಲಣ ಹಲ್ಲೆಯು ನೀಚತರವಾಗಿದೆ. ಆದರೆ ಆಹಾರವು ನಾಳಗೆಯ ರುಚಿಗೆ ಮಾತ್ರವಲ್ಲ, ದುಡಿಮೆಗೆ ಬೇಕಾದ ದೇಹಶಕ್ತಿ, ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಲಗತ್ತಾಗಿರುವ ಸಂಗತಿಯಾಗಿದೆ. ಇದನ್ನು ದೈಹಿಕ ಮತ್ತು ಸಾಂಸ್ಕೃತಿಕ ಹಲ್ಲೆಗಳಿಂದ ಸೋಲಿಸಲು ಸಾಧ್ಯವಿಲ್ಲ. ಜಿಗುಟುತನದಿಂದ ಅದು ತನ್ನನ್ನು ಬದುಕಿಸಿಕೊಳ್ಳುತ್ತದೆ. ಲಂಕೇಶರಸಂಕ್ರಾಂತಿ’ ನಾಟಕವು ಆಹಾರ ಮತ್ತು ದೈವಗಳ ಮೇಲಿನ ಹಲ್ಲೆಗಳು ಒಂದೇ ಕೇಂದ್ರದಿಂದ ಹುಟ್ಟುವುದನ್ನು ಮತ್ತು ಅವು ಹಿಂಸೆ ಮತ್ತು ಪ್ರತಿರೋಧಗಳನ್ನು ಹುಟ್ಟಿಸುವುದನ್ನು ಕಾಣಿಸುತ್ತದೆ.
ಪ್ರಾಣಿಬಲಿಯನ್ನು ನಿಷೇಧಿಸಿಕೊಂಡ ಬೌದ್ಧಧರ್ಮವನ್ನು ಜನಪ್ರಿಯತೆಯಲ್ಲಿ ಹಿಂದಿಕ್ಕಲು ಉಚ್ಚಜಾತಿಗಳು ಸಸ್ಯಾಹಾರಿಗಳಾಗಿ, ಮಾಂಸಾಹಾರವನ್ನು ಕೈಬಿಟ್ಟಿದ್ದನ್ನು ಅಂಬೇಡ್ಕರ್ ತಮ್ಮ `ಅಸ್ಪೃಶ್ಯರು’ (೧೯೪೬) ಕೃತಿಯಲ್ಲಿ ವಿಶ್ಲೇಷಿಸುತ್ತಾರೆ. ಈ ಕೃತಿ ರಚಿಸುವಾಗ ಅಂಬೇಡ್ಕರ್ ಅವರಲ್ಲಿದ್ದುದು, ಆಹಾರ ಸಂಸ್ಕೃತಿಯ ಚರಿತ್ರೆಯನ್ನು ಹೊರಗೆಡಹುವ ವಿದ್ವತ್ತಿನ ಪ್ರಖರತೆ ಮಾತ್ರವಲ್ಲ; ಇಂತಹ ಸಣ್ಣ ವಿಷಯಕ್ಕೂ ಅಪಮಾನ ಹಿಂಸೆ ಸೃಷ್ಟಿಮಾಡಿರುವ ಸಮಾಜದಲ್ಲಿ ಬದುಕಬೇಕಾದ ಗಾಢ ವಿಷಾದ. ಆಹಾರದ ಹಕ್ಕನ್ನು ಮನ್ನಿಸದ ಸಮಾಜವು ಎಂದೂ ಮಾನುಷವಾಗಿರುವುದು ಸಾಧ್ಯವಿಲ್ಲ ಎಂಬ ಆಗ್ರಹ. ಅದು ಮಾನುಷವಾಗಬೇಕು ಎಂಬ ಆಶೋತ್ತರ.

Please follow and like us: