ನೆನಪಿರಲಿ.. ಈ ಕೃಷಿ ವಿಜಯ ಕೇವಲ ಸಾಂಕೇತಿಕ- ರಾಜಾರಾಮ ತಲ್ಲೂರ

ಕನ್ನಡನೆಟ್ ಸುದ್ದಿ


ಒಕ್ಕೂಟ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದೆ. ಅದರ ಹಿಂದೆ ಸರ್ಕಾರದ ಅನಿವಾರ್ಯತೆಗಳು (ಉತ್ತರ ಪ್ರದೇಶ, ಪಂಜಾಬ್ ಚುನಾವಣೆ) ಇರಬಹುದು.

ರೈತರ ಹೋರಾಟಕ್ಕೆ ಅಷ್ಟರ ಮಟ್ಟಿಗೆ ಸಂದ ಸಾಂಕೇತಿಕ ಜಯ ಇದು.

ಒಕ್ಕೂಟ ಸರ್ಕಾರದ ಈ ತೀರ್ಮಾನದಿಂದಾಗಿ ರೈತರ ಸಮಸ್ಯೆಗಳೆಲ್ಲ ಪರಿಹಾರ ಆಗಿಬಿಟ್ಟವೇ? ಒಂದಿಂಚೂ ಇಲ್ಲ.
ಅಸಲಿಗೆ ಈ ಕೃಷಿ ಕಾರ್ಪೋರೇಟೀಕರಣದ ಚಕ್ರವ್ಯೂಹದಲ್ಲಿ ಇರುವುದು ಕೇವಲ ಮೂರು ಕಾಯಿದೆಗಳಲ್ಲ. ನಾನು ಮೊದಲಿನಿಂದ ಹೇಳುತ್ತಾ ಬಂದಿರುವಂತೆ ಸುಮಾರು ಏಳೆಂಟು ಕಾಯಿದೆಗಳಿವೆ. ಅದರ ಮೇಲೆ ರಾಜ್ಯ ಪಟ್ಟಿಯಲ್ಲಿ ಬಂದು ರಾಜ್ಯಗಳು ಜಾರಿಗೆ ತಂದಿರುವ ಕಾನೂನುಗಳಿವೆ (ಕರ್ನಾಟಕದಲ್ಲೇ ಕೃಷಿ ಭೂಮಿ ಖರೀದಿ ನಿಯಮ ಸಡಿಲ ಗೊಳಿಸಿದ, ಏಪಿಎಂಸಿ ಅಪ್ರಸ್ತುತಗೊಳಿಸಿದ ಕಾನೂನುಗಳಿವೆ). ಇವೆಲ್ಲ ಅಮೂಲಾಗ್ರವಾಗಿ ಪರಿಶೀಲನೆ ಆದಾಗಲೇ ಆಗಿರುವ ಬದಲಾವಣೆಗಳು ಗಮನಕ್ಕೆ ಬರುವುದು.

ಇದೆಲ್ಲದಕ್ಕಿಂತ ಹೆಚ್ಚಾಗಿ, ಮೂರು ಕಾಯಿದೆಗಳು ಚಾಲ್ತಿಗೆ ಬಂದ ಬಳಿಕ ಕಾರ್ಪೊರೇಟ್ ಕಂಪನಿಗಳು ದೇಶದಾದ್ಯಂತ ಉಗ್ರಾಣಗಳು, ಸಂಸ್ಕರಣೆ ಕೇಂದ್ರಗಳು, ಲಾಜಿಸ್ಟಿಕ್ಸ್ ಹೆಸರಲ್ಲಿ ಅಪಾರ ಹೂಡಿಕೆ ಮಾಡಿವೆ. ದೇಶದಾದ್ಯಂತ ಕೄಷಿ ಉತ್ಪಾದಕ ಸಂಘಗಳು (FPO/FPC) ಭರದಿಂದ ಸ್ಥಾಪನೆಗೊಳ್ಳುತ್ತಿವೆ. ಅವುಗಳ ಸ್ವರೂಪ ಕಿಂಚಿತ್ತೂ ಬದಲಾಗಿಲ್ಲ. ಇವೆಲ್ಲ ಒಅತ್ತು ನಿಮಿಷದ ಭಾಷಣದಲ್ಲಿ ಆರಿಹೋಗುವಂತಹವಲ್ಲ. ಸರಳವಾಗಿ ಹೇಳಬೇಕೆಂದರೆ ಖಾಸಗೀಕರಣದ ಯಾವನೀತಿಯನ್ನೂ ಒಕ್ಕೂಟ ಸರ್ಕಾರ ಬದಲಾಯಿಸಿಲ್ಲ.

ಈ ಹಿನ್ನೆಲೆಯಲ್ಲಿ, ಮೂರು ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳುವ ವಿವೇಕವನ್ನು ಪ್ರದರ್ಶಿಸಿದ್ದಕ್ಕಾಗಿ ಪ್ರಧಾನಮಂತ್ರಿಗಳನ್ನು ಅಭಿನಂದಿಸೋಣ, ಈ ಒಂದು ವರ್ಷದ ರೈತ ಹೋರಾಟದಲ್ಲಿ ಆಗಿರುವ ಜೀವ-ಸಮಯ-ಚೈತನ್ಯ ನಷ್ಟಕ್ಕೆ ಕಾರಣಗಳನ್ನು ಮತ್ತು ಪರಿಹಾರಗಳನ್ನು ಕಂಡುಕೊಳ್ಳೋಣ. ರೈತರ ಕಡೆಯಿಂದ ಸಮರ್ಥ ಕೃಷಿ ಪರ್ಯಾಯವೊಂದನ್ನು ರೈತ ಹಿತವನ್ನು ಗಮನದಲ್ಲಿರಿಸಿಕೊಂಡು ರೂಪಿಸುವತ್ತ ಮತ್ತು ಅದರ ಜಾರಿಗೆ ಹಕ್ಕೊತ್ತಾಯ ಮಾಡುವತ್ತ ಗಮನ ಹರಿಸೋಣ.

ಇದಿನ್ನೂ ವಿಜಯೋತ್ಸವಕ್ಕೆ ಕಾಲವಲ್ಲ ಎಂಬುದು ನೆನಪಿರಲಿ.

FarmBills #Victory #Agriculture

Please follow and like us: