ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆಗಳ ಹಿಂಪಡೆಯುವ ಘೋಷಣೆ : ಚಾರಿತ್ರಿಕ ಹೋರಾಟದ ರೈತರಿಗೆ ಅಭಿನಂದನೆಗಳು- ರವಿಕೃಷ್ಣಾರೆಡ್ಡಿ

ಕನ್ನಡನೆಟ್ ಸುದ್ದಿ:

ಗಂಭೀರ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಹೊಂದಿರುವ ಯಾವುದೇ ಕಾಯ್ದೆ-ಕಾನೂನನ್ನು ಜನರ ವಿಶ್ವಾಸ ಇಲ್ಲದೆ ಜಾರಿ ಮಾಡುವುದು ಅಸಾಧ್ಯ ಮತ್ತು ತಪ್ಪೂ ಸಹ. ಕಳೆದ ವರ್ಷ ಭಾರತದ ಒಕ್ಕೂಟ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆದ ಮೂರು ಕೃಷಿ ಕಾಯ್ದೆಗಳ ಬಗ್ಗೆ ಭಾರತದ–ಅದರಲ್ಲಿಯೂ ಉತ್ತರ ಭಾರತದ– ಅಪಾರ ಸಂಖ್ಯೆಯ ರೈತರು ಅವಿಶ್ವಾಸ, ಶಂಕೆ, ಅಪನಂಬಿಕೆ, ಆತಂಕಗಳನ್ನು ಹೊಂದಿದ್ದರು. ಮತ್ತು ಅದೇ ಕಾರಣದಿಂದ ಆ ಕಾಯ್ದೆಗಳ ವಿರುದ್ಧ ಸುದೀರ್ಘವಾದ ಮತ್ತು ಬಹುತೇಕವಾಗಿ ಶಾಂತಿಯುತವಾದ ಚಾರಿತ್ರಿಕ ಹೋರಾಟವನ್ನೇ ನಡೆಸಿದರು. ಹೋರಾಟದಲ್ಲಿ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಯಿತು, ಹಲವಾರು ಜನ ಜೀವ ಕಳೆದುಕೊಂಡರು, ನಾನಾ ರೀತಿಯ ಸಾಮಾಜಿಕ ಪ್ರಕ್ಷುಬ್ಧತೆ ಸೃಷ್ಟಿಯಾಗಿತ್ತು.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಘೋಷಣೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಸಕಾರಣವಾದ ಭಾವನೆಗಳಿಗೆ ಗೌರವ ಕೊಡುವುದು ಆಡಳಿತಗಾರರ ದೌರ್ಬಲ್ಯವಲ್ಲ. ಬದಲಿಗೆ ಅದು ಅವರ ಜವಾಬ್ದಾರಿ ಮತ್ತು ಹಿರಿಮೆ. ತಡವಾದರೂ ಭಾರತ ಒಕ್ಕೂಟ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಅವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.

ಹಾಗೆಂದು ಎಲ್ಲಾ ರಾಜ್ಯಗಳು ಈ ಕಾಯ್ದೆಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದಿಲ್ಲ. ತಮ್ಮ ರಾಜ್ಯದ ಜನತೆಗೆ ಮತ್ತು ರೈತರಿಗೆ ಅನುಕೂಲವಾದ ಕೃಷಿ ಕಾಯ್ದೆಗಳನ್ನು ತರಲು ರಾಜ್ಯಗಳಿಗೆ ಅವಕಾಶ ಇರಬೇಕು. ಅದು ರಾಜ್ಯಗಳ ಹಕ್ಕು ಸಹಾ ಹೌದು. ಭಾರತ ಒಕ್ಕೂಟ ಸರ್ಕಾರವು ಅದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಬೇಕು ಮತ್ತು ಅಂತಹ ಸ್ವಾಯತ್ತತೆಯನ್ನು ಉತ್ತೇಜಿಸಬೇಕು.

ನೂತನ ಕೃಷಿ ಕಾಯ್ದೆಗಳ ವಿರುದ್ಧ ಶಾಂತಿಯುತ ಹೋರಾಟ ಮಾಡಿ ಯಶಸ್ಸು ಪಡೆದ ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು. ಒಂದು ವರ್ಷದಿಂದ ದೆಹಲಿಯ ಹೊರವಲಯದಲ್ಲಿ ಬೀಡುಬಿಟ್ಟು ಚಾರಿತ್ರಿಕ ಹೋರಾಟ ಮಾಡಿದ ಪಂಜಾಬ್, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳ ರೈತರಿಗೆ ವಿಶೇಷ ಅಭಿನಂದನೆಗಳು. ಅವರ ಶಾಂತಿಯುತ ಮತ್ತು ಅಹಿಂಸಾತ್ಮಕ ಹೋರಾಟ ಅನ್ಯಾಯದ ವಿರುದ್ಧ ಹೋರಾಟ ಮಾಡುವವರಿಗೆ ಸ್ಫೂರ್ತಿಯಾಗಿದೆ. ಈ ರೈತರು ಈ ಕೂಡಲೇ ತಮ್ಮ ಹೊಲ-ಗದ್ದೆ-ಮನೆಗಳಿಗೆ ಹಿಂದಿರುಗಿ ಭಯಾತಂಕಗಳಿಲ್ಲದೆ ಅನ್ನೋತ್ಪಾದನೆಯಲ್ಲಿ ತೊಡಗಲಿ ಮತ್ತು ಭಾರತದ ರೈತಾಪಿ ಸಮುದಾಯಕ್ಕೆ ಶುಭವಾಗಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾರೈಸುತ್ತದೆ.”

  • ರವಿಕೃಷ್ಣಾರೆಡ್ಡಿ
    ರಾಜ್ಯಾಧ್ಯಕ್ಷ
    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

19-11-2021.

Please follow and like us: