ಅನ್ನದಾನದ ಮೂಲಕ ಪುನೀತ್ ಪುಣ್ಯಸ್ಮರಣೆ : ಕರ್ನಾಟಕ ರತ್ನ, ಪದ್ಮಶ್ರೀ ನೀಡಲು ಆಗ್ರಹ

ಕೊಪ್ಪಳ, ನ. ೦೮: ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕನಕದಾಸ ವೃತ್ತದಲ್ಲಿ ಪುನೀತ್ ರಾಜಕುಮಾರ ಹನ್ನೊಂದನೇ ದಿನದ ಪುಣ್ಯಸ್ಮರಣೆ ನಿಮಿತ್ಯ
ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಗೂ ಕನಡಪರ ಸಂಘಟಕರು ಅನ್ನದಾನ ಕಾರ್ಯಕ್ರಮ ಏರ್ಪಡಿಸಿದ್ದರು. ೧೦ ಕೆಜಿ ಕೇಸರಿಬಾತ್, ೪೦ ಕೆಜಿ ಪಲಾವ್ ವಿತರಿಸಿ ಅಭಿಮಾನ ಮೆರೆದರು.

ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಚಾಲನೆ ನೀಡಿ, ಪುನೀತ್ ಎಂಬ ಪಾವನಮೂರ್ತಿ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಿದ ನಟನೆ, ಸಾಮಾಜಿಕ ಸೇವೆ ಅದಕ್ಕೂ ಮಿಗಿಲಾಗಿ ಆತ ಮಾಡಿದ ಕಾರ್ಯವನ್ನು ಯಾರಿಗೂ ಹೇಳದೇ ಮಾಡಿರುವದೇ ಆತನ ದೊಡ್ಡತನ ಹಾಗೂ ಕೊಟ್ಯಾಂತರ ಜನರಿಗೆ ಸೇವೆ ಮಾಡುವ ಮನಸ್ಸನ್ನು, ನೇತ್ರದಾನ ಮಾಡುವ ಹುಮ್ಮಸ್ಸನ್ನು ನೀಡಿದ್ದಾರೆ ಎಂದರೆ ಅವರು ಭೂಮಂಡಲ ಇರುವವರೆಗೆ ಅಮರನಾಗಿರುತ್ತಾರೆ ಎಂದ ಅವರು. ಅಪ್ಪು ದೈಹಿಕವಾಗಿ ಅಗಲಿದ ನೋವು ಸದಾ ಕಾಡುತ್ತಲೇ ಇರುತ್ತದೆ, ಆದರೆ ಅವರ ಸ್ಮರಣೆಯ ಮೂಲಕ ಮಾಡುವ ಸಾಮಾಜಿಕ ಕೈಂಕರ್ಯಗಳು ಮತ್ತೆ ಮತ್ತೆ ಅವರನ್ನು ನೆನಪಿಸುತ್ತಲೇ ಇರುತ್ತವೆ
ಎಂದರು. ಪುನೀತ್ ರಾಜ್‌ಕುಮಾರ್ ಅವರಿಗೆ ರಾಜ್ಯ ಸರಕಾರ ಕರ್ನಾಟಕ ರತ್ನ ಹಾಗೂ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಲಿ, ಸಚಿವರು, ಸಂಸದರು,
ಶಾಸಕರು ಮಾಧ್ಯಮಗಳ ಮೂಲಕ ಪ್ರಶಸ್ತಿ ನೀಡುವಂತೆ ಒತ್ತಾಯಿಸುವ ಬದಲು ಸರಕಾರದಲ್ಲಿ ಕುಳಿತು ಶೀಘ್ರ ಪ್ರಶಸ್ತಿ ಘೋಷಿಸಲಿ. ಸುಮ್ಮನೆ ಕಣ್ಣೆರೆಸುತ್ತಾ ಸಾಗುವ ಅವಶ್ಯಕತೆಯಿಲ್ಲ. ಹಾಗೇ ಅವರ ಕುರಿತು ಒಂದು ಪರಿಚಯದ ಪಾಠವನ್ನು ಪ್ರಾಥಮಿಕ, ಪ್ರೌಢ ಶಿಕ್ಷಣದಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಸಂಘಟಕರಾದ ಹನುಮಂತ ನಾಯಕ ಡಂಬರಹಳ್ಳಿ, ಪಂಪಾಪತಿ ಪಾಟೀಲ, ನಂದೀಶಗೌಡ ಯಲ್ಲನಗೌಡ, ರಾಮಕೃಷ್ಣ, ಶಿವನಗೌಡ, ಪ್ರಕಾಶ ಕಿನ್ನಾಳ, ಕಜಾಪ ಪ್ರಧಾನ ಕಾರ್ಯದರ್ಶಿ ಉಮೇಶಬಾಬು ಸುರ್ವೆ ಇತರರು ಇದ್ದರು.