ಜೈ ಭೀಮ್ ಚಿತ್ರ ಪ್ರಚೋದಿಸಿರುವ ಚರ್ಚೆ ಇಂತಹದ್ದೊಂದು ಆತ್ಮಾವಲೋಕನಕ್ಕೆ ನಮ್ಮೆಲ್ಲರನ್ನು ಈಡುಮಾಡಬೇಕು

-ದಿನೇಶ್ ಅಮೀನಮಟ್ಟು

‘ಜೈ ಭೀಮ್’ ಚಿತ್ರವನ್ನು ಬಿಡುಗಡೆಯಾದ ದಿನವೇ ರಾತ್ರಿ ನೋಡಿದೆ. ಅದರ ಬಗ್ಗೆ ಬರೆಯುವ ಮುನ್ನ ಫೇಸ್ ಬುಕ್ ವಿಮರ್ಶೆಗಳನ್ನು ನೋಡಿಕೊಳ್ಳುವ ಎಂದು ಸುಮ್ಮನಾದೆ. ನಿರೀಕ್ಷೆಯಂತೆ ಜೈಭೀಮ್ ಚಿತ್ರದ ವಿಮರ್ಶೆಗಳ ಬುಲ್ ಡೋಜರ್ ಗಳು ಒಂದಾದರ ಮೇಲೆ ಒಂದರಂತೆ ಸಾಲು ಸಾಲಾಗಿ ಬಂದು ಗುದ್ದಲಾರಂಭಿಸಿತ್ತು. ( ಈ ಸೋಷಿಯಲ್ ಮೀಡಿಯಾ ಚಿತ್ರ ವಿಮರ್ಶೆಗಳಿಗೆ ಇತಿ-ಮಿತಿ-ಅತಿಗಳಿದ್ದರೂ ವಿಚಾರ ಪ್ರಚೋದಕವಾಗಿವೆ. ಇವುಗಳಿ ಮುಖ್ಯವಾಹಿನಿ ಮಾಧ್ಯಮಗಳ ಚಿತ್ರ ವಿಮರ್ಶೆಯನ್ನು ಅಪ್ರಸ್ತುತ ಮಾಡಿವೆ)
ಈ ಸರಣಿ ವಿಮರ್ಶೆಗಳಿಂದ ಪ್ರಭಾವಿತನಾಗಿ ಚಿತ್ರವನ್ನು ಅಲ್ಲಲ್ಲಿ ಓಡಿಸಿ ಮತ್ತೆರಡು ಬಾರಿ ನೋಡಿದೆ. ಮೊದಲು ಹೇಳಿದವರದ್ದೇ ಸರಿ ಎಂದು ಅಂದುಕೊಳ್ಳುತ್ತಿದ್ದ ಹಾಗೆ ಎರಡನೇ ಬುಲ್ ಡೋಜರ್ ಬಂದು ಆ ಅಭಿಪ್ರಾಯವನ್ನು ಬುಡಮೇಲು ಮಾಡುತ್ತಿತ್ತು. ಇಷ್ಟೊಂದು ಚರ್ಚೆಗೆ ಒಳಗಾಗುತ್ತಿರವುದೇ ಜೈಭೀಮ್ ಚಿತ್ರದ ಮಹತ್ವವನ್ನು ಹೇಳುತ್ತದೆ.
ಈ ಚಿತ್ರದ ಬಗ್ಗೆ ನಡೆಯುತ್ತಿರುವ ಚರ್ಚೆಯ ಕೇಂದ್ರ- ವಿಮೋಚನಾಕಾರನ (Saviour) ಪಾತ್ರ. ತಳಸಮುದಾಯಗಳ ವಿಮೋಚನೆಗೆ ಮೇಲ್ವರ್ಗದ ಉದಾರವಾದಿ ನಾಯಕನನ್ನೇ ಯಾಕೆ ತರಬೇಕು, ತಳ ಸಮುದಾಯದಲ್ಲಿಯೇ ನಾಯಕನನ್ನು ಯಾಕೆ ಹುಟ್ಟು ಹಾಕಬಾರದು ಎನ್ನುವುದು ಒಂದು ವಾದ. ಆಶಯವಾಗಿ ಇದು ಸರಿ ಇದೆ.

ನಿರ್ದೇಶಕರು ಜೈಭೀಮ್ ಚಿತ್ರದಲ್ಲಿನ ವಕೀಲ ಚಂದ್ರುವನ್ನು ಅಂಬೇಡ್ಕರ್ ವಾದಿಯಾದ ಒಬ್ಬ ದಲಿತನನ್ನಾಗಿ ಮಾಡಿದ್ದರೆ ಚಿತ್ರಕ್ಕೆ ಏನೂ ಹಾನಿಯಾಗುತ್ತಿರಲಿಲ್ಲ,ವಿವಾದವೂ ಇರುತ್ತಿರಲಿಲ್ಲ. ಅದರಿಂದ ಇನ್ನಷ್ಟು ಪರಿಣಾಮಕಾರಿಯಾದ ಸಂದೇಶವೂ ಹೊರಬರುತ್ತಿತ್ತು. ಬಸವಣ್ಣ ಎಂಬ ಬ್ರಾಹ್ಮಣ ವಿಮೋಚನಕಾರನಿಂದ, ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ದಲಿತ ವಿಮೋಚನಕಾರರ ವರೆಗೆ ಹಾದು ಬಂದ ಸಾಮಾಜಿಕ ನ್ಯಾಯದ ಹೋರಾಟವನ್ನು ನೆನಪುಮಾಡಿಕೊಟ್ಟ ಹಾಗಾಗುತ್ತಿತ್ತು.
ಜಾತಿ ಮೂಲದ ನೋವುಗಳನ್ನು ಅನುಭವಿಸದೆ ಇದ್ದ ಮೇಲ್ಜಾತಿಯವರಿಗೆ ಈ ಜಾತಿ ಸೂಕ್ಷ್ಮಗಳು ಸಹಜವಾಗಿ ಅರ್ಥವಾಗುವುದಿಲ್ಲ, ಅವರು ಪ್ರಜ್ಞಾಪೂರ್ವಕವಾಗಿ ಅರಿತುಕೊಳ್ಳಬೇಕಾಗುತ್ತದೆ. ಆದರೆ ದಲಿತರಿಗೆ ತಮ್ಮಬದುಕು ಈ ಜಾತಿ ಸೂಕ್ಷ್ಮವನ್ನು ಹುಟ್ಟಿನಿಂದಲೇ ಕಲಿಸಿಬಿಡುತ್ತದೆ. ನಟ ಸೂರ್ಯನ ನಟನೆಯನ್ನು ಮಾತ್ರವಲ್ಲ ಅವರ ಇತ್ತೀಚಿನ ಸಾಮಾಜಿಕ-ರಾಜಕೀಯ ನಿಲುವುಗಳನ್ನು ಗಮನಕ್ಕೆ ತೆಗೆದುಕೊಂಡರೆ ಉದ್ದೇಶಪೂರ್ವಕವಾಗಿ ಮೇಲ್ಜಾತಿಯ ವಿಮೋಚನಕಾರನ ಪಾತ್ರವನ್ನು ಆಯ್ದುಕೊಂಡಿರಲಾರರು ಎಂದು ಅನಿಸುತ್ತದೆ. ಅಷ್ಟಕ್ಕೆ ಅವರನ್ನು ಕ್ಷಮಿಸಿಬಿಡಬಹುದು.

ಆದರೆ ದಲಿತರ ವಿಮೋಚನಕಾರರ ಪ್ರಶ್ನೆಯನ್ನು ಸ್ವಲ್ಪ ವಿವರವಾಗಿ ಚರ್ಚಿಸುವ ಅಗತ್ಯ ಇದೆ. ನಮ್ಮ ಶ್ರೇಣಿಕೃತ ಜಾತಿ ವ್ಯವಸ್ಥೆ ಹೇಗಿದೆಯೆಂದರೆ ಇಲ್ಲಿ ಜಾತಿ ತಾರತಮ್ಯಗಳು ಕೇವಲ ಮೇಲ್ಜಾತಿ-ಕೆಳಜಾತಿ ನಡುವೆ ಮಾತ್ರ ಅಲ್ಲ, ಕೆಳಜಾತಿಗಳ ಒಳಗಡೆಯೂ ಇರುತ್ತವೆ .
ಉದಾಹರಣೆಗೆ ಕರ್ನಾಟಕದಲ್ಲಿನ ಮೀಸಲಾತಿ ಪ್ರವರ್ಗಗಳಲ್ಲಿ ಒಂದನೇ ಪ್ರವರ್ಗದಲ್ಲಿ 95 ಹಿಂದುಳಿದ ಜಾತಿಗಳಿವೆ, ಇವುಗಳಲ್ಲಿ ಬೆಸ್ತ,ಗೊಲ್ಲ, ಉಪ್ಪಾರ ಜಾತಿಗಳನ್ನು ಹೊರತುಪಡಿಸಿದರೆ ಉಳಿದ ಜಾತಿಗಳ ಬಗ್ಗೆ ನಮಗೆ ತಿಳಿದಿರುವುದೇ ಕಡಿಮೆ. ಉದಾಹರನೆಗೆ ಪಿಂಜಾರ, ಬೋಯಿ, ತಿಲಾರಿ ಇತ್ಯಾದಿ.
2 ಎ ಪ್ರವರ್ಗದಲ್ಲಿ 102 ಹಿಂದುಳಿದ ಜಾತಿಗಳಿವೆ. ಇವುಗಳಲ್ಲಿ ಹೆಚ್ಚು ಪ್ರಬಲವಾಗಿರುವ ಕುರುಬ,ಈಡಿಗ, ವಿಶ್ವಕರ್ಮ, ಜಾತಿಗಳು ಮತ್ತು ಇವುಗಳಿಗಿಂತ ಸ್ವಲ್ಪ ಕಡಿಮೆ ಪ್ರಬಲವಾಗಿರುವ ಕುಂಬಾರ, ಗಾಣಿಗ,ದೇವಾಂಗ ಜಾತಿಗಳಿವೆ. ಈ ಐದಾರು ಜಾತಿಗಳನ್ನು ಹೊರತುಪಡಿಸಿದರೆ ಉಳಿದ 96 ಜಾತಿಗಳ ಹೆಸರನ್ನು ಎಷ್ಟು ಮಂದಿ ಕೇಳಿ ಬಲ್ಲರು? ಉದಾಹರಣೆಗೆ ಅಗೋರಿ, ಪಿಂಗ್ಲೆ, ಗೋಸಾವಿ ಇತ್ಯಾದಿ. ಯಾವ ಹಿಂದುಳಿದ ಜಾತಿಯ ನಾಯಕರು ಈ ಹಿಂದುಳಿದ ಜಾತಿಗಳ ಬಗ್ಗೆ ಮಾತನಾಡಿದ್ದಾರೆ?

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಹೊಲೆಯ,ಮಾದಿಗ, ಲಂಬಾಣಿ, ಬೋವಿ, ಕೊರಚರನ್ನು ಹೊರತುಪಡಿಸಿ ಉಳಿದ ಜಾತಿಗಳ ಹೆಸರು ಎಲ್ಲಿ ಚರ್ಚೆಗೆ ಬಂದಿವೆ? ಯಾವ ದಲಿತ ಸಂಘಟನೆಗಳು 96 ಜಾತಿಗಳ ಬಗ್ಗೆ ದನಿ ಎತ್ತಿದ್ದಾರೆ? ಜೈ ಭೀಮ್ ಚಿತ್ರದ ಇರುಳರು, ಇರುಳಿಗರು ನಮ್ಮಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದಾರೆ. ದಕ್ಷಿಣ ಕನ್ನಡದ ಕೊರಗರು ಇದೇ ಪಟ್ಟಿಯಲ್ಲಿದ್ದಾರೆ.
ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಜಾತಿಗಳಿವೆ. ಇವರಲ್ಲಿ ವಾಲ್ಮೀಕಿ ಜಾತಿಯನ್ನು ಹೊರತು ಪಡಿಸಿ ಉಳಿದ 49 ಜಾತಿಗಳ ಹೆಸರು ಎಷ್ಟು ಮಂದಿಗೆ ಗೊತ್ತು. ಉದಾಹರಣೆಗೆ ದಕ್ಕಲಿಗರು, ಚನ್ನದಾಸರು,. ಇವರ ಪೈಕಿ ಯಾರಾದರೂ ಗ್ರಾಮಪಂಚಾಯತ್ ಸದಸ್ಯರಾದರೂ ಆಗಿದ್ದಾರಾ?
ನಾನು ಉಲ್ಲೇಖಿಸಿರುವ ನಾಲ್ಕು ಜಾತಿ ವರ್ಗಗಳಲ್ಲಿನ ಕೆನೆಪದರದಲ್ಲಿರುವ ನಾಲ್ಕೈದು ಜಾತಿಗಳು ರಾಜಕೀಯ ಪ್ರಾತಿನಿಧ್ಯವನ್ನು ಪಡೆದಿವೆ, ತಮ್ಮದೇ ಪ್ರವರ್ಗದಲ್ಲಿರುವ ಇತರ ಜಾತಿಗಳಿಗೆ ಹೋಲಿಸಿದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ. ತಕ್ಕಮಟ್ಟಿಗೆ ಸಬಲೀಕರಣಗೊಂಡ ಈ ಜಾತಿಗಳು ತಮ್ಮ ಸೋದರ ಜಾತಿಗಳ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿವೆ? ನೇರವಾಗಿ ಹೇಳಬೇಕೆಂದರೆ ಪ್ರತಿ ವರ್ಗದಲ್ಲಿರುವ ಈ ನಾಲ್ಕೈದು ಜಾತಿಗಳು ತಮ್ಮ ಸಹಜಾತಿಬಂಧುಗಳ ಬಗ್ಗೆ ಅದೇ ‘ಬ್ರಾಹ್ಮಣಿಕೆ’ಯನ್ನು ತೋರುತ್ತಿವೆ ಎನ್ನುವುದನ್ನು ನಿರಾರಕರಿಸಲಾದೀತೇ?
ಜೈ ಭೀಮ್ ಚಿತ್ರ ಪ್ರಚೋದಿಸಿರುವ ಚರ್ಚೆ ಇಂತಹದ್ದೊಂದು ಆತ್ಮಾವಲೋಕನಕ್ಕೆ ನಮ್ಮೆಲ್ಲರನ್ನು ಈಡುಮಾಡಬೇಕು.

Please follow and like us: