ಕೊನೆಯ ಹಿಡಿ ಮಣ್ಣು ಹಾಕುವವರೆಗೂ ನೋಡಿದೆ-ಬಿ.ಎಂ.ಹನೀಫ್

ಕೊನೆಯ ಹಿಡಿ ಮಣ್ಣು ಹಾಕುವವರೆಗೂ ನೋಡಿದೆ. ಪುನೀತ್ ಇನ್ನಿಲ್ಲ ಎನ್ನುವುದನ್ನು ಪೂರ್ತಿಯಾಗಿ ಅರಗಿಸಿಕೊಳ್ಳಲು ಅದು ಅಗತ್ಯವೂ ಇತ್ತು. ಕಣ್ಣೀರು ಒರೆಸಿಕೊಂಡೆ.

ಅವನೇನೂ ನನಗೆ ಸಂಬಂಧಿಯಲ್ಲ. ಕಣ್ಣೀರು ಬಂದದ್ದು ಆಯಾಚಿತವಾಗಿ. ಅದಕ್ಕೆ ಟಿವಿ ಯಲ್ಲಿ ಎರಡು ದಿನಗಳಿಂದ ಬರುತ್ತಿರುವ ಕಣ್ಣೀರುಕ್ಕಿಸುವ ದೃಶ್ಯಗಳಾಗಲೀ, ನಿರೂಪಣೆಯಾಗಲೀ ಕಾರಣವಲ್ಲ. ಅದಕ್ಕೂ ಮಿಗಿಲಾಗಿ ಆತನ ಬಗೆಗೆ ಇದ್ದ ಒಂದು ಅಪ್ರಜ್ಞಾಪೂರ್ವಕ ಪ್ರೀತಿ ಕಾರಣ ಅನ್ಸುತ್ತೆ.

ಪ್ರಜಾವಾಣಿ ಯಲ್ಲಿ ನಾನು ಸಿನಿಮಾ ರೌಂಡ್ ಶುರು ಮಾಡಿದಾಗ, ಡಾ.ರಾಜ್ ತಮ್ಮ ಅಭಿನಯ ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದರು. ಅವರ ಶಬ್ದವೇಧಿ ಚಿತ್ರದ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ ಎರಡನ್ನೂ ನೋಡಿದ್ದೇನೆ. (ಸಾಮಾನ್ಯವಾಗಿ ಸ್ಟುಡಿಯೊ ಒಳಗಡೆ ರಾಜ್ ಅಭಿನಯಿಸುವಾಗ ಪತ್ರಕರ್ತರಿಗೆ ಪ್ರವೇಶ ಇರುತ್ತಿರಲಿಲ್ಲ.) ಕಂಠೀರವದಲ್ಲಿ ಮತ್ತು ಇತರೆಡೆ ಅವರ ಜೊತೆ ಹಲವು ಸಲ ಮಾತನಾಡಿದ್ದೇನೆ. ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಿದ್ದೇನೆ.

ನನ್ನ ವೃತ್ತಿಗೆ ಅನಿವಾರ್ಯವೇ ಆಗಿದ್ದರಿಂದ ಅಪ್ಪುವಿನ ಬಹುತೇಕ ಎಲ್ಲ ಸಿನಿಮಾಗಳನ್ನೂ ನಾನು ನೋಡಿದ್ದೇನೆ. ‘ವಂಶಿ’ಯಲ್ಲಿ ವಿಪರೀತ ಹಿಂಸಾದೃಶ್ಯಗಳನ್ನು ಬಿಟ್ಟರೆ ಉಳಿದೆಲ್ಲ ಸಿನಿಮಾಗಳು ನನ್ನ ಪ್ರಕಾರ ಸದಭಿರುಚಿಯ ಸಿನಿಮಾಗಳೇ. ನಾನು ತುಂಬ ಇಷ್ಟ ಪಟ್ಟ ಸಿನಿಮಾ ‘ಪರಮಾತ್ಮ’. ತನ್ನ ವಯಸ್ಸಿನ ಮತ್ತು ರೇಂಜ್ ನ ಇತರ ಹೀರೊಗಳಿಗಿಂತ ಭಿನ್ನವಾಗಿ ಮಕ್ಕಳಿರುವ ಹೀರೊ ಪಾತ್ರದಲ್ಲಿ ನಟಿಸಿದ್ದ ಅಪ್ಪು. ಕಟ್ಟಾ ಅಭಿಮಾನಿಗಳಿಗೆ ಅದು ಅಷ್ಟು ಇಷ್ಟವಾಗಿರಲಿಲ್ಲ ಎನ್ನುವುದು ವಾಸ್ತವ. ಆದರೆ ಅಪ್ಪುವಿನ ಅಭಿನಯ ಆ ಚಿತ್ರದಲ್ಲಿ ಮೇಲ್ಮಟ್ಟದಲ್ಲಿತ್ತು. ಅಷ್ಟೇ ಸಂಯಮದ ಮತ್ತು ಪ್ರಬುದ್ಧ ಅಭಿನಯ ನೀಡಿದ ಇನ್ನೊಂದು ಚಿತ್ರ “ಮಿಲನ”.

‘ಪ್ರಥ್ವಿ’ ಮಗುದೊಂದು ಅತ್ಯುತ್ತಮ ಸಿನಿಮಾ. ಬಳ್ಳಾರಿಯ ಗಣಿ ದೊರೆಗಳ ಅಟ್ಟಹಾಸವನ್ನು ಜಿಲ್ಲಾಧಿಕಾರಿಯೊಬ್ಬ ಮಟ್ಟ ಹಾಕುವ ಚಿತ್ರಕಥೆ. ನೇರವಾಗಿ ಕರ್ನಾಟಕದ ಗಣಿ ರಾಜಕೀಯಕ್ಕೆ ಹಿಡಿದ ಕೈಗನ್ನಡಿ. ಜೇಕಬ್ ವರ್ಗಿಸ್ ಅವರ ಧೈರ್ಯಶಾಲಿ ದಕ್ಷ ನಿರ್ದೇಶನ.

ಈ ಚಿತ್ರ ಬಂದ ವರ್ಷ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನಿದ್ದೆ. ಭಾರತಿ ವಿಷ್ಣುವರ್ಧನ್ ಅಧ್ಯಕ್ಷತೆ. ‘ಪ್ರಥ್ವಿ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡೋಣ ಎನ್ನುವುದು ನನ್ನ ಸಲಹೆಯಾಗಿತ್ತು. ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಬೂದಾಳ್ ಕೃಷ್ಣಮೂರ್ತಿ ಅದಕ್ಕೆ ಗಟ್ಟಿ ಬೆಂಬಲ ನೀಡಿದರು. ಆದರೆ ಉಳಿದವರು ಒಪ್ಪಲಿಲ್ಲ. ಒಬ್ಬ ಕ್ಯಾಮೆರಾಮನ್, ಇನ್ನೊಬ್ಬ ಹಿರಿಯ ಪತ್ರಕರ್ತ, ಮತ್ತೊಬ್ಬ ಟಿವಿ ನಿರ್ಮಾಪಕ ಒಟ್ಟು ಸೇರಿ ಉಪೇಂದ್ರ ಅವರ ಕಳಪೆ ಎನ್ನಬಹುದಾದ “ಸೂಪರ್” ಗೇ ಪ್ರಶಸ್ತಿ ನೀಡಬೇಕೆಂದು ಹಠ ಹಿಡಿದರು. ಭಾರತಿಯವರು ಸುಮ್ಮನಿದ್ದರು. ಇನ್ನಿಬ್ಬರು ಅದಕ್ಕೇ ಕೈ ಎತ್ತಿದರು. ಬಹುಮತ ಕೆಲಸ ಮಾಡಿತು. ( ಆ ಬಳಿಕ ಆಯ್ಕೆ ಕೋರ್ಟು ಮೆಟ್ಟಿಲು ಹತ್ತಿ ಹೊಸ ಸಮಿತಿ ಬಂದು ‘ಪ್ರಥ್ವಿ’ಗೇ ಪ್ರಶಸ್ತಿ ಬಂತು ಅನ್ನೋದು ಬೇರೆ ವಿಷಯ.)

ಪುನೀತ್ ನನ್ನು ಹಲವು ಸಲ ಪತ್ರಿಕಾಗೋಷ್ಠಿಯಲ್ಲಿ, ಮುಹೂರ್ತದಲ್ಲಿ, ಸಿನಿಮಾ ಪಾರ್ಟಿಗಳಲ್ಲಿ ಭೇಟಿಯಾಗಿದ್ದೇನೆ. ಎರಡು ಸಲ ಆತನ ಮನೆಯಲ್ಲೇ ಪೂರ್ಣ ಪ್ರಮಾಣದ ಸಂದರ್ಶನ ಮಾಡಿದ್ದೇನೆ. ಒಂದು- ಒಂದೂವರೆ ಗಂಟೆಯ ಈ one to one ಸಂದರ್ಶನದಲ್ಲಿ ಪುನೀತ್ ಸಿನಿಮಾ ವ್ಯಾಮೋಹ ಎದ್ದು ಕಾಣಿಸುತ್ತಿತ್ತು. ಇದು ಕೇವಲ ಹೀರೊ ಓರಿಯೆಂಟೆಡ್ ಮೋಹವಲ್ಲ. ಸಿನಿಮಾ ಕುರಿತ ತಂತ್ರಜ್ಞಾನ, ಜಗತ್ತಿನ ಎಲ್ಲ ಭಾಷೆಗಳಲ್ಲಿ ಬರುತ್ತಿದ್ದ ವೈವಿಧ್ಯಮಯ ಸಿನಿಮಾ, ಅವುಗಳ ಕಥೆ, ನಿರ್ದೇಶನಕರ ಹೊಳಹು, ಮಾರುಕಟ್ಟೆಯ ಏರಿಳಿತ ಎಲ್ಲದರ ಬಗ್ಗೆಯೂ ಆತನಿಗೆ ಅಪಾರ ತಿಳುವಳಿಕೆ ಇತ್ತು. ಅದು ಸಂದರ್ಶನದಲ್ಲಿ ಪ್ರತಿಫಲಿಸುತ್ತಿತ್ತು. ಗೆಳೆಯರ ಜೊತೆ ಪ್ರವಾಸ ಹೋಗುವುದು ಬಿಟ್ಟರೆ ಬಹುತೇಕ ಸಿನಿಮಾವೇ ಆತನ ಬದುಕನ್ನು ಆವರಿಸಿಕೊಂಡಿತ್ತು.

ಸಂದರ್ಶನದ ವೇಳೆ ಆತ ಸಹಜವಾಗಿರುತ್ತಿದ್ದ. ಭಾಷಾ ವೈಭವೀಕರಣವಾಗಲೀ, ಸುಳ್ಳೇ pose ಗಳಾಗಲೀ ಇರುತ್ತಿರಲಿಲ್ಲ. ತಾನು ಗ್ರಹಿಸಿದ್ದನ್ನು ಸರಳವಾಗಿ ವಿವರಿಸುತ್ತಿದ್ದ. ಒಮ್ಮೆ ಜಿಮ್ ಮುಗಿಸಿ ನೇರ ಬಂದು ಸಂದರ್ಶನಕ್ಕೆ ಕೂತರೆ, ಇನ್ನೊಮ್ಮೆ ಜಿಮ್ ನಿಂದ ಬಂದು “ಹತ್ತು ನಿಮಿಷ, ಸ್ನಾನ ಮುಗಿಸಿ ಬರ್ತೀನಿ, ಟೀ ಕುಡೀತಿರಿ’ ಎಂದು ಟೀ ಕೊಟ್ಟು ಒಳಹೋಗಿದ್ದ. ಅವತ್ತು ಆತ ಹೊರ ಬರುವವರೆಗೆ ಪಾರ್ವತಮ್ಮ ಮಾತಿಗೆ ಕುಳಿತಿದ್ದರು.

ನೂರಾರು ಹೀರೊ, ಹೀರೊಯಿನ್ ಗಳ ಸಂದರ್ಶನ ಮಾಡಿದ್ದೇನೆ. ಅದ್ಯಾವುದರ ಮುದ್ರಿತ ಪ್ರತಿಗಳನ್ನೂ ನಾನು ಎತ್ತಿಟ್ಟುಕೊಂಡಿಲ್ಲ. (ಇತ್ತೀಚಿನದ್ದಾದರೆ ನನ್ನ ಕಂಪ್ಯೂಟರ್ ನಲ್ಲಿ ಸಿಗುತ್ತಿದೆ). ಆ ಸಂದರ್ಶನಗಳ ವೇಳೆ ಮಾತನಾಡಿದ್ದು ಈಗ ನೆನಪಿಲ್ಲ. ಆದರೆ ಒಂದು ಮಾತು ಮಾತ್ರ ನೆನಪಿದೆ- “ಒಮ್ಮೆ ಚಿತ್ರಕತೆಗೆ ಒಪ್ಪಿಗೆ ಸೂಚಿಸಿದ ಮೇಲೆ ನಾನು ನಿರ್ದೇಶಕರ ಕೈಗೊಂಬೆ. ಅವರು ಹೇಳಿದ್ದನ್ನು ಮಾಡುತ್ತೇನೆ.” ಈ ಮಾತನ್ನು ವೃತ್ತಿಜೀವನದಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದಾತ ಅಪ್ಪು.

ಸಾವು ಯಾರನ್ನೂ ಕೇಳಿ, ನೋಡಿ ಬರುವುದಿಲ್ಲ. ಯಾರಿಗೂ ಯಾವ ವಿನಾಯ್ತಿಯನ್ನೂ ಕೊಡುವುದಿಲ್ಲ. ಎರಡು ದಿನಗಳಿಂದ ಕೆಲವರು ಟಿವಿ ಮುಂದೆ ಕುಳಿತು, “ಹಾಗಾಗಿದ್ದರೆ, ಹೀಗಾಗಿದ್ದರೆ ಬದುಕುತ್ತಿದ್ದ” ಎಂದೆಲ್ಲ ಕಾಮೆಂಟು ಮಾಡುವುದು ಅವರ ದಡ್ಡತನದಂತೆ ಕಾಣುತ್ತಿದೆ. “ಹೋಗಿ ಬಾ”, ” ಮತ್ತೆ ಹುಟ್ಟಿ ಬಾ” ಎನ್ನುವ ಸ್ಲೋಗನ್ ಗಳೆಲ್ಲವೂ ಅವರವರ ದುಃಖ ಶಮನಕ್ಕೆ ಇರುವುದು ಅಷ್ಟೇ.

ಆದರೆ, ಸಾವಿಗೆ ಮುನ್ನ ನಡೆದ, ವೈದ್ಯರ/ ರೋಗಿಯ ನಿರ್ಲಕ್ಷ್ಯವೋ, time senceನ ಕೊರತೆಯೋ ಎನ್ನಬಹುದಾದ ಕೆಲವು ಸಂಗತಿಗಳನ್ನು ಬರೆಯಲಾಗಲಿಲ್ಲ ಎನ್ನುವುದು ನಿಜ. ಕಾನೂನು ಸುವ್ಯವಸ್ಥೆ ಕಾಪಾಡುವ ಆತಂಕ ಇರುವ ಹಿನ್ನೆಲೆಯಲ್ಲಿ ಆಡಳಿತ ತಳೆಯುವ ಕೆಲವು ನಿರ್ಣಯಗಳ ಬಗ್ಗೆ ಪತ್ರಕರ್ತ ಮೌನವಾಗಿರುವುದು ಕೆಲವೊಮ್ಮೆ ಅನಿವಾರ್ಯವೂ ಹೌದು.

ಸಿಕ್ಕಿದಾಗ ಕೈ ಬೆರಳೆತ್ತಿ ಹಲೋ ಸರ್ ಎನ್ನುತ್ತಿದ್ದ, ಅ ಸ್ನೇಹಮಯ ಮುಗುಳ್ನಗೆ ಮಾತ್ರ ಇನ್ನು ಸದಾ ನೆನಪಾಗಿರುತ್ತದೆ. ಸದಾಶಿವನಗರದ ಆ ದೊಡ್ಡಮನೆಯ ಮುಂದೆ ಹಾದು ಹೋಗುವಾಗ, ಇನ್ನು ಅಪ್ಪನ ಜೊತೆಗೆ ಮಗನ ಮುಖವೂ ನೆನಪಿಗೆ ಬರುತ್ತದೆ. 45 ಸಾಯುವ ವಯಸ್ಸಲ್ಲ ಎಂದು ನಾನೂ ಹೇಳಿದ್ದೆ. ಹಾಗೆಂದು “ಸಾವಿಗೆ ವಯಸ್ಸು ಇದೆಯೇ” ಎಂದು ಕೇಳಿದರೆ ನನ್ನದೂ ನಿರುತ್ತರವೇ.

Please follow and like us: