ಯುವ ನೀತಿ ಸಮಿತಿಯೂ ಕೇಸರಿಕರಣ ಆಗದಿರಲಿ ಸಚಿವ ನಾರಾಯಣಸ್ವಾಮಿಗೆ ಮನವಿ

ಡಾ. ಎಸ್. ಬಾಲಾಜಿ ಅವರನ್ನು ಸಮಿತಿಯಲ್ಲಿ ಸೇರಿಸಲು ಒತ್ತಾಯ

ಕೊಪ್ಪಳ, ಅ. ೨೯: ಕೊಪ್ಪಳ ಜಿಲ್ಲಾ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಸೇರಿ ತಮಗೆ ಈ ಮನವಿ ಅರ್ಪಿಸುತ್ತಿದ್ದು, ಇದು ಸಮಗ್ರ ಯುವಜನರ ನಿಜವಾದ ಮನವಿ, ಒಳಾಂತರದ ಸಾತ್ವಿಕ ಕೋರಿಕೆ. ಇದಕ್ಕೆ ಯಾವುದೇ ಬಣ್ಣ ಹಚ್ಚದೇ ಯುವ ನೀತಿ ಕೇಸರೀಕರಣಗೊಳ್ಳದಿರಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದೆ.



ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ೨೦೨೧ರ ಯುವ ನೀತಿ ರೂಪಿಸಲು ಸಮಿತಿಯೊಂದು ಈಚೆಗೆ ರಚನೆಗೊಂಡಿದೆ. ಆದರೆ ದುರಾದೃಷ್ಟವಶಾತ್ ಆ ಸಮಿತಿಯು ಸಂಪೂರ್ಣವಾಗಿ ಏಕಚಲನ ಹೊಂದಿದೆ. ಅಲ್ಲಿ ಕೇವಲ ಕೇಸರಿ ಪಡೆ ಇದೆ. ಯುವ ನೀತಿ ಅಂದರೆ ತಮ್ಮ ಅರ್ಥದಲ್ಲಿ ಏನು ಏಂದಾದರೂ ಸ್ಪಷ್ಟಪಡಿಸಿ. ನಿಮ್ಮ ಕಾಲದಲ್ಲಿ ಆಗುವ ನೀತಿ ಶಾಶ್ವತವಾಗಿ ಇರಬೇಕು ಎಂದಾದರೆ ದಯಮಾಡಿ ಸಮಿತಿಯ ಸದಸ್ಯರನ್ನು ಬದಲಿಸಿ ಎಂದು ಮನವಿಯಲ್ಲಿ ಕೋರಲಾಗಿದೆ.
ಯುವಕ, ಯುವತಿ ಮತ್ತು ಯುವ ಅಂದರೆ ಏನು ಎಂದು ಸರಿಯಾಗಿ ತಿಳಿಯದವರೂ ಸಮಿತಿಯಲ್ಲಿ ಇದ್ದಾರೆ, ಎಲ್ಲಾ ಗೊತ್ತಿದ್ದು ನಾಟಕ ಮಾಡುವ ಕೆಲವರಿದ್ದಾರೆ. ಇವರು ಯಾವುದೇ ಕಾರಣಕ್ಕೂ ಯುವಜನರಿಗೆ ನ್ಯಾಯ ಕೊಡಲು ಸಾಧ್ಯವೇ ಆಗದ ಸಮಿತಿ ಇದಾಗಿದೆ.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಎಂಬ ಸಂಸ್ಥೆ ೨೫ ವರ್ಷದಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ೩೧ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಕೆಲಸ ಮಾಡುತ್ತಿದೆ. ಯುವ ಸಬಲೀಕರಣ ಇಲಾಖೆಯ ನಿಷ್ಕಾಳಜಿಯಿಂದ ಮತ್ತು ಅನೇಕ ಕಾರ್ಯಕ್ರಮ ನಿಲ್ಲಿಸಿದ್ದರಿಂದ ಹಲವು ಕಡೆಗೆ ಸ್ವಲ್ಪ ಯುವ ಕಾರ್ಯಗಳು ಸ್ಥಗಿತಗೊಂಡಿವೆ. ಈ ಸಂಘಟನೆ ಪಕ್ಷಾತೀತ ಮತ್ತು ಜಾತ್ಯಾತೀತ ಅತ್ಯಂತ ಸ್ಪಷ್ಟ. ಅನುಮಾನವಿದ್ದರೆ ರಾಜ್ಯ ಸರಕಾರದ ಪೊಲೀಸ್ ಇಂಟೆಲಿಜೆನ್ಸಿ ಮೂಲಕ ಕಳೆದ ೨೦ ವರ್ಷದ ಮಾಹಿತಿ ತರಿಸಿಕೊಂಡು ಪರಿಶೀಲನೆ ಮಾಡಬಹುದು.



ಇನ್ನು ಡಾ. ಎಸ್. ಬಾಲಾಜಿ ಅವರು ಕರ್ನಾಟಕ ಕಂಡ ಅಪ್ಪಟ ಯುವ ಶಕ್ತಿ ಮತ್ತು ಜನಪದ ಶಕ್ತಿಯ ಆಶಾಕಿರಣ. ಅವರು ತಿರುಗದ ತಾಲೂಕಗಳಿಲ್ಲ, ನೋಡದ ಮೇಳಗಳಿಲ್ಲ, ಕಳೆದ ೨೫ ವರ್ಷದಲ್ಲಿ ಅವರು ಯಾವುದೇ ಒಬ್ಬ ಸಚಿವರು, ಮುಖ್ಯಮಂತ್ರಿಗಳೂ ಹೋಗದಷ್ಟು ಹಾಡಿ, ಕೇರಿ, ಗ್ರಾಮ, ಪಟ್ಟಣ ಮತ್ತು ನಗರಗಳಿಗೆ, ಗುಡ್ಡಗಾಡುಗಳಿಗೆ ತಿರುಗಿ ಸಂಘಟನೆ ಮಾಡಿದ್ದಾರೆ. ಯುವಜನರಿಗೆ ಚೈತನ್ಯ ತುಂಬಿದ್ದಾರೆ, ಜನಪದ ಕಲೆಗಳ ರಕ್ಷಣೆಗೆ ಅವಿರತ ಶ್ರಮಿಸಿದ್ದಾರೆ. ಯುವ ಸಂಘಗಳ ಒಕ್ಕೂಟ ಹಾಗೂ ಕನ್ನಡ ಜಾನಪದ ಪರಿಷತ್ ಮೂಲಕ ಹತ್ತಾರು ಸಾವಿರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರು ನೇರವಾಗಿ ಯುವಜನರಿಗೆ ಏನು ಬೇಕು, ಅದು ಹೇಗೆ ಇರಬೇಕು ಎಂಬ ಪರಿಜ್ಞಾನ ಹೊಂದಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ ಮೂಲಕವೂ ಕೆಲಸ ಮಾಡಿದ ಅನುಭವ ಅವರಿಗಿದೆ. ಮೇಲಾಗಿ ಅವರು ಪಕ್ಷ, ಧರ್ಮ ಮತ್ತು ಜಾತಿ ಸೋಂಕಿಲ್ಲದ ಯುವ ನೀತಿ ರೂಪಿಸಲು ಅತ್ಯಂತ ಯೋಗ್ಯ ಮತ್ತು ಸೂಕ್ತ ವ್ಯಕ್ತಿಯಾಗಿದ್ದು, ರಾಜ್ಯದ ನಿಜವಾದ ಯುವ ಸುಧಾರಕ, ಯುವ ಸಮಾಜ ಸೇವಕ, ಯುವ ಸಂಘಗಳ ಪರವಾಗಿ ಇವರನ್ನು ಯುವ ನೀತಿ ರೂಪಣಾ ಸಮಿತಿಗೆ ಸೇರಿಸಬೇಕು ಎಂದು ಕೋರುತ್ತೇವೆ. ಆಗ್ರಹಿಸುತ್ತೇವೆ. ಅದನ್ನು ಮೀರಿ ತಾವು ಸಮಿತಿ ಬದಲಿಸದೇ ಯುವ ನೀತಿ ಮಾಡಬಹುದು. ಆದರೆ ಅದು ಬಹಳ ವರ್ಷ ಇರಲಾರದು, ಇರುವದಕ್ಕೆ ನಾವು ಬಿಡುವುದೂ ಇಲ್ಲ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಜಿ. ಗೊಂಡಬಾಳ, ಅಕ್ಬರ್ ಕಾಲಿಮಿರ್ಚಿ, ಜ್ಯೋತಿ ಗೊಂಡಬಾಳ, ಜಗದಯ್ಯ ಸಾಲಿಮಠ ಮತ್ತು ವೆಂಕಟೇಶ ಈಳಗೇರ ಮನವಿ ಸಲ್ಲಿಸಿದ್ದಾರೆ. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸಹ ಈ ಸಮಯದಲ್ಲಿ ಇದ್ದು, ಸಚಿವರಿಗೆ ಒತ್ತಾಯ ಮಾಡಿ, ಪರಿಶೀಲನೆ ಮಾಡಿ ಸರಿ ಮಾಡಲು ವಿನಂತಿಸಿದರು.

Please follow and like us: