ಕರುನಾಡ ಕಂದ ದೊಡ್ಮನೆ ಹುಡುಗನಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಮಾಜಮುಖಿ ಚಿಂತನೆಯ ಯುವ ನಟನ ಅಗಲಿಕೆಗೆ ಕಂಬನಿ


ಕೊಪ್ಪಳ, ಅ. ೨೯: ನಗರದ ಸಾಹಿತ್ಯ ಭವನದಲ್ಲಿ ಕರುನಾಡನ್ನು ಅಗಲಿದ, ಅಕಾಲಿಕ ಸಾವಿಗೆ ಶರಣಾದ ಕನ್ನಡದ ಯುವರತ್ನ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಕನ್ನಡ ಜಾನಪದ ಪರಿಷತ್ ಕೊಪ್ಪಳ ಜಿಲ್ಲಾ ಘಟಕ, ಸರಕಾರಿ ಶಿಕ್ಷಕರ ಕಲಾ ಬಳಗ, ಜಿಲ್ಲಾ ನಾಗರೀಕರ ವೇದಿಕೆ, ಹೈದರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ ಸದಸ್ಯರು ಭಾವಪೂರ್ಣ ಶ್ರದ್ಧಾಂಜಲಿ ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಪುನೀತ್ ಅವರ ಸಮಾಜ ಮುಖಿ ಚಿಂತನೆ ನಿಜಕ್ಕೂ ಆದರ್ಶ, ಅವರು ಈಚಿನ ಹಲವು ವರ್ಷದಿಂದ ಅನೇಕ ಸಮಾಜ ಸೇವಾ ಕಾರ್ಯ ಮಾಡುತ್ತಿದ್ದುದು, ಕುಟುಂಬ ಸಮೇತರಾಗಿ ನೋಡುವಂತಹ ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನೇ ಮಾಡಿರುವದು, ಯುವಜನರಿಗೆ ಆದರ್ಶರಾಗಿ ಕಾಣುತ್ತಿದ್ದರು. ಕಾಣದಂತೆ ಮಾಡುತ್ತಿದ್ದ ಸೇವೆಗಳು ನಿಜಕ್ಕೂ ಆದರ್ಶವೇ ಸರಿ. ಅವರ ಅಗಲಿಕೆ ಕನ್ನಡ ನಾಡಿಗೆ ದೊಡ್ಡ ಹಾನಿ ಎಂದರು.ಜಿಲ್ಲಾ ನಾಗರೀಕರ ವೇದಿಕೆಯ ಮಹೇಶಬಾಬು ಸುವೆ ಮಾತನಾಡಿ, ನಾಡಿನ ಮೇರು ಕುಟುಂಬದ ಕುಡಿ ಚಿಕ್ಕ ವಯಸ್ಸಿನಲ್ಲಿ ಅಗಲಿರುವದು ಕೇವಲ ಚಿತ್ರರಂಗಕ್ಕೆ ಅಲ್ಲದೆ ಎಲ್ಲಾ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಪೆಟ್ಟು. ಅವರ ಹಠಾತ್ ನಿಧನ ಸಮಾಜಕ್ಕೆ ದೊಡ್ಡ ಹಾನಿ. ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಕ್ಕೆ ಪ್ರಶಸ್ತಿ ತಂದುಕೊಟ್ಟ ಅನೇಕ ಯಶಸ್ವಿ ಚಿತ್ರಗಳನ್ನು ಕೊಟ್ಟ ಅವರ ಸಾವು ಚಿತ್ರರಂಗಕ್ಕೆ ಆಘಾತ ನೀಡಿದೆ ಎಂದರು.
ಗ್ರಂಥಾಲಯ ಇಲಾಖೆಯ ಸಿಬ್ಬಂದಿ, ಬರಹಗಾರ ನಾಗರಾಜನಾಯಕ ಡೊಳ್ಳಿನ ಅವರು ಮಾತನಾಡಿ, ಸರಳ ವ್ಯಕ್ತಿತ್ವದ ಪುನೀತ್ ಅವರ ಸಾವು ಆಘಾತ ನೀಡಿದೆ. ಎರಡು ಮೂರು ಬಾರಿ ಅವರನ್ನು ಭೇಟಿ ಮಾಡುವ ಅವಕಾಸ ಸಿಕ್ಕಿತ್ತು ಆಗೆಲ್ಲಾ ಅವರು ಮಾತನಾಡಿಸಿದ ಪರಿ ನೋಡಿದರೆ ಆಶ್ಚರ್ಯವಾಗುತ್ತಿತ್ತು. ಕೊಪ್ಪಳಕ್ಕೆ ಒಮ್ಮೆ ಬರುವ ಗವಿಮಠ ದರ್ಶನ ಮಾಡುವ ಇಚ್ಛೆ ಹೊಂದಿದ್ದರು. ತಮಗೆ ಆರೋಗ್ಯದ ಕಡೆ ಗಮನ ಕೊಡುವಂತೆ ಅಜ್ಜನಂತೆ ಯೋಗ ಮಾಡುವಂತೆ ಸಲಹೆ ಕೊಟ್ಟಿದ್ದರು.ಶಿಕ್ಷಕ, ಕಲಾವಿದ ಪ್ರಾಣೇಶ ಪೂಜಾರ ಅವರು ಪುನೀತನಿಗೆ ನಮನ ಕವಿತೆ ವಾಚಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ಉಪನ್ಯಾಸಕ ಹನುಂತಪ್ಪ ಅಂಡಗಿ ಅವರು ಮಾತನಾಡಿ, ಸುಮಾರು ೫೦ ಚಿತ್ರಗಳನ್ನು ಮಾಡುವ ಮೂಲಕ ನಾಡಿನಾದ್ಯಂತ ಉತ್ತಮ ಹೆಸರು ಮಾಡಿದ್ದರು. ಪುನೀತನಿಲ್ಲದ ಚಿತ್ರರಂಗದ ಊಹಿಸುವದು ತುಂಬಾ ಕಷ್ಟ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಉಮೇಶಬಾಬು ಸುರ್ವೆ, ನಾಸೀರ್ ಹುಸೇನ ಕಂಠಿ ಇತರರು ಮಾತನಾಡಿದರು.
ಈ ವೇಳೆ ಒಂದು ನಿಮಿಷದ ಮೌನ ಆಚರಿಸಿ, ಪುಷ್ಪಾರ್ಚನೆ ಮಾಡಿ ಸಂತಾಪ ಸಲ್ಲಿಸಲಾಯಿತು. ಸಭೆಯಲ್ಲಿ ಸಂಗಮ್ಮ ಮಟ್ಟಿ, ಸುಮತಿ, ಸುಜಾತಾ ಹೆಚ್. ಮೇಘಾ ಇಟಗಿ, ಬೃಂದಾ ವಾಯ್. ಎಸ್., ದಯಾನಂದ ಸಾಗರ, ಮುಕುಂದ ಅಮೀನಗಡ, ಶಿವಕುಮಾರ ಹಿರೇಮಠ, ಮಂಜುನಾಥ ಪೂಜಾರ, ಫಕೀರಪ್ಪ ಗುಳದಳ್ಳಿ, ಮೌನೇಶ ಹಡಪದ, ಮಲ್ಲಿಕಾರ್ಜುನ ಹಡಪದ, ಅಲ ಹಸನ್ ಜವಳಗೇರಿ, ಧರ್ಮಪ್ಪ ಹಡಪದ, ಉಮೇಶ ಪೂಜಾರ, ಸುನೀಲ್ ದೇವರಂಗಡಿ, ರಾಮಣ್ಣ ಶಾವಿ, ಅಕ್ಷರ ಗೊಂಡಬಾಳ, ಅವಿನಾಶ ಗೌಡರ ಇತರರು ಇದ್ದರು.


Please follow and like us: