ಏಕರೋಮ ಎಳೆಯ ಕುಂಚದಲ್ಲಿ ಬಿಡಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತರ ವರ್ಣಚಿತ್ರ

ಕನ್ನಡದ ಕುವರನ ಕುಂಚ ಕಲೆಯ ಕೈಚಳಕ

ಕನ್ನಡ ಭಾಷೆ ಸಾವಿರಾರು ವರ್ಷದ ಇತಿಹಾಸ ಹೊಂದಿದೆ. ಸಂಸ್ಕೃತಿ, ಸಂಪ್ರದಾಯಗಳು ವೈಶಿಷ್ಟ್ಯ ಹೊಂದಿವೆ. ದಟ್ಟಕಾಡುಗಳು, ನದಿಗಳು, ನಿಸರ್ಗದ ಮಡಿಲು ಮನಸೊರೆಗೊಳಿಸುತ್ತವೆ. ಕನ್ನಡ ಸಾಹಿತ್ಯವು ಜಗತ್ತಿನಾದ್ಯಂತ ಪಸರಿಸಿದೆ. ಕವಿವರ್ಯರು, ರಂಗಕರ್ಮಿಗಳು, ತಾಂತ್ರಿಕ ತಜ್ಞರು, ಶಿಕ್ಷಣ ತಜ್ಞರು ಹೀಗೆ ‘ಅಂತ್ಯವಿರದ ಸಾಧಕರ ಸಾಲು’ ಕನ್ನಡದ ನಾಡು ನುಡಿಯಲ್ಲಿ ಇದೆಯೆಂದರೆ ತಪ್ಪಿಲ್ಲ. ಅನೇಕ ಸಾಧಕ ಮಹಾಷಯರು ಕನ್ನಡದ ಕಂಪನ್ನು ಹರಡುವಲ್ಲಿ ವಿಶೇಷ ರೀತಿಯ ಸಾಧನೆ ಮಾಡಿ ತಾಯ್ನೆಲಕ್ಕೆ ತಮ್ಮದೇ ಆದ ಉಡುಗೊರೆಯನ್ನು ನೀಡಿದ್ದಾರೆ.

ಕುವೆಂಪು, ಸರ್.ಎಂ ವಿಶ್ವೇಶ್ವರಯ್ಯ, ನಿತ್ಯೋತ್ಸವ ಕವಿ ನಿಸಾರ್ ಅಹಮದ್, ಬಿ.ವಿ ಕಾರಂತ್, ಗುಬ್ಬಿ ವೀರಣ್ಣ, ವರನಟ ಡಾ. ರಾಜಕುಮಾರ್, ಇನ್ಫೋಸಿಸ್ ನಾರಾಯಣ ಮೂರ್ತಿ ಹೀಗೆ ಹೇಳಿದಂತೆಲ್ಲಾ ಸಹಸ್ರಾರು ನಾಮಗಳು ಬರುತ್ತವೆ. ನಮ್ಮ ಪೂರ್ವಜರ ಕಾಲಘಟ್ಟದಲ್ಲಿ ಆಚರಣೆ, ಸಂಪ್ರದಾಯ ವಾತಾವರಣ, ಜೀವನಶೈಲಿ, ಉಡುಗೆ-ತೊಡುಗೆಗಳು ಕಂಗೊಳಿಸುತ್ತಿದ್ದವು. ಆದರೆ, ಮಿಂಚಿನ ವೇಗದಲ್ಲಿ ಓಡುತ್ತಿರುವ ಈ ಕಾಲದಲ್ಲಿ ಇಂದಿನ ಜಮಾನ ವಿದೇಶಿ ಜೀವನಶೈಲಿಗೆ ಒಗ್ಗುತ್ತಿರುವುದು ವಿಪರ್ಯಾಸ.

ಇದರ ಮಧ್ಯೆಯೇ ಇಲ್ಲೊಬ್ಬ ಕುಗ್ರಾಮದ ಯುವಕ ಎಂಟು ಜನ ಕನ್ನಡದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರವನ್ನು ಕೇವಲ 8 ಮಿ.ಮೀ ವೃತ್ತಾಕಾರದ ಅಳತೆಯಲ್ಲಿ ತನ್ನ ಕರದ ಕುಂಚದಲ್ಲಿ ಅರಳಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಅವರೇ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇ ಬಾದವಾಡಗಿಯ ವಿಜಯ ಆರ್. ಬೋಳಶೆಟ್ಟಿ. ಸದ್ಯ ಇವರು ಹಾವೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ವಿಜೇತರ ವರ್ಣಚಿತ್ರಗಳು

ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಈ ಕಲಾವಿದನ ಕೈಚಳಕದಲ್ಲಿ ಅರಳಿದ ಎಂಟು ಜನ ಕವಿವರ್ಯರ ಮುಖದ ಭಾಚಿತ್ರಗಳ ಬಗ್ಗೆ ತಿಳಿಯೋಣ. ಎಂಟು ಮಿ.ಮೀ ಅಳತೆ ಎಂದರೆ, ಅಂಗಿಯ ಗುಂಡೆ ಅಳತೆಯದ್ದು. ಇದರಲ್ಲಿ ಸೀಸದ ಕಡ್ಡಿಯಿಂದ ಒಂದು ರೂಪದ ಚಿತ್ರವನ್ನು ಬಿಡಿಸಲು ಕಷ್ಟಸಾಧ್ಯ. ಆದರೆ, ವಿಜಯ್ ಅವರು ಒಂದು ಕೂದಲು ಎಳೆಯ ಕುಂಚದಿAದ ಪೋಸ್ಟರ್ ವರ್ಣವನ್ನು ಬಳಸಿ, 20 ನಿಮಿಷದಲ್ಲಿ ಒಬ್ಬರ ಚಿತ್ರವನ್ನು ಬಿಡಿಸಿರುವುದು ಗಮನಿಸಿದರೆ ಈ ಕನ್ನಡ ಕಂದನ ಅಭಿಮಾನ ಎದ್ದು ಕಾಣುತ್ತದೆ. ಎಂಟು ಮಿ.ಮೀ ಅಳತೆಯ ಎಂಟು ಬಿಳಿಯ ಚಿತ್ರಹಾಳೆಯ ಮೇಲೆ ಬಿಡಿಸಿರುವ ರಾಷ್ಟ್ರಕವಿ ಕುವೆಂಪು, ವರಕವಿ ದ.ರಾ ಬೇಂದ್ರೆ, ವಿ.ಕೃ ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರರ ಚಿತ್ರಗಳು ಕಂಡರೆ ಕಣ್ಣುಬ್ಬೇರಿಸುವಂತೆ ಮಾಡುತ್ತವೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಕೊಟ್ಟ ಚಿತ್ರಗಳಿವು

ವಿಜಯ್ ಅವರು ಬಿಡಿಸಿದ ಈ ವರ್ಣರಂಜಿತ ಆಕರ್ಷಣೆಯ ಕಲೆಯು ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿತ್ತು. ಮುಖ್ಯವಾಗಿ ಈ ಪ್ರಶಸ್ತಿಯು ಕನ್ನಡ ನಾಡಿನ ಜ್ಞಾನಪೀಠ ಪ್ರಶಸ್ತಿ ಪಡೆದ ಅಷ್ಟ ದಂತಕಥೆಗಳ ಭಾವಚಿತ್ರಗಳು ನಾಡಿನ ಸಾಂಸ್ಕೃತಿಕ, ಸಾಂಪ್ರದಾಯಿಕ ವೈಭೋಗದ ವಾತಾವರಣವನ್ನು ಇಮ್ಮಡಿಗೊಳಿಸುವಂತವು. ಅತೀ ಸಣ್ಣ ಅಳತೆಯಲ್ಲಿ ಮಹನೀಯರ ಮುಖ ಚಿತ್ರವನ್ನು ಕುಂಚದಲ್ಲಿ ಅರಳಿಸಿ ಕನ್ನಡದ ಕೀರ್ತಿ ಪತಾಕೆಯನ್ನು ದೇಶದಲ್ಲೆಡೆ ಪಸರಿಸಿದ ಯುವಕನ್ನಡಿಗನ ಮುಡಿಗೆ 2020 ನೇ ಇಸ್ವಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಒಲಿದು ಬಂತು.

ವಿಜಯ್ ಅವರ ಸಾಧನೆಗಳು:

* ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹೊಲ್ಡರ್-2020

* ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಲ್ಡರ್ -2021

ಪ್ರಶಸ್ತಿಗಳು

* ಕುಂಚಬ್ರಹ್ಮ ಪ್ರಶಸ್ತಿ ಮನಸೇ ಆರ್ಟ್ ಗ್ರೂಪ್ ಇಳಕಲ್ಲ 2012

* ರಾಜ್ಯಮಟ್ಟದ ವಿಜಯ ಕರ್ನಾಟಕ ದಿನಪತ್ರಿಕೆ ಗಣೇಶ ಪೇಂಟಿAಗ್ ಸೆಕೆಂಡ್ ಅವಾರ್ಡ್ 2013-14

*ಟಾಪ್ ಟೆನ್ ಅವಾರ್ಡ್ ವಿಜಯ ಕರ್ನಾಟಕ ದಿನಪತ್ರಿಕೆ ಗಣೇಶ ಪೇಂಟಿAಗ್- 2017

* “ಶ್ರೀ ಕೃಷ್ಣದೇವರಾಯ” ಪ್ರಶಸ್ತಿ- 2019

* ಹುನಗುಂದ ತಾಲೂಕ “ಕನ್ನಡ ರಾಜ್ಯೋತ್ಸವ” ಪ್ರಶಸ್ತಿ –

* “ಕಲಾ ಸೇವಾ ಶಿಕ್ಷಕ ರತ್ನ” ಪ್ರಶಸ್ತಿ-2020

* “ನಮ್ಮ ಸ್ಟಾರ್” ಅವಾರ್ಡ್ -2020

*ಕರುನಾಡ “ಚಿತ್ರಕಲಾ ರತ್ನ” ರಾಜ್ಯಪ್ರಶಸ್ತಿ-2020

*ನೇಷನ್ ಬಿಲ್ಡರ್ ಅವಾರ್ಡ್ 2021 ರೋಟರಿ ಕ್ಲಬ್ ಹಾವೇರಿ. ಸೇರಿದಂತೆ ಹಲವು ಸಮ್ಮಾನಗಳು ಇವರ ಮುಡಿಗೇರಿವೆ.

ಕನ್ನಡಿಗರು ಕನ್ನಡಕ್ಕಾಗಿ ಶ್ರಮಿಸಬೇಕು

ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿಯಿಟ್ಟುಕೊಳ್ಳಬೇಕು. ಕನ್ನಡ ಭಾಷೆಯಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕನ್ನಡ ನಾಡು-ನುಡಿಗಾಗಿ ದುಡಿಯಬೇಕು. ನಮ್ಮ ಮೇಲೆ ಪರಭಾಷೆಗಳು ಎಷ್ಟೇ ಪ್ರಭಾವ ಬೀರಿದರೂ ನಾವು ನಮ್ಮ ಭಾಷೆಯನ್ನು ಎಂದಿಗೂ ಮರೆಯದೇ, ನಾವು ನಮ್ಮ ಮಾತೃಭಾಷೆ ನಮಗೆ ಅನಿವಾರ್ಯ ಎಂಬ ಭಾವನೆಯಲ್ಲಿ ಬದುಕಬೇಕು.

ನಾಡು-ನುಡಿಯ ಪ್ರೇಮ ನಮ್ಮಲ್ಲಿ ಬೇರೂರಿದ ಮರದಂತಿರಬೇಕು. ನಮ್ಮ ಕನ್ನಡ ಭಾಷೆಯನ್ನು ಬಳಸುತ್ತಾ ಬೆಳೆಸಬೇಕು. ಕನ್ನಡದ ಸಂಸ್ಕೃತಿಗಳ, ಸಾಂಪ್ರದಾಷಯಗಳು ಪರಭಾಷೆಯಿಂದ ಸೊರಗುತ್ತಿವೆ ಎನ್ನುವ ಭಾವನೆಯನ್ನು ದೂರ ಮಾಡವುದರ ಜೊತೆಗೆ ಕನ್ನಡದ ಬಗ್ಗೆ ‘ಸಾಮಾಜಿಕ ಮಾಧ್ಯಮಗಳಲ್ಲಿ’ ಬಿತ್ತರಿಸಿ ತೋರ್ಪಡಿಕೆಯ ಪ್ರೇಮವನ್ನು ಬಿಡಬೇಕು.

ಕನ್ನಡ ನೆಲದಲ್ಲಿ ವಿಜಯ್ ಅವರಂತಹ ಸಾಧಕರು ನಿಜಕ್ಕೂ ಯುವಕರಿಗೆ ಪ್ರೇರಣೆ. ಹಾಗೂ ಈ ಸಾಧಕನ ಪ್ರತಿಭೆಗೆ ಕನ್ನಡಿಗರ ಸಹಕಾರ ಮತ್ತಷ್ಟು ಉತ್ತೇಜಿಸಿ ಸಹಕಾರ ನೀಡಲಿ ಎಂಬುದೇ ನಮ್ಮ ಅಭಿಲಾಷೆ.

ಯಾವುದೇ ರಂಗ ಅಥವಾ ಕ್ಷೇತ್ರ ಇರಲಿ ಅದರಲ್ಲೂ ಸೋಲು ಎನ್ನುವುದು ಇರುವುದಿಲ್ಲ. ನಾವು ಮಾಡುವ ಕಾರ್ಯದಲ್ಲಿ ಯಶಸ್ಸು ಅಡಗಿರುತ್ತದೆ. ಅದರಲ್ಲೂ ಯುವಕರು ಸುಮ್ಮನೇ ಕೂಡಲೇಬಾರದು.
ಶ್ರಮ ಮತ್ತು ಶ್ರದ್ಧೆ ಇಲ್ಲದೇ ಏನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಚಂಚಲತೆ ಬದಿಗಿಟ್ಟು ನಾವು ಮಾಡುವ ಕಾರ್ಯ ನಿಷ್ಠೆಯಿಂದಿದ್ದರೆ ಒಂದಲ್ಲ ಒಂದು ದಿನ ಜಯ ಸಾಧಿಸುತ್ತೇವೆ. ನಮ್ಮ ಮೇಲೆ ನಮಗೆ ಮೊದಲು ನಂಬಿಕೆ ಇರಬೇಕು. ಸಾಧನೆಯ ಹಂಬಲ ಇರಬೇಕು. ಕನ್ನಡಕ್ಕಾಗಿ, ದೇಶಕ್ಕಾಗಿ ದುಡಿಯುವ ಛಲವಿರಬೇಕು.
–ವಿಜಯ್ ಬೋಳಶೆಟ್ಟಿ.

ಶ್ರೀನಾಥ ಮರಕುಂಬಿ
ಅಪ್ರೆAಟಿಸ್ ಅಭ್ಯರ್ಥಿ
ವಾರ್ತಾ ಇಲಾಖೆ, ಕೊಪ್ಪಳ
ಮೊ. 9071568915

Please follow and like us: