ದೇಶದಲ್ಲಿ ನೂರುಕೋಟಿ ಲಸಿಕೆ ನೀಡಿದ್ದು ಐತಿಹಾಸಿಕ ಸಾಧನೆ : ಹಾಲಪ್ಪ ಆಚಾರ್


ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಕಾರ್ಯಕ್ಕೆ ಸಚಿವರಿಂದ ಶ್ಲಾಘನೆ

Kannadanet Suddi ಅಕ್ಟೋಬರ್ 20 ರವರೆಗೆ ದೇಶದಲ್ಲಿ ಬರೋಬ್ಬರಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ್ದು, ಇದೊಂದು ಬಹುದೊಡ್ಡ ನಮ್ಮ ದೇಶದ ಐತಿಹಾಸಿಕ ಸಾಧನೆ ಎಂದು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ತಿಳಿಸಿದರು.
ಅವರು ಕೋವಿಡ್-19 ಲಸಿಕಾ ಅಭಿಯಾನದ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಅ.22) ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ ಇಂದು ನೂರುಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಿದ್ದು, ಇದು 130 ಕೋಟಿ ಜನ ಭಾರತೀಯರು ಅಭಿನಂದಿಸುವ ಸಂದರ್ಭವಾಗಿದೆ. ಕಳೆದ ವರ್ಷದಲ್ಲಿ (2020) ಕೋವಿಡ್ ಸಾಂಕ್ರಾಮಿಕ ವೈರಾಣುವಿನಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ, ಬೆಡ್ ಕೊರತೆಗಳಾಗಿ ಯಾರಿಗೂ ಊಹಿಸದ ಸಂದಿಗ್ಧ ಪರಿಸ್ಥಿತಿಯಲ್ಲೂ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ದೇಶದ ಜನರಿಗೆ ಮಾನಸಿಕ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡಿದೆ. ಕೋವಿಡ್ ವೈರಾಣುವಿನ ಎರಡು ಅಲೆಗಳನ್ನು ಗಟ್ಟಿಯಾಗಿ ಎದುರಿಸಿ ದೇಶದ ಪ್ರಜೆಗಳ ನಂಬಿಕೆ, ವಿಶ್ವಾಸವನ್ನು ಗಳಿಸಿದೆ ಎಂದು ಹೇಳಿದರು.
ಪ್ರಧಾನಿಯವರು ಭಾರತದ ಹಲವು ಸಂಶೋಧನಾ ಕೇಂದ್ರ, ಸಂಸ್ಥೆಗಳಿಗೆ ಖುದ್ದಾಗಿ ಭೇಟಿನೀಡಿ, ವಿಜ್ಞಾನಿಗಳು, ತಜ್ಞರು, ಸಂಶೋಧಕರಿಗೆ ಬೆನ್ನುತಟ್ಟಿ ಸಹಕಾರ ನೀಡಿದ್ದರ ಫಲವಾಗಿ ದೇಶದ ಜನರ ಜೀವ ರಕ್ಷಣೆಗೆ ಲಸಿಕೆಯನ್ನು ಕಂಡುಹಿಡಿಯಲಾಯಿತು. ಅಲ್ಲದೇ 95 ಕ್ಕೂ ಹೆಚ್ಚು ದೇಶಗಳು ಭಾರತದ ಲಸಿಕೆಯನ್ನು ಉಪಯೋಗಿಸಿಕೊಂಡು ಕೋವಿಡ್ ಬಾಧೆಯಿಂದ ಹೊರಬರುತ್ತಿವೆ. ಈ ಜೀವರಕ್ಷಣೆಯ ಕಾರ್ಯ ಅಭಿನಂದನಾರ್ಹ ಎಂದರು.
ಕೋವಿಡ್-19 ಲಸಿಕಾ ಕಾರ್ಯಕ್ರಮದ ಮೊದಲ ಹಂತವು 2021, ಜನವರಿ 16 ರಂದು ಹಾಗೂ ಎರಡನೇ ಹಂತ ಏಪ್ರಿಲ್ ನಲ್ಲಿ ಪ್ರಾರಂಭವಾಗಿದ್ದು, ದೇಶದಲ್ಲಿ ಇಲ್ಲಿಯವರೆಗೆ ಮೊದಲ ಹಂತದಲ್ಲಿ 71,08,72,214 ಮತ್ತು ಎರಡನೇ ಹಂತದಲ್ಲಿ 29,51,97,664 ಒಟ್ಟು 100,60,69,878 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ರಾಜ್ಯವು 6,21,62,503 ಫಲಾನುಭವಿಗಳಿಗೆ ಲಸಿಕೆ ನೀಡುವ ಮೂಲಕ 7ನೇ ಸ್ಥಾನದಲ್ಲಿದೆ. ಮತ್ತು ಉತ್ತಮ ಪ್ರಗತಿಯಲ್ಲಿ ಸಾಗುತ್ತಿದೆ. ಮತ್ತು ರಾಜ್ಯದಿಂದ ಜಿಲ್ಲೆಗೆ 18 ವರ್ಷ ಮೇಲ್ಪಟ್ಟ 9,84,000 ಫಲಾನುಭವಿಗಳ ಲಸಿಕಾ ಗುರಿಯನ್ನು ಹೊಂದಲಾಗಿದೆ. ಇಲ್ಲಿಯವರೆಗೂ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 7,88,205 ಲಸಿಕೆ ನೀಡುವ ಮೂಲಕ ಶೇ.80 ಹಾಗೂ ಎರಡನೇ ಹಂತದಲ್ಲಿ 3,58,494 ಲಸಿಕೆಯನ್ನು ನೀಡುವ ಮೂಲಕ ಶೇ.47 ರಷ್ಟು ಗುರಿಯನ್ನು ಸಾಧಿಸುವ ಮೂಲಕ ಒಟ್ಟು 11,46,699 ಫಲಾನುಭವಿಗಳು ಲಸಿಕೆಯನ್ನು ಪಡೆದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಶೇ.75 ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಗ್ರಾಮಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಹೋಬಳಿ ಮತ್ತು ಗ್ರಾಮವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಗ್ರಾಮಗಳನ್ನು ಹಂಚಿಕೆ ಮಾಡಲಾಗಿದೆ. ಹಾಗೆಯೇ ಇಂದು (ಅ.22) ಜಿಲ್ಲೆಯಾದ್ಯಂತ ಕೋವಿನ್-19 ಲಸಿಕಾ ಮಹಾಮೇಳವನ್ನು ಹಮ್ಮಿಕೊಂಡಿದ್ದು, 370 ಲಸಿಕಾ ಕೇಂದ್ರಗಳು ಹಾಗೂ 30 ಮೊಬೈಲ್ ತಂಡಗಳ ಮೂಲಕ ರಾಜ್ಯ ಸರ್ಕಾರದಿಂದ ಫಲಾನುಭವಿಗಳ ಲಸಿಕಾಕರಣದ ಗುರಿಯನ್ನು ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಲಸಿಕಾ ಕಾರ್ಯ ಮುಂದುವರೆದಿದ್ದು, ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್, ಬೆಡ್ ವ್ಯವಸ್ಥೆಗಳನ್ನು ಮಾಡಲಾಗಿದೆ. ನನ್ನ ಗಮನಕ್ಕೆ ಬಂದಿರುವ ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯ, ಅಂಬುಲೆನ್ಸ್ ಮತ್ತಿತರ ಸಣ್ಣಪುಟ್ಟ ಕೊರತೆಗಳನ್ನು ಸರಿಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಕೆಲಸದ ಸಮಯದ ವಿವರವುಳ್ಳ ಪಟ್ಟಿಯನ್ನು ಆಸ್ಪತ್ರೆ ಸೂಚನಾ ಫಲಕದಲ್ಲಿ ಹಾಕಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಿಮ್ಸ್ನ ಸಿಬ್ಬಂದಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸೂಚಿಸಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಡಿ.ಎಫ್.ಒ ಹರ್ಷಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತಕುಮಾರ್, ಉಪ ವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಟಿ. ಲಿಂಗರಾಜ, ಕಿಮ್ಸ್ ನಿರ್ದೇಶಕ ಡಾ.ವೈಜನಾಥ್ ಇಟಗಿ , ಜಿಲ್ಲಾ ಶಸ್ತç ಚಿಕಿತ್ಸಕ ಪ್ರಶಾಂತ ಬಾಬು, ಜಿಲ್ಲಾ ಪಂಚಾಯತ ಮುಖ್ಯ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನವೀನ್ ಸಿಂತ್ರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error