ಎರಡನೇ ಡೋಸ್ ಲಸಿಕೆ ಶೇ.100ರಷ್ಟು ಸಾಧನೆಗೆ ಸಹಕರಿಸಿ : ಸಚಿವ ಹಾಲಪ್ಪ ಆಚಾರ್ಕೋವಿಡ್-19 ಲಸಿಕೆ ಅಭಿಯಾನ ಕಾರ್ಯಕ್ರಮ
Kannadanet Suddi ಎರಡನೇ ಡೋಸ್ ಲಸಿಕೆಯನ್ನೂ ಸಮಯಕ್ಕೆ ಸರಿಯಾಗಿ ಶೇ.100 ರಷ್ಟು ಸಾಧನೆ ಮಾಡಬೇಕು. ಇದಕ್ಕೆ ಗ್ರಾಮ ಪಂಚಾಯತ್ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರೂ ಕಾರ್ಯೋನ್ಮುಕವಾಗಬೇಕು ಎಂದು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಹೇಳಿದರು.
ಅವರು ಜಿಲ್ಲೆಯ ಕುಕನೂರು ತಾಲ್ಲೂಕಿನ ಬಾನಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ (ಅ.22) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇಂದು 60 ಸಾವಿರ ಲಸಿಕೆ ನೀಡಬೇಕು ಎನ್ನುವ ಗುರಿ ಹೊಂದಲಾಗಿದ್ದು, ಈಗಾಗಲೇ ಸಾರ್ವಜನಿಕರ ಮನವೊಲಿಸಿ ಲಸಿಕೆ ಹಾಕಿಸಿದ್ದೇವೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅಭೂತಪೂರ್ವ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನೇ ಪಣಕಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ 10 ಗ್ರಾಮಗಳು ಶೇ. 100 ರಷ್ಟು ಲಸಿಕೆ ಪೂರ್ಣಗೊಂಡಿದೆ. ಎರಡನೇ ಡೋಸ್ ಲಸಿಕೆಯನ್ನು ಎಲ್ಲರೂ ಪಡೆಯುವ ಮೂಲಕ ಸಮಾಜಮುಖಿ ಕೆಲಸ ಮಾಡೋಣ ಎಂದರು.


ಆತ್ಮ ನಿರ್ಭರ ಯೋಜನೆಯ ಮೂಲಕ ನಮಗೆ ಬೇಕಾಗಿದ್ದನ್ನು ನಾವೇ ಉತ್ಪಾದಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ಸಂಶೋಧನಾ ಕೇಂದ್ರಗಳಿಗೆ ಹೋಗಿ, ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಬೆನ್ನು ತಟ್ಟುವ ಕಾರ್ಯ ಮಾಡಿದ್ದರಿಂದಲೇ ಲಸಿಕೆಯನ್ನು ಆದಷ್ಟು ಬೇಗ ಕಂಡು ಹಿಡಿಯಲು ಅನುಕೂಲವಾಯಿತು. ಹಾಗಾಗಿ ನಮ್ಮ ದೇಶದಲ್ಲಿಯೇ ಕೋವಿಡ್ ಲಸಿಕೆ ಕಂಡುಹಿಡಿದು, ಅದನ್ನು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ 95ಕ್ಕೂ ಹೆಚ್ಚು ದೇಶಗಳಿಗೆ ನಾವು ಕೋವಿಡ್ ಲಸಿಕೆ ವಿತರಿಸಿದ್ದೇವೆ ಎನ್ನುವ ಹೆಮ್ಮೆ ನಮ್ಮ ದೇಶಕ್ಕಿದೆ. ಆರಂಭದಲ್ಲಿ ಕೋವಿಡ್-19 ಕುರಿತು ಸಾಕಷ್ಟು ಗೊಂದಲಗಳಿದ್ದವು. ಬಳಿಕ ಈ ಲಸಿಕೆ ಸಂಜೀವಿನಿ ಎಂದು ಸಾರ್ವಜನಿಕರಿಗೆ ಗೊತ್ತಾಗಿದೆ. ಹಾಗಾಗಿ ಜನರು ಆಸಕ್ತಿಯಿಂದ ಸ್ವಯಂ ಪ್ರೇರಿತರಾಗಿ ಲಸಿಕೆಯನ್ನು ಪಡೆಯುತ್ತಿದ್ದಾರೆ. ನಮ್ಮ ಕ್ಷೇತ್ರ, ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಎಲ್ಲರೂ ನಿರ್ಭೀತವಾಗಿ ಜೀವಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಅವರು ಮಾತನಾಡಿ, ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಕೋವಿಡ್ ಲಸಿಕೆ ಹಾಕಿಸಿದ ದೇಶ ಎಂಬ ಹೆಮ್ಮೆ ನಮಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಕೋವಿಡ್ ಸೋಂಕು ತಗಲುವುದಿಲ್ಲ ಮತ್ತು ಸೋಂಕು ತಗಲಿದರು ಸಹ ಸಾವಿನ ಪ್ರಮಾಣ ಕಡಿಮೆ ಇರುತ್ತದೆ. ಸಾರ್ವಜನಿಕರು ಕೋವಿಡ್ ಲಸಿಕೆಯ ಕುರಿತು ನಕರಾತ್ಮಕ ಯೋಚನೆ ಮಾಡದೇ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.ಕೋವಿಡ್-19 ಲಸಿಕಾ ವಾಹನಕ್ಕೆ ಚಾಲನೆ ನೀಡಿದ ಭಾನಾಪೂರ ಗ್ರಾ.ಪಂ ಅಧ್ಯಕ್ಷೆ ಪವಿತ್ರಾ ಬಂಗೇರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರನ್ನುಮ್, ಜಿ.ಪಂ ಯೋಜನಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು, ತಹಶೀಲ್ದಾರ್ ಕಿರಣಕುಮಾರ್, ಕುಕನೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್, ಜಿಲ್ಲಾ ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ನಾಗರಾಜ, ಗ್ರಾ.ಪಂ. ಸದಸ್ಯರಾದ ನೀಲಕಂಠಯ್ಯ ಸಸಿಮಠ, ರಾಮಣ್ಣ ಕೋಮಲಾಪುರ, ಸಿದ್ಧಲಿಂಗಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಭಾನಾಪೂರ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error