‘ಬೈ ಎಲೆಕ್ಷನ್’ ‘ಬೈಯ್ಯುವ ಎಲೆಕ್ಷನ್’-ದಿನೇಶ್ ಅಮಿನ್ ಮಟ್ಟು

ನಮ್ಮ ರಾಜಕಾರಣಿಗಳ ಬೈದಾಟದ ಬಗ್ಗೆ ನಿನ್ನೆ ನ್ಯೂಸ್18 ಚಾನೆಲ್ ನಲ್ಲಿ ಚರ್ಚೆಗೆ ಹೋಗಿದ್ದೆ. ಅಪರೂಪವೆಂಬಂತೆ ದೀರ್ಘವಾಗಿ ಮಾತನಾಡುವ ಅವಕಾಶವನ್ನು ಆ್ಯಂಕರ್ ಆಗಿದ್ದ ನಮ್ಮೂರಿನ ಹುಡುಗಿ ನವಿತಾ ಜೈನ್ ಮಾಡಿಕೊಟ್ಟಿದ್ದ ಕಾರಣ ಹೆಚ್ಚು ಯೋಚಿಸುವಂತಾಯಿತು. ಅಲ್ಲಿ ಆಡಿರುವ ಮಾತುಗಳನ್ನೇ ಇನ್ನಷ್ಟು ವಿಸ್ತರಿಸಿ ಇಲ್ಲಿ ಬರೆದಿದ್ದೇನೆ.
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ‘ಬೈ ಎಲೆಕ್ಷನ್’ ‘ಬೈಯ್ಯುವ ಎಲೆಕ್ಷನ್’ ಆಗಿದೆ. ಈ ಬೈದಾಟಗಳನ್ನು ಮುಖ್ಯವಾಗಿ ಮೂರು ಗುಂಪುಗಳನ್ನಾಗಿ ಮಾಡಬಹುದು.


1. ಉದ್ದೇಶ-ದುರುದ್ದೇಶಪೂರ್ವಕವಲ್ಲದ ಮಾತಿನ ಆವೇಶದಲ್ಲಿಯೋ, ಅಭ್ಯಾಸ ಬಲದಿಂದಲೋ ಬಳಕೆಯಾಗುವ ಪದಗಳದ್ದು ಮೊದಲನೆಯ ಗುಂಪು. ಉದಾಹರಣೆಗೆ ಎಚ್.ಡಿ.ಕುಮಾರಸ್ವಾಮಿಯವರು ಬಳಸಿದ್ದ ಪುಟಗೋಸಿ ಪದ. ಇದು ದುರುದ್ದೇಶಪೂರ್ವಕವಾಗಿ ಬಳಸಿದ್ದಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ತಕ್ಷಣ ಅವರು ಅದಕ್ಕೊಂದು ವಿಷಾದ ಸೂಚಿಸಿ ಹಿಂದೆಗೆದುಕೊಂಡಿದ್ದರೆ ವಿವಾದ ಅಲ್ಲಿಗೆ ಮುಕ್ತಾಯವಾಗುತ್ತಿತ್ತು. ಆದರೆ ಅವರು ನಾನು ಹೇಳಿದ್ದು ವಿರೋಧಪಕ್ಷದ ನಾಯಕತ್ವಕ್ಕಲ್ಲ, ಸಿದ್ದರಾಮಯ್ಯನವರಿಗೆ ಎಂದು ತಮ್ಮನ್ನು ಸಮರ್ಥಿಸಿಕೊಂಡು ಇನ್ನಷ್ಟು ರಾಡಿ ಮಾಡಿಬಿಟ್ಟರು.
2. ಎರಡನೆಯ ಗುಂಪು ದುರುದ್ದೇಶಪೂರ್ವಕವಾಗಿಯೇ ಯೋಚಿಸಿ, ಪ್ರಜ್ಞಾಪೂರ್ವಕವಾಗಿ ಆಡುವ ಮಾತುಗಳದ್ದು. ಉದಾಹರಣೆಗೆ ನಳಿನ್ ಕುಮಾರ್ ಕಟೀಲ್ ಬಳಸಿದ ಡ್ರಗ್ ಪೆಡ್ಲರ್, ಡ್ರಗ್ಗಿಸ್ಟ್ ಪದಗಳು. ಇದು ದುರುದ್ದೇಶಪೂರ್ವಕವಾಗಿ ಎದುರಾಳಿಗಳ ಬಾಯಿಮುಚ್ಚಿಸಲು, ಅವರನ್ನು ಹರ್ಟ್ ಮಾಡಲು ಆಡಿದ ಮಾತುಗಳು. ಆರ್ ಎಸ್ ಎಸ್ ಬಗ್ಗೆ ನಡೆಯುತ್ತಿರುವ ಚರ್ಚೆಯ ದಿಕ್ಕನ್ನು ಬದಲಾಯಿಸಲು ಯೋಚಿಸಿ-ಯೋಜಿಸಿ ಮಾಡಿರುವ ತಂತ್ರ ಎಂದು ಆ ಪರಿವಾರದೊಳಗಿನ ಮೂಲಗಳು ಹೇಳುತ್ತಿರುವುದು ನಿಜವೆಂದು ಕಾಣುತ್ತಿದೆ.
3. ಮೂರನೆಯದು, ಟ್ವಿಟರ್,ಫೇಸ್ ಬುಕ್, ವಾಟ್ಸಪ್ ಮೊದಲಾದ ಸೋಷಿಯಲ್ ಮೀಡಿಯಾ ವೇದಿಕೆಗಳಿಂದ ಹೊರಚಿಮ್ಮುತ್ತಿರುವ ಅಭಿಪ್ರಾಯಗಳು. ಇದು ಬಹಳ ಸ್ಪಷ್ಟವಾಗಿ ಒಂದು ಯೋಜಿತ ಕಾರ್ಯತಂತ್ರದ ಭಾಗವಾಗಿ ನಡೆಯುವಂತಹದ್ದು. 2014ರ ಲೋಕಸಭಾ ಚುನಾವಣೆಯ ಕಾಲದ ಪ್ರಚಾರದ ಭಾಗವಾಗಿ ಪ್ರವೇಶಿಸಿದ ಸೋಷಿಯಲ್ ಮೀಡಿಯಾ ಇಂದು ಪ್ರತಿಯೊಂದು ರಾಜಕೀಯ ಪಕ್ಷದ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿ ಹೋಗಿದೆ.
ಈ ಸೋಷಿಯಲ್ ಮೀಡಿಯಾ ಪ್ರಚಾರದಲ್ಲಿ ಫೇಕ್ ನ್ಯೂಸ್, ಫೇಕ್ ಅಕೌಂಟ್, ಟ್ರೋಲ್ ಪೇಜ್ , ಬಾಟ್-ಬೂಸ್ಟ್ ಗಳು ಯಥೇಚ್ಚವಾಗಿ ಬಳಕೆಯಾಗುತ್ತಿವೆ. ಬ್ಲಾಕ್ ಮಟ್ಟದಿಂದ ರಾಷ್ಟ್ರಮಟ್ಟದ ವರೆಗೆ ಒಂದೊಂದು ಪಕ್ಷದಲ್ಲಿ ಸಾವಿರಾರು ಯುವಕ-ಯುವತಿಯರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬರಾಕ್ ಒಬಾಮ ಚುನಾವಣಾ ಪ್ರಚಾರದ ಸಕಲ ತಂತ್ರಗಳನ್ನು ಆಮದು ಮಾಡಿಕೊಂಡ ನರೇಂದ್ರಮೋದಿ ನೇತೃತ್ವದ ಬಿಜೆಪಿ, ಪ್ರಶಾಂತ್ ಕಿಶೋರ್ ಅವರಂತಹ ತಥಾಕಥಿತ ಚುನಾವಣಾ ಪಂಡಿತರನ್ನು ಬಳಸಿಕೊಂಡು 2014ರ ಚುನಾವಣೆಯ ಪ್ರಚಾರವನ್ನು ಹೇಗೆ ನಡೆಸಿ ಗೆಲುವು ಸಾಧಿಸಿತು ಎನ್ನುವುದು ಇತಿಹಾಸ. ಬೇರೆ ರಾಜಕೀಯ ಪಕ್ಷಗಳು ಬಹಳ ವಿಳಂಬವಾಗಿ, ಪ್ರಯಾಸಪಟ್ಟು ಅದೇ ದಾರಿಯಲ್ಲಿ ಸಾಗುತ್ತಿದೆ. ಅಡಿಕೆ ಕದ್ದರೂ, ಆನೆ ಕದ್ದರೂ ಕಳ್ಳನೇ.
ಈ ಸೋಷಿಯಲ್ ಮೀಡಿಯಾದ ಸಮಸ್ಯೆ ಎಂದರೆ ನಿಮ್ಮ ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆ ಮತ್ತು ನ್ಯೂಸ್ ಚಾನೆಲ್ ಗಳಿಗೆ ಇರುವ ಪಾರದರ್ಶಕತೆ ಇಲ್ಲವೇ ಉತ್ತರದಾಯಿತ್ವ ಇವುಗಳಿಗೆ ಇಲ್ಲ. ಮುಖತೋರಿಸಿ ಗುರುತಿಸಿಕೊಳ್ಳುವುದು ಇಲ್ಲಿ ಕಡ್ಡಾಯ ಅಲ್ಲ. ಮುಖರಹಿತವಾಗಿ ಕಾಣಿಸಿಕೊಳ್ಳಬಹುದು. ಇದೊಂದು ರೀತಿ ರಾತ್ರಿ ಬರೆಯುವ ಗೋಡೆ ಬರಹಗಳ ರೀತಿ. ಬೆಳಿಗ್ಗೆ ನೋಡಿದಾಗ ಬರಹ ಕಾಣಿಸುತ್ತದೆ ಬರೆದವನ ಮುಖ ಕಾಣಿಸಿಕೊಳ್ಳುವುದಿಲ್ಲ. ಸೋಷಿಯಲ್ ಮೀಡಿಯಾದ ಈ ದೌರ್ಬಲ್ಯವನ್ನು ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ಬಳಸಿಕೊಂಡಿವೆ. ಈ ಪೈಪೋಟಿಯಲ್ಲಿ ಬಿಜೆಪಿ ಉಳಿದೆಲ್ಲರನ್ನು ಮೈಲುಗಳ ಅಂತರದಲ್ಲಿ ಹಿಂದಕ್ಕೆ ಅಟ್ಟಿದೆ.ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್ ಅಕೌಂಟ್ ಮತ್ತು ಟ್ರೋಲ್ ಪೇಜ್ ಗಳಲ್ಲಿ ಹೇಳುತ್ತಾ ಬಂದಿರುವುದನ್ನು ಈಗ ರಾಜಕೀಯ ಪಕ್ಷದ ನಾಯಕರು ಧೈರ್ಯದಿಂದ ಬಹಿರಂಗ ಭಾಷಣದಲ್ಲಿ ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಇಂತಹ ಮಾತುಗಳಿಗೆ ಚಪ್ಪಲಿ ಎಸೆಯಬೇಕಾದ ಜನ ಚಪ್ಪಾಳೆ ತಟ್ಟುತ್ತಿದ್ದಾರೆ. ಇವರು ತಮ್ಮ ಕೊಳಕು ಬಾಯಿ ಮೂಲಕವೇ ನಡೆಸಿದ್ದ ಪ್ರಚಾರಕ್ಕೆ ಒಲಿದು ಅವರನ್ನು ಲೋಕಸಭೆ ಮತ್ತು ವಿಧಾನಸಭೆಗೆ ಕಳಿಸಿದ್ದಾರೆ.
ಈ ಕುಸಿತಕ್ಕೆ ಕಾರಣಗಳೇನು?
1. ರಾಜಕೀಯ ಪಕ್ಷಗಳ ನಡುವಿನ ಚರ್ಚೆ-ಸಂವಾದ-ವಾಗ್ವಾದಗಳು ಸಿದ್ದಾಂತ ಮತ್ತು ಕಾರ್ಯಕ್ರಮಗಳ ಮೇಲೆ ನಡೆಯಬೇಕು. ಆಡಳಿತಪಕ್ಷವಾಗಿದ್ದರೆ ಅದು ತನ್ನ ಸಾಧನೆಗಳನ್ನು ಜನರ ಮುಂದಿಡಬೇಕು. ವಿರೋಧ ಪಕ್ಷಗಳು ಅದರ ಸತ್ಯಾಸತ್ಯತೆಯನ್ನು ಬಗೆದು ತೋರಿಸಬೇಕು. ಆದರೆ ಹೇಳಿಕೊಳ್ಳುವ ಸಾಧನೆ ಇಲ್ಲದೆ ಇದ್ದಾಗ ಸಾರ್ವಜನಿಕ ಚರ್ಚೆಯ ದಾರಿ ತಪ್ಪಿಸುವ ದುರುದ್ದೇಶದಿಂದ ಸಾಮಾನ್ಯವಾಗಿ ಆಡಳಿತ ಪಕ್ಷಗಳು ಇಂತಹ ಅಡ್ಡದಾರಿ ಹಿಡಿಯುತ್ತವೆ.
2. ರಾಜಕೀಯ ಪಕ್ಷಗಳ ನಡುವೆ ಈ ರೀತಿಯ ಬೈದಾಟಗಳು ಸಾಮಾನ್ಯವಾಗಿದ್ದರೂ ಇದು ಅತಿರೇಕಕ್ಕೆ ಹೋಗುವುದು ಚುನಾವಣೆಯ ಕಾಲದಲ್ಲಿ. ಉದಾಹರಣೆಗೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ಎರಡುಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಅಲ್ಲಿ ತಮ್ಮ ಸರ್ಕಾರ ನಡೆಸಿದ ಸಾಧನೆಗಳನ್ನು ಮುಂದಿಟ್ಟು ಮತಕೇಳಬೇಕಾಗಿತ್ತು. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳೇನು? ಅದರಲ್ಲಿ ತಾವು ಈಡೇರಿಸಿದೆಷ್ಟು ಎಂಬುದನ್ನು ಹೇಳಬೇಕಾಗಿತ್ತು.
ಕಳೆದ ಎರಡು ವರ್ಷಗಳ ಅವಧಿಯ ಯಾವ ಸಾಧನೆಯನ್ನು ಅವರು ಹೇಳಿಕೊಳ್ಳುವುದು? ಮೂರು ತಿಂಗಳ ಅವಧಿಯ ಬಸವರಾಜ ಬೊಮ್ಮಾಯಿಯಾದರೂ ಏನನ್ನೂ ಹೇಳಲು ಸಾಧ್ಯ? ಇಂತಹ ಸಂದರ್ಭದಲ್ಲಿ ಜನರ ಗಮನ ಬೇರೆ ಕಡೆ ಸೆಳೆಯಲು ಈ ರೀತಿಯ ಬೈದಾಟಗಳು ನಡೆಯುತ್ತಿದೆ. ಏಟಿಗೆ ಎದಿರೇಟು ನೀಡುತ್ತಾ ವಿರೋಧ ಪಕ್ಷಗಳು ಆಡಳಿತ ಪಕ್ಷ ತೋಡಿರುವ ಗುಂಡಿಗೆ ಬೀಳುತ್ತಿವೆ.
ಪರಿಹಾರ ಏನು?


1. ಮೊದಲನೆಯ ತಕ್ಷಣದ ಪರಿಹಾರವೆಂದರೆ ಇಂತಹ ಬೈದಾಟಗಳು ನಡೆದಾಗ ಪಕ್ಷದಲ್ಲಿದ್ದ ಹಿರಿಯರು, ಜವಾಬ್ದಾರಿ ಸ್ಥಾನದಲ್ಲಿರುವವರು ಬುದ್ದಿ ಹೇಳಬೇಕು. ಅನಿರೀಕ್ಷಿತವಾಗಿ, ಆಶ್ಚರ್ಯಪಡುವಂತೆ ತಮ್ಮ ಸಹಜ ಸ್ವಭಾವಕ್ಕೆ ತದ್ವಿರುದ್ಧವಾಗಿ ಡಿಕೆ.ಶಿವಕುಮಾರ್ ಕಾಂಗ್ರೆಸ್ ಟ್ವಿಟರ್ ನಲ್ಲಿ ಬಳಕೆಯಾದ ಹೆಬ್ಬೆಟ್ ಗಿರಾಕಿ ಪದ ಬಳಕೆ ಬಗ್ಗೆ ವಿಷಾದ ಸೂಚಿಸಿದರು. ಕಾಂಗ್ರೆಸ್ ಪಕ್ಷಕ್ಕಿಂತ ಮೊದಲೇ ಈ ಪದವನ್ನು ಬಿಜೆಪಿ ರಾಹುಲ್ ಗಾಂಧಿಯವರ ಬಗ್ಗೆ ಬಳಸಿದ್ದರೂ ಮತ್ತು ತಮ್ಮನ್ನು ಕೊತ್ವಾಲ್ ಶಿಷ್ಯ, ಜೈಲು ಗಿರಾಕಿ, ರೌಡಿಡಿಕೆಶಿ ಎಂದೆಲ್ಲ ಬಿಜೆಪಿ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಹ್ಯಾಷ್ ಟ್ಯಾಗ್ ಹಾಕಿ ಅವಮಾನಿಸಿದ್ದರೂ ಅದನ್ನು ಲೆಕ್ಕಿಸದೆ ಶಿವಕುಮಾರ್ ವಿಷಾದ ಸೂಚಿಸಿದ್ದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ.
ವಿರೋಧ ಪಕ್ಷದ ಈ ಜೆಸ್ಚರನ್ನು ಬಳಸಿಕೊಂಡು ಬಿಜೆಪಿಯ ಹಿರಿಯ ನಾಯಕರು ತಮ್ಮ ಪೋಲಿ ಪಟಲಾಮಿಗೆ ಬುದ್ದಿ ಹೇಳಿ ಸುಮ್ಮನಿರಿಸಬಹುದಿತ್ತು. ಆದರೆ ಮರುಗಳಿಗೆಯಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷರೇ ಪೋಲಿಪಟಲಾಮುಗಳ ನಾಯಕ ತಾನು ಎಂಬಂತೆ ಮಾತನಾಡತೊಡಗಿದರು. ಸ್ವಲ್ಪ ಲೇಟಾಗಿ ಯಡಿಯೂರಪ್ಪನವರೂ ಆಕ್ಷೇಪ ವ್ಯಕ್ತಪಡಿಸಿದರೂ ಅದು ಮನೆಮೂಲೆಯಲ್ಲಿದ್ದ ವೃದ್ದಪಿತಾಮಹಾನ ಗೊಣಗಾಟದಂತಿತ್ತು.
2. ಎರಡನೆಯದು ಕಾನೂನಿನ ಮಾರ್ಗದಲ್ಲಿ ಪಡೆಯುವ ಪರಿಹಾರ. ಈ ರೀತಿ ಚಾರಿತ್ರ್ಯಹನನ ನಡೆದಾಗ ಬಾಧಿತರು ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾನನಷ್ಟ ಮೊಕದ್ದಮೆಗಳು ಇತ್ಯರ್ಥವಾಗಲು ವರ್ಷಗಳ ಕಾಲ ಹಿಡಿಯುತ್ತಿವೆ. ತ್ವರಿತ ನ್ಯಾಯದಾನ ನಡೆದು ಅಪರಾಧಿಗಳಿಗೆ ಶಿಕ್ಷೆಯಾದರೆ ಕಾನೂನಿಗೆ ಹೆದರಿ ಈ ಕೂಗುಮಾರಿಗಳು ನಾಲಗೆಯನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳಬಹುದು.
3. ಮೂರನೆಯದಾಗಿ ನಮ್ಮ ಸೈಬರ್ ಕಾನೂನು ಮತ್ತು ಅದನ್ನು ಜಾರಿಗೊಳಿಸಲು ಇರುವ ಪೊಲೀಸ್ ಇಲಾಖೆಯನ್ನು ಬಲಪಡಿಸಬೇಕು. ಈಗಿನ ಸೈಬರ್ ಠಾಣೆಗಳಲ್ಲಿ ಕೆಲಸ ಮಾಡುವ ಬಹಳಷ್ಟು ಪೊಲೀಸ್ ಸಿಬ್ಬಂದಿ ಅನಿವಾರ್ಯವಾಗಿ, ಅಸಹಾಯಕರಾಗಿ ಅಲ್ಲಿ ಬಂದು ಸೇರಿರುವ ರೀತಿ ಕಾಣುತ್ತಿದ್ದಾರೆ. ಠಾಣೆಗೆ ದೂರು ನೀಡಲು ಹೋದವರನ್ನೇ ನಿರುತ್ತೇಜನ ಗೊಳಿಸಿದ ಪ್ರಸಂಗಗಳಿವೆ. ಅಲ್ಲಿನ ಸಿಬ್ಬಂದಿಗಳಿಗೆ ಅವಶ್ಯಕ ಮೂಲಸೌಕರ್ಯಗಳನ್ನೂ ಒದಗಿಸಿಲ್ಲ.
4. ಕೊನೆಯದಾಗಿ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು. ರಾಜಕೀಯ ನಾಯಕರ ಬೈದಾಟಗಳ ಇತಿಹಾಸವನ್ನು ನೋಡಿದರೆ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಚುನಾವಣೆಗಳ ಕಾಲದಲ್ಲಿ. ಆ ಕಾಲದಲ್ಲಿ ನೆಲದ ಕಾನೂನು ಜಾರಿಯ ನಿರ್ಣಾಯಕ ಸ್ಥಾನದಲ್ಲಿರುವುದು ಚುನಾವಣಾ ಆಯೋಗ. ಅವಾಚ್ಯ,ಅಶ್ಲೀಲ ಭಾಷೆಯ ಮೂಲಕ ಚಾರಿತ್ರ್ಯಹನನದ ಮಾತುಗಳನ್ನು ಆಡುವವರ ವಿರುದ್ದ ಪೊಲೀಸ್ ಇಲಾಖೆ ಮೂಲಕ ಸ್ವಯಂಪ್ರೇರಿತರಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು.5. ಕೊನೆಯ ಪರಿಹಾರ ಒಂದು ನನಸಾಗದ ಕನಸು ಎಂದು ಕೊಂಡು ಹೇಳಬಹುದು. ರಾಜಕೀಯ ಪಕ್ಷಗಳು ಚುನಾವಣೆಗೆ ಟಿಕೆಟ್ ನೀಡುವಾಗ ಇಂತಹ ಕೂಗುಮಾರಿಗಳನ್ನು ಹೊರಗಿಡಬೇಕು. ಕೊಲೆ-ಸುಲಿಗೆಯಂತಹ ಹೀನ ಅಪರಾಧಗಳಲ್ಲಿ ತೊಡಗಿರುವವರಿಗೆ ಕರೆದು ಟಿಕೆಟ್ ನೀಡುವಾಗ ಈ ರೀತಿಯ ಸುಧಾರಣೆಯನ್ನು ನಿರೀಕ್ಷಿಸುವುದು ಸಾಧ್ಯವೇ?
ಭಾರತದಲ್ಲಿ ರಾಜಕೀಯ ಕ್ಷೇತ್ರದ ಗುಣಮಟ್ಟ ಕುಸಿಯುತ್ತಿದೆ ಎಂಬ ಕೂಗು ಇಂದು ನಿನ್ನೆಯದಲ್ಲ. ಸಂಸದ್ ಮತ್ತು ವಿಧಾನಮಂಡಲದ ಕಲಾಪಗಳು ಮತ್ತು ಹಿಂದಿನ ಚುನಾವಣೆಗಳ ಇತಿಹಾಸದ ಪುಟಗಳನ್ನು ತೆಗೆದರೆ ಗುಣಮಟ್ಟ ಕುಸಿತದ ಪ್ರಕರಣಗಳು ಅಪವಾದ (Exception) ಎಂಬಂತೆ ಕಾಣಸಿಗುತ್ತವೆ, ಆದರೆ ಇಂದು ಈ ಕುಸಿತ ನಿಯಮ (Rule) ಆಗಿದೆ ಎನ್ನುವುದಷ್ಟೇ ಬದಲಾವಣೆ.
ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವ ಅಭ್ಯರ್ಥಿಯ ಅರ್ಹತೆಯನ್ನು ಸಂವಿಧಾನದಲ್ಲಿ ನಿಗದಿಪಡಿಲಾಗಿದೆ. 25 ವರ್ಷ ವಯಸ್ಸಿನವನಾಗಿರಬೇಕು, ಮಾನಸಿಕವಾಗಿ ಸ್ವಸ್ಥನಾಗಿರಬೇಕು ಮತ್ತು ಅಪರಾಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಬಾರದು ಎಂಬ ಮೂರುಮುಖ್ಯ ಅರ್ಹತೆಗಳನ್ನು ನಿಗದಪಡಿಸಲಾಗಿದೆ. ಅಭ್ಯರ್ಥಿಯ ಶಿಕ್ಷಣ ಈ ಅರ್ಹತೆಯ ಪಟ್ಟಿಯಲ್ಲಿ ಇಲ್ಲ. ರಾಜಕೀಯದ ಮುಖ್ಯವಾಗಿ ಸಂಸದೀಯ ಕಲಾಪದ ಗುಣಮಟ್ಟ ಕುಸಿತಕ್ಕೆ ಶಿಕ್ಷಣದ ಅರ್ಹತೆಯನ್ನು ನಿಗದಿಪಡಿಸದೆ ಇರುವುದು ಕೂಡಾ ಕಾರಣ ಎಂದು ಬಹಳ ಮಂದಿ ತಥಾಕಥಿತ ರಾಜಕೀಯ, ಸಾಮಾಜಿಕ ವಿದ್ವಾಂಸರು ಅಲ್ಲಲ್ಲಿ ಆರೋಪಿಸುತ್ತಾ ಬಂದಿದ್ದಾರೆ.
ಆದರೆ ಈ ಗುಣಮಟ್ಟ ಕುಸಿತಕ್ಕೆ ಕಾರಣರಾದವರ ಹಿನ್ನೆಲೆಯನ್ನು ನೋಡಿದರೆ ಇವರ್ಯರೂ ಅನಕ್ಷರಸ್ಥರಲ್ಲ, ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆದವರೇ ಆಗಿದ್ದಾರೆ. ಶಾಲೆಗೆ ಹೋಗಿ ಶಿಕ್ಷಣ ಪಡೆಯದ ಕಾಮರಾಜ್ ನಾಡಾರ್ ಭಾರತ ಕಂಡ ಅತ್ಯುತ್ತಮ ರಾಜಕೀಯ ಮುತ್ಸದ್ದಿ ಎಂದು ಹೆಸರು ಪಡೆದಿದ್ದರು. ಅದೇ ಸಂಸತನ್ನು ನಮ್ಮ ನಳಿನ್ ಕುಮಾರ ಕಟೀಲ್ ಪ್ರವೇಶಿಸಿದ್ದಾರೆ.
ಅಂತಿಮವಾಗಿ ನಮ್ಮ ಸಂವಿಧಾನ ಪ್ರಜಾಪ್ರಭುತ್ವದ ಅಳಿವು-ಉಳಿವನ್ನು ಪ್ರಜೆಗಳ ಕೈಯಲ್ಲಿಯೇ ನೀಡಿದೆ. ಕೊಳಕು ಮಾತನಾಡುವ ನಾಲಿಗೆಗಳಿಗೆ ಚಪ್ಪಲಿ ಎಸೆಯಲು ಜನ ಮೊದಲು ಕಲಿಯಬೇಕು, ಚಪ್ಪಾಳೆ ತಟ್ಟುವುದಲ್ಲ.
In a democracy people get the government they deserve and they deserve what they get. ಅಷ್ಟೆ.

-ದಿನೇಶ್ ಅಮಿನ್ ಮಟ್ಟು

Please follow and like us: