ಕವಿಗಳು ಸಮಾಜಕ್ಕೆ ದೀಪ ಆಗಬೇಕು ಹೊರತು ಸ್ವತಃ ದ್ವೀಪ ಆಗಬಾರದು-ಡಾ.ಹೇಮಾ ಪಟ್ಟಣಶೆಟ್ಟಿ

ಕೊಪ್ಪಳ: ಕನ್ನಡ ಸಾಹಿತ್ಯದಲ್ಲಿ ರಚನೆಯಾದ ವಿವಿಧ ಸಂವೇದನೆಗಳಿಗೆ ಸೂಕ್ತ ವಿಮರ್ಶೆ ಬಂದಿಲ್ಲ ಎಂದು ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ ನುಡಿದರು.

ಅವರು ಕೊಪ್ಪಳದ ರಾಘವೇಂದ್ರ ಸ್ವಾಮಿಗಳವರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀಮತಿ ಅನಸೂಯ ಜಹಗೀರದಾರರವರ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಆಧುನಿಕತೆಯ ಭರಾಟೆ ಯಲ್ಲಿ ಮನುಷ್ಯರು ಭಾವನಾತ್ಮಕತೆ ಕಳೆದುಕೊಂಡು ಯಂತ್ರಗಳಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕವಿಗಳು ಸಮಾಜಕ್ಕೆ ದೀಪ ಆಗಬೇಕು ಹೊರತು ಸ್ವತಃ ದ್ವೀಪ ಆಗಬಾರದು. ಸಾಹಿತಿಗಳು ಬರಹದ ಮೂಲಕ ಮನಸ್ಸುಗಳ ಬೇಸೆದು ಜೀವನಪ್ರೀತಿ ನೀಡಬೇಕು ಎಂದರು.

ಗಜಲ್ ಕೃತಿ ‘ಆತ್ಮಾನುಸಂಧಾನ’ ಲೋಕಾರ್ಪಣೆಗೊಳಿಸಿದ ಸಾಹಿತಿ ಅಲ್ಲಾಗಿರಿರಾಜ ಗಜಲ್ ಮೂಲ ಭಾಷೆ ಉರ್ದು, ಅದು ಮುಸ್ಲಿಂರ ಭಾಷೆಯಲ್ಲ. ಭಾಷೆಗಳಿಗೆ ಧರ್ಮಗಳಿರಲ್ಲ ಭಾಷೆಗೆ ಭಾವನೆಯ ಅಭಿವ್ಯಕ್ತಿ ಇರುತ್ತೆ. ಹೈದರಾಬಾದ್ ಕರ್ನಾಟಕದ ದಖನಿ ಭಾಷೆ ಇಲ್ಲಿನ ಗಜಲ್ ಪರಂಪರೆಗೆ ನೀರೆರೆದಿದ್ದಕ್ಕೆ ಇಲ್ಲಿನ ಗಜಲ್ ದೇಶದ ಗಜಲ್ ಸಾಹಿತ್ಯದ ಜೊತೆ ಗುರುತಿಸಲ್ಪಡುತ್ತಿದೆ ಎಂದರು.

‘ಆತ್ಮಾನುಸಂಧಾನ’ ಕೃತಿ ಬಗ್ಗೆ ರಾಯಚೂರಿನ ಸಾಹಿತಿ ಡಾ.ದಸ್ತಗೀರಸಾಬ ದಿನ್ನಿ ‘ಮಧುರತೆಯ ಪ್ರತೀಕ ಕನ್ನಡ ಗಜಲ್ ಪರಂಪರೆಗೆ ಶಾಂತರಸರು ಅಡಿಪಾಯ ಹಾಕಿದರು. ಅವರ ಮಾದರಿಯಲ್ಲಿ ಇಂದು ಜಂಬಣ್ಣ ಅಮರಚಿಂತರು, ಮುಕ್ತಾಯಕ್ಕ , ಚಿದಾನಂದ ಸಾಲಿ, ಅರುಣಾ ನರೇಂದ್ರ , ಅನಸೂಯ ಜಹಗೀರದಾರ ಗಜಲ್ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ’ ಎಂದರು.

ಅನಸೂಯ ಜಹಗೀರದಾರರವರ ಇನ್ನೊಂದು ಹನಿಗವನ ಕೃತಿ ‘ನೀಹಾರಿಕೆ’ಯನ್ನು ಶ್ರೀಮತಿ’ ಶಾಂತಾದೇವಿ ಹಿರೇಮಠರು ಲೋಕಾರ್ಪಣೆಗೊಳಿಸಿದರು. ನೀಹಾರಿಕೆ ಕುರಿತು ಮಾತನಾಡಿದ ಸಾಹಿತಿ ಪವನಕುಮಾರ ಗುಂಡೂರು ‘ ಇತ್ತೀಚಿನ ಕನ್ನಡದ ಸಾಹಿತ್ಯ ರಚನೆಯಲ್ಲಿ ಅಬ್ಬರವಿದೆ ಹೊರತು ಸತ್ವ ಕಡಿಮೆಯಾಗುತ್ತಿದೆ. ಸಾಹಿತಿ ಸಂವಾದ ರಹಿತ ದಿನಗಳತ್ತ ಹೊರಳುತ್ತಿದ್ದಾರೆ’ ಎಂದು ವಿಷಾದಿಸಿದರು.

ವೇದಿಕೆಯಲ್ಲಿ ಸಾಹಿತಿ ಅನಸೂಯ ಜಹಗೀರದಾರ ಉಪಸ್ಥಿತರಿದ್ದರು. ಡಿ.ಎಂ.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.

ಅಕ್ಷತಾ ಬಣ್ಣದಬಾವಿ ಗಜಲ್ ಗಾಯನ ನಡೆಸಿಕೊಟ್ಟರು. ಕು.ಅಮೃತ ವರ್ಷಿಣಿ ಪ್ರಾರ್ಥಿಸಿದರು. ಹನಮಂತಪ್ಪ ಕುರಿ ನಿರೂಪಿಸಿದರು. ಪ್ರಕಾಶಕ ಕೃಷ್ಣ ಶಾಸ್ತ್ರಿ ವಂದಿಸಿದರು.

Please follow and like us:
error