ಅವಳ_ಡೈರಿಯಿಂದ…..Raveendra VK

#ಅವಳ_ಡೈರಿಯಿಂದ…..
‘‘ಅವಳು ತ್ಯಾಗ ಮಾಡಿದಳೊ, ಮೋಸ ಮಾಡಿದಳೋ ಅರ್ಥವಾಗುತ್ತಿಲ್ಲ. ಅವಳನ್ನು ಹೊಗಳಬೇಕೊ, ತೆಗಳಬೇಕೋ ಗೊತ್ತಿಲ್ಲ. ಬಹುಶಃ ಈ ಗೊಂದಲ ನನ್ನನ್ನು ಉಸಿರಿರುವರೆಗೂ ಕಾಡಬಹುದೇನೊ ? ಅದು ಕನಸು ಮತ್ತು ನನಸಿನ ನಡುವಿನ ಇಬ್ಬಂದಿ ಸ್ಥಿತಿ ಎನಿಸುತ್ತದೆ. ….’’
ನನ್ನದು ಚಿಕ್ಕ ಹಳ್ಳಿಯೊಂದರ ದೊಡ್ಡ ಕುಟುಂಬ. ಅಪ್ಪನ ಮುಖವೇ ನೆನಪಿರದ ನನಗೆ ಅಮ್ಮನೇ ಮೊದಲ ಗುರು. ಅವಳೇ ಸರ್ವಸ್ವ. ಇರುವ ಐವರು ಮಕ್ಕಳಲ್ಲಿ ಶಾಲೆಯ ಮೆಟ್ಟಿಲು ತುಳಿದವ ನಾನು ಮಾತ್ರ. ನನ್ನವ್ವ ಕೂಲಿ ಮಾಡಿ, ತಲೆ ಮೇಲೆ ಬುಟ್ಟಿ ಹೊತ್ತು ತರಕಾರಿ ಮಾರಿ ನನ್ನನ್ನು ಬೆಳೆಸಿದಳು. ಮನೆಯವರ ಆದರ, ಪ್ರೀತಿ ನನ್ನನ್ನು ಓದಿಗೆ ಪ್ರೇರೇಪಿಸಿತು. ಹೈಸ್ಕೂಲ್‌ನಲ್ಲಿ ನನ್ನ ಪಾಡಿಗೆ ನಾನಿರುತ್ತಿದ್ದೆ. ಶಾಲೆ, ಓದು, ಮನೆ ಅಷ್ಟೇ ನನ್ನ ದಿನಚರಿ. ಪ್ರೀತಿ, ಪ್ರೇಮ, ಸ್ನೇಹಿತರೊಂದಿಗಿನ ಪಾರ್ಟಿ ಕೇವಲ ಸಿನಿಮಾ ಆಗಿತ್ತು. ಒಂದಿಬ್ಬರು ಸಹಪಾಠಿಗಳು ಲವ್ ಪ್ರಪೋಸ್ ಮಾಡಿದರೂ ನಯವಾಗಿ ತಿರಸ್ಕರಿಸಿದ್ದೆ. ಅಮ್ಮನಿಗೂ ವಯಸ್ಸಾಗಿತ್ತು. ಮನೆಯ ಪರಿಸ್ಥಿತಿಯ ಅರಿವು ನನಾಗಿತ್ತು. ಬೇಗ ಓದು ಮುಗಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದೆ. ಅದಕ್ಕೆ, ಎಸ್ಸೆಸ್ಸೆಲ್ಸಿ ಮುಗಿದ ತಕ್ಷಣ ಐಟಿಐ ಮಾಡಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾದೆ.
ನನಗೊಬ್ಬ ಅಕ್ಕನ ಮಗಳಿದ್ದಳು. ಅವಳನ್ನು ಅತಿಯಾಗಿ ಪ್ರೀತಿಸುತ್ತಿದ್ದೆ. ಅವಳೂ ಅಷ್ಟೇ. ಓದನ್ನು ಅರ್ಧಕ್ಕೆ ನಿಲ್ಲಿಸಿದ್ದಳು. ಪಕ್ಕಾ ಸಂಪ್ರದಾಯಸ್ಥೆ. ಯಾರೂ ಏನು ಹೇಳಿದರೂ ನಂಬುವ ನಾಜೂಕು ಸ್ವಭಾವದವಳು. ಮನೆಯಲ್ಲಿಯೇ ಹೊಲಿಗೆ ಕೆಲಸ ಮಾಡತ್ತಿದ್ದಳು. ನನ್ನೊಡನೆ ಬೆಂಗಳೂರಿಗೆ ಬರುವ ಇಂಗಿತ ವ್ಯಕ್ತಪಡಿಸಿದಳು. ಒಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಹುಡುಕಿ ಬೆಂಗಳೂರಿಗೆ ಕರೆತಂದಿದ್ದಾಯ್ತು. ಆಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ದಿನವೂ ಫೋನ್‌ನಲ್ಲಿ ಹರಟೆ, ವೀಕೇಂಡ್‌ನಲ್ಲಿ ಪಾರ್ಕ್, ಸಿನಿಮಾ ಅಂತೆಲ್ಲ ಸುತ್ತಾಟ. ನಮ್ಮ ಸುತ್ತಾಟಕ್ಕೆ ಸಿಲಿಕಾನ್ ಸಿಟಿಯ ಸ್ಥಳಗಳೇ ಸಾಕಾಗದಾದವು.
ಹಬ್ಬಕ್ಕೆಂದು ಊರಿಗೆ ಬಂದಾಗ, ಮನೆಯಲ್ಲಿ ನನಗೂ ಅವಳಿಗೂ ನಿಶ್ಚಿತಾರ್ಥ ಮಾಡಿದರು. ನನಗೆ ಜೀವನದಲ್ಲಿ ಏನನ್ನೋ ಸಾಧಿಸಿ, ಗುರಿ ತಲುಪಿದ ತೃಪ್ತಿ. ತಲೆ ಮೇಲೆತ್ತಿ ನೋಡಿದರೆ, ಆಕಾಶ ಎಡತಾಕಿದ ಅನುಭವ. ವಾರದ ಬಳಿಕ ಪುನಃ ಬೆಂಗಳೂರು ಸೇರಿ ಕೆಲಸಕ್ಕೆ ಹಾಜರಾದೆ. ಕೆಲಸದ ಜತೆಗೆ ಒಟಿ (ಒವರ್ ಟೈಂ) ಮಾಡತೊಡಗಿದೆ. ಅವಳೊಂದಿಗೆ ಹರಟಲು ಸಮಯವಿಲ್ಲದಾಯಿತು. ಬರೋಬ್ಬರಿ ಒಂದು ವಾರದ ಬಳಿಕ ಕರೆ ಮಾಡಿದೆ. ಕೆಲವೊಮ್ಮೆ ಬಿಜಿ, ಹಲವೊಮ್ಮೆ ನಾಟ್‌ರೀಚೇಬಲ್, ಮಗದೊಮ್ಮೆ ಸ್ವಿಚ್ ಆಫ್ ಶಬ್ದಗಳು ಬಿಟ್ಟರೆ, ಅವಳ ದನಿ ಕೇಳಿಸಲಿಲ್ಲ. ಅವಳೂ ನನ್ನಂತೆ ಕೆಲಸದಲ್ಲಿ ತೊಡಗಿರಬಹುದೆಂದು ಸುಮ್ಮನಾದೆ. ಕೆಲ ದಿನದ ಬಳಿಕ ಸಂಬಂಧಿಯೊಬ್ಬರ ಮದುವೆಗೆ ಊರಿಗೆ ಬರಬೇಕಾಯಿತು. ಆಗಲೂ ಅವಳು ನನ್ನೊಂದಿಗೆ ಮಾತನಾಡಿದ್ದು, ಹನಿ ನೀರಿನಷ್ಟು.
ಸಂಬಂಧಿಗಳ ಎದರು ಅವಳು ನನ್ನೊಂದಿಗೆ ಮದುವೆ ಇಷ್ಟವಿಲ್ಲವೆಂದು ಹೇಳಿದ ಮಾತಿಗೆ ನಾನು ಅಕ್ಷರಶಃ ಕುಸಿದೆ. ಮನೆಯವರು ನಾವಿಬ್ಬರು ಜಗಳ ಮಾಡಿಕೊಂಡಿರಬಹುದು. ಇದೆಲ್ಲ ಇದ್ದದ್ದೇ. ಕೋಪದಲ್ಲಿ ಹೀಗೆ ಹೇಳುತ್ತಾಳೆಂದು ಸುಮ್ಮನಾದರು. ನಾನೂ ಮೊದಲಿನಂತೆ ಅವಳಿಗೆ ಸಮಯ ನೀಡದ ಕಾರಣ ಮುನಿಸಿಕೊಂಡಿದ್ದಾಳೆಂದು ಮೌನಿಯಾದೆ. ಸಂಜೆ ಮನೆಯವರ ಎದುರಲ್ಲೇ ಅವಳು ತನ್ನ ಮಾತನ್ನು ಪುನರುಚ್ಛರಿಸಿದಳು. ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಆಯಿತು. ಇತ್ತ ಅಮ್ಮ, ಅತ್ತ ಅಕ್ಕನನ್ನು ಸುಧಾರಿಸುವ ನನ್ನ ಎಲ್ಲ ಪ್ರಯತ್ನ ಹುಸಿಯಾದವು. ಸಣ್ಣ ಮಾತಿನಿಂದ ಆರಂಭವಾದ ಜಗಳ ಒಂದು ತಿಂಗಳ ಬಳಿಕ ಗೆ ಅವಳಿಗೆ ಬೇರೊಂದು ಮದುವೆ ಮಾಡುವ ಮೂಲಕ ಸಮಾಪ್ತಿಯಾಯಿತು !
ಅಮ್ಮ ‘ನೀನೇನೂ ಚಿಂತಿಸಬೇಡ ಮಗನೆ, ಅವರ ಎದೆಗೆ ಒದ್ದಂತೆ ಬೇರೊಂದು ಹೆಣ್ಣು ತಂದು ಮದುವೆ ಮಾಡುವೆ ’ ಎಂದಳು. ಊರಲ್ಲೇ ಇದ್ದರೆ, ಅದೇ ಕಹಿ ಗುಂಗು ಕಾಡುವುದೆಂದು ಮತ್ತೆ ಕೆಲಸಕ್ಕೆ ಸೇರಿದೆ. ವಾರದ ಬಳಿಕ ಅವಳ ರೂಂಮೇಟ್‌ನಿಂದ ನನಗೆ ಕರೆ ಬಂತು. ಅವಳು ಯಾವಾಗ ಬರುವಳೆಂದು ಕೇಳಿದಳು ಆಕೆ. ನನಗೆ ಕೋಪ ಉಕ್ಕಿ ಬಂದರೂ ತಡೆದು, ಅವಳಿನ್ನು ಬರುವುದಿಲ್ಲ ಎಂದು ಫೋನಿಟ್ಟೆ. ಮತ್ತೆ ಅವಳು ಕರೆ ಮಾಡುವುದನ್ನು ಮುಂದುವರೆಸಿದಳು. ನಾನು ಸ್ವೀಕರಿಸದೇ ಸುಮ್ಮನಾದೆ. ಮೂರು ದಿನದ ಬಳಿಕ ಮತ್ತೆ ಅರ್ಜೆಂಟ್ ಎಂದು ಮೇಸೆಜ್ ಹಾಕಿದಳು. ಕರೆ ಮಾಡಿದರೆ, ನಾನು ರೂಂ ಬದಲಾಯಿಸುತ್ತಿರುವೆ. ಅವಳ ಫೋನ್ ಸ್ವಿಚ್ ಆಫ್ ಇದೆ. ನೀವೆ ಬಂದು ಅವಳ ವಸ್ತುಗಳನ್ನು ತೆಗೆದುಕೊಂಡು ಹೋಗಿ ಎಂದಳು. ಅವುಗಳನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದೇಳಿ ಕಾಲ್ ಕಟ್ ಮಾಡಿದೆ.
ಆದರೂ, ಒಲ್ಲದ ಮನಸ್ಸಿನಿಂದ ರೂಮ್‌ಗೆ ಹೋದೆ. ಎಲ್ಲವನ್ನು ಒಂದು ರಟ್ಟಿನ ಬಾಕ್ಸ್‌ನಲ್ಲಿ ಹಾಕಿಟ್ಟಿದ್ದಳು. ಆಟೋದಲ್ಲಿ ಇಟ್ಟುಕೊಂಡು ಹೊರಟೆ. ಬಾಕ್ಸ್‌ನಲ್ಲಿ ನಾ ಕೊಟ್ಟ ಗಿಫ್ಟ್, ಗ್ರೀಟಿಂಗ್ಸ್, ಪುಸ್ತಕ ಸೇರಿ ಇತರ ವಸ್ತುಗಳಿದ್ದವು. ಬುದ್ದಿ ಬೇಡವೆಂದರೂ ಮನಸ್ಸು ತಡೆಯಲಿಲ್ಲ. ಹಳೆಯ ನೆನಪುಗಳು ಕಣ್ಮುಂದೆ ಬಂದು ಕಣ್ಣಂಚಲ್ಲಿ ನೀರು ಜಿನುಗಿತು. ತಿಪ್ಪೆಗೆ ಎಸೆಯುವ ಮನಸ್ಸಾಗದ ಕಾರಣ ರೂಮ್‌ನ ಸಜ್ಜಾ ಮೇಲಿಟ್ಟು ಸುಮ್ಮನಾದೆ. ದಿನಗಳು ಉರುಳಿದವು. ನೆನಪುಗಳು ಮಾಸಿದವಾದರೂ, ಅವುಗಳ ಹೆಜ್ಜೆ ಗುರುತು ಹಸಿಯಾಗಿತ್ತು. ವರ್ಷ ಉರುಳಿತು. ಅವಳು ಮದುವೆಯಾದವನೊಂದಿಗೂ ಬಾಳಲಿಲ್ಲ. ಮದುವೆಯಾದರೂ, ಅವನೊಟ್ಟಿಗೆ ತೆರಳದೆ, ತವರಲ್ಲೇ ಉಳಿದಳು. ಕೊನೆಗೊಮ್ಮೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಳು….!!
ಸಾವು ಎಲ್ಲ ತಪ್ಪುಗಳನ್ನು ಮನ್ನಿಸುವ ಕೊನೆಯ ಶಿಕ್ಷೆ. ಶವ ಒಂದು ನಿಸ್ತೇಜ, ನಿರ್ಭಾವುಕ ಮೂರ್ತಿ. ಎದರುಗಿದ್ದಾತನ ಭಾವಗಳೇ ಮರಣಿಸಿದವನ ಕೊನೆಯ ಮಾತಾಗಿರುತ್ತದೆ. ಅವಳ ಬಗ್ಗೆ ನಾನಂದುಕೊಂಡಿದ್ದೇ ಸತ್ಯವಾಯಿತು. ಕೇಳುವ ಬದಲು ಹೇಳಿಕೊಳ್ಳುವುದಷ್ಟೇ ಕೊನೆಯ ಆಯ್ಕೆ ಎಂಬುದು ಅವಳೆದುರು ನಿಂತಾಗ ಅರಿವಾಯಿತು. ಅವಳ ಅಂತಿಮ ಯಾತ್ರೆಯನ್ನೂ ನೋಡದೆ ಬೆಂಗಳೂರಿಗೆ ವಾಪಸ್ಸಾದೆ. ಹಾಸಿಗೆ ಮೇಲೆ ಒರಗಿಕೊಂಡೆ. ನಿದ್ದೆ ಬಾರದಾಯಿತು. ನೆನಪುಗಳು ಮರುಕಳಿಸಿದವು. ಇಷ್ಟೆಲ್ಲ ನಡೆದರೂ, ಅವಳನ್ನು ಯಾಕೆ ಹೀಗೆಲ್ಲ ನಡೆದುಕೊಂಡೆ ? ಶಹರದ ವೈಭವದ ಜೀವನಕ್ಕೆ ಮರಳಾದೆಯಾ ? ನನ್ನ ಪ್ರೀತಿ ನಿನಗೆ ಅಸಹನೀಯವಾಯಿತೆ ಎಂದೆಲ್ಲ ಅವಳನ್ನು ಪ್ರಶ್ನಿಸಲಿಲ್ಲವೇಕೆ ? ಬೇರೋಬ್ಬನ ಮದುವಯಾಗುವಾಗಲಾದರೂ ತಡೆಯುವ ಮನಸ್ಸು ಮಾಡಲಿಲ್ಲ. ನನ್ನದೆಂಥ ಕಲ್ಲು ಹೃದಯ ಎಂದೆಲ್ಲ ನನ್ನ ಅಂತರಾತ್ಮ ಈಟಿಯಿಂದಿ ಇರಿಯಿತು.
ಅವಳನ್ನು ಮಾತನಾಡಿಸುವ ಸಮಯ ಸಿಗುವುದು ನಾನು ಅವಳ ಹಾದಿ ಹಿಡಿದಾಗಲೇ. ಹೋಗಲಿ ಅಕ್ಷರಕ್ಕೆ ಇಳಿದ ಅವಳ ಭಾವಗಳೊಂದಿಗೆ ಮಾತನಾಡೋಣವೆಂದು ಮೂಲೆ ಸೇರಿದ್ದ ಅವಳ ಡೈರಿ ಕೈಯಲ್ಲಿ ಹಿಡಿದೆ… ಪುಟ ತೆರೆದೆ.. ಎಷ್ಟೇ ಪುಟ ತಿರುವುದರೂ ಅದರ ತುಂಬ ಅವಳಿಗಿಂತ ಹೆಚ್ಚಾಗಿ ಇದ್ದದ್ದು ನಾನೇ… ನನ್ನೊಡನೆ ಕೊನೇ ಬಾರಿಗೆ ಊರಿಗೆ ಬರುವಾಗ ಏನು ಬರೆದಳೆಂದು ಕೊನೇ ಪುಟ ತಡಕಾಡಿದೆ. ಅಲ್ಲಿದ್ದ ಒಂದೊಂದು ಅಕ್ಷರವೂ ಅಕ್ಷರಶಃ ನನ್ನನ್ನು ಕ್ಷಣಕ್ಕೊಮ್ಮೆ ಸಾಯಿಸಿದವು. ಮನದಲ್ಲಿ ಮಡುಗಟ್ಟಿದ್ದ ಭಾವಗಳು ಕರಗಿ ನೀರಾದವು.
ಅವಳು ತ್ಯಾಗ ಮಾಡಿದಳೊ, ಮೋಸ ಮಾಡಿದಳೋ ಅರ್ಥವಾಗುತ್ತಿಲ್ಲ. ಅವಳನ್ನು ಹೊಗಳಬೇಕೊ, ತೆಗಳಬೇಕೋ ಗೊತ್ತಿಲ್ಲ. ಬಹುಶಃ ಈ ಗೊಂದಲ ನನ್ನನ್ನು ಉಸಿರಿರುವರೆಗೂ ಕಾಡಬಹುದೇನೊ ? ಅದು ಕನಸು ಮತ್ತು ನನಸಿನ ನಡುವಿನ ಇಬ್ಬಂದಿ ಸ್ಥಿತಿ ಎನಿಸುತ್ತದೆ…..
#ಅವಳ_ಡೈರಿಯಲ್ಲಿನ_ಅವಳದೇ_ಕೊನೆಯ_ಮಾತು..
‘‘ಪೇಟೆ ಸೇರಿದ್ದ ನಾನು ಸ್ನೇಹಿತರೊಂದಿಗೆ ಸುತ್ತುವುದು ಸಾಮಾನ್ಯವಾಗಿತ್ತು. ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಭವಿಷ್ಯ ಹೇಗಿರಲಿದೆ ಎಂಬ ಕನಸಿಗೆ ಸ್ನೇಹಿತೆಯೊಬ್ಬಳು ಜೋತಿಷ್ಯದ ಸಲಹೆ ನೀಡಿದ್ದಳು. ಜೋತಿಷಿ, ನನ್ನ ಜಾತಕದಲ್ಲಿ ದೋಷವಿದ್ದು, ಪ್ರೀತಿಸುವವನ್ನು ಮದುವೆಯಾಗಲೂ ಅನೇಕ ಸವಾಲುಗಳಿವೆ. ವಿಶೇಷ ಪೂಜೆ ಮಾಡಿಸು. ಇನ್ನೆರೆಡು ವರ್ಷ ಮದುವೆಬೇಡವೆಂದು ಹೇಳಿದ್ದ. ಹೀಗಾಗಿ ಅವನೊಡನೆ ಮೊದಲಿನಂತೆ ಇದ್ದರೆ ಮದುವೆ ತಡೆಯಲಾಗದು. ವಿಷಯ ತಿಳಿದರೆ, ಅವನು ಹಾಗೂ ಕುಟುಂಬದವರಿಗೂ ವಿನಾ ಚಿಂತೆ. ಸಣ್ಣ ಪುಟ್ಟ ಜಗಳ ಮಾಡಿ ದಿನದೂಡಿದರಾಯಿತು. ಆಮೇಲೆ ಹೇಳೋಣ..’’
=========
(ಕಾಲ್ಪನಿಕ)

Please follow and like us:
error