ಬೂದಾಳರ `ಸರಹಪಾದ’ -ರಹಮತ್ ತರಿಕೇರಿ ಬರಹ

ನಟರಾಜ ಬೂದಾಳು ಅವರಿಗೆ ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ. ಅವರ ಸರಹಪಾದ(ಅನುವಾದ) ಪ್ರಶಸ್ತಿ ಪುರಸ್ಕೃತ ಕೃತಿ…

ಕರ್ನಾಟಕ ಸಂಸ್ಕೃತಿಯನ್ನು ಬೇರೆಬೇರೆ ಕಾಲಘಟ್ಟಗಳಲ್ಲಿ, ವಿಭಿನ್ನ ಉದ್ದೇಶಗಳಿಂದಲೂ ದೃಷ್ಟಿಕೋನಗಳಿಂದಲೂ ಅರ್ಥೈಸುವ ಕೆಲಸವನ್ನು ಕನ್ನಡ ವಿದ್ವತ್ತು ಮಾಡಿಕೊಂಡು ಬಂದಿದೆ. ಇದನ್ನು ಕರ್ನಾಟಕದ ಸಂಸ್ಕೃತಿ ಚಿಂತನೆ ಎನ್ನುಬಹುದು. ಕನ್ನಡದಲ್ಲಿ ಹೆಚ್ಚಿನ ಸಂಸ್ಕೃತಿ ಚಿಂತನೆಗಳು ಸಾಹಿತ್ಯಕ ನೆಲೆಯಿಂದ ಹುಟ್ಟಿದವು. ಆದರೆ ಅರ್ಥಪೂರ್ಣ ಸಂಸ್ಕೃತಿ ಚಿಂತನೆ ಸಾಹಿತ್ಯವನ್ನು ಒಳಗೊಂಡಂತೆ ಸಮಾಜ ರಾಜಕಾರಣ ತತ್ವಶಾಸ್ತ್ರಗಳ ಬುನಾದಿಯಲ್ಲಿ ಹರಹಿಕೊಳ್ಳುತ್ತದೆ; ಶಾಸನಗಳಿಂದ ಹಿಡಿದು ತತ್ವಪದದ ತನಕ, ರಾಜಕೀಯ ಕ್ರಿಯೆಯಿಂದ ಹಿಡಿದು ಟಿವಿ ಚಾನೆಲ್ಲಿನ ತನಕ, ಜನರ ಆಲೋಚನ ಕ್ರಮವನ್ನು ಬದಲಿಸುವ ಎಲ್ಲ ಕ್ಷೇತ್ರಕ್ಕೆ ಸಂಬಂಧಿಸಿದ ಸಾಮಗ್ರಿ ಮತ್ತು ವಿದ್ಯಮಾನಗಳನ್ನು ವಿಶ್ಲೇಷಿಸಲು ಹವಣಿಸುತ್ತದೆ; ವಿಶ್ಲೇಷಣೆ-ವ್ಯಾಖ್ಯಾನಗಳನ್ನು ತಾತ್ವೀಕರಿಸಿ ಹೊಸ ತಿಳಿವನ್ನು ಸೃಷ್ಟಿಸುತ್ತದೆ; ಈ ತಿಳಿವಿನ ಬೆಳಕಿನಲ್ಲಿ ಸಮಾಜವನ್ನು ಮತ್ತಷ್ಟು ಆರೋಗ್ಯಕರವಾಗಿ ಕಟ್ಟುವ ಕನಸನ್ನು ಹುದುಗಿಸುತ್ತದೆ; ಈ ತಿಳಿವು ಮತ್ತು ಕನಸುಗಳನ್ನು ಜನರ ಪ್ರಜ್ಞೆಯ ಭಾಗವಾಗಿಸುತ್ತದೆ. ಹೀಗಾಗಿ ಸಂಸ್ಕೃತಿ ಚಿಂತನೆಯು ಕೇವಲ ತಾತ್ವಿಕ ಚೌಕಟ್ಟುಗಳನ್ನು ಸೃಷ್ಟಿಸುವ ವಿದ್ವತ್ಕಾರ್ಯವಲ್ಲ. ಅದೊಂದು ಸಾಮಾಜಿಕ ರಾಜಕೀಯ ಹೊಣೆಗಾರಿಕೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಿದ ಸಮಕಾಲೀನ ವಿದ್ವಾಂಸರಲ್ಲಿ ಬೂದಾಳರೂ ಒಬ್ಬರು.
ಸಂಸ್ಕೃತಿ ಚಿಂತನೆಯಲ್ಲಿ ಪ್ರಧಾನವಾಗಿ ಎರಡು ಧಾರೆಗಳಿವೆ. ಒಂದು-ಸಾಂಪ್ರದಾಯಿಕ ಧಾರೆ. ಇದು ಮುಖ್ಯವಾಗಿ ಅಧಿಕಾರಸ್ಥ ವರ್ಗಗಳ ಪರವಾದ ದೃಷ್ಟಿಕೋನಗಳ ಮೂಲಕ ನಾಡಿನ ಬದುಕನ್ನು ಕಾಣುತ್ತ ಚಿಂತನೆಯನ್ನು ರೂಪಿಸುತ್ತದೆ. ಪರೋಕ್ಷವಾಗಿ ವರ್ತಮಾನದಲ್ಲಿ ಅಧಿಕಾರಸ್ಥ ವರ್ಗಗಳ ಯಜಮಾನಿಕೆಯನ್ನು ಮುಂದುವರೆಸಲು ಬೇಕಾದ ಆಲೋಚನಕ್ರಮವನ್ನು ಸ್ಥಾಪಿಸುತ್ತದೆ. ಇನ್ನೊಂದು- ಅಧಿಕಾರಸ್ಥ ವಲಯಗಳನ್ನು ವಿಮರ್ಶೆ ಮಾಡುತ್ತ ಮೂಡುವ ಧಾರೆ. ಇದು ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದ ಶ್ರಮಿಕ ಸಮುದಾಯಗಳ ಬಾಳ ವಿನ್ಯಾಸಗಳಲ್ಲಿರುವ ಸಂಸ್ಕೃತಿಯನ್ನು ವಿಶ್ಲೇಷಿಸುತ್ತದೆ; ದಮನಿತ ವರ್ಗಗಳಲ್ಲಿ ಚಾರಿತ್ರಿಕ ಅರಿವು ಮತ್ತು ಹಕ್ಕುಪಜ್ಞೆ ಮೂಡಿಸಲು ಯತ್ನಿಸುತ್ತದೆ. ಈ ಧಾರೆಯಲ್ಲಿ ಶಂಬಾ ಜೋಶಿ, ಕೆ.ಜಿ. ನಾಗರಾಜಪ್ಪ, ಎಸ್. ಎಸ್. ಹಿರೇಮಠ, ಎಚ್.ಎಸ್. ಶಿವಪ್ರಕಾಶ್, ಡಿ.ಆರ್. ನಾಗರಾಜ್, ಕೋಟಿಗಾನಹಳ್ಳಿ ರಾಮಯ್ಯ, ಬಿಳಿಮಲೆ, ಬಸವರಾಜ ಕಲ್ಗುಡಿ, ಬಂಜಗೆರೆ, ಲಕ್ಷ್ಮೀಪತಿ ಕೋಲಾರ, ಪದ್ಮಾಲಯ ನಾಗರಾಜ, ಕೃಷ್ಣಮೂರ್ತಿ ಹನೂರು, ನಟರಾಜ ಬೂದಾಳು ಮೊದಲಾಗಿ ಹಲವು ವಿದ್ವಾಂಸರು ಕೆಲಸ ಮಾಡಿದ್ದಾರೆ. ಇವರಲ್ಲಿ ಹೆಚ್ಚಿನವರ ಚಿಂತನೆಯು ಚಾರಿತ್ರಿಕ ಸಾಮಾಜಿಕ ನೆಲೆಯದಾದರೆ, ಬೂದಾಳರ ಚಿಂತನೆಯು ತತ್ವಶಾಸ್ತ್ರೀಯ ನೆಲೆಯದು.
ಬೂದಾಳರ ಚಿಂತನೆಯ ಮೂರು ಮುಖ್ಯ ಚಹರೆಗಳೆಂದರೆ-
ಅ. ಬೌದ್ಧ ಶಾಕ್ತ ಸಿದ್ಧ ಸೂಫಿ ಶರಣ ಚಾರ್ವಾಕ ನಾಥ ಅಚಲ ಆಜೀವಿಕಾ ಸಹಜಯಾನ ಮುಂತಾದ ದರ್ಶನಗಳ ಮೂಲಕ ಸಂಸ್ಕೃತಿಯನ್ನು ವಿಶ್ಲೇಷಿಸುವುದು. ಮುಖ್ಯವಾಗಿ ಮಹಾಯಾನೀ ಬೌದ್ಧಚಿಂತಕ ನಾಗಾರ್ಜುನ, ಅಲ್ಲಮಪ್ರಭು ಹಾಗೂ ತತ್ವಪದಕಾರರ ಅನುಸಂಧಾನದಲ್ಲಿ ಹೊಸಹೊಸ ಪ್ರಮೇಯಗಳನ್ನು ಕಟ್ಟುವುದು. ಈ ಅರ್ಥದಲ್ಲಿ ಬೂದಾಳರ ಚಿಂತನೆಯನ್ನು ಬಂಡುಕೋರ ಶ್ರಮಣ ಅಥವಾ ಗುರುಮಾರ್ಗಗಳಿಗೆ ಮಾಡಲಾದ ಸಮಕಾಲೀನ ವ್ಯಾಖ್ಯಾನ ಎಂದು ಕರೆಯಬಹುದು.
ಆ. ಕನ್ನಡ ಸಾಹಿತ್ಯದ ಬೇರೆಬೇರೆ ಕಾಲಘಟ್ಟದ ಪಠ್ಯಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸುವುದು. ಈ ಮೂಲಕ ಹೊಸ ತಾತ್ವಿಕ ಚೌಕಟ್ಟುಗಳನ್ನು ಹೊಮ್ಮಿಸುವುದು. ಅವುಗಳ ಮೂಲಕ ಬೇರೆಬೇರೆ ಚಿಂತನಾ ಪ್ರಸ್ಥಾನಗಳನ್ನು ಪರಿಶೀಲಿಸಿ ಬೆಲೆಗಟ್ಟುವುದು. ಈ ನಿಟ್ಟಿನಲ್ಲಿ ಬೂದಾಳರು ನಾಗಾರ್ಜುನನ ಮಧ್ಯಮಮಾರ್ಗ, ಅಲ್ಲಮನ ಶೂನ್ಯಮಾರ್ಗ, ಜೈನರ ಅನೇಕಾಂತವಾದಗಳ ಮೂಲಕ ಮತ್ತು ಕನ್ನಡ ಪಠ್ಯಗಳನ್ನು ವಿಶ್ಲೇಷಿಸುತ್ತ ಕನ್ನಡ ಕಾವ್ಯಮೀಮಾಂಸೆಯನ್ನು ಕಟ್ಟಿದರು. ಅದರಲ್ಲೂ ಪಂಪನ ಕಾವ್ಯವನ್ನು ಅನೇಕಾಂತವಾದದ ಮೂಲಕ, ತತ್ವಪದ ಹಾಗೂ ವಚನಗಳನ್ನು ಶೂನ್ಯವಾದದ ಮೂಲಕ ವಿಶ್ಲೇಷಿಸುತ್ತ ಅವರು ಹುಟ್ಟಿಸಿರುವ ಹೊಳಹುಗಳು ವಿಶೇಷವಾಗಿವೆ.
ಇ. ಹೀಗೆ ಕಟ್ಟಲಾದ ತಾತ್ವಿಕ ಚೌಕಟ್ಟು ಮತ್ತು ತತ್ವಸಂಹಿತೆಗಳನ್ನು ಕೇವಲ ಅರಿವಿನ ಸಾಧನಗಳಾಗಿಸದೆ, ಬಹುಸಂಖ್ಯಾತ ಸಮಾಜದ ಪ್ರಜ್ಞೆಯನ್ನು ರೂಪಿಸುವ ದೃಷ್ಟಿಕೋನವನ್ನಾಗಿಸಲು ಹಂಬಲಿಸುವುದು. ಬದುಕಿನಲ್ಲಿ ಪರ್ಯಾಯವಾದ ಹಾದಿಗಾಣಿಸುವ ಮತ್ತು ಬದುಕನ್ನು ಬದಲಾಯಿಸುವ ಕೈಮರಗಳನ್ನಾಗಿಸುವುದು. ಅವರು ಕೀಲಿಕೈ ರೂಪದ ಕೆಲವು ಬೌದ್ಧ ಪರಿಕಲ್ಪನೆಗಳನ್ನು ಆಧರಿಸಿ ಪ್ರಕಟಿಸುತ್ತಿರುವ ಕಿರುಪುಸ್ತಕಗಳ ಸರಣಿಗೆ `ಬುದ್ಧನಡೆ’ ಎಂದು ಕರೆದಿರುವುದು ಗಮನಾರ್ಹ. ತತ್ವಸಂಹಿತೆ ಸಾಧಕಸಂಹಿತೆಯೂ ಆಗಬೇಕು ಎಂದು ಆಶಿಸುವ ಬೂದಾಳರು, ಶರಣರ ವಚನ ಹಾಗೂ ತತ್ವಪದಗಳನ್ನು ಸಾಧಕ ಪಠ್ಯಗಳೆಂದೇ ಕರೆಯುವರು. ಹೀಗಾಗಿ ಅವರ ಚಿಂತನೆಗಳಿಗೆ ಕ್ರಿಯಾಚರಣೆಯ ತುರ್ತು ಒದಗಿದೆ.
ಮೇಲ್ಕಾಣಿಸಿದ ತಾತ್ವಿಕ ಭಿತ್ತಿಯಲ್ಲಿ ಕಳೆದೆರಡು ದಶಕಗಳಿಂದ ಬೂದಾಳರು `ನಾಗಾರ್ಜುನನ ಮೂಲಮಾಧ್ಯಮಕ ಕಾರಿಕಾ’ (೨೦೦೬), `ನಾಗಾರ್ಜುನ- ಅಲ್ಲಮಪ್ರಭು’ (೨೦೧೦), `ಕನ್ನಡ ಕಾವ್ಯಮೀಮಾಂಸೆ’ (೨೦೧೬), `ಪ್ರತ್ಯೇಕ ಬುದ್ಧ ಅಲ್ಲಮಪ್ರಭು’ (೨೦೧೭), `ಹಿಂದಣ ಹೆಜ್ಜೆಯನರಿತಲ್ಲದೆ’ (೨೦೧೭), `ಮಾತಿನ ಮೊದಲು’ (೨೦೧೯), `ಸಂಸ್ಕೃತಿ ಮೀಮಾಂಸೆ’ (೨೦೨೦) ಇತ್ಯಾದಿ ಕೃತಿಗಳನ್ನು ಪ್ರಕಟಿಸಿದರು. ಇವುಗಳ ಜತೆ ಅವರು ತಾವೊನ ದರ್ಶನವನ್ನು, ನಾಗಾರ್ಜುನನ ನುಡಿಗತೆಗಳನ್ನು ಹಾಗೂ ಸರಹಪಾದನ ಚರ್ಯಾಗೀತೆಗಳನ್ನು ತರ್ಜುಮೆ ಮಾಡಿದರು. ಈ ದಿಸೆಯಲ್ಲಿ ಅವರು ಕೈಗೊಂಡು ಪೂರೈಸಿದ ಮಹತ್ವದ ಕಾರ್ಯವೆಂದರೆ, ಇನ್ನೂರಕ್ಕೂ ಮಿಕ್ಕು ತತ್ವಪದಕಾರರನ್ನು ಹಲವಾರು ಸಂಪುಟಗಳಲ್ಲಿ ಸಂಪಾದಿಸಿದ್ದು; ಕರ್ನಾಟಕದ ಅಧ್ಯಯನಕ್ಕೆ ಹೊಸ ಆಕರಗಳನ್ನು ಒದಗಿಸುವುದಲ್ಲದೆ, ಅವನ್ನು ಖುದ್ದಾಗಿ ಅಧ್ಯಯನ ಮಾಡಿ ಅಧ್ಯಯನಕ್ಕೆ ಮಾದರಿಗಳನ್ನು ಸೃಷ್ಟಿಸಿದ್ದು.
ತಮ್ಮ ಚಿಂತನೆ ಮತ್ತು ದಾರ್ಶನಿಕ ಹುಡುಕಾಟಗಳಲ್ಲಿ ಬೂದಾಳರು ಕೆಲವು ವಿಶಿಷ್ಟ ಪರಿಕಲ್ಪನೆಗಳನ್ನು ಸೃಷ್ಟಿಸಿದ್ದಾರೆ- ಪ್ರಕ್ರಿಯಾ ಮೀಮಾಂಸೆ, ನಿಸರ್ಗಸಹಜ ವಿವೇಕ ಇತ್ಯಾದಿ. `ಬುದ್ಧನಡೆ’ ಎಂಬ ಪರಿಕಲ್ಪನೆಯನ್ನು `ಯಾರಿಗೂ ಕೇಡುಮಾಡದೆ ಬಾಳಬಯಸುವ ಎಲ್ಲ ಮನುಷ್ಯರಿಗೆ ಹೊಳೆಯುವ ನಿಸರ್ಗವಿವೇಕ’ ಎಂದವರು ವ್ಯಾಖ್ಯಾನಿಸುತ್ತಾರೆ. ಅವರ ವಿದ್ವತ್ ಕೆಲಸಗಳಿಗೆ ಚಲನಚಿತ್ರ ನಿರ್ದೇಶಕರಾಗಿದ್ದ ಕೆ.ಎಂ. ಶಂಕರಪ್ಪ, ಡಿ.ಆರ್.ನಾಗರಾಜ್ ಮುಂತಾದವರ ಪ್ರೇರಣೆಯಿದೆ. ಆದರೆ ಡಿ.ಆರ್. ಅವರ ಬೌದ್ಧಿಕ ಯಾನವು ಬೂದಾಳರ ಕೈಯಲ್ಲಿ ಬೇರೊಂದೇ ಆಯಾಮವೂ ಕಸುವನ್ನೂ ಪಡೆದುಕೊಂಡಿದೆ. ಇದಕ್ಕೆ ಕಾರಣ, ಅವರ ತಿರುಗಾಟಗಳು. ಕನ್ನಡ ವಿದ್ವತ್ತಿನಲ್ಲಿ ಗ್ರಂಥಸ್ಥ ಮತ್ತು ಕ್ಷೇತ್ರಕಾರ್ಯದ ಅನುಭವದ ಮೇಲೆ ಬೆಳೆದ ವಿದ್ವತ್ ಮಾದರಿಗಳಿಗವೆ. ಬೂದಾಳರ ವೈಧಾನಿಕತೆಯು ಈ ಎರಡೂ ಧಾರೆಗಳ ಸಾರ್ಥಕ ಕೂಡಿಕೆಯಲ್ಲಿ ಹುಟ್ಟಿದ್ದು. ವೈಯಕ್ತಿಕವಾಗಿ ನನಗೆ ಅವರ ಜತೆ ತತ್ವಪದ ಹಾಡಿಕೆಯನ್ನು ಕೇಳುತ್ತ ಹಲವಾರು ರಾತ್ರಿಗಳನ್ನು ಕಳೆಯುವ ಅವಕಾಶ ಒದಗಿದೆ. ಸಾಂಸ್ಕೃತಿಕ ವಿಶಿಷ್ಟವಾದ ಯಾವುದಾದರೂ ಆಚರಣೆ ಎಲ್ಲಿಯಾದರೂ ಇದೆಯೆಂದರೆ, ಎಷ್ಟೇ ದೂರವಿದ್ದರೂ ಅವರು ಧಾವಿಸುವರು. ದುಡಿವ ಜನರ ಸಾಂಸ್ಕೃತಿಕ ಲೋಕಗಳನ್ನು ಕಾಣುವ, ಜನರ ಜತೆ ಮಾತುಕತೆಯಾಡುವ ಅವರ ಶ್ರದ್ಧೆ ಅಪರೂಪದ್ದು.
ಸಾಂಸ್ಕೃತಿಕ ಹುಡುಕಾಟವು ಒಂದು ಬೌದ್ಧಿಕ ಯಾನ. ಹೊಳೆದಡದಲ್ಲಿ ಧ್ಯಾನಸ್ಥ ಅವಸ್ಥೆಯಲ್ಲಿ ಒಬ್ಬರೇ ಕೂತು ಗಾಳಹಾಕಿ ಮೀನು ಹಿಡಿವ ಕೆಲಸವೂ ಹೌದು. ಒಂದು ತಂಡವಾಗಿ ಪರ್ಸಿನ್ ಬಲೆಯೊಂದಿಗೆ ಕಡಲಿಗಿಳಿದು ಮಾಡುವ ಮೀನುಗಾರಿಕೆಯೂ ಹೌದು. ಈ ದಿಸೆಯಲ್ಲಿ ಬೂದಾಳರು ಮಾಡುತ್ತಿರುವ ಪ್ರಯೋಗ ಮತ್ತು ಹುಡುಕಾಟಗಳು ಹಾಗೂ ಸೃಷ್ಟಿಮಾಡಿರುವ ಪ್ರಮೇಯಗಳು ನಮ್ಮ ತಲೆಮಾರಿನ ಹಲವರ ತುಡಿತಗಳನ್ನು ಪ್ರತಿನಿಧಿಸುತ್ತವೆ. ಅವರು ತಮ್ಮ ಚಿಂತನೆಯನ್ನು ಬರೀ ಕೃತಿಗಳಲ್ಲಿ ಪ್ರಕಟಿಸುವವರಲ್ಲ, ತಮ್ಮ ಆಕರ್ಷಕ ಮಾತುಗಾರಿಕೆ ಮೂಲಕ ಸಭೆಗಳಲ್ಲಿ ತೋಂಡಿಯಾಗಿ ಹಂಚಿಕೊಳ್ಳುವವರೂ ಹೌದು. ಅವರ ಹುಡುಕಾಟ ಮತ್ತು ಹಂಚಿಕೆಗಳು ಮುಗಿದಿಲ್ಲ. ಪ್ರಕ್ರಿಯೆಯಲ್ಲಿವೆ. ಅವರ ಚಿಂತನೆಗಳನ್ನು ಸಮ್ಮತಿ-ಭಿನ್ನಮತಗಳ ಪ್ರತಿಕ್ರಿಯಿಸುವ ಮೂಲಕ ಓದುಗರು ಅರಿಯಬೇಕಿದೆ ಮತ್ತು ಬೆಳೆಸಬೇಕಿದೆ. ಚಿಂತನೆ ಅಥವಾ ವಿದ್ವತ್ತು ಎಷ್ಟೇ ಘನವಾಗಿರಲಿ, ಓದುಗರಲ್ಲಿ ಅನುಸಂಧಾನಗೊಂಡು ತಕ್ಕ ಅರ್ಥವಂತಿಕೆ ಪಡೆದುಕೊಳ್ಳುವುದೇ ಅದು ಜೀವಂತವಾಗಿ ಬದುಕುವ ಉಪಾಯ.

ಅವರ `ಸರಹಪಾದ’ವು ಕೇವಲ ಅನುವಾದವಲ್ಲ. ಅದು ಬೌದ್ಧದಾರ್ಶನಿಕತೆಯು ಕನ್ನಡದಲ್ಲಿ ಮರುಹುಟ್ಟನ್ನು ಪಡೆಯಲು ಮಾಡಿರುವ ಸೃಜನಶೀಲ ಯತ್ನ. ವೈಯಕ್ತಿಕ ಮತ್ತು ಸಾಮುದಾಯಿಕ ತುರ್ತಿನಿಂದ ಕನ್ನಡಿಸಿದ ಕೃತಿ. ಸರಹನ ಹೆಸರಲ್ಲಿರುವ ‘ಪಾದ’ ಶಬ್ದವು, ಸಿದ್ಧಪರಂಪರೆಯಲ್ಲಿ ಸಾಮಾನ್ಯವಾಗಿ ಗೌರವಸೂಚಕ ವಿಶೇಷಣವಾಗಿದೆ. ಈ ಪಾದವು ಗುರುಪಂಥದಲ್ಲಿ ಶಿಷ್ಯರು ಗುರುವಿನ ಸಂಕೇತವಾಗಿ ಆರಾಧಿಸುವ ದೇಹದ ಅಂಗವೂ ಆಗಿದೆ. ನಮ್ಮಲ್ಲಿ ವ್ಯಾಪಕವಾಗಿರುವ ಪಾದುಕಾಷಮಚರಣದ ಆರಾಧನೆ ಮೂಲತಃ ಬೌದ್ಧರಿಣಂದ ಬಂದುದು. ಜತೆಗೆ ಇದು ಜ್ಞಾನಗಳಿಕೆ ಮತ್ತು‌ಪ್ರಸರಣಕ್ಕೆ ಪರಿವ್ರಾಜಕತನವು ಮುಖ್ಯ ಲಕ್ಷಣವಾಗಿದ್ದ ಆಗಿರುವ ಬೌದ್ಧ-ಸೂಫಿ-ನಾಥ-ಅವಧೂತ –ಆರೂಢ ಮುಂತಾಗಿ ಗುರುಪಂಥದ ಲಕ್ಷಣವೂ ಹೌದು. ಬೌದ್ಧದರ್ಶನವು ಹುಟ್ಟಿದ್ದೇ ಬುದ್ಧನ ಚಾರಣದಿಂದ. ಅಲ್ಲಿ ಆತ ಭೇಟಿಮಾಡಿದ ಜನರೊಡನೆ ಮಾಡಿದ ಸಂವಾದದಿಂದ. ಮಂಗಳೂರಿನ ಕದ್ರಿ ಮಂಜುನಾಥಗುಡಿಯಲ್ಲಿರುವ ಗೋರಖನಾಥನ ಪ್ರತಿಮೆಯು ಚಾರಣ ಭಂಗಿಯಲ್ಲಿದೆ. ‘ಶೂನ್ಯಸಂಪಾದನೆ’ಯ ಕೊನೆಯಲ್ಲಿ ಶಿವಗಣಪ್ರಸಾದಿಯು ಮಹಾತಿರುಗಾಟದಿಂದ ಬರುವ ಅಲ್ಲಮನ ರುದ್ರರಮಣೀಯವಾದ ವರ್ಣನೆಯನ್ನು ಮಾಡುವುದುಮಟು. ಗುರುಪಂಥಗಳಲ್ಲಿ ಜ್ಞಾನಕ್ಕೂ ತಿರುಗಾಟಕ್ಕೂ ಅವಿನಾ ಸಂಬಂಧ. ಸ್ವತಃ ಯೋಗಿ ಸರಹನು ತನ್ನ ಜೀವನ ಸಂಗಾತಿಯನ್ನು ತಕ್ಕ ಗುರುವಿನ ಹುಡುಕಾಟದಲ್ಲಿ ಮಾಡಿದ ತಿರುಗಾಟದಲ್ಲೇ ಪಡೆದವನು. ಈ ಹಿನ್ನೆಲೆಯಲ್ಲಿ ಸಪತ್ನೀಕರಾಗಿ ಸದಾ ಲೋಕತಿರುಗಾಟ ಮಾಡುವ ಬೂದಾಳರ `ಸರಹಪಾದ’ವು ಬಹುಮಾನಿತವಾಗಿರುವುದು ಅರ್ಥಪೂರ್ಣವಾಗಿದೆ.

Please follow and like us:
error