ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಒಂದು ಇತಿಹಾಸ : ರಾಘವೇಂದ್ರ ಹಿಟ್ನಾಳ

Kannadanet : ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇದ್ದ ಕಾಂಗ್ರೆಸ್ ಸರಕಾರದ ಐದು ವರ್ಷದ ಸಾಧನೆಯೇ ಒಂದು ಇತಿಹಾಸ, ಮತ್ತೊಮ್ಮೆ ಅಂತಹ ಇತಿಹಾಸ ಮರುಕಳಿಸುವಂತಾಗಬೇಕೆಂದರೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.


ಅವರು ಭಾಗ್ಯನಗರದ ವಾರ್ಡ ೨, ೭, ೮, ೧೨ ಮತ್ತು ೧೪ರಲ್ಲಿ ಸುಮಾರು ೬೪ ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಏಳನೆ ವಾರ್ಡಿನ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಮಾತನಾಡಿದರು. ದೇಶದಲ್ಲಿ ಇಂಧನ, ಆಹಾರ ಧಾನ್ಯ ಸೇರಿ ಎಲ್ಲಾ ಬೆಲೆಗಳು ಏರುತ್ತಿದ್ದು, ಜನರ ಜೀವನಮಟ್ಟ ಕುಸಿಯುತ್ತಿದೆ, ಯುಪಿಎ ಸರಕಾರ ಮಾಡಿದ ಎಲ್ಲಾ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ನಿಲ್ಲಿಸಿದ್ದು, ಕರೋನಾ ಹೆಸರಲ್ಲಿ ಜನರನ್ನೇ ಸುಲಿಯುತ್ತಿದ್ದಾರೆ ಎಂದರು.
ಮೋದಿ ಮೋದಿ ಎಂದು ಈಗಲೂ ಅನೇಕರು ಬೊಬ್ಬೆ ಇಡುವದನ್ನು ಕಂಡು ಮರುಕ ಹುಟ್ಟುತ್ತದೆ, ಅವರು ಕೇವಲ ಭ್ರಮೆಯಲ್ಲಿಯೇ ಬದುಕುತ್ತಿದ್ದಾರೆ, ಚಾಯ್‌ವಾಲಾ ಪ್ರಧಾನಿಯಾದರೆ ನಮಗೇನು ಬೇಸರವಿಲ್ಲ, ಅದು ಸಂವಿಧಾನದ ಶಕ್ತಿ ಆದರೆ ಅದೇ ಸಂವಿಧಾನವನ್ನು ಸರ್ವನಾಶ ಮಾಡಲು ಹೊಸ ತಂತ್ರ ಹುಡಿದ್ದಾರೆ, ಅದುವೇ ಸರಕಾರಿ ಆಸ್ತಿಗಳನ್ನು ಮಾರುವದು, ನಗದೀಕರಣ ಹೆಸರಲ್ಲಿ ಉಳಿದಿರುವ ಅಷ್ಟನ್ನೂ ಖಾಸಗಿ ಒಡೆತನಕ್ಕೆ ಕೊಡುವ ಭ್ರಷ್ಟ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಜನರೇ ಬುದ್ಧಿ ಕಲಿಸಬೇಕು, ಅದಕ್ಕೆ ಇರುವ ಒಂದೇ ಮಾರ್ಗ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಸೋಲಿಸುವದು ಎಂದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ, ಯುವ ಉತ್ಸಾಹಿ ಯುವ ಶಾಸಕರನ್ನು ಪಡೆದ ನಮ್ಮ ಕ್ಷೇತ್ರ ನಿಜವಾಗಲೂ ಪುಣ್ಯವಂತ, ಭಾಗ್ಯನಗರಕ್ಕೆ ಅವರ ಕೊಡುಗೆ ಅಪಾರ, ಕಳೆದ ನಾಲ್ಕು ದಶಕದಲ್ಲಿ ಆಗದಷ್ಟು ಕೆಲಸಗಳು ಆಗಿವೆ ಎಂದರು.
ಮಾಜಿ ತಾಲೂಕ ಪಂಚಾಯತಿ ಸದಸ್ಯ, ಜೆಬಿಆರ್ ಶಾಲೆ ಸಂಸ್ಥಾಪಕ ದಾನಪ್ಪ ಕವಲೂರ ಅವರು ಮಾತನಾಡಿ, ಶಾಸಕರು ಭಾಗ್ಯನಗರಕ್ಕೆ ಮಾಡಿರುವ ಕೆಲಸಗಳಿಗೆ ಅವರನ್ನು ಹೆಚ್ಚಿನ ಮತ ಕೊಟ್ಟು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಋಣ ತೀರಿಸಿಕೊಳ್ಳಬೇಕು, ಅವರು ಹತ್ತಾರು ಕೋಟಿ ಹಣವನ್ನು ಭಾಗ್ಯನಗರಕ್ಕೆ ನಿರಂತರವಾಗಿ ಕೊಟ್ಟಿದ್ದಾರೆ, ಭಾಗ್ಯನಗರ ಅಭಿವೃದ್ಧಿಯಾಗಲಿ ಎಂದು ಪಟ್ಟಣ ಪಂಚಾಯತಿ ಮಾಡಿಸಿಕೊಟ್ಟಿದ್ದಾರೆ, ಅವರು ಇಲ್ಲವಾಗಿದ್ದರೆ ಇಂದು ಭಾಗ್ಯನಗರ ಕೊಪ್ಪಳಕ್ಕೆ ಸೇರಿರುತ್ತಿತ್ತು ಹಾಗೂ ಅಭಿವೃದ್ಧಿಗೆ ಹಲವು ದಶಕಗಳೇ ಬೇಕಾಗುತ್ತಿತ್ತು ಎಂದರು.
ಕಾಮಗಾರಿಗಳ ವಿವಿರ : ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಜರುಗಿದವು. ರೂ. ೫.೦೦ ಲಕ್ಷದಲ್ಲಿ ೨ನೇ ವಾರ್ಡನ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ರೂ. ೧೮.೫೪ ಲಕ್ಷದಲ್ಲಿ ೭ನೇ ವಾರ್ಡನ ಸಿಸಿ ಚರಂಡಿ ಮತ್ತು ಸ್ಲ್ಯಾಬ್ ನಿರ್ಮಾಣ, ರೂ. ೧೯.೦೦ ಲಕ್ಷದಲ್ಲಿ ೮ನೇ ವಾರ್ಡನ ಸಿಸಿ ಚರಂಡಿ ಸ್ಲ್ಯಾಬ್ ಮತ್ತು ಸಿಡಿ ನಿರ್ಮಾಣ, ರೂ. ೦೯.೦೦ ಲಕ್ಷದಲ್ಲಿ ೧೨ನೇ ವಾರ್ಡನ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ರೂ. ೧೨.೫೦ ಲಕ್ಷದಲ್ಲಿ ೧೪ನೇ ವಾರ್ಡನ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಕ್ಬರ್ ಪಾಶಾ ಪಲ್ಟನ್ ಮತ್ತು ಅಜೀಮುದ್ದಿನ್ ಅತ್ತಾರ್, ನಗರಸಭೆ ಮಾಜಿ ಗವಿಸಿದ್ದಪ್ಪ ಚಿನ್ನೂರ್, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಎಂ. ಪಾಷಾ ಕಾಟನ್, ಮಾಜಿ ಜಿ. ಪಂ. ಸದಸ್ಯ ಪ್ರಸನ್ನ ಗಡಾದ್, ಮುಖಂಡರುಗಳಾದ ಕೆ. ಎಂ. ಸೈಯ್ಯದ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯರಾದ ತುಕಾರಾಮಪ್ಪ ಗಡಾದ, ಮಂಜುನಾಥ ಜಿ. ಗೊಂಡಬಾಳ, ಹೊನ್ನೂರಸಾಬ್ ಭೈರಾಪೂರ, ರಮೇಶ ಹ್ಯಾಟಿ, ಗಂಗಾಧರ್ ಕಬ್ಬೇರ್, ಯಶೋಧಾ ಮರಡಿ, ಮಂಜುನಾಥ ಸಾಲಿಮಠ, ತಾರಾಬಾಯಿ ಹಬೀಬ, ಸುರೇಶ ದರಗದಕಟ್ಟಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ ಬಬಲಾದ, ಸಮುದಾಯ ಸಂಘಟನಾಧಿಕಾರಿ ಮಂಗಳಾ ಕುಲಕರ್ಣಿ, ಕಿರಿಯ ಆರೋಗ್ಯ ನಿರೀಕ್ಷಕಿ ಅಕ್ಕಮಹಾದೇವಿ, ಜೆಇ ಸೋಮಪ್ಪ, ಮುಖಂಡರಾದ ಮಹಾದೇವಪ್ಪ ಎರೆ, ಶಿವಣ್ಣ ಗೌಡ್ರ, ಯಮನಪ್ಪ ತಂಬ್ರಳ್ಳಿ, ಭೋಗಪ್ಪ ಡಾಣಿ, ಚನ್ನಪ್ಪ ತಟ್ಟಿ, ಅಶೋಕ ಗೋರಂಟ್ಲಿ ಮುಂತಾದವರು ಇದ್ದರು.

Please follow and like us: