ಯಶಸ್ಸು ಕಲಾ ಟ್ರಸ್ಟ್ ಸೇವೆ ಹಳ್ಳಿ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ

Kannadanet NEWS
ನಮ್ಮ ನಡಿಗೆ ಬುದ್ಧನೆಡೆಗೆ ಅರಿವಿನ ಕಾರ್ಯಕ್ರಮದಲ್ಲಿ ಮೈಲಾರಪ್ಪ ಬೂದಿಹಾಳ ಅಭಿಮತ

ಕಾರಟಗಿ: ಯಶಸ್ಸು ಕಲಾ ಟ್ರಸ್ಟ್‌ನಿಂದ ಉತ್ತಮ ಸಮಾಜಮುಖಿ ಕಾರ್ಯ ನಡೆಯುತ್ತಿದ್ದು, ಇವರ ಅರಿವಿನ ನಿಸ್ವಾರ್ಥ ಸೇವೆ ಹಳ್ಳಿ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ೨೦೨೦-೨೧ನೇ ಸಾಲಿನ ಕೊಪ್ಪಳ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮೈಲಾರಪ್ಪ ಬೂದಿಹಾಳ ಅವರು ಹೇಳಿದರು.ಇತ್ತೀಚೆಗೆ ಕಾರಟಗಿ ತಾಲ್ಲೂಕಿನ ಬರಗೂರು ಗ್ರಾಮದ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಯಶಸ್ಸು ಕಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಮ್ಮ ನಡಿಗೆ ಬುದ್ಧನೆಡೆಗೆ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಳ್ಳೆಯ ಯೋಚನೆಯೊಂದಿಗೆ ಯಶಸ್ಸು ಕಲಾ ತಂಡ ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮಗಳಲ್ಲಿ ನಮ್ಮ ನಡಿಗೆ ಬುದ್ಧನೆಡೆಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಗೌತಮ ಬುದ್ಧನ ವಿಚಾರ ಧಾರೆಗಳು, ಗೀತೆಗಳು, ಮಹನೀಯರ ತತ್ವಾದರ್ಶಗಳು ಹಾಗೂ ಶೈಕ್ಷಣಿಕ ಮಹತ್ವ ಸೇರಿದಂತೆ ಹಲವಾರು ವಿಚಾರಗಳ ಮೂಲಕ ಅರಿವನ್ನು ಮೂಡಿಸುತ್ತಿರುವುದು ಎಲ್ಲರೂ ಮೆಚ್ಚುಗೆಪಡುವ ವಿಷಯ ಎಂದು ಶ್ಲಾಘಿಸಿದರು.
ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ. ನೀವು ಕಂಡ ಕಷ್ಟಗಳನ್ನು ನಿಮ್ಮ ಮಕ್ಕಳಿಗೆ ಬಾರದಂತೆ ನೋಡಿಕೊಳ್ಳಿ. ಮಕ್ಕಳು ಉನ್ನತ ಸ್ಥಾನದಲ್ಲಿದ್ದರೆ ನಿಮ್ಮ ಕುಟುಂಬಕ್ಕೆ, ಗ್ರಾಮಕ್ಕೆ ಗೌರವದ ವಿಷಯ ಹಾಗೂ ದೇಶವೇ ಹೆಮ್ಮೆ ಪಡುವ ಸಂಗತಿಯಾಗುವುದು. ಆದ್ದರಿಂದ ಮಕ್ಕಳಿಗೆ ಸಾಧನೆ ಮಾಡಲು ಪ್ರೋತ್ಸಾಹ, ಸಹಕಾರವಿರಲಿ. ಒಟ್ಟಾರೆ ಶಿಕ್ಷಣದ ಹುಲಿಯ ಹಾಲು ನೀಡಿ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಬರಗೂರು ಗ್ರಾಮದ ೫೦ ಬಡಕುಟುಂಬದ ಮಕ್ಕಳಿಗೆ ನನ್ನ ಪ್ರಶಸ್ತಿ ಮೊತ್ತದಲ್ಲಿ ರೋಲಿಂಗ್ ಬ್ಲಾಕ್ ಬೋರ್ಡ್‌ಗಳನ್ನು ಉಚಿತವಾಗಿ ನೀಡುತ್ತೇನೆ. ಯಶಸ್ಸು ಕಲಾ ಟ್ರಸ್ಟ್‌ನ ಸೇವೆಯಲ್ಲಿ ನನ್ನ ಪಾಲಿನ ಸಹಕಾರವಿದು ಹಾಗೂ ಈ ಚಿಕ್ಕ ಸಹಾಯದಿಂದ ನನಗೆ ಲಭಿಸಿದ ಪ್ರಶಸ್ತಿಗೆ ಮತ್ತಷ್ಟು ಗೌರವ ದೊರಕಿದಂತಾಗುತ್ತದೆ ಎಂದರು.
ಯಶಸ್ಸು ಕಲಾ ಟ್ರಸ್ಟ್‌ನ ಅಧ್ಯಕ್ಷ ಚಿದಾನಂದ ಬರಗೂರು ಮಾತನಾಡಿ, ಯಶಸ್ಸು ಕಲಾ ಟ್ರಸ್ಟ್ ಯುವ ಬಳಗ ೧೫ ಸದಸ್ಯರಿಂದ ಕೂಡಿದ್ದು, ಎಲ್ಲರೂ ವಿದ್ಯಾಭ್ಯಾಸ, ಉದ್ಯೋಗದ ಜೊತೆ-ಜೊತೆಯಲ್ಲೇ ಅರಿವು ಮೂಡಿಸಲಾಗುತ್ತಿದೆ. ನಿಸ್ವಾರ್ಥ ಮನೋಭಾವದಿಂದ ನಮ್ಮ ನಡಿಗೆ ಬುದ್ಧನೆಡೆಗೆ ಎಂಬ ಅರಿವಿನ ಕಾರ್ಯಕ್ರಮವನ್ನು ಹಳ್ಳಿ-ಹಳ್ಳಿಗೆ ತೆರಳಿ ಆಯೋಜಿಸಲಾಗುತ್ತಿದ್ದೆ. ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಬದಲಾವಣೆ ಕಾಣಲು ಸಾಧ್ಯ. ಆದ್ದರಿಂದ ಈ ಸಾಮಾಜಿಕ ಪರಿವರ್ತನೆಗೆ ಎಲ್ಲರೂ ಕೈಜೋಡಿಸಿ ಹಾಗೂ ಮಕ್ಕಳ ಮುಂದಿನ ಭವಿಷ್ಯಕ್ಕೆ ಸೇತುವೆಯಾಗಿ. ಈ ವಿಶೇಷ ಅರಿವಿನ ಕಾರ್ಯಕ್ರಮಕ್ಕೆ ಕೈಜೋಡಿಸಿರುವ ಬರಗೂರು ಗ್ರಾಮಸ್ಥರಿಗೆ ಅಭಿನಂದನೆಗಳನ್ನು ತಿಳಿಸಿದರು.ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸ್ಸಪ್ಪ ನಾಗೋಲಿ ಮಾತನಾಡಿ, ಹಳ್ಳಿಗಳಿಗೆ ಭೇಟಿ ನೀಡಿ, ಅರಿವಿನ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಯಶಸ್ಸು ಕಲಾ ಟ್ರಸ್ಟ್‌ನ ಯುವ ಬಳಗದ ಕಾರ್ಯ ಶ್ಲಾಘನೀಯವಾದದ್ದು. ನಾನು ಕೂಡ ಬಡತನದ ನೆರಳಿನಲ್ಲಿ ಬೆಳೆದವನು. ಬಡತನ ಶಾಪವಲ್ಲ, ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮಲಿದೆ. ಎಲ್ಲದಕ್ಕೂ ಶಿಕ್ಷಣ ಪರಿಹಾರವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಜೋತೆಗೆ ಪ್ರೋತ್ಸಾಹ ನೀಡಿ. ಇದರಿಂದ ಹೊರ ಜಗತ್ತಿಗೆ ಪರಿಚಯಿಸಿ ಹಾಗೂ ಗೌರವಯುತವಾಗಿ ಜೀವನ ನಡೆಸಿ ಎಂದರು.
ಉಪನ್ಯಾಸಕ ಪರಶುರಾಮ ಮಾತನಾಡಿ, ದೇಶದ ಅಭಿವೃದ್ಧಿಗೆ ಶೈಕ್ಷಣಿಕ ಪಾತ್ರ ಅಪಾರ. ನಮ್ಮ ದೇಶ ಹಳ್ಳಿಗಳಿಂದ ಕೂಡಿದ ರಾಷ್ಟ್ರವಾಗಿದೆ. ಆದರೆ, ಹಳ್ಳಿಗಳಲ್ಲಿ ಶಿಕ್ಷಣವಂತರ ಸಂಖ್ಯೆ ಅತೀ ಕಡಿಮೆ ಇರುವುದು ದುಃಖಕರ ಸಂಗತಿ. ಆದ್ದರಿಂದ ಮಕ್ಕಳನ್ನು ಶಾಲೆಗೆ ದಾಖಲು ಮಾಡಿ. ಶಿಕ್ಷಣವಂತರನ್ನಾಗಿಸಿ. ಟ್ರಸ್ಟ್‌ನ ಒಳ್ಳೆಯ ಆಶಯಕ್ಕೆ ಶುಭಾವಾಗಲಿ ಎಂದರು.
ಟ್ರಸ್ಟ್‌ನ ಸದಸ್ಯ ಮುದಕಪ್ಪ ಕುಂಟೋಜಿ ಅವರು ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟ್‌ನ ಸದಸ್ಯರಾದ ಮರಿಸ್ವಾಮಿ ಈಳಿಗನೂರು, ರಮೇಶ್ ಹೆಚ್.ಕೆ ಅನಿಸಿಕೆ ವ್ಯಕ್ತಪಡಿಸಿದರು.ಈ ವೇಳೆ ಸಾಹಿತಿ ರಮೇಶ್ ಗಬ್ಬೂರು ಅವರು ಯಶಸ್ಸು ಕಲಾ ತಂಡದ ಕಲಾವಿದರೊಂದಿಗೆ ಅರಿವಿನ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಿಗೆ, ನೆರವು ನೀಡಿದ ಗ್ರಾಮದ ಮುಖಂಡರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕೊನೆಯಲ್ಲಿ ಕಲಾ ಬಳಗದ ನಿಸ್ವಾರ್ಥ ಸೇವೆ ಮೆಚ್ಚಿ ಗ್ರಾಮಸ್ಥರಿಂದ ಗೌರವ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸಪ್ಪ, ಮರಿಸ್ವಾಮಿ ಹೆಗಡೆ, ಪರಶುರಾಮ ಆಗೋಲಿ, ರಮೇಶ್ ಮರಿದುರ್ಗಪ್ಪ, ಯಶಸ್ಸು ಕಲಾ ತಂಡದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪಕೀರಪ್ಪ ಬರಗೂರು, ಸ್ವಾಗತವನ್ನು ನಿಗಮ್ಮ, ದ್ಯಾವಮ್ಮ ನೆರವೇರಿಸಿದರು.ಪ್ರಶಸ್ತಿ ಮೊತ್ತ ಘೋಷಿಸಿದ ಉತ್ತಮ ಶಿಕ್ಷಕ
೨೦೨೦-೨೧ನೇ ಸಾಲಿನ ಕೊಪ್ಪಳ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮೈಲಾರಪ್ಪ ಬೂದಿಹಾಳ ಅವರು ಬರಗೂರು ಗ್ರಾಮದ ೫೦ ಬಡಕುಟುಂಬದ ಮಕ್ಕಳಿಗೆ ತಮಗೆ ಲಭಿಸಿದ ಪ್ರಶಸ್ತಿ ಮೊತ್ತದಲ್ಲಿ ರೋಲಿಂಗ್ ಬ್ಲಾಕ್ ಬೋರ್ಡ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು. ಯಶಸ್ಸು ಕಲಾ ಟ್ರಸ್ಟ್‌ನ ಸೇವೆಯಲ್ಲಿ ನನ್ನ ಪಾಲಿನ ಸಹಕಾರವಿದು. ಈ ಚಿಕ್ಕ ಸಹಾಯದಿಂದ ನನಗೆ ಲಭಿಸಿದ ಪ್ರಶಸ್ತಿಗೆ ಮತ್ತಷ್ಟು ಗೌರವ ದೊರಕಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Please follow and like us: