ಮರಾಠಿಯ ಪ್ರಸಿದ್ಧ ನಾಟಕಕಾರ,ಕತೆಗಾರ, ಪತ್ರಕರ್ತ ಜಯಂತ ಪವಾರ ನಿಧನ

ಕನ್ನಡನೆಟ್ ನ್ಯೂಸ್ : ಮರಾಠಿಯ ಪ್ರಸಿದ್ಧ ನಾಟಕಕಾರ,ಕತೆಗಾರ, ಪತ್ರಕರ್ತ  ಜಯಂತ ಪವಾರ ನಿಧನರಾಗಿದ್ದಾರೆ . ಈ ಕುರಿತು ಡಿ.ಎಸ್.ಚೌಗಲೆಯವರು ಬರೆದ ಬರಹ ಇಲ್ಲಿದೆ…

ಮರಾಠಿಯ ಪ್ರಸಿದ್ಧ ನಾಟಕಕಾರ,ಕತೆಗಾರ, ಪತ್ರಕರ್ತ ಹಾಗೂ ಆಪ್ತಮಿತ್ರರಾದ ಜಯಂತಪವಾರ ಇಂದು ಮುಂಬೈನಲ್ಲಿ ನಮ್ಮನ್ನಗಲಿದ್ದಾರೆ.ಹಲವು ವರ್ಷಗಳಿಂದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ #ಅಧಾಂತರ ನಾಟಕವನ್ನು ವಿಜಯ ತೆಂಡುಲಕರ ಬಹಳ ಮೆಚ್ಚಿದ್ದರು. #ಕಾಯಡೇಂಜರ್ವಾರಾಸುಟಲಾಯ ನಾಟಕವು ಮುಂಬಯಿನ ಭೂಕಬಳಿಕೆ ಹುನ್ನಾರ ಬಯಲಿಗೆಳೆವ ಕೃತಿ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಥಾಸಂಕಲನ #ಫಿನಿಕ್ಸ್ಚ್ಯಾರಾಖೇತೂನಉಠಲೇಲಾಮೋರ ಅನ್ನು ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆಯವರು #ಫಿನಿಕ್ಸ್ಬೂದಿಯಿಂದೆದ್ದನವಿಲು ಎಂದು ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಮುಂಬಯಿನ ಬದುಕನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಹತ್ತು ವರ್ಷಗಳ ಹಿಂದೆ ನನ್ನ #ದಿಶಾಂತರ ಮರಾಠಿ ಅನುವಾದ ನಾಟಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಆ ನಾಟಕದ ಕುರಿತು ಮಾತನಾಡಿದ್ದು ನನಗೊಂದು ಬಹುದೊಡ್ಡ ಬಲ ನೀಡಿತ್ತು. ತಮ್ಮ ಮಾತುಗಳಲ್ಲಿ “ದಿಶಾಂತರ ನಾಟಕ ಪ್ರಯೋಗ ನಿರ್ದೇಶಕರಿಗೊಂದು ಸವಾಲು”…ಎಂದು ಪ್ರಶಂಸಿದ್ದರು. ಸದಾ ಅವರ ಹಾರೈಕೆ ನನ್ನ ಮೇಲಿತ್ತು. ಆ ಕೃತಿಯನ್ನು ಮತ್ತೊಬ್ಬ ಪ್ರಸಿದ್ಧ ನಾಟಕಕಾರ #ಪ್ರೇಮಾನಂದಗಜವಿ ಅವರು ಬಿಡುಗಡೆಗೊಳಿಸಿದ್ದರು.ಅದೊಂದು ಆಪ್ತ ಸಮಾರಂಭ. ಕರ್ನಾಟಕ ಸಂಘದ ಭರತಕುಮಾರ ಪೊಲಿಪೊ ಮತ್ತು ಗೆಳೆಯರು ಸಂಘಟಿಸಿದ್ದರು. ಅಷ್ಟೇ ಯಾಕೆ ,೨೦೧೫ ರಲ್ಲಿ ಮುಂಬಯಿನ ನೆಹರು ಆರ್ಟ್ ಸೆಂಟರ್ ನಲ್ಲಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರಯೋಗಗೊಂಡ #ಸತ್ಯಶೋಧಕ ನಾಟಕ ನೋಡಲು ಬಂದಿದ್ದರು. ಕನ್ನಡ ಬಾರದಿದ್ದರೂ ನಾಟಕ ನೋಡಿ ಪ್ರಯೋಗ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ನಾನು ಮತ್ತು ಪೋಕಳೆಯವರು ಅವರ ಘನಿಷ್ಠ ಮಿತ್ರರಾಗಿದ್ದೆವು. ಅಪಾರ ಅಧ್ಯಯನ, ಜೀವನಾನುಭವವು ಅವರ ಕತೆ, ನಾಟಕಗಳ ಸತ್ವ. ಅವು ಕುಸುರಿಯ ಹೆಣಿಕೆಯಲ್ಲಿ ಸುಂದರ ಕಲೆಯಾಗಿ ಅರಳಿದ್ದವು. ಸಂಕೇತ,ಪ್ರತಿಮೆ,ರೂಪಕಗಳ ಧಣಿ ಜಯಂತರು. ಅವುಗಳ ಬಳಕೆಯು ಅವರ ಸೃಜನಶೀಲತೆಯ ಬಹುದೊಡ್ಡ ಶಕ್ತಿ. ಅವರ ಇನ್ನೊಂದು ಕೃತಿ #ಬಹುಜನಸಂಸ್ಕೃತಿವಾದಮತ್ತುಲೇಖಕ ಪೋಕಳೆಯವರು ಅನುವಾದಿಸಿದ್ದಾರೆ. ನಾನು ಅವರ ಅಧಾಂತರ ಮತ್ತು ಕಾಯ ಡೇಂಜರ್…. ನಾಟಕಗಳ ಅನುವಾದ ಮಾಡಬೇಕೆಂದು ಅವರಾಸೆಯಿತ್ತು.ಅದನ್ನು ಹಲವು ಬಾರಿ ಚರ್ಚಿಸಿದ್ದೆವು ಸಹ. ಆದರೆ ನನ್ನ ಕಾರ್ಯ ಒತ್ತಡದಲ್ಲಿ ಆಗಲಿಲ್ಲ. ಬಹುಕಾಲದಿಂದ ಅವರನ್ನು ಕಾಡಿದ ಕಾಯಿಲೆ ಕೊನೆಗೂ ತನ್ನ ಹಟ ಸಾಧಿಸಿ ಅವರನ್ನು ಬಲಿತೆಗೆದುಕೊಂಡಿತು.ಅವರ ನಿಧನ ರಂಗಭೂಮಿ ಮತ್ತು ಸಾಹಿತ್ಯಕ್ಕೆ ನಿರ್ವಾತ ಉಂಟು ಮಾಡಿದೆ.ವಯಕ್ತಿಕ ನನಗೆ ದೊಡ್ಡಣ್ಣನ ಕಳಕೊಂಡ ದುಃಖವಾಗಿದೆ.ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ…🌿🍀🌼💐🌸🌺

Please follow and like us:
error