ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ಹಿತ ಹೇಗೆ? -ದಿನೇಶ್ ಅಮೀನಮಟ್ಟು

ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗುತ್ತಿರುವ ಬಗ್ಗೆ ನಾನು ನಿನ್ನೆ ‘ರಾಜ್ಯಕ್ಕೆ ಹಿತ, ಬಿಜೆಪಿಗೆ ಹಿತಮಿತ, ಕಾಂಗ್ರೆಸ್ ಗೆ ಅಹಿತ’ ಎಂಬ ಪೋಸ್ಟ್ ಹಾಕಿದ್ದೆ. ಇದು ನನ್ನ ಮೊದಲ ನೋಟ ಅಷ್ಟೆ. ರಾಜಕೀಯ-ರಾಜಕಾರಣಿಯೂ ಸೇರಿದಂತೆ ಯಾವ ವ್ಯಕ್ತಿ-ವಿಷಯದ ಬಗ್ಗೆಯೂ ನಮ್ಮ ಮೊದಲ ನೋಟವೇ ಕೊನೆಯ ನೋಟ ಆಗುವುದಿಲ್ಲ. ಆ ಬರಹದಲ್ಲಿ ನಾನು ಒಪ್ಪದೆ ಇದ್ದ ಹಲವು ವಿಚಾರಗಳಿದ್ದವು. ಇದೇ ಬರಹದ ಒಂದೊಂದು ಸಾಲನ್ನು ವಿರೋಧಿಸಿ ಬರೆಯಿರಿ ಎಂದು ಯಾರಾದರೂ ಸವಾಲು ಹಾಕಿದರೆ ನಾನು ಅದನ್ನೂ ಬರೆಯಬಲ್ಲೆ.

ಬಹಳಷ್ಟು ಗೆಳೆಯ-ಗೆಳತಿಯರು ಈ ಬರಹಕ್ಕೆ ಸಹಮತ ಸೂಚಿಸಿ ಹೆಬ್ಬೆಟ್ಟು ಎತ್ತಿದ್ದಾರೆ, ಒಳ್ಳೆಯ ವಿಶ್ಲೇಷಣೆ ಎಂದು ಅಭಿನಂದಿಸಿದ್ದಾರೆ. ಯಥಾಪ್ರಕಾರ ಕೆಲವು ಅಂಡೆಪಿರ್ಕಿ ಭಕ್ತರು ಟ್ರೋಲ್ ಮಾಡಿದ್ದಾರೆ. ಒಬ್ಬ ಪತ್ರಕರ್ತನಾಗಿ ನಾನು ಇವೆರಡಕ್ಕಿಂತಲೂ ಭಿನ್ನವಾದ ಪ್ರತಿಕ್ರಿಯೆಯನ್ನು ಬಯಸುತ್ತೇನೆ.

ಕೆಲವರು ‘ರಾಜ್ಯಕ್ಕೆ ಹಿತ ಹೇಗೆ? ಎಂದು ಮೆಸೆಂಜರ್ ನಲ್ಲಿ ಕೇಳಿದ್ದಾರೆ. ಇದು ಸರಿಯಾದ ಪ್ರಶ್ನೆ. ರಾಜಕಾರಣ ಮತ್ತು ಆಡಳಿತ ಇವು ಸಂಪೂರ್ಣ ಭಿನ್ನ ಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳಲ್ಲಿಯೂ ಗೆದ್ದು ಬರುವವರು ಬಹಳ ಕಡಿಮೆ. ನಾನು ಕಂಡ ಹಾಗೆ ಈ ಎರಡೂ ಕ್ಷೇತ್ರಗಳನ್ನು ಸರಿಯಾಗಿ ಅರ್ಥಮಾಡಿಕೊಂಡವರು ದೇವೇಗೌಡರು ಮತ್ತು ಸಿದ್ದರಾಮಯ್ಯನವರು. ಆಡಳಿತ ಯಂತ್ರವನ್ನು ಪಳಗಿಸಿ, ಮಣಿಸಿ ಅದನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳುವ ಜಾಣ್ಮೆ ಇವರಿಗಿದೆ. ಬಹಳ ಮಂದಿಗೆ ಗೊತ್ತಿರುವ ಹಾಗೆ ಯಡಿಯೂರಪ್ಪನವರು ಒಳ್ಳೆಯ ಆಡಳಿತಗಾರರಲ್ಲ, ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಎಂದೂ ಅವರು ಮಾಡಿಲ್ಲ. ಅದನ್ನೆಲ್ಲ ಹೊಸದಾಗಿ ಕಲಿತುಕೊಳ್ಳುವ ವಯಸ್ಸೂ ಅವರದಲ್ಲ. ಈ ವಿಷಯದಲ್ಲಿ ಯಡಿಯೂರಪ್ಪನವರ ಸಾಲಿನಲ್ಲಿಯೇ ಇರುವವರು ಈಗಿನ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ.

ಸದ್ಯ ರಾಜ್ಯಕ್ಕೆ ಘನಘೋರ ಅನ್ಯಾಯವಾಗುತ್ತಿರುವುದು ಕೇಂದ್ರ ಸರ್ಕಾರದಿಂದ. ಬರಪರಿಹಾರ, ತೆರಿಗೆ ಹಂಚಿಕೆ, ವಿಶೇಷ ಅನುದಾನ, ಕೊರೊನಾಕ್ಕೆ ಸಂಬಂಧಿಸಿದ ವೈದ್ಯಕೀಯ ಸಲಕರಣೆ, ಲಸಿಕೆಗಳ ಪೂರೈಕೆ – ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಕರ್ನಾಟಕವನ್ನು ಕಡೆಗಣಿಸಿದೆ.
ಈ ಅನ್ಯಾಯವನ್ನು ಯಡಿಯೂರಪ್ಪನವರು ವಿಫಲ ಮುಖ್ಯಮಂತ್ರಿ ಎಂದು ಬಿಂಬಿಸಲು ಮಾಡಲಾಗಿತ್ತೇ? ಇಲ್ಲವೇ ಏನು ಮಾಡಿದರೂ ಯಡಿಯೂರಪ್ಪನವರು ಕುರ್ಚಿಗಾಗಿ ಬಾಯಿ ಮುಚ್ಚಿಕೊಂಡಿರುತ್ತಾರೆ ಎಂಬ ತಿರಸ್ಕಾರದಿಂದ ಮಾಡಿತ್ತೇ? ಗೆಲುವಿಗಾಗಿ ಮೋದಿಯವರನ್ನೇ ನಂಬಿರುವ ಕಾರಣ 25 ಬಿಜೆಪಿ ಸಂಸದರು ಬಾಯಿ ಬಿಡುವುದಿಲ್ಲ ಎಂಬ ಖಾತರಿಯಿಂದ ಮಾಡಿತ್ತೇ ಗೊತ್ತಿಲ್ಲ. ಆದರೆ ಇಂತಹದ್ದೊಂದು ಅನ್ಯಾಯ ರಾಜ್ಯಕ್ಕೆ ಆಗುತ್ತಿದೆ ಎಂದು ಅಂಕೆ-ಸಂಖ್ಯೆಗಳನ್ನೊಳಗೊಂಡ ವಾಸ್ತವಾಂಶದ ಜೊತೆಗೆ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡುವ ಸಾಮರ್ಥ್ಯ ಯಡಿಯೂರಪ್ಪನವರಿಗೆ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ನಾವು ಬೊಮ್ಮಾಯಿಯವರ ಮೇಲೆ ಭರವಸೆ ಇಡಬಹುದು. ವಿಧಾನಮಂಡಲದಲ್ಲಿ ಅವರನ್ನು ನೋಡಿದವರಿಗೆ, ಕೇಳಿದವರಿಗೆ ಇದು ಮನವರಿಕೆಯಾಗಬಹುದು. ಸಿದ್ದರಾಮಯ್ಯನವರಿರಲಿ, ಕೃಷ್ಣ ಬೈರೇಗೌಡರಿರಲಿ ಹಣಕಾಸಿನ ವಿಚಾರದಲ್ಲಿ ಚರ್ಚೆ ಮಾಡುವಾಗ ತಮ್ಮ ಸರ್ಕಾರ ಮತ್ತು ಪಕ್ಷವನ್ನು ಬೊಮ್ಮಾಯಿಯವರು ಸಮರ್ಥಿಸಿಕೊಂಡರೂ, ವಿರೋಧ ಪಕ್ಷದ ನಾಯಕರು ಎತ್ತುತ್ತಿರುವ ವಿಚಾರದಲ್ಲಿರುವ ಸತ್ಯಾಂಶ ಖಂಡಿತ ಅವರಿಗೆ ಗೊತ್ತಿರುತ್ತಿತ್ತು. ಕನಿಷ್ಠ ಪ್ರಧಾನಿ ಮತ್ತು ಕೇಂದ್ರ ಸಚಿವರ ಖಾಸಗಿ ಸಭೆಗಳಲ್ಲಿಯಾದರೂ ಈ ಸತ್ಯಾಂಶಗಳನ್ನು ಮನದಟ್ಟು ಮಾಡಿಕೊಡುವ ಪ್ರಯತ್ನವನ್ನಾದರೂ ಅವರು ಮಾಡಿ ರಾಜ್ಯಕ್ಕೆ ನ್ಯಾಯ ಒದಗಿಸಬಹುದೇನೋ ಎನ್ನುವ ಭರವಸೆ ನನ್ನದು. ಇದಕ್ಕಾಗಿ ‘ರಾಜ್ಯಕ್ಕೆ ಹಿತ’ ಎಂದಿದ್ದೆ.
ಇನ್ನು ಬಿಜೆಪಿಯ ಹಿಡನ್ ಅಜೆಂಡಾವನ್ನು ವಿರೋಧಿಸುವ ಶಕ್ತಿ ಬೊಮ್ಮಾಯಿಯವರಿಗೆ ಇಲ್ಲ ಎನ್ನುವುದು ಗೃಹಸಚಿವರಾಗಿ ಅವರು ಕಾರ್ಯನಿರ್ವಹಿಸಿದ ರೀತಿಯೇ ಸಾಕ್ಷಿ. ಈಗ ಸಂಘ ಪರಿವಾರದ ಕೃಪೆಯಿಂದಲೇ ಮುಖ್ಯಮಂತ್ರಿಯಾಗಿರುವ ಕಾರಣ ಈ ವಿಷಯದಲ್ಲಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲೂ ಸಾಧ್ಯ ಇಲ್ಲ.

ನನ್ನ ಬರವಣಿಗೆಯ ಓದುಗರು ದಾರಿ ತಪ್ಪಬಾರದೆಂದು ನನ್ನ ಆಲೋಚನೆ-ವಿಶ್ಲೇಷಣೆಯ ಇನ್ನೊಂದು ಬದಿಯನ್ನು ಪರಿಚಯಿಸುವ ಲೇಖನವೊಂದನ್ನು ನಾನೇ ಇಂದು ವಿವರವಾಗಿ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ Shiva Sundar ವಾರ್ತಾಭಾರತಿಯಲ್ಲಿ ಬರೆದ ಅಂಕಣ ಓದಿದೆ.
ದಯವಿಟ್ಟು ಅದನ್ನೂ ಒಮ್ಮೆ ಓದಿದರೆ ನಿಮಗೆ ಪೂರ್ಣ ಚಿತ್ರ ಸಿಗಬಹುದು.

Please follow and like us: