ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ದಿ ೦೫ ರಂದು ಫಾದರ್ ಸ್ಟ್ಯಾನ್ ಸ್ವಾಮಿಯವರು ಸೆರೆ ವಾಸದಲ್ಲಿ ಮರಣಹೊಂದಿದ್ದು, ಇವರ ಸಾವು ಮಾನವೀಯತೆಗೆ ಅನ್ಯಾಯ ಬಗೆದಂತಾಗಿದೆ. ಈ ಬಗ್ಗೆ ಎಲ್ಲಾ ಪ್ರಗತಿಪರರು ಜಯದೇವ ವೃತ್ತದಲ್ಲಿ ಸೇರಿ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಸ್ಟ್ಯಾನ್ ಸ್ವಾಮಿಯವರು ಜೀವನಪೂರ್ತೀ ಇತರರಿಗಾಗಿ ಮುಡಿಪಿಟ್ಟು ಬುಡಕಟ್ಟು ಜನಾಂಗದವರಿಗೆ, ಆದಿವಾಸಿಗಳಿಗಾಗಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದರು. ಇವರು ಮುಖ್ಯವಾಗಿ ದೇಶದಲ್ಲಿ ದಲಿತರ ಮತ್ತು ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುತ್ತಾ ದಲಿತರು ಮತ್ತು ಮುಸಲ್ಮಾನರನ್ನು ಒಂದುಗೂಡಿಸಿದಾಗ ಮಾತ್ರ ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಸಾಧ್ಯವೆಂದು ಹೇಳುತ್ತಿದ್ದರು. ಪ್ರತಿ ಸಂದರ್ಭದಲ್ಲಿ ಸರ್ಕಾರಗಳ ಜನವಿರೋಧಿ ನೀತಿಯನ್ನು ಖಂಡಿಸುತ್ತಿದ್ದರು. ಇಂತಹ ವ್ಯಕ್ತಿಯ ಧ್ವನಿಯನ್ನು ಮಟ್ಟಹಾಕಲೇಬೇಕೆಂಬ ಉದ್ದೇಶದಿಂದ ದೇಶದ್ರೋಹದಂತಹ ಯು.ಎ.ಪಿ.ಎ ಕಾಯ್ದೆ ಅಡಿಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಬಂಧಿಸಲಾಗಿದೆ.

ಕಳೆದ ೨೦೧೮ನೇ ಇಸವಿಯಲ್ಲಿ ಭೀಮಾ ಕೋರಗಾವ್ ವಿಜಯೋತ್ಸವದ ಸಂದರ್ಭದಲ್ಲಿ ದಲಿತ ಹೋರಾಟಗಾರರು ವಿಜಯೋತ್ಸವ ಆಚಾರಣೆ ಮಾಡುವ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಶಕ್ತಿಗಳು ಗಲಭೆ ಮಾಡಿ ಸುಮಾರು ಆಸ್ತಿ-ಪಾಸ್ತಿಗಳ ನಷ್ಟ ಉಂಟಾಗಿ ಸ್ವಲ್ಪ ಜನ ಪ್ರಾಣ ಕಳೆದುಕೊಂಡರು. ಈ ಸಂದರ್ಭವನ್ನು ಬಳಸಿಕೊಂಡು ಸರ್ಕಾರವು ದಲಿತರ ಮತ್ತು ಮುಸಲ್ಮಾನರ ಪರವಾಗಿ ಹೋರಾಟ ಮಾಡುತ್ತಿದ್ದ ಒಬ್ಬ ಮಾನವ ಹಕ್ಕುಗಳ ಹೋರಾಟಗಾರನಾದ ಸ್ಟ್ಯಾನ್ ಸ್ವಾಮಿರವರನ್ನ ಗಲಭೆ ನಡೆದು ಒಂದುವರೆ ವರ್ಷದ ನಂತರ ಸುಮಾರು ೮೪ ವರ್ಷದ ವಯಸ್ಸಿನ ಪಾರ್ಕಿನ್ ಸನ್ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಯನ್ನು ಬಂಧಿಸಿ ಬಂಧನಕ್ಕೊಳಪಡಿಸಲಾಯಿತು ಇದು ಸರ್ಕಾರದ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತದೆ. ಇದೆ ಪ್ರಕರಣದಲ್ಲಿ ಒಬ್ಬ ವಕೀಲರನ್ನು ಮತ್ತು ಸಾಹಿತಿಗಳನ್ನು ಬಂಧಿಸಿ ಇವರುಗಳೆಲ್ಲರೂ ದೊಂಬಿಗೆ ಪ್ರಚೋಧನೆ ನೀಡಿದ್ದಾರೆಂದು ಸುಳ್ಳು ಆರೋಪವನ್ನು ಮಾಡಿ ಬಂಧಿಸಲಾಯಿತು. ಈ ರೀತಿ ಸರ್ಕಾರಗಳು ಯಾವುದೇ ವ್ಯಕ್ತಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಈ ರೀತಿ ಅವರ ಧ್ವನಿಯನ್ನು ಮಟ್ಟಹಾಕಲಾಗುವುದು ಎಂದು ಎಚ್ಚರಿಸಿ ಭಯವನ್ನು ಹುಟ್ಟಿಸಿದಂತಿದೆ.

ಕಾಯಿಲೆಯಿಂದ ನರಳುತ್ತಿದ್ದ ಸ್ಟ್ಯಾನ್ ಸ್ವಾಮಿಯವರು ತನ್ನ ಕೈಯಿಂದ ಊಟ ಮಾಡುವುದಾಗಲೀ, ನೀರು ಕುಡಿಯುವುದಾಗಲೀ ಸಾಧ್ಯವಿಲ್ಲ, ನೀರು ಕುಡಿಯಲು ಒಂದು ಪೈಪನ್ನು ಒದಗಿಸಿ ಎಂದು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದಾಗ ಎನ್.ಐ.ಎ ತಕರಾರನ್ನು ಸಲ್ಲಿಸಿ ಒಂದು ತಿಂಗಳ ನಂತರ ನ್ಯಾಯಾಲಯದ ಆದೇಶದ ಮೇರೆಗೆ ಪೈಪನ್ನು ನೀಡಲಾಯಿತು. ಈ ಘಟನೆಯು ಸಂವಿಧಾನ ಬಾಹಿರ ಹಾಗೂ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅವರ ಜೀವಿತ ಕಾಲದಲ್ಲಿ ಅನಾರೋಗ್ಯದ ಆಧಾರ ಮೇಲೆ ಜಾಮೀನನ್ನು ಕೋರಿ ಪರಿ-ಪರಿಯಾಗಿ ಬೇಡಿಕೊಂಡರೂ ನ್ಯಾಯಾಲಯವು ಕೂಡ ಇಂತಹ ಕೋವಿಡ್ ಸಂದರ್ಭದಲ್ಲಿ ತುರ್ತಾಗಿ ಅರ್ಜಿಯನ್ನು ವಿಲೆಪಡಿಸದೆ ಬಂಧನವಾಗಿ ಒಂಬತ್ತು ತಿಂಗಳ ನಂತರ ಮರಣವಾದ ದಿನದಂದೇ ಅರ್ಜಿಯ ದಿನಾಂಕವನ್ನು ನಿಗದಿಪಡಿಸಿದ್ದು, ಅತ್ಯಂತ ದುಖಃಕರ ಸಂಗತಿಯಾಗಿದೆ. ಇವರು ಅಪರಾಧಿ ಎಂದು ಸಾಬೀತಾಗುವ ಪೂರ್ವದಲ್ಲಿಯೇ ಅವರನ್ನು ಶಿಕ್ಷೆಗೆ ಗುರಿಪಡಿಸಿದಂತಾಗಿದೆ. ನೇರವಾಗಿ ಪ್ರಕರಣದಲ್ಲಿ ಭಾಗಿಯಾಗದೆ ಇರುವಂತಹ ಒಬ್ಬ ಮಾನವತಾವಾದಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯವನ್ನು ನೀಡುವಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳು ವಿಫಲವಾಗಿವೆ.

ಸೆರೆವಾಸದಲ್ಲಿಯೇ ಮರಣಹೊಂದಿದ ಇವರ ವಿಷಯವು ಇಡೀ ವಿಶ್ವದಲ್ಲಿ ಭಾರತ ದೇಶದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿದೆ. ವಿಶ್ವಸಂಸ್ಥೆಯು ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇಂತಹ ಘಟನೆಗಳು ದೇಶದ ಬೆಳವಣಿಗೆಗೆ ಕಪ್ಪು ಚುಕ್ಕೆಯಾಗುತ್ತದೆ. ಇವರ ಮರಣವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಒಂದು ಪಾಠವಾಗಿದ್ದು, ಜನತೆಯು ಸರ್ಕಾರಗಳ ಸರ್ವಾಧಿಕಾರಿ ಧೋರಣೆಯನ್ನು ಅರಿತುಕೊಳ್ಳಬೇಕು. ಇಂತಹ ಘಟನೆಗಳು ನಮ್ಮ ಸಂವಿಧಾನದ ಅಡಿಯಲ್ಲಿ ನಡೆಯಬಾರದು ಹಾಗೂ ಇದು ಪ್ರಜಾಪ್ರಭುತ್ವಕ್ಕೆ ಮಾರಕ.

ಈ ಸಂದರ್ಭದಲ್ಲಿ ಆಡಿಟರ್ ಮೊಹಮ್ಮದ್ ಬಾಷಾ ಸಾಬ್, ವಕೀಲರಾದ ರುದ್ರೇಶ್, ಆಮ್ ಆದ್ಮಿ ಪಕ್ಷದ ಆದಿಲ್ ಖಾನ್ ಮತ್ತು ಆಯಿಶಾ, ಕುಮಾರ್‌ಸ್ವಾಮಿ ಅಣ್ಣಪ್ಪ, ಜಮಾತೆ ಇಸ್ಲಾಮಿ ಹಿಂದ್‌ನ ಬಾಷಾ ಸಾಬ್ ಮತ್ತು ಆಬಿದ್ ಹುಸೇನ್, ಅಣ್ಣಪ್ಪ, ಮುಸ್ತಾಫಾ ಮತ್ತಿತರರು ಉಪಸ್ಥಿತರಿದ್ದರು.

Please follow and like us: