ಕ್ರಾಂತಿಕವಿ, ಹಾಡುಗಾರ ಹಾಚಾಲೂ ಹಂಡೀಸಾ ಕೊಲೆಗೀಡಾಗಿ ಒಂದು ವರ್ಷ

ದಿನೇಶ್ ಕುಮಾರ್ ಎಸ್.ಸಿ.

ಇಥಿಯೋಪಿಯಾದ ಕ್ರಾಂತಿಕವಿ, ಹಾಡುಗಾರ ಹಾಚಾಲೂ ಹಂಡೀಸಾ ಕೊಲೆಗೀಡಾಗಿ ಇವತ್ತಿಗೆ ಒಂದು ವರ್ಷವಾಯಿತು ಎಂದು ಸಂತೋಷ ಗುಡ್ಡಿಯಂಗಡಿ ನೆನಪಿಸಿದರು. ಕಳೆದ ವರ್ಷ ಹಂಡೀಸಾ ಸಾವಿನ ನಂತರ ಬರೆದಿದ್ದ ಲೇಖನ ಇಲ್ಲಿದೆ. ನಾನೇ ಎರಡೆರಡು ಬಾರಿ ಓದಿಕೊಂಡೆ, ಕಣ್ಣುಗಳು ಮತ್ತೆಮತ್ತೆ ತುಂಬಿ ಬಂದವು.


ಇಥಿಯೋಪಿಯಾ ಬಗ್ಗೆ ಬರೆದಿದ್ದೆ, ನೀವು ಓದಿರಬಹುದು. ಹಾಚಾಲೂ ಹಂಡೀಸಾ ಎಂಬ ಕ್ರಾಂತಿಕವಿ, ಗಾಯಕನ ದಾರುಣ ಹತ್ಯೆಯ ಬಗ್ಗೆ ಅದರಲ್ಲಿ ಬರೆದಿದ್ದೆ. ಇವತ್ತು ಅವನ ವಿಡಿಯೋಗಳನ್ನು ನೋಡುತ್ತಿದ್ದೆ, ಅಕ್ಷರಶಃ ಗಂಟಲುಬ್ಬಿ ಬಂದಿತು. ನಾಲ್ಕು ಸಾವಿರ ಕಿ.ಮೀಗಳಾಚೆ, ಎಲ್ಲೋ ಒಬ್ಬ ಗಾಯಕ ಪ್ರಾಣ ಕಳೆದುಕೊಂಡರೆ ನನ್ನ ಕಣ್ಣೇಕೆ ತುಂಬಿಕೊಳ್ಳಬೇಕು? ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ ಎಂದಿದ್ದ ಚೆಗುವಾರ. ಹಂಡೀಸಾ ನನ್ನ ಸಂಗಾತಿ ಯಾವಾಗ ಆಗಿಹೋದ?

ಹಂಡೀಸಾ 1986ರಲ್ಲಿ ಹುಟ್ಟಿದವನು. ಅಪ್ಪನಿಗೆ ಈತ ಮೆಡಿಸಿನ್ ಓದಲಿ ಎಂಬ ಆಸೆಯಿತ್ತು. ಆದರೆ ದನ ಮೇಯಿಸಲು ಹೋದಾಗ ಇವನದೇ ಜಗತ್ತು ಅರಳಿ ನಿಂತಿತ್ತು. ಅವನ ಪಾಡಿಗೆ ಅವನು ಹಾಡು ಕಟ್ಟಿ ಹೇಳಿಕೊಳ್ಳುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಇಥಿಯೋಪಿಯಾದ ಚರಿತ್ರೆ ಓದಿಕೊಂಡಿದ್ದ. ಒರೋಮಿಗಳ ಸಂಘರ್ಷದ ಬದುಕು ಕಣ್ಣಿಗೆ ಕಟ್ಟಿದಂತಿತ್ತು. ಅವನು ಕ್ರಾಂತಿಯ ಹಾದಿ ಕಂಡುಕೊಂಡ. ಹದಿನೇಳನೇ ವರ್ಷಕ್ಕೇ ನಿಷೇಧಿತ ಸಂಘಟನೆಯೊಂದರ ಸಂಪರ್ಕವಿದೆ ಎಂಬ ಆರೋಪ ಹೊರೆಸಿ ಅವನನ್ನು ಜೈಲಿಗೆ ತಳ್ಳಲಾಯಿತು. ಜೈಲು ಅವನ ನೈತಿಕ ಶಕ್ತಿಯನ್ನು ಮುರಿಯಬೇಕಿತ್ತು, ಆದರೆ ಹಾಗಾಗಲಿಲ್ಲ. ಸರಳುಗಳ ಹಿಂದೆ ಕುಳಿತು ಅವನು ಇನ್ನಷ್ಟು ಕೆಂಡದಂಥ ಕಾವ್ಯ ಕಟ್ಟಿದ. ಜೈಲಿನಿಂದ ಹೊರಬಂದ ಮೇಲೆ ಮತ್ತಷ್ಟು ಹಾಡಿದ. ನೋಡನೋಡುತ್ತಿದ್ದಂತೆ ಅವನು ಒರೋಮೀ ಜನರ ಪ್ರತಿರೋಧದ ಧ್ವನಿಯಾಗಿಬಿಟ್ಟಿದ್ದ. ಲಕ್ಷಲಕ್ಷ ಅಭಿಮಾನಿಗಳು ಹುಟ್ಟಿಕೊಂಡರು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಸೇರಿಕೊಂಡು ಸರ್ಕಾರವೇ ಉರುಳಿ ಹೋಯಿತು!

ಹಂಡೀಸಾ ತನ್ನ ತಾಯ್ನುಡಿಗಾಗಿ ಹೋರಾಡಿದ, ತನ್ನ ಬುಡಕಟ್ಟು ಜನರಿಗಾಗಿ ಬಡಿದಾಡಿದ. ಒರೋಮೀ ನುಡಿಯಲ್ಲಿ ಶಿಕ್ಷಣ‌ ಪಡೆಯುವುದು ಅಸಾಧ್ಯವಾಗಿದ್ದಾಗ ನಮ್ಮ‌ ನುಡಿಯಲ್ಲಿ ನಾವು ಓದಬಾರದೇ ಎಂದು ಪ್ರಶ್ನಿಸಿದ. ಒರೋಮೀ ಇಥೀಯೋಪಿಯಾದ ಬಹುಜನರ ತಾಯ್ನುಡಿಯಾದರೂ ಅದು ಯಾಕೆ ರಾಷ್ಟ್ರಭಾಷೆಯಾಗಿಲ್ಲ ಎಂದು ಕೇಳಿ ಆಳುವವರನ್ನು ಕಾಡಿದ. ಒರೋಮೀ ಜನರ ಮೇಲೆ ನಡೆಯುತ್ತ ಬಂದ ದೌರ್ಜನ್ಯಗಳನ್ನು ಬಿಡಿಸಿ ಹೇಳುತ್ತ ಬಂದ.

2009ರಲ್ಲಿ ಐದು ವರ್ಷಗಳ ಕಾಲ ಜೈಲಿನಲ್ಲಿದ್ದು ಹೊರಬಂದನಂತರ ಹಂಡೀಸಾ ತನ್ನ ಮೊದಲ ಮ್ಯೂಸಿಕಲ್ ಆಲ್ಬಮ್ ಬಿಡುಗಡೆ ಮಾಡಿದ. ಹೆಚ್ಚು ಜನರನ್ನು ತಲುಪಲು ಅವನು ದಾರಿ ಕಂಡುಕೊಂಡಿದ್ದ. 2015ರಲ್ಲಿ Maalan Jira ಎಂಬ ಎರಡನೇ ಆಲ್ಬಮ್ ಹೊರತಂದ. ಯೂಟ್ಯೂಬ್ ನಲ್ಲಿ ಈ ಹಾಡು ನೀವು ನೋಡಬಹುದು. ಅದು ಕೇವಲ ಹಾಡಲ್ಲ, ಒರೋಮೀಗಳ ಸಾಂಸ್ಕೃತಿಕ ಚರಿತ್ರೆ, ಸಂಘರ್ಷದ ಇತಿಹಾಸ. ಒರೋಮಿಗಳಲ್ಲದವರು ನೋಡಿದರೂ ಅದರ ಮಾಂತ್ರಿಕ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದು. ಅವನಿಗೆ ಹಾಡುವುದು, ಬರೆಯುವುದು ಕ್ರಾಂತಿಯ ಒಂದು ಮಾಧ್ಯಮವಾಗಿತ್ತು. “ನಮ್ಮ ತಾಯಿನೆಲವನ್ನು ಅವರು ಕೆಡವಿದರು, ಅದು ಕೆಡವಲೆಂದು ಕಟ್ಟಿದ್ದಾಗಿರಲಿಲ್ಲ. ಅವರು ನಮ್ಮನ್ನು ಬೇರೆಯಾಗಿಸಿದರು, ನಾವು ಬೇರೆಯಾಗಲು ಹುಟ್ಟಿದವರಲ್ಲ” ಎಂದು ಹಂಡೀಸಾ ಹಾಡುತ್ತಿದ್ದರೆ ಒರೋಮಿಗಳು ಮಂತ್ರಮುಗ್ಧರಾಗಿ ಕೇಳಿದರು. ಒರೋಮಿಗಳಿಗೆ ಇದು ರಾಷ್ಟ್ರಗೀತೆಯಂಥಾಯಿತು, ಕ್ರಾಂತಿಗೀತೆಯಾಯಿತು.

2017ರಲ್ಲಿ ಇಥಿಯೋಪಿಯಾ ರಾಜಧಾನಿ ಅಡೀಸ್ ಅಬಾಬಾದಲ್ಲಿ ಒಂದು ಅದ್ಭುತ ಪ್ರದರ್ಶನವನ್ನು ನೀಡಿದ. ಪ್ರದರ್ಶನ ಎನ್ನುವುದಕ್ಕಿಂತ ಅವನು ಅಲ್ಲಿ ಮಾಡಿದ್ದು ಅಕ್ಷರಶಃ ಸಂಗೀತದ ಮ್ಯಾಜಿಕ್. ಅಲ್ಲಿ ಇವತ್ತಿನ ಪ್ರಧಾನಿ,‌ ರಕ್ಷಣಾ ಸಚಿವರಾದಿಯಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳೂ ಇದ್ದರು. ಕ್ರಾಂತಿಕಾರಿಗಳು ಆಳುವ ದೊರೆಗಳನ್ನು ಎಂದಾದರೂ‌‌ ಓಲೈಸಿದ್ದನ್ನು ಕಂಡಿದ್ದೀರಾ? ಹಂಡೀಸಾಗೆ ಮುಖಕ್ಕೆ ಹೊಡೆದಂತೆ ಸತ್ಯಗಳನ್ನು ಹೇಳಿಯೇ ಅಭ್ಯಾಸ. ಅವತ್ತೂ ಅದನ್ನೇ ಮಾಡಿದ. ಅದನ್ನು ಹಾಡು, ಕಥೆ, ಭಾಷಣ, ನಾಟಕ ಏನಾದರೂ ಅಂದುಕೊಳ್ಳಿ. ಹಂಡೀಸಾ ಅವತ್ತು ಅಕ್ಷರಶಃ ರಾಕ್ ಸ್ಟಾರ್ ಆಗಿದ್ದ. ಜನ ಹುಚ್ಚೆದ್ದು ಕುಣಿದರು. ಪೊಲೀಸರನ್ನು ದಾಟಿ ವೇದಿಕೆಗೇ ನುಗ್ಗಿ ಕುಣಿದರು. ಹಂಡೀಸಾ ಅದೊಂದು ಬಗೆಯ ಆಧ್ಯಾತ್ಮಿಕ ಅನುಭಾವದ ಹೊಳೆಯನ್ನೇ ಹರಿಸಿಬಿಟ್ಟಿದ್ದ.‌ ಅದರ ತರಂಗಗಳು ಆ ಆಡಿಟೋರಿಯಂ ದಾಟಿ ಇಡೀ ಇಥಿಯೋಪಿಯಾಗೆ ಹಬ್ಬಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಇದಾದ ನಾಲ್ಕೇ ತಿಂಗಳಿಗೆ ಒರೋಮೀ ಸಮುದಾದವರೇ ಆದ ಅಬೀ ಅಹಮದ್ ಇಥಿಯೋಪಿಯಾದ ಪ್ರಧಾನಿಯಾಗಿಹೋದರು.

ಹಂಡೀಸಾ ಹಾಡುಗಳು ಒರೋಮೀ ಅಸ್ಮಿತೆಯ ಪ್ರಶ್ನೆಗಳನ್ನು ಮುಂದಿಡುತ್ತಿದ್ದವು, ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಮಾತನಾಡುತ್ತಿದ್ದವು. ಸತತ ದೌರ್ಜನ್ಯಗಳು, ಶೋಷಣೆಯ ವಿರುದ್ಧ ಕಿಡಿಕಿಡಿಯಾಗುತ್ತಿದ್ದವು. ಸಹಜವಾಗಿಯೇ ಪ್ರಭುತ್ವಕ್ಕೆ ಕಿರಿಕಿರಿಯಾಯಿತು, ಶತ್ರುಗಳು ಹುಟ್ಟಿಕೊಂಡರು. ನನ್ನ ಕೊಲೆಗೆ ಹಲವು ಬಾರಿ ವಿಫಲ ಸಂಚುಗಳು ನಡೆದಿವೆ ಎಂದು ಸ್ವತಃ ಹಂಡೀಸಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ. ಅವನ ಆತಂಕವೂ ನಿಜವಾಯಿತು. ಅಪರಿಚಿತ‌ ದುಷ್ಕರ್ಮಿಗಳು ಕಳೆದ ಜೂನ್ 29 ರಂದು ಗುಂಡಿಟ್ಟು ಕೊಂದುಹೋದರು.

ಚೆಗುವಾರ ಒಂದು ಮಾತು ಹೇಳಿದ್ದ. “ನನಗೆ ಗುಂಡಿಕ್ಕಬೇಡಿ, ನಾನು ಚೇ. ಈಗಾಗಲೇ ಸತ್ತಿರುವ ನಿಮಗಿಂತ ಹೆಚ್ಚು ಬದುಕುವ ಅರ್ಹತೆ ನನಗಿದೆ” ಎಂದು. ಹಂಡೀಸಾಗೂ ಬದುಕುವ ಹಕ್ಕು, ಅರ್ಹತೆ ಜೀವಂತ ಶವಗಳಾಗಿ ಬದುಕುವವರಿಗಿಂತ ಹೆಚ್ಚೇ ಇತ್ತು. ಆದರೆ ಮೂವತ್ತ ನಾಲ್ಕು ವರ್ಷ ವಯಸ್ಸಿಗೇ ಆತ ಶವವಾಗಿ ಮಲಗಿಬಿಟ್ಟ.

ಅಂದಿನಿಂದ ಇಂದಿನವರೆಗೆ ಇಥಿಯೋಪಿಯಾದಲ್ಲಿ ಸರ್ಕಾರಿ ಲೆಕ್ಕದ ಪ್ರಕಾರ ನೂರಾ ಅರವತ್ತು ಮಂದಿ ಸತ್ತಿದ್ದಾರೆ. ಕೆಲವರು ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾದರು. ಕೆಲವರು ಎದೆ ಬಡಿದುಕೊಂಡೇ ಸತ್ತರು. ಇಥಿಯೋಪಿಯಾದ ಈ ಸಾವಿನ ಶೋಕ ಅಷ್ಟು ಬೇಗ ಕರಗುವ ಹಾಗೆ ಕಾಣುತ್ತಿಲ್ಲ. ಇಥಿಯೋಪಿಯಾ ಮಾತ್ರವಲ್ಲ, ನೆರೆಯ ಸೊಮಾಲಿಯಾ, ಎರಿಟ್ರಿಯಾಗಳಲ್ಲೂ ಒರೋಮೀ ಭಾಷೆ‌ ಬಾರದ ಜನರೂ ಮರುಗುತ್ತಿದ್ದಾರೆ. ಬಹುಶಃ ನಾಲ್ಕು ಸಾವಿರ ಕಿ.ಮೀ. ದೂರ ಕುಳಿತು ಕೊರಗುತ್ತಿರುವ ನನ್ನ ಹಾಗೆ!

  • ದಿನೇಶ್ ಕುಮಾರ್ ಎಸ್.ಸಿ.
Please follow and like us:
error