ನಮ್ಮ ಸಂವಿಧಾನವೇ ನನ್ನ ಐಡಿಯಾಲಜಿ ಮತ್ತು ಅಜೆಂಡಾ –ದಿನೇಶ್ ಅಮೀನಮಟ್ಟು

ಕತೆಗಾರ ಎಸ್.ದಿವಾಕರ್ ನಮ್ಮ ಹೆಮ್ಮೆಯ ಕಾರ್ಟೂನಿಸ್ಟರನ್ನು ಗುರಿಯಾಗಿಟ್ಟುಕೊಂಡು ಮಾಡಿರುವ ಐಡಿಯಾಲಜಿಯ ವ್ಯಾಖ್ಯಾನದ ಬಗ್ಗೆ ಚರ್ಚೆ ನಡೆಯುತ್ತಿದೆ. Dinesh Kukkujadka, Panju Ganguli ಸೇರಿದಂತೆ ಹಲವಾರು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನಮ್ಮನ್ನೇ ಡಿಪೆನ್ಸಿವ್ ಆಗಿ ಮಾಡುವ ಇಂತಹದ್ದೊಂದು ನೆರೆಟೀವ್ ಹುಟ್ಟುಹಾಕುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅವರು ದೇಶದ್ರೋಹಿ ಎಂದು ಹೇಳುವುದು,ನಾವು ಅಲ್ಲ ಎಂದು ವಾದಿಸುತ್ತಾ ಕೂರುವುದು..ಹೀಗೆ
ನಾನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿದ್ದಾಗ ಈ ಐಡಿಯಾಲಜಿಯ ಬಡಿಗೆ ಹಿಡ್ಕೊಂಡು ಬಹಳ ಮಂದಿ ನನ್ನ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ‘ಸರ್ವಜ್ಞ’ ಪತ್ರಕರ್ತ ರಂಗನಾಥ್ ಪಬ್ಲಿಕ್ ಟಿವಿಚಾನೆಲ್ ನಲ್ಲಿ ನನ್ನ ಪೋಟೊದ ನೆಗೆಟಿವ್ ಚಿತ್ರಹಾಕಿ ನನ್ನ ವಿರುದ್ದ ಒಂದು ಗಂಟೆ ಕಾರ್ಯಕ್ರಮ ನಡೆಸಿದ್ದರು. ಆ ಕಾರ್ಯಕ್ರಮವನ್ನು ಆ್ಯಂಕರಿಂಗ್ ಮಾಡಿದ್ದ ನಮ್ಮ ದೊಡ್ಡ ಬಾಯಿ ರಾಧಾ ಹಿರೇಗೌಡರ್ (ಈಗ ನನ್ನ ದೋಸ್ತ್) ಮತ್ತೆ ಮತ್ತೆ ‘ ಮಾಧ್ಯಮ ಸಲಹೆಗಾರರು ತಮ್ಮ ಐಡಿಯಾಲಜಿಯನ್ನು ಮುಖ್ಯಮಂತ್ರಿಯವರ ತಲೆಗೆ ತುರುಕಬಹುದಾ ಸಾ..ರ್? ಎಂದು ರಾಗ ಎಳೆದು ತಮ್ಮದೇ ಶೈಲಿಯಲ್ಲಿ ಕೇಳಿದ್ದನ್ನು ನೆನಪು ಮಾಡಿಕೊಂಡರೆ ಈಗಲೂ ನಗು ಉಕ್ಕಿಉಕ್ಕಿ ಬರುತ್ತದೆ. ಅವರ ಎದುರಿಗಿದ್ದ ಶಾಸಕ ರವಿಸುಬ್ರಹಣ್ಯ ಮತ್ತು ಪತ್ರಕರ್ತ ಧನಂಜಯ ಕುಲಕರ್ಣಿ ಸುಸ್ತಾಗಿ ಹೋಗಿದ್ದರು. ಸಿದ್ದರಾಮಯ್ಯನವರಿಗೆ ನಾನು ಐಡಿಯಾಲಜಿ ಹೇಳಿಕೊಡುವುದಂತೆ, ಏನೇ ಇರಲಿ I like her style of anchoring !
ಆ ಕಾರ್ಯಕ್ರಮಕ್ಕೆ ನಾನೊಂದು ಪ್ರತಿಕ್ರಿಯೆ ಕೊಟ್ಟಿದ್ದೆ. ಅದನ್ನು ಓದಿರದವರಿಗಾಗಿ ಅದನ್ನೇ ಇನ್ನೂ ಸ್ಪಷ್ಟವಾಗಿ ಬರೆಯುತ್ತಿದ್ದೇನೆ.
ನನಗೆ ಮತ್ತು ನನ್ನಂತೆ ಯೋಚನೆ ಮಾಡುವವರಿಗೆಲ್ಲರಿಗೂ ಒಂದು ಐಡಿಯಾಲಜಿ ಖಂಡಿತ ಇದೆ, ಅದು ಎಡ,ಬಲ,ಮಧ್ಯ ಯಾವುದೂ ಅಲ್ಲ. ಅದು ನಮ್ಮ ಸಂವಿಧಾನ. ನನ್ನ ಸಾರ್ವಜನಿಕ ಬದುಕಿಗೆ ಒಂದು ಅಜೆಂಡಾವೂ ಇದೆ. ಅದು ಸಂವಿಧಾನದ ಆಶಯದಂತೆ ಬದುಕುವ, ಇತರರೂ ಬದುಕುವಂತೆ ಮಾಡುವ ಮತ್ತು ಆ ಆಶಯಗಳಿಗೆ ವಿರುದ್ಧವಾದುದನ್ನು ವಿರೋಧಿಸುವ ಅಜೆಂಡಾ. ನನ್ನ ಐಡಿಯಾಲಜಿ ಮತ್ತು ಅಜೆಂಡಾ ಎರಡೂ ನಮ್ಮ ಸಂವಿಧಾನ.
ಈ ಐಡಿಯಾಲಜಿಯಲ್ಲಿಯೇ ಅಂಬೇಡ್ಕರ್,ಗಾಂಧಿ, ಲೋಹಿಯಾ, ಕಾರ್ಲ್ ಮಾರ್ಕ್ಸ್ ಅವರಿಂದ ಹಿಡಿದು ಬುದ್ಧ,ಬಸವ,ಕನಕ, ಕಬೀರ,ವಿವೇಕಾನಂದ, ನಾರಾಯಣ ಗುರು ಎಲ್ಲರೂ ಇದ್ದಾರೆ. ಈ ಮಹನೀಯರ ಚಿಂತನೆಗಳು ಎಲ್ಲಿಯೂ ಸಂವಿಧಾನದ ಆಶಯಗಳ ಜೊತೆ ಸಂಘರ್ಷಕ್ಕಿಳಿಯುವುದಿಲ್ಲ.
ಸಂವಿಧಾನದ ಐಡಿಯಾಲಜಿಯ ವ್ಯಾಪ್ತಿಯಲ್ಲಿ ಖಂಡಿತ ಸಾವರ್ಕರ್, ಗೋಲ್ವಾಲ್ಕರ್ ಅವರ ಚಿಂತನೆಗಳು ಬರುವುದಿಲ್ಲ. ಯಾರೂ ಎಷ್ಟೇ ಹುನ್ನಾರ,ಅಪಪ್ರಚಾರ, ಬೌದ್ಧಿಕ ಸರ್ಕಸ್ ಮಾಡಿದರೂ ಯಾವ ಮನುಷ್ಯ ವಿರೋಧಿ ಚಿಂತನೆಗಳು ಸಂವಿಧಾನದ ಐಡಿಯಾಲಜಿ ಜೊತೆ ಹೊಂದಿಕೊಳ್ಳುವುದಿಲ್ಲ. ಅದು ಅದರ ವಿರುದ್ಧವಾಗಿಯೇ ಇದೆ. ಬೇಕಾದರೆ ಟ್ರೈ ಮಾಡಲಿ, ಯಶಸ್ಸು ಸಿಕ್ಕಿದರೆ ಕೂತು ಮಾತಾಡೋಣ.
ನಮ್ಮ ಐಡಿಯಾಲಜಿಯನ್ನು ಪ್ರಶ್ನಿಸುವವರಿಗೆ ಈ ವಾಸ್ತವ ನಮಗಿಂತ ಚೆನ್ನಾಗಿ ಗೊತ್ತಿದೆ, ಅದಕ್ಕಾಗಿಯೇ ಅವರು ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುತ್ತಿರುವುದು. ಯಾರೆಲ್ಲ ನಮ್ಮ ಐಡಿಯಾಲಜಿಯನ್ನು ಪ್ರಶ್ನಿಸುತ್ತಾರಲ್ಲಾ ಅವರ ಮುಖಕ್ಕೆ ಈ ಪೋಸ್ಟನ್ನು ಅಂಟಿಸಿಬಿಡಿ.
Please follow and like us: