ಆ ತುರ್ತು ಪರಿಸ್ಥಿತಿ ಮತ್ತು ಈ ತುರ್ತು ಪರಿಸ್ಥಿತಿ-ದಿನೇಶ್ ಅಮಿನ್ ಮಟ್ಟು


ಆಗ ಕೈಮುಗಿದು ನಮಸ್ಕಾರ, ಈಗ ಕಾಲಿಗೆ ಬಿದ್ದು #ಸೂರ್ಯನಮಸ್ಕಾರ

• ಇಂದಿರಾಗಾಂಧಿಯವರದ್ದು ಘೋಷಿತ ತುರ್ತುಪರಿಸ್ಥಿತಿ. ಘೋಷಿತ ಶತ್ರುವಿನ ವಿರುದ್ದ ಹೋರಾಡಬಹುದು,
ಪ್ರಧಾನ ಸೇವಕರದ್ದು ಅಘೋಷಿತ ತುರ್ತು ಪರಿಸ್ಥಿತಿ. ಮಿತ್ರನ ಛದ್ಮವೇಷದ ಶತ್ರುವಿನ ಜೊತೆ ಹೋರಾಟ ಹೇಗೆ ಸಾಧ್ಯ?

• ಇಂದಿರಾಗಾಂಧಿಯವರಲ್ಲಿ ಹದಿನೆಂಟು ತಿಂಗಳ ಕಾಲ ಸರ್ವಾಧಿಕಾರಿ ದೆವ್ವ ಹೊಕ್ಕಿದ್ದು ನಿಜ, ಅದಕ್ಕಾಗಿ ನಂತರ ಅವರು ಬಹಿರಂಗವಾಗಿಯೇ ಪಶ್ಚಾತಾಪ ಪಟ್ಟಿದ್ದರು. ಅವರ ಕುಟುಂಬ ಇಂದಿಗೂ ಪಶ್ಚಾತಾಪ ಪಡುತ್ತಿರುವುದು ಕೂಡಾ ನಿಜ.
ಪ್ರಧಾನ ಸೇವಕರು ತಾನು ತಪ್ಪು ಮಾಡಿಯೇ ಇಲ್ಲ, ಮಾಡುವುದೂ ಇಲ್ಲ ಎನ್ನುವ ಹುಟ್ಟು ಸರ್ವಾಧಿಕಾರಿ. ಒಂದು ದೇಶ, ಒಬ್ಬರೇ ನಾಯಕ. ವಿದೇಶಾಂಗ, ಹಣಕಾಸು, ಕೃಷಿ, ಆರೋಗ್ಯ, ಶಿಕ್ಷಣ ಸಚಿವರ್ಯಾರೂ ಲೆಕ್ಕಕ್ಕಿಲ್ಲ, ಇವರಿಂದಲೇ ನೀತಿ-ನಿರ್ಧಾರಗಳ ಘೋಷಣೆ. ಆಂತರಿಕ ಪ್ರಜಾಪ್ರಭುತ್ವಾ ಯಮುನಾ ನದಿಯಲ್ಲಿ ಕೊಚ್ಚಿ ಹೋಗಿ ಏಳು ವರ್ಷಗಳಾಯಿತು.

• ಇಂದಿರಾಗಾಂಧಿಯವರು ಕೆಲಕಾಲ ಸರ್ವಾಧಿಕಾರಿಯಾಗಿದ್ದು ನಿಜ, ಆದರೆ ಎಂದೂ ಕೂಡಾ ಕೋಮುವಾದಿಯಾಗಿರಲಿಲ್ಲ, ಅಪ್ಪಟ ಜಾತ್ಯತೀತರಾಗಿದ್ದರು, ಧರ್ಮವನ್ನು ರಾಜಕೀಯದ ಲಾಭಕ್ಕೆ ಬಳಸಿಕೊಳ್ಳಲಿಲ್ಲ.
ಪ್ರಧಾನ ಸೇವಕರ ಯಶಸ್ಸಿನ ಮೋಡಸ್ ಅಪರೆಂಡಿ ಕೋಮುವಾದದಿಂದಲೇ ಪ್ರಾರಂಭವಾಗಿ ಅದರಲ್ಲಿಯೇ ಕೊನೆಗೊಳ್ಳುವುದು. ಗುಜರಾತ್ ನಿಂದ ಅಯೋಧ್ಯೆಗೆ ಹೊರಟಿದ್ದ ಕಮಂಡಲ ಯಾತ್ರೆ ಇನ್ನೂ ನಿಂತಿಲ್ಲ.

• ಇಂದಿರಾಗಾಂಧಿ ವಿರೋಧಪಕ್ಷವನ್ನು ಮಾತ್ರವಲ್ಲ, ನ್ಯಾಯಾಂಗವನ್ನೂ ಎದುರು ಹಾಕಿಕೊಂಡು ತನ್ನ ರಾಜಕೀಯ ಅವಸಾನವನ್ನು ತಾನೇ ಆಹ್ಹಾನಿಸಿಕೊಂಡರು.

ಪ್ರಧಾನ ಸೇವಕರ ಆಳ್ವಿಕೆಯಲ್ಲಿ ಸಾಮ,ದಾನ ಭೇದ ದಂಡದ ಪ್ರಯೋಗದಿಂದ ನ್ಯಾಯಾಂಗವೇ ತತ್ತರಿಸಿಹೋಗಿದೆ. ರಂಜನ್ ಗೋಗೊಯ್ ರಾಜ್ಯಸಭೆಯಲ್ಲಿದ್ದಾರೆ, ಬೃಜ್ ಗೋಪಾಲ್ ಹರಿಕಿಷನ್ ಲೋಯಾ ಮಣ್ಣಿನಡಿಯಲ್ಲಿದ್ದಾರೆ.

• ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ಮಾಧ್ಯಮಗಳ ಮೇಲೆ ಸೆನ್ಸಾರ್ ಷಿಪ್ ಹೇರಿದರು, ಪ್ರಶ್ನಿಸಿದವರನ್ನು ಜೈಲಿಗೂ ಹಾಕಿದರು. ಇದು ಮುಖಾಮುಖಿ ಯುದ್ದ. ಇದರ ವಿರುದ್ದ ಸಿಡಿದೆದ್ದ ಪತ್ರಕರ್ತರು ಕಷ್ಟನಷ್ಟಗಳನ್ನು ಲೆಕ್ಕಿಸದೆ ಪ್ರಭುತ್ವದ ವಿರುದ್ದ ಲೇಖನಿ ಝಳಪಿಸಿದರು. ತುರ್ತುಪರಿಸ್ಥಿತಿ ವಿರುದ್ದದ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಪ್ರಧಾನ ಸೇವಕರು ಮಾಧ್ಯಮಗಳ ಮಾಲಕರನ್ನೇ ಖರೀದಿಸಿ- ಬೆದರಿಸಿ ತೊಡೆಮೇಲೆ ಕೂರಿಸಿಕೊಂಡರು. ಅಸಹಾಯಕ ಪತ್ರಕರ್ತರು ಬಗ್ಗಲು ಹೇಳಿದಾಗ ತೆವಳಿದರು, ತೆವಳಲು ಹೇಳಿದಾಗ ಉರುಳಾಡುತ್ತಿದ್ದಾರೆ. -ದಿನೇಶ್ ಅಮಿನ್ ಮಟ್ಟು (ಫೇಸ್ ಬುಕ್ ಪೋಸ್ಟ್)

Please follow and like us: