ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಘೋಷಣೆ ಪ್ರಯೋಗ ಕರ್ನಾಟಕದಿಂದಲೇ ಆರಂಭವಾಗಲಿ – ದಿನೇಶ್ ಅಮಿನ್ ಮಟ್ಟು

ಮುಂದಿನ ಮುಖ್ಯಮಂತ್ರಿ ಮುಂದಿನ ಪ್ರಧಾನಿ ಯಾರೆಂಬ ಬಗ್ಗೆ ಚರ್ಚೆ ಹೊಸದಾಗಿ ಪ್ರಾರಂಭವಾದುದಲ್ಲ, ಇದು ಇಲ್ಲಿಗೆ ನಿಲ್ಲಲಾರದು ಕೂಡಾ. ಈ ಚರ್ಚೆ ಒಂದು ಪಕ್ಷಕ್ಕೆ ಸೀಮಿತವಾಗದೆ ಎಲ್ಲ ಪಕ್ಷಗಳಲ್ಲಿಯೂ ಮುಂದಿನ ದಿನಗಳಲ್ಲಿ ನಡೆಯಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ, ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಪರಿಪಾಠ ಇಲ್ಲ. ರಾಜೀವ್ ಗಾಂಧಿ ಬದುಕಿರುವ ವರೆಗೆ ಪ್ರಧಾನಿ ಯಾರೆಂದು ಘೋಷಿಸುವ ಅಗತ್ಯವೂ ಅದಕ್ಕೆ ಇರಲಿಲ್ಲ. ಆದರೆ ಬಿಜೆಪಿಯದ್ದು ಅನುಕೂಲಸಿಂದು ರಾಜಕಾರಣ.

ಕಳೆದ  ಕರ್ನಾಟಕ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಬಿಜೆಪಿ ನಾಯಕರು ‘ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಕಾಂಗ್ರೆಸಿನವರನ್ನು ಅಣಕಿಸುತ್ತಿದ್ದರು. ಮೊನ್ನೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ‘’ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಬಿಜೆಪಿ ನಾಯಕರನ್ನು ಕೆಣಕುತ್ತಿದ್ದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದರು.

ಇದಕ್ಕೊಂದು ಸುಲಭ ಪರಿಹಾರ ಇದೆ. ಎಲ್ಲ ರಾಜಕೀಯ ಪಕ್ಷಗಳು ಮುಂದಿನ ಮುಖ್ಯಮಂತ್ರಿ, ಮುಂದಿನ ಪ್ರಧಾನಿ ಯಾರೆಂದು ಘೋಷಿಸಿಬಿಡಬೇಕು. ಈ ರೀತಿ ಘೋಷಿಸುವುದು ಭಾರತದ ಯಾವ ರಾಜಕೀಯ ಪಕ್ಷಗಳ ಸಂವಿಧಾನದ ಪ್ರಕಾರವೂ ಪಕ್ಷ ವಿರೋಧಿ ನಿಲುವು ಅಲ್ಲ.

ಇದರ ಪ್ರಯೋಗವನ್ನು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿಯೇ ಶುರು ಮಾಡಲಿ, ಒಬ್ಬ ಅಭ್ಯರ್ಥಿಯನ್ನು ಘೋಷಿಸುವುದು ಕಷ್ಟವಾದರೆ 3-4 ಅಭ್ಯರ್ಥಿಗಳನ್ನು ಘೋಷಿಸಲಿ. ಅವರೆಲ್ಲರೂ ಮುಂದಿನ ಎರಡು ವರ್ಷ ರಾಜ್ಯದ ನಾಲ್ಕು ದಿಕ್ಕುಗಳಿಂದ ಯಾತ್ರೆ ಹೊರಡಲಿ. ತಮ್ಮ ಹಿಂದಿನ ಸಾಧನೆ, ಮುಂದಿನ ಯೋಜನೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ವಿರೋಧ ಪಕ್ಷಗಳ ವೈಫಲ್ಯ ಎಲ್ಲವನ್ನೂ ಜನರಿಗೆ ತಲುಪಿಸಲಿ.

ಹೀಗೆ ಮಾಡದೆ ಇದ್ದರೆ ಏನಾಗಬಹುದೆಂದು ಸುಲಭದಲ್ಲಿ ಊಹಿಸಿಕೊಳ್ಳಬಹುದು. 1983 ವಿಧಾನಸಭಾ ಚುನಾವಣೆಯ ಕಾಲದಲ್ಲಿ ಎಸ್.ಬಂಗಾರಪ್ಪ ತಮ್ಮ ಸ್ವಂತ ಕ್ಷೇತ್ರ ಸೊರಬಕ್ಕೆ ಕಾಲಿಡದೆ ಇಡೀ ರಾಜ್ಯ ಸುತ್ತಿ ಪ್ರಚಾರ ಮಾಡಿದರು. ಜನತಾ ರಂಗ ಗೆದ್ದ ನಂತರ  ಅವರು ಬೆಂಗಳೂರಿಗೆ ಹಿಂದಿರುಗಿದಾಗ ಅಜ್ಞಾತವಾಸದಲ್ಲಿದ್ದ ರಾಮಕೃಷ್ಣ ಹೆಗಡೆ ಎಂಬ ನಾಯಕ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದರು.

ರಾಜಕಾರಣವೇ ವ್ಯಾಪಾರವಾಗಿ ದುಡ್ಡಿನ ಬಲದಿಂದಲೇ ಅಧಿಕಾರ ಗಳಿಸಲು ಸಾಧ್ಯ ಇದೆ ಎಂದು ಮತ್ತೆಮತ್ತೆ ಸಾಬೀತಾಗುವ ಇಂದಿನ ದಿನಗಳಲ್ಲಿ ಇತಿಹಾಸ ಪುನರಾವರ್ತನೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಇದಕ್ಕಾಗಿ ಯಾರ ಶ್ರಮ ಎಷ್ಟು ಎಂದು ಜನರೇ ತೀರ್ಮಾನ ಮಾಡಿ ಕೂಲಿ ಕೊಟ್ಟು ಬಿಡಲಿ. -ದಿನೇಶ್ ಅಮಿನ್ ಮಟ್ಟು

Please follow and like us: