ಎಂ.ಕೆ.ಸ್ಟಾಲಿನ್ ಸರ್ಕಾರದ ಕ್ರಾಂತಿಕಾರಿ ನಿರ್ಧಾರ ನಮ್ಮಲ್ಲೂ ಜಾರಿಯಾಗಲಿ- ದಿನೇಶ್ ಅಮೀನಮಟ್ಟು

ಬ್ರಾಹ್ಮಣ-ಬ್ರಾಹಣ್ಯಗಳ ನಡುವಿನ ವ್ಯತ್ಯಾಸದ ಕೂದಲು ಸೀಳುವ ಚರ್ಚೆಯ ನಡುವೆ ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಸರ್ಕಾರ ಸದ್ದಿಲ್ಲದೆ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ಅಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ 36,000 ದೇವಸ್ಥಾನಗಳಲ್ಲಿ ಮಹಿಳೆಯರು ಸೇರಿದಂತೆ ಅಬ್ರಾಹ್ಮಣರನ್ನು ಕೂಡಾ ಅರ್ಚಕರನ್ನಾಗಿ ನೇಮಿಸುವ ನಿರ್ಧಾರ ಕೈಗೊಂಡಿದೆ.

ಇದೇನು ಸ್ಟಾಲಿನ್ ಅವರು ಮೊದಲ ಬಾರಿ ಕೈಗೊಂಡ ನಿರ್ಧಾರ ಅಲ್ಲ. ಪೆರಿಯಾರ್ ಹೇಳಿದ್ದನ್ನು, ಅಪ್ಪ ಕರುಣಾನಿಧಿ ಮಾಡಿದ್ದನ್ನು ಅವರು ಮುಂದುವರಿಸಲು ಹೊರಟಿದ್ದಾರೆ. 1971ರಲ್ಲಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿ ಅವರು ವಂಶಪರಂಪರೆಯ ಆಧಾರದಲ್ಲಿ ದೇವಸ್ಥಾನಗಳಿಗೆ ಅರ್ಚಕರನ್ನು ನೇಮಿಸುವ ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಗೆ ತಿದ್ದುಪಡಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಆ ಆದೇಶವನ್ನು ರದ್ದು ಮಾಡಿತ್ತು.

2006ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ ಕರುಣಾನಿಧಿ ಅವರು ಆಗಮಶಾಸ್ತ್ರದಲ್ಲಿ ತರಬೇತಿ ಪಡೆದ ಅಬ್ರಾಹ್ಮಣರನ್ನು ದೇವಸ್ಥಾನಗಳ ಅರ್ಚಕರನ್ನಾಗಿ ನೇಮಿಸುವ ನಿರ್ಧಾರ ಕೈಗೊಂಡಿತು. ಆಗಲೂ ಅಲ್ಲಿನ ಬ್ರಾಹ್ಮಣ ಅರ್ಚಕ ಸಮುದಾಯ ನ್ಯಾಯಾಲಯಕ್ಕೆ ಮೊರೆ ಇಟ್ಟಿತ್ತು. ಒಂಬತ್ತು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಸುಪ್ರೀಂಕೋರ್ಟ್ ಆಗಮಶಾಸ್ತ್ರ ಪರಿಣತರಾದ ಎಲ್ಲರನ್ನೂ ಜಾತಿಭೇದ ಇಲ್ಲದೆ ದೇವಸ್ಥಾನಗಳ ಅರ್ಚಕರನ್ನಾಗಿ ನೇಮಿಸಬಹುದು ಎಂಬ ಐತಿಹಾಸಿಕ ತೀರ್ಪು ನೀಡಿತ್ತು. ಅರ್ಚಕರ ತರಬೇತಿಗಾಗಿ ಡಿಎಂಕೆ ಸರ್ಕಾರ ಆರು ಶಾಲೆಗಳನ್ನು ಪ್ರಾರಂಭಿಸಿತ್ತು. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ಈಗ ಆ ರಾಜ್ಯದಲ್ಲಿ ಇಬ್ಬರೇ ಇಬ್ಬರು ಅಬ್ರಾಹ್ಮಣ ಅರ್ಚಕರಿದ್ದಾರೆ.ಹದಿನೈದು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬಂದ ಡಿಎಂಕೆ ಈಗ ತನ್ನ ಹಳೆಯ ಆದೇಶವನ್ನು ಜಾರಿಗೆ ತರಲು ಹೊರಟಿದೆ. ಅಚ್ಚರಿಯ ಸಂಗತಿ ಎಂದರೆ ತಮಿಳುನಾಡಿನ ಬಿಜೆಪಿ ಘಟಕ ಸರ್ಕಾರದ ಆದೇಶವನ್ನು ಸ್ವಾಗತಿಸಿದೆ.

ದೇವಸ್ಥಾನಗಳಿಗೆ ಜಾತಿಭೇದವಿಲ್ಲದೆ ಎಲ್ಲರನ್ನು ಅರ್ಚಕರನ್ನಾಗಿ ನೇಮಿಸಬೇಕೆಂಬ ಚಳುವಳಿಯನ್ನು ನೂರು ವರ್ಷಗಳ ಹಿಂದೆಯೇ ಕೇರಳದಲ್ಲಿ ನಾರಾಯಣ ಗುರುಗಳು ಪ್ರಾರಂಭಿಸಿದ್ದರು. ಇದಕ್ಕಾಗಿ ಗುರುಗಳು ಆಗಮಶಾಸ್ತ್ರದ ತರಬೇತಿಗಾಗಿ ಬ್ರಹ್ಮಸಂಘವನ್ನು ಸ್ಥಾಪಿಸಿದ್ದರು. ಅಲ್ಲಿ ತರಬೇತಿ ಪಡೆದಿರುವ ನೂರಾರು ಬಿಲ್ಲವ ಅರ್ಚಕರು ಇಂದು ದಕ್ಷಿಣ ಕನ್ನಡ –ಉಡುಪಿ ಜಿಲ್ಲೆಗಳಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರು ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪರಿಶಿಷ್ಟಜಾತಿ-ಪಂಗಡದವರ ಜೊತೆಯಲ್ಲಿ ಮಹಿಳೆಯರನ್ನೂ ಅರ್ಚಕರನ್ನಾಗಿ ನೇಮಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದರು.

ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ನಾರಾಯಣ ಗುರುಗಳನ್ನು ತಮ್ಮ ಗುರುಗಳೆಂದು ಒಪ್ಪಿಕೊಳ್ಳುವ ಬಿಲ್ಲವ ಸಮುದಾಯದ ನಾಯಕರೊಬ್ಬರು ಧಾರ್ಮಿಕ ದತ್ತಿ ಇಲಾಖೆಯ ಸಚಿವರಾಗಿದ್ದಾರೆ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರು ಈ ಅವಕಾಶವನ್ನು ಬಳಸಿಕೊಂಡು ನಾರಾಯಣ ಗುರುಗಳ ಆಶಯಕ್ಕೆ ಅನುಗುಣವಾಗಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಜಾತಿಭೇದವಿಲ್ಲದೆ ಅರ್ಚಕರನ್ನು ನೇಮಿಸುವ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು.
ಹಿಂದೂಗಳೆಲ್ಲ ಸೋದರರು ಎಂದು ಭಾವಿಸುವ ಆರ್ ಎಸ್ ಎಸ್ ಮತ್ತು ಅದರ ಪರಿವಾರ ಸಂಘಟನೆಗಳು ಹಾಗೂ ಬ್ರಾಹ್ಮಣರು ಬೇರೆ, ಜಾತಿಭೇದ, ಪುರೋಹಿತಷಾಹಿಯನ್ನು ಒಪ್ಪಿಕೊಳ್ಳುವ ಬ್ರಾಹ್ಮಣ್ಯ ಬೇರೆ ಎಂದು ವಾದಿಸುತ್ತಿರುವ ಬ್ರಾಹ್ಮಣರು ಮತ್ತು ಅವರ ಸಂಘಸಂಸ್ಥೆಗಳು ಕೂಡಾ ಇದನ್ನು ವಿರೋಧಿಸಲಿಕ್ಕಿಲ್ಲ ಎಂದು ನಂಬಿದ್ದೇನೆ.
ದಿನೇಶ್ ಅಮಿನ್ ಮಟ್ಟು

Please follow and like us: