ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ಈ ಸಂಕೇಶ್ವರ್.. !!

-ದಿನೇಶ್ ಅಮೀನಮಟ್ಟು

ಲಿಂಬೆ ಹಣ್ಣು ಚಿಕಿತ್ಸೆಯ ಸಲಹೆ ನೀಡಿದ ಮಾಧ್ಯಮೋದ್ಯಮಿ ವಿಜಯ್ ಸಂಕೇಶ್ವರ್, ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ಎನ್ನುವುದನ್ನು ಬಹಳ ಮಂದಿ ಮರೆತುಬಿಟ್ಟಿದ್ದಾರೆ.

ಮೊದಲನೆಯದಾಗಿ,
ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದ್ದ ಕನ್ನಡ ಮಾಧ್ಯಮ‌ ಕ್ಷೇತ್ರವನ್ನು ಪತ್ರಿಕಾ ಧರ್ಮವನ್ನೇ ಮರೆತ ಕೇವಲ ಲಾಭ-ನಷ್ಟದ ವ್ಯಾಪಾರವನ್ನಾಗಿ‌ ಮಾಡಿದವರು ಸಂಕೇಶ್ವರ್.
ಇಂಗ್ಲೀಷ್ ಮಾಧ್ಯಮದಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರಾರಂಭಿಸಿದ್ದ ಬೆಲೆ‌ ಸಮರದ ಅನಾರೋಗ್ಯ‌ ಪೈಪೋಟಿಯ ವ್ಯಾಪಾರಿ ತಂತ್ರವನ್ನು‌ ವಿಜಯಕರ್ನಾಟಕದ ಮೂಲಕ ಕರ್ನಾಟಕಕ್ಕೆ ಪರಿಚಯಿಸಿದವರು ಸಂಕೇಶ್ವರ್. (ಒಂದು ರೂಪಾಯಿಗೆ ಪತ್ರಿಕೆ, ಪತ್ರಿಕೆಯ ಜೊತೆ ಏನೇನೋ‌ ಗಿಪ್ಟ್‌ಗಳ‌ ಆಮಿಷ ಇತ್ಯಾದಿ)

ಎರಡನೆಯದಾಗಿ ಪತ್ರಿಕೆಗೆ ಓದುಗರನ್ನು ಸೆಳೆಯಲು ತನ್ನ ಜಾತಿಯನ್ನು ದುರ್ಬಳಕೆ‌ ಮಾಡಿಕೊಂಡವರು ಸಂಕೇಶ್ವರ್. ಬ್ರಾಹ್ಮಣರು ಸಂಪಾದಕೀಯ ವಿಭಾಗದಲ್ಲಿ ಪಾರುಪತ್ಯ ನಡೆಸುತ್ತಿದ್ದರೂ‌ ಜನಸಂಖ್ಯಾ ಬಲ ಇಲ್ಲದ ಬ್ರಾಹ್ಮಣ ಸಂಪಾದಕರಿಗಾಗಲಿ, ಮಾಧ್ಯಮ ಮಾಲೀಲರಿಗಾಗಲಿ ತನ್ನ ಜಾತಿ ಬಲದ ಮೂಲಕ‌‌ ಪ್ರಸಾರದ ಸಂಖ್ಯೆಯನ್ನು ಹೆಚ್ಚು‌ಮಾಡಲು ಸಾಧ್ಯವಾಗಿರಲಿಲ್ಲ. ಅಂತಹದ್ದೊಂದು ಕೆಟ್ಟ ಪರಂಪರೆಯನ್ನು ಸಂಕೇಶ್ವರ್ ಪ್ರಾರಂಭಿಸಿದರು. ಲಿಂಗಾಯತ ಸ್ವಾಮಿಗಳು,‌ಮಠಗಳು ಮತ್ತು‌ ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಇದಕ್ಕಾಗಿ‌ ಬಳಸಿಕೊಂಡರು.

ಮೂರನೆಯದಾಗಿ, ಪತ್ರಿಕೆಯನ್ನು ಮುಜುಗರ ಇಲ್ಲದೆ ನೇರವಾಗಿ ತನ್ನ ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡವರು ಕೂಡಾ ಸಂಕೇಶ್ವರ್. ಪತ್ರಿಕೆಯ ಮೂಲಕವೇ ಅವರ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿ ಸಂಸತ್ ಪ್ರವೇಶಿಸಿದ ಸಂಕೇಶ್ವರ್ ಕೊನೆಗೆ ಅಧಿಕಾರದ ಮತ್ತಿನಿಂದ ಸ್ವಂತ ಪಕ್ಷ ಕಟ್ಟಿ‌ ಮುಖ್ಯಮಂತ್ರಿಯಾಗಲು ಹೊರಟು ಬುದ್ದಿ ಕಲಿತು ಮತ್ತೆ‌ ಬಿಜೆಪಿ ಸೇರಿಕೊಂಡರು.

ನಾಲ್ಕನೆಯದಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಹಲವಾರು ‘ಪತ್ರಕರ್ತ ರತ್ನ’ ಗಳನ್ನು‌ ನೀಡಿದವರು‌ಕೂಡಾ ಸಂಕೇಶ್ವರ್. ಅವರಲ್ಲಿ ವಿಶ್ವೇಶ್ವರ ಭಟ್, ತಿಮ್ಮಪ್ಪ ಭಟ್, ಹರಿಪ್ರಕಾಶ ಕೋಣನಮನೆ ಮೊದಲಾದವರು ಪ್ರಮುಖರು. ಇಂದಿನ‌‌ ಕನ್ನಡ ಪತ್ರಿಕೆಗಳಲ್ಲಿ ಈ ಭಟ್ರುಗಳ ಶಿಷ್ಯಗಣವೇ ತುಂಬಿವೆ.
ಕೊನೆಗೂ ಸಂಕೇಶ್ವರ್ ಅವರಿಗೆ ತನ್ನ ಜಾತಿಯ ನಾಲ್ಕು ಒಳ್ಳೆಯ ಪತ್ರಕರ್ತರನ್ನು‌ ರೂಪಿಸಲು‌ ಕೂಡಾ ಸಾಧ್ಯವಾಗಿಲ್ಲ. ರವಿ ಬೆಳಗೆರೆ,‌ ಹೆಂಗ್ ಪುಂಗ್ಲಿಯಂತಹವರಿಗೆ ಮುಖ್ಯವಾಹಿನಿ ಮಾಧ್ಯಮದಲ್ಲಿ ಮಾನ್ಯತೆ ನೀಡಿದವರು ಕೂಡಾ ಸಂಕೇಶ್ವರ್.

ಈ ರೀತಿ ಕನ್ನಡ ಪತ್ರಿಕೋದ್ಯೋಗವನ್ನು ವ್ಯಾಪಾರ, ಜಾತಿ ಮತ್ತು ರಾಜಕೀಯದ ಕೆಸರಲ್ಲಿ ಮುಳುಗಿಸಿದವರು ಸಂಕೇಶ್ವರ್ .

ಉದ್ಯಮವಾಗಿ ಬದಲಾಗುತ್ತಿದ್ದ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಸಂಕೇಶ್ವರ್ ಅವರಂತಹ ಚಾಣಾಕ್ಷ್ಯ ಉದ್ಯಮಿಯ ಅಗತ್ಯ ಖಂಡಿತ ಇತ್ತು. ಸಂಕೇಶ್ವರ್ ಅಂತಹ ಒಂದು ನಿರ್ವಾತವನ್ನು ತುಂಬಬಹುದೆಂಬ ನಿರೀಕ್ಷೆ ಇತ್ತು. ಅವರು ಕನ್ನಡ ಓದುಗರ ಸಂಖ್ಯೆಯನ್ನು ಬೆಳೆಸಿದರು, ಹೊಸ ಪ್ರಯೋಗಳಿಗೆ ಕನ್ನಡ ಮಾಧ್ಯಮವನ್ನು ತೆರೆದರು ಎನ್ನುವುದು ನಿಜ,‌ಇದು ಅವರ ಕೊಡುಗೆಯೂ ಹೌದು.

ಇದರ ಜೊತೆಗೆ ಕನ್ನಡ ಪತ್ರಿಕೆಗಳನ್ನು ಸಂಪೂರ್ಣ ವ್ಯಾಪಾರದ ಸರಕನ್ನಾಗಿ‌ ಮಾಡಿದ ಮತ್ತು ಸಮಾಜದಲ್ಲಿ ಪತ್ರಕರ್ತರಿಗಿದ್ದ ಗೌರವ‌ ಕಳೆದುಕೊಳ್ಳುವಂತೆ ಮಾಡಿದ ಕೀರ್ತಿಯೂ ಅವರಿಗೆ‌ ಸಲ್ಲುತ್ತದೆ.

ನನ್ನ ಪ್ರಕಾರ ಸಂಕೇಶ್ವರ್ ಅವರಿಗೆ ಪತ್ರಕರ್ತರ ಬಗ್ಗೆ ದ್ವೇಷ ಇಲ್ಲದೆ ಇದ್ದರೂ ವಿಶೇಷ ಗೌರವ ಖಂಡಿತ ಇಲ್ಲ. ಅವರು ಪತ್ರಿಕೆ ಪ್ರಾರಂಭಿಸಿದ ಹೊಸತರಲ್ಲಿ ಯಾರ ಜೊತೆಯಲ್ಲಿಯೋ ಮಾತನಾಡುತ್ತಾ ” ನಮ್ಮ ಲಾರಿ ಚಾಲಕರ ಸಂಬಳಕ್ಕಿಂತಲೂ ಕಡಿಮೆ ಸಂಬಳಕ್ಕೆ ಪತ್ರಕರ್ತರು ಕೆಲಸಕ್ಕೆ ಸಿಗ್ತಾರೆ ಎಂದು ನನಗೆ ಗೊತ್ತಿರಲಿಲ್ಲ’ ಎಂದು‌ನಕ್ಕಿದ್ದರಂತೆ.

ಈ ಕಾರಣದಿಂದಾಗಿಯೋ ಏನೋ, ಈಶ್ವರ್ ದೈದೋಟ, ಮಹದೇವಪ್ಪ, ಕೃಷ್ಣ ಪ್ರಸಾದ್, ಜಯಂತ್ ಕಾಯ್ಕಿಣಿಯಂತಹವರು ಕೂಡಾ ಬಹಳ ದಿನ ಅವರ ಬಳಿ ಉಳಿಯಲಿಲ್ಲ.

ತಪ್ಪು‌ ಖಂಡಿತ ಅವರದ್ದಲ್ಲ, ಅವರ ಸಾರಥ್ಯದ ಪತ್ರಿಕೆ ಮತ್ತು ಟಿ ವಿ ಚಾನೆಲ್ ಗಳನ್ಬು ಕನ್ನಡದ ಜನ ಒಪ್ಪಿಕೊಂಡಿದ್ದಾರೆ, ಅದೇ ರೀತಿ ಬಡವರ ಬಗೆಗಿನ ತಮ್ಮ ತಿರಸ್ಕಾರ ಮತ್ತು ಕೊರೊನಾಕ್ಕೆ ತಾವು ಕಂಡು ಹಿಡಿದ ಲಿಂಬೆಹುಳಿ ಚಿಕಿತ್ಸೆಯನ್ನೂ ಒಪ್ಪಿಕೊಳ್ಳಬಹುದೆಂಬ ಭರವಸೆಯಿಂದ ಮಾತನಾಡಿದ್ದಾರೆ.

  • Dinesh Amin mattu
Please follow and like us: