ಡಾ.ರಾಜ್ ಮೊದಲ ಭೇಟಿ…

ಡಾ.ರಾಜ್ ಜೊತೆ ಶಿವಾನಂದ ತಗಡೂರ

ಇದು ಮೂರು ದಶಕಗಳ ಹಿಂದಿನ ಮಾತು. ಆಗ ಹಾಸನಕ್ಕೆ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಬರುತ್ತಿದ್ದಾರೆ ಎನ್ನುವುದೇ‌ ದೊಡ್ಡ ಸುದ್ದಿ.
ತೊಂಬತ್ತರ ದಶಕವಾದರೂ ಅದು‌ ರಾಜ್ ಕುಮಾರ್ ಜಮಾನ. ಅವರ ಚಿತ್ರ ರಿಲೀಸ್ ಆದರೂ, ಅದನ್ನು ನೋಡಲು ನೂಕು ನುಗ್ಗಲು. ಇನ್ನು ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಡಾ.ರಾಜ್ ಹವಾ ಹೇಗಿರಬೇಡ?

ಡಾ.ರಾಜ್ ಅಂದರೆ ನಮ್ಮ ಊರಿನಲ್ಲಿ ಅಚ್ಚುಮೆಚ್ಚು. ನನ್ನ ಅವ್ವ ನನಗೆ ಅದೆಷ್ಟು ಬಾರಿ ನನ್ನ ರಾಜಕುಮಾರ ಎಂದು ಮುದ್ದಾಡಿದ್ದಳೋ ಲೆಕ್ಕವಿಲ್ಲ. ಅದಕ್ಕೆ ಏನೋ ಚಿಕ್ಕಂದಿನಿಂದಲೂ ನನಗೆ ನಿಜ ರಾಜ್ ಕುಮಾರ್ ನೋಡಬೇಕು, ಅವರ ಒಡನಾಡಬೇಕು ಅನ್ನುವ ಹಂಬಲ, ಕುತೂಹಲ, ಹೊದಿಕೆ ಹೊದ್ದು ಮೌನವಾಗಿ ಎದೆಯೊಳಗೆ ಮಲಗಿತ್ತು. ಅದಕ್ಕಾಗಿ ನಾನು ಕಾಯ್ದಿದ್ದು ಬರೋಬ್ಬರಿ ಎರಡು ದಶಕ.

ಕಾಲೇಜಿನಲ್ಲಿ ಡಾ.ರಾಜ್ ಅವರ ಸಿನಿಮಾಗಳಿಗೆ ಮುಗಿಬಿದ್ದು ನೋಡಿದ್ದ ಉತ್ಸಾಹ ತಣಿದಿರಲಿಲ್ಲ.
ಬಂಗಾರದ ಮನುಷ್ಯ ಸಿನಿಮಾ ಅಷ್ಟು ಪರಿಣಾಮ ಬೀರಿತ್ತು. ಅವರ ಸಾಲು ಸಾಲು ಸಿನಿಮಾಗಳಿಗೂ ನಾನು ಫ್ಯಾನ್. ಸಿನಿಮಾ ನೋಡಿದಾಗಲೆಲ್ಲ, ಅವರನ್ನು ನೋಡಲೇಬೇಕು ಎನ್ನುವ ಕುತೂಹಲ ಹೆಚ್ಚಿತೆ ಹೊರತು ಬಿಸಿ ಆರಿರಲಿಲ್ಲ. ಅವಕಾಶ ಯಾವಾಗ ಸಿಗುತ್ತದೆಯೊ ಗೊತ್ತಿಲ್ಲ. ಬೆಂಗಳೂರಿಗೆ ಹೋಗಿ ಭೇಟಿ ಮಾಡೋಣ, ಚಿತ್ರೀಕರಣ ನಡೆಯುವಾಗ ಮಾತನಾಡಿಸಿ ಬರೋಣ… ಹೀಗೆ ಏನೇನೋ ಲೆಕ್ಕಾಚಾರ. ಯಾವುದೂ ಸಿದ್ದಿಸಿರಲಿಲ್ಲ.

ಆಗ ತಾನೇ ಹಾಸನದಲ್ಲಿ ಪತ್ರಿಕೋದ್ಯಮಕ್ಕೆ ಜನಮಿತ್ರ ಪತ್ರಿಕೆ ಮೂಲಕ ಎಂಟ್ರಿ ಕೊಟ್ಟಿದ್ದೆ. ಸಂಪಾದಕರಾದ
ಕೃ ನ ಮೂರ್ತಿ‌, ಎ.ಎನ್.ನಾಗೇಶ್ ಅವರು ನನಗೆ ಹೊರಗಡೆ ರಿಪೋರ್ಟಿಂಗ್ ಕಳುಹಿಸುತ್ತಿದ್ದರು. ಹಿರಿಯರಾದ ಅ.ನಾಗರಾಜ್ ನನ್ನ ತಪ್ಪು, ಒಪ್ಪು ತಿದ್ದಿ ತೀಡುತ್ತಿದ್ದರು. ಜಿ.ಪ್ರಕಾಶ್ ಇದೇ ಪತ್ರಿಕೆ ಪ್ರತಿಭೆ.

ನನ್ನ ಕುತೂಹಲ, ಡಾ.ರಾಜ್ ಭೇಟಿ ಹಂಬಲ ತಣಿಯುವ ದಿನ ಬಂದೇಬಿಟ್ಟಿತ್ತು.ಅಂದು ಡಾ.ರಾಜ್ ಹಾಸನಕ್ಕೆ ಕಾರ್ಯಕ್ರಮ. ಹಾಸನಕ್ಕೆ ಬಂದಾಗ ಅವರನ್ನು ಮಾತನಾಡಿಸುವುದು, ಕಾರ್ಯಕ್ರಮ ವರದಿ ಮಾಡುವುದು ಎಲ್ಲವೂ ನನಗೆ ಅಸೈನ್‌ಮೆಂಟ್.

ಹಾಸನದಲ್ಲಿ ಕಲಾಭವನ ಕಾಮಗಾರಿ ಸಲುವಾಗಿ ಡಾ.ರಾಜ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕಾಗಿಯೇ ಹಾಸನಕ್ಕೆ ಡಾ.ರಾಜ್ ಬಂದಾಗ ಅಶೋಕ ಹೊಟೆಲ್ ನಲ್ಲಿ ಮೊದಲ ಭೇಟಿ. ಕೈ ಕುಲುಕಿ ಮಾತನಾಡಿ ಅವರನ್ನು ಕಣ್ತುಂಬಿಕೊಂಡೆ. ಅವರೊಂದಿಗೆ ಅದೇ ಮೊದಲ ಹಸ್ತ ಲಾಘವ. ಅದೊಂದು ಮರೆಯಲಾಗದ ಅವಿಸ್ಮರಣೀಯ ಕ್ಷಣ.

ಏನು ಹೀಗೆ ಬ್ಯಾಗ್ ಹೆಗಲಿಗೆ ನೇತಾಕಿಕೊಂಡಿದ್ದೀರಿ? ಎಂದು ಡಾ.ರಾಜ್ ಕುತೂಹಲಕ್ಕಾಗಿ ನನ್ನ ನೋಡಿ ಕೇಳಿದ್ದರು. ನಾನು ಪ್ರತಿಕ್ರಿಯಿಸುವ ಮುನ್ನವೇ ಜೊತೆಯಲ್ಲಿ ಇದ್ದ ಹಾ.ರಾ.ನಾಗರಾಜ್, ಇವರು ಪತ್ರಕರ್ತರು ಶಿವಾನಂದ್ ತಗಡೂರ್ ಅಂತ. ಯಾವಾಗಲೂ ಬ್ಯಾಗ್ ಇವರ ಜೊತೆಯಲ್ಲಿ ಇರುತ್ತೆ. ಈ ಬ್ಯಾಗ್ ಇಲ್ಲ ಅಂದರೆ ಇವರನ್ನು ಪತ್ತೆ ಹಚ್ಚುವುದು ಕಷ್ಟ ಎಂದಿದ್ದರು. ಓ… ಎಂದು ಡಾ.ರಾಜ್ ನಕ್ಕಿದ್ದ ನೆನಪು. ಜೊತೆಯಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಇದ್ದರು.
ಆಗ ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಸಂಘದ ಹಾ.ರಾ.ನಾಗರಾಜ್, ಬಾಳ್ಳು ಗೋಪಾಲ್ ಕ್ರೀಯಾಶೀಲವಾಗಿ ಕಾರ್ಯಕ್ರಮ ಸಂಘಟಿಸುತ್ತಿದ್ದರು. ಆ ಕ್ಷಣಗಳನ್ನು ಕೂಡ ಮರೆಯುವಂತಿಲ್ಲ.

1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ, ಹಾಸನದಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ.
ಅವತ್ತು ಡಾ.ರಾಜ್ ಕಾರ್ಯಕ್ರಮ. ಆ ದಿನದ ವರದಿಗಾರಿಕೆ ನನ್ನದೇ ಜವಾಬ್ದಾರಿ.
ಜಿಲ್ಲಾ ಕ್ರೀಡಾಂಗಣ ಭರ್ತಿ ಜನವೋ ಜನ.
ಡಾ.ರಾಜ್ ಮಾತು ಶುರುವಾಯಿತು.
ನನ್ನ ಅಭಿಮಾನಿ ದೇವರುಗಳು ಎಂದು ಅಭಿಮಾನಿಗಳತ್ತ ಕೈ ತೋರಿಸಿ ಹೇಳಿದಾಗ ಇಡೀ ಕ್ರೀಡಾಂಗಣದಲ್ಲಿ ಅದೇನೋ ಜೋಷ್. ಪ್ರಶಸ್ತಿ ಸಮಾರಂಭದಲ್ಲಿ ಹಾಡಿಗೆ ಹೆಜ್ಜೆ ಹಾಕಿ ಕುಣಿದ ಆ ಡಾ.ರಾಜ್ ನನ್ನ ಮನದಂಗಳದಲ್ಲಿ ಭದ್ರವಾಗಿ ಪ್ರತಿಷ್ಠಾಪಿಸಿಕೊಂಡಿದ್ದಾರೆ.

ಅದು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಯಾವುದೇ ಪಾತ್ರ ಇರಲಿ, ಡಾ.ರಾಜ್ ಅಭಿನಯ ಅಂದರೆ ಅದಕ್ಕೆ ಸರಿಸಾಟಿ ಇಲ್ಲ. ಅದಕ್ಕೆ ಹೇಳೋದು ಕನ್ನಡಕ್ಕೊಬ್ಬನೇ ರಾಜ್ ಕುಮಾರ್.

ಈ ಎಲ್ಲ ಘಟನಾವಳಿಗಳಿಗೆ ಮೂರು ದಶಕ ತುಂಬಿದೆ. ಆದರೂ, ಆ ಮೊದಲ ಭೇಟಿ, ಮೊದಲ ಮಾತು ಎಲ್ಲವೂ ಅಚ್ಚಳಿಯದೆ ನೆನಪಿನಂಗಳದಲ್ಲಿದೆ. ಇಂಥಹ ಅದೆಷ್ಟು ಕ್ಷಣಗಳಿಗೆ, ಅದೆಷ್ಟು ಅಭಿಮಾನಿಗಳಿಗೆ ಅವರು ಸ್ಪೂರ್ತಿಯಾಗಿದ್ದಾರೊ ಲೆಕ್ಕವಿಲ್ಲ. ಅಂತಹ ಮೇರು ವ್ಯಕ್ತಿತ್ವದ ಪ್ರತಿಭೆ ಅವರು. ಡಾ.ರಾಜ್ ಮತ್ತೊಮ್ಮೆ ಹುಟ್ಟಿ ಬರಲಿ.- ಶಿವಾನಂದ ತಗಡೂರ

Please follow and like us: