ಹಿರಿಯ ಕವಿ ಎಂ.ಡಿ.ಗೊಗೇರಿ ಇನ್ನಿಲ್ಲ.

ಇವರ ಕವಿತೆಗಳು ನಾನು ಆರನೆಯ ತರಗತಿ ಓದುವಾಗಿನಿಂದ ಪರಿಚಯ, ಆಪ್ತ. ಅದರಲ್ಲೂ ‘ಕಳ್ಳಿಕಾಡೆ ಓಡಿ ಬಂದಿತ್ತ..’ ಎಂಬ ಹಾಡು ನನಗೆ ಎಲ್ಲೆಡೆ ‘ಪ್ರಸಿದ್ಧಿ’ ತಂದುಕೊಟ್ಟ ಹಾಡು. ಹೊಳೆ-ಆಲೂರಿನಲ್ಲಿ ನಡೆದ ರೋಣ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲ ಬಾರಿಗೆ ಈ ಹಾಡು ಹಾಡಿದ್ದೆ. ನಂತರ ಹೈಸ್ಕೂಲು, ಕಾಲೇಜುಗಳಲ್ಲೆಲ್ಲ ಇದನ್ನು ಹಾಡಿ ಕುಣಿದಿದ್ದೆ. ಈಗಲೂ ಅವಕಾಶ ಸಿಕ್ಕರೆ ಬಿಡಲ್ಲ.
ನಾನು ಹಿಂದಿ ಬಿ.ಎಡ್. ಓದುವಾಗ ಈ ಹಾಡಿಗೆ ಮರಳಾದ ನನ್ನ ಮಹಾರಾಷ್ಟ್ರ ಮೂಲದ ಅಧ್ಯಾಪಕರು, ಮಹಾರಾಷ್ಟ್ರ-ರಾಜಸ್ತಾನ ರಾಜ್ಯದ ಸಹಪಾಠಿಗಳೂ ಇದನ್ನು ನನ್ನಿಂದ ಹಿಂದಿಗೆ ಅನುವಾದಿಸಿಕೊಂಡು ತಮ್ಮತಮ್ಮಲ್ಲೇ ಹಾಡಿಕೊಳ್ಳುತ್ತಿದ್ದರು.
‘ಚುನಾವಣೆಗೆ ನಿಂತ ನಮ್ಮ ಕಡೆಮನಿ ಹನುಮಂತ…’ ಅವರ ಇನ್ನೊಂದು ಜನಪ್ರಿಯ ಕವಿತೆ-ಹಾಡು. ಲಘು-ಶುದ್ಧ ಹಾಸ್ಯದ ಮೂಲಕವೇ ವ್ಯವಸ್ಥೆಗೆ ತಿವಿಯುವ-ಎಚ್ಚರಿಸುವ ಅವರ ಶೈಲಿ ಅನನ್ಯ.
ಎಂಟನೆಯ ತರಗತಿಯ ಕನ್ನಡ ಪಠ್ಯದಲ್ಲಿ ಅವರ ಕವಿತೆ ನೋಡಿದಾಗ ಏನೋ ಹೆಮ್ಮೆ.
ಮುಂದೆ ಗದಗನಲ್ಲಿ, ೨೦೦೦ನೆಯ ಇಸ್ವಿ ಇರಬೇಕು, ನಾವು ಕೆಲವು ಸ್ನೇಹಿತರು ಮಕ್ಕಳ ಸಾಹಿತ್ಯ ವೇದಿಕೆ ಹುಟ್ಟುಹಾಕಿದಾಗ ಉದ್ಘಾಟನೆಗೆ ಮಕ್ಕಳ ಕವಿ ಗೊಗೇರಿ ಅವರನ್ನು ಆಹ್ವಾನಿಸುವ ನಿರ್ಣಯ ಕೈಗೊಂಡಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಬಾಲ್ಯದಿಂದ ತಮ್ಮ ಕವಿತೆಗಳ ಮೂಲಕ ಅಪ್ತವಾಗಿರುವ ಕವಿಯನ್ನು ಅತಿಥೇಯನಾಗಿ ಅಹ್ವಾನಿಸುವ ಭಾಗ್ಯಕ್ಕೆ ಆನಂದತುಂದಿಲನಾಗಿದ್ದೆ. ಫೋನ್‌ನಲ್ಲಿ ಅವರಿಗೆ ಕೇಳಿಕೊಂಡಾಗ ಒಪ್ಪಿಕೊಂಡರು. ಹೇಗೂ ನಮ್ಮಪ್ಪಾಜಿಯ ಉಚಿತ ರೈಲ್ವೆ ಪಾಸ್ ಇತ್ತಲ್ಲ, ಗದಗನಿಂದ ಹುಬ್ಬಳ್ಳಿಗೆ ಬಂದು ನವ ಅಯೋಧ್ಯಾನಗರದ ಅವರ ಮನೆಗೇ ತೆರಳಿ ಆಮಂತ್ರಣ ಪತ್ರಿಕೆ ನೀಡಿದ್ದೆ. ಮೊದಲ ಭೇಟಿಯಲ್ಲೇ ಸರಳತೆ-ಆಪ್ತತೆಯ ಝರಿ. ಮಧ್ಯಾಹ್ನದೂಟದ ಸವಿ.
ಇವರು ಗಜೇಂದ್ರಗಡ ಬಳಿಯ ಗೊಗೇರಿಯವರು ಎಂಬುದು ತಿಳಿದಾಗ ‘ನಮ್ಮೂರ ಕಡೆಯವರು…’ ಎಂಬ ಮತ್ತೊಂದು ಬೋನಸ್-ಆತ್ಮೀಯತೆಗೆ.
ಅಂದಿನ ಮುಖತಃ ಪರಿಚಯ-ಸ್ನೇಹ ಹಾಗೇ ಇತ್ತು. ಹುಬ್ಬಳ್ಳಿಯಲ್ಲಿ ಅವರೇ ನಮ್ಮ ಮನೆಗೆ ೨-೩ ಬಾರಿ ಬಂದು ನಮ್ಮೆಲ್ಲರ ಜೊತೆ ಹರಟೆ ಹೊಡೆದು ಹೋಗಿದ್ದರು. “ನೀವೂ ಒಮ್ಮೆ ಮನೆಗೆ ಬರ್ರಿ ಸಂಗಮೇಶ, ಒಂದು ದಿನ ಫುಲ್ ಟೈಮ್ ಇಟ್ಟುಕೊಂಡು ಬರ್ರಿ…ಬೆಳಗ್ಗೆಯಿಂದ ಸಂಜೆವರೆಗೆ ನನ್ನ ಹಾರ್ಮೋನಿಯಂ ಜೊತೆಗೆ ಹಾಡೂಣು…ಮಧ್ಯಾಹ್ನ ನಿಮಗೆ ಚಿಕನ್ ಊಟ ಬಡಿಸ್ತೀನಿ…ನಿಮ್ಮ ವಾರದ ರಜೆ ದಿನ ಬರ್ರಿ” ಅಂತ ಆಗಾಗ ಫೋನ್ ಮಾಡಿಯೂ ಕರೀತಿದ್ರು.
ನಾನೇ ತಪ್ಪಿತಸ್ಥ. ಈಗ ಅವರ ಮನೆಯಿಂದ ಕೇವಲ ೭-೮ ಕಿ.ಮೀ. ದೂರದಲ್ಲಿದ್ದರೂ ಅವರ ಅಂತ್ಯಕ್ರಿಯೆಗೆ ಹೋಗಲಾಗದ ಅಸಹಾಯಕತೆ. ಕಣ್ಣಲ್ಲಿ ಹನಿ ಮಾತ್ರ ನಿಲ್ಲುತ್ತಿಲ್ಲ…
Please follow and like us: