ರೈತರ ಅಭಿವೃದ್ಧಿಗೆ ಶ್ರಮಿಸೋಣ: ಸಚಿವ ಬಿ.ಸಿ ಪಾಟೀಲ್

ಕೊಪ್ಪಳ,  :  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ರೈತರಿಗೆ ಸಹಕರಿಸುವುದರ ಜೊತೆಗೆ ರೈತರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದು ರಾಜ್ಯ ಕೃಷಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಹೇಳಿದರು.
ಅವರು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಗಂಗಾವತಿಯಲ್ಲಿ ನೂತನವಾಗಿ ಆರಂಭಿಸಿರುವ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ (ಮಾ. 06) ದಂದು ಆಯೋಜಿಸಲಾಗಿದ್ದ ಮಹಾವಿದ್ಯಾಲಯದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತಾತ್ಮಕ ಕಾರಣಗಳಿಂದ ಕಳೆದ 5 ವರ್ಷಗಳಿಂದ ಕೃಷಿ ವಿದ್ಯಾಲಯವನ್ನು ಆರಂಭಿಸುವ ಯೋಜನೆ ಕುಂಟುತ್ತಾ ಸಾಗಿತ್ತು. ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜ್ಯದ ಮುಖ್ಯಮಂತ್ರಿಗಳು ಕೃಷಿ ವಿದ್ಯಾಲಯ ಪ್ರಾರಂಭಿಸಲು ಅನುಮತಿ ನೀಡಿರುವುದು ಶ್ಲಾಘನೀಯ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಕೃಷಿ ವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಶೇ.40 ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನು ಮುಂದೆ ಇದನ್ನು ಶೇ.50 ಕ್ಕೆ ಹೆಚ್ಚಿಸಲಾಗುತ್ತಿದ್ದು, ಇದರಿಂದ ರೈತರ ಮಕ್ಕಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.


ಕೃಷಿ ನಾಶವಾದರೆ ಜಗತ್ತಿಗೆ ದುರ್ಭಿಕ್ಷೆ ಬರುತ್ತದೆ. ಏಕೆಂದರೆ ಕೃಷಿ ಮಾಡಿದರೆ ಮಾತ್ರ ನಮ್ಮೆಲ್ಲರಿಗೂ ಆಹಾರ ದೊರೆಯುತ್ತದೆ. ಹಾಗಾಗಿ ಕೃಷಿಯಿಂದ ವಿಮುಖವಾದರೆ ನಮಗೆ ಆಹಾರದ ಕೊರತೆ ಉಂಟಾಗಿ, ಮಾನವ ಕುಲಕ್ಕೆ ಸಂಕಷ್ಟ ಎದುರಾಗಲಿದೆ. ಕೃಷಿಗೆ ಅಷ್ಟೊಂದು ಮಹತ್ವವಿದೆ. ದೇಶದಲ್ಲಿ ಶೇ.60 ರಷ್ಟು ಉದ್ಯೋಗಗಳು ಕೃಷಿಯಿಂದ ಸೃಷ್ಠಿಯಾಗಿವೆ. ಅಲ್ಲದೇ ಶೇ.20 ರಷ್ಟು ಜಿಡಿಪಿ ಕೃಷಿ ಕ್ಷೇತ್ರದಿಂದ ಬರುತ್ತದೆ. ಕೃಷಿ ಸಮ್ಮಾನ್ ಯೋಜನೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಇದರಿಂದ ಕೃಷಿ ಇಲಾಖೆಯ ಕಾರ್ಯವೈಖರಿ ತಿಳಿಯುತ್ತದೆ ಎಂದರು.


ರಾಸಾಯನಿಕ ಬಳಸುವುದರಿಂದ ಭೂಮಿ ಹಾಳಾಗುತ್ತದೆ. ಕೃಷಿ ಉಳಿಯಬೇಕಾದರೆ ಭೂಮಿ ಉಳಿಯಬೇಕು. ಭೂಮಿ ಉಳಿದರೆ ಮಾತ್ರ ರೈತರು ಜೀವಂತವಾಗಿರಲು ಸಾಧ್ಯ. ರೈತರ ಮನಸ್ಸನ್ನು ಬದಲಾಯಿಸಬೇಕು. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಭೂಮಿಯನ್ನು ಫಲವತ್ತಾಗಿಸಬೇಕು. ಅಲ್ಲದೇ ನೀರನ್ನು ಮಿತವಾಗಿ ಬಳಸಬೇಕು. ನೀರಾವರಿ ಭಾಗದ ರೈತರೇ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ ಮಂಡ್ಯದಲ್ಲಿ ಕೆಆರ್‌ಎಸ್ ಮತ್ತು ಹೇಮಾವತಿ ಎರಡು ಜಲಾಶಯಗಳಿವೆ. ಇಲ್ಲಿಯೇ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ನೀರಾವರಿ ಪ್ರದೇಶವಲ್ಲ, ಆದರೆ ಇಲ್ಲಿ ಕೇವಲ 5 ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆಂದರೆ ಕೋಲಾರ ಜಿಲ್ಲೆಯವರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಾರೆ. ಇವರನ್ನು ಮಾದರಿಯನ್ನಾಗಿ ತೆಗೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ರೈತರ ಮನೆ ಬಾಗಿಲಿಗೆ ಸರ್ಕಾರ ಹೋಗಬೇಕು ಎನ್ನುವ ಉದ್ದೇಶದಿಂದ ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂಪಾಯಿ ಹಣ ಮೀಸಲಿಟ್ಟಿತ್ತು. ಇದರಲ್ಲಿ 10 ಸಾವಿರ ಕೋಟಿ ಹಣವನ್ನು ಆಹಾರ ಸಂಸ್ಕರಣಾ ಘಟಕಕ್ಕಾಗಿ ಮೀಸಲಿಡಲಾಗಿದೆ. ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್ ವಿತರಿಸಲಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಂದು ಕೃಷಿ ಸಂಜೀವಿನಿ ವಾಹನ ವಾಹನವನ್ನು ನೀಡಲಾಗಿದೆ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ರೈತರು ಮತ್ತು ಭೂಮಿಯ ನಡುವೆ ಅವಿನಾಭಾವ ಸಂಬAಧ ಇರುತ್ತದೆ. ಹಾಗಾಗಿ ನಷ್ಟವಾದರೂ ಸಹಿತ ಕೃಷಿಯನ್ನು ರೈತರು ಬಿಡಬಾರದು. ಉದ್ಯಮಗಳು ದೊಡ್ಡ ಮಟ್ಟದ ಸಾಲ ಮಾಡಿದರೂ ಹೆದರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಸಾಲ ಮಾಡುವ ರೈತರು ಹೆದರುವ ಅವಶ್ಯಕತೆ ಇಲ್ಲ. ಬದಲಿಗೆ ಧೈರ್ಯ ತಂದುಕೊಳ್ಳಬೇಕು. ಸೈನಿಕರಿಗೆ ಹಾಗೂ ರೈತರಿಗೆ ದೇಶದಲ್ಲಿ ದೊಡ್ಡ ಗೌರವವಿದೆ. ಅದನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಸಂಕಷ್ಟದ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರು ಕೃಷಿ ವಿದ್ಯಾಲಯವನ್ನು ಆರಂಭಿಸಲು ಕಾರಣವಾಗಿರುವುದು ಅಭಿನಂದನಾರ್ಹವಾಗಿದ್ದು, ವಿದ್ಯಾರ್ಥಿಗಳ ಸೌಭಾಗ್ಯವೂ ಹೌದು. ಗಂಗಾವತಿ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕು. ಅಮೃತ್ ಸಿಟಿ ಯೋಜನೆ, ಕೇಂದ್ರೀಯ ವಿದ್ಯಾಲಯ ಹಾಗೂ ಗಂಗಾವತಿಯಲ್ಲಿ ರೈಲು ಸೇವೆಯನ್ನು ಆರಂಭಿಸಿದ್ದು ನನ್ನ ಸಾರ್ಥಕ ಕ್ಷಣವಾಗಿದೆ. ಅಧಿಕಾರ ಶಾಶ್ವತವಲ್ಲ, ನಾವು ಮಾಡುವ ಕೆಲಸ ಶಾಶ್ವತವಾಗಿರುತ್ತವೆ. ಹಾಗಾಗಿ ಕೈಲಾದ ಮಟ್ಟಿಗೆ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಹಾಗೂ ಭದ್ರಾದಿಂದ ನೀರು ಹರಿಸುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಆದಷ್ಟು ಈ ಯೋಜನೆಗಳು ಅನುಷ್ಠಾನ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಪರಣ್ಣ ಮುನವಳ್ಳಿ ಮಾತನಾಡಿ, ಇಂದು ಕೃಷಿ ಮಹಾವಿದ್ಯಾಲಯವನ್ನು ಕೃಷಿ ಸಚಿವರು ಉದ್ಘಾಟಿಸಿದ್ದು ಸಂತಸದ ಸಂಗತಿಯಾಗಿದೆ. ಕರೋನಾ ವೈರಸ್‌ನ ಸಂಕಷ್ಟದಲ್ಲಿಯೂ ಕೂಡ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸದುದ್ದೇಶದಿಂದ ಕೃಷಿ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ ಕೀರ್ತಿ ಮುಖ್ಯಮಂತ್ರಿಯವರಿಗೆ ಮತ್ತÄ ಕೃಷಿ ಸಚಿವರಿಗೆ ಸಲ್ಲುತ್ತದೆ ಎಂದರು.
ಗಂಗಾವತಿಯಲ್ಲಿ ಕೃಷಿ ಕಾಲೇಜು ಮಂಜೂರು ಮಾಡಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ವಿಶ್ವವಿದ್ಯಾಲಯದ ಸಹಕಾರ, ಬೆಂಬಲವು ಪ್ರಶಂಸನೀಯವಾದದ್ದು. ಮುಂಬರುವ ಪೀಳಿಗೆಯ ರೈತರಿಗೆ, ರೈತರ ಮಕ್ಕಳಿಗೆ ಈ ಕೃಷಿ ಮಹಾವಿದ್ಯಾಲಯವು ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಇದರ ಸದುಪಯೋಗವನ್ನು ಈ ಭಾಗದ ಜನರು ಪಡೆದುಕೊಂಡು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ ಮಾತನಾಡಿ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಆರಂಭಿಸಿದ ನಾಲ್ಕನೇ ಮಹಾವಿದ್ಯಾಲಯ ಇದಾಗಿದೆ. ಶಿಕ್ಷಣ, ಸಂಶೋಧನೆ, ವಿಸ್ತರಣೆಗಳು ನಮ್ಮ ಧ್ಯೇಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ರೈತರ ಏಳ್ಗೆಗೆ ಈ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮುಟ್ಟಿಸುವಲ್ಲಿ ಸಫಲರಾದಾಗ ಅವರ ಆದಾಯವು ದ್ವಿಗುಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಅವಶ್ಯಕವಾಗಿರುವ ಸಲಹೆ, ಮಾಹಿತಿಗಳನ್ನು ವಿಸ್ತರಣಾ ಕೇಂದ್ರದಲ್ಲಿ ಪಡೆಯಬಹುದು ಹಾಗೂ ಇದನ್ನು ರೈತರು ಉಪಯೋಗ ಪಡಿಸಿಕೊಳ್ಳಬೇಕು ಎಂದರು.
ಮಹಾವಿದ್ಯಾಲಯದಲ್ಲಿ ಈಗಾಗಲೇ 35 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಮುಂದಿನ ದಿನಗಳಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ. ಹೀಗಾಗಿ ವಿದ್ಯಾರ್ಥಿ ನಿಲಯ ಮಂಜೂರು ಮಾಡಬೇಕು. ಇದಕ್ಕಾಗಿ ಹತ್ತು ಕೋಟಿ ರೂ. ಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿAದ ನೀಡುವ ಭರವಸೆಯನ್ನು ಶಾಸಕರು ನೀಡಿದ್ದು, ಕೂಡಲೇ ಅನುದಾನ ನೀಡಿದರೆ ಉಳಿದ ಹಣವನ್ನು ಕೃಷಿ ವಿವಿಯು ವ್ಯಯಿಸಲಿದೆ. ಕೃಷಿ ಮಹಾವಿದ್ಯಾಲಯಕ್ಕೆ 25 ಸಹಾಯಕ ಪ್ರಾಧ್ಯಾಪಕರು 4 ರಿಂದ 5 ಜನ ಪ್ರಾಧ್ಯಾಪಕರ ಅವಶ್ಯಕತೆ ಇದೆ. ಈ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿದರೆ ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ರಾಯಚೂರು ಕೃಷಿ ವಿವಿಯ ಆಡಳಿತ ಮಂಡಳಿಯ ಸದಸ್ಯರಾದ ಮಹಾಂತೇಶ ಪಾಟೀಲ್, ತ್ರಿವಿಕ್ರಮ್ ಜೋಸಿ, ಕೊಟ್ರೇಶ್ ಕೋರೆ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಅಮರೇಶ ಗೋನಾಳ, ಜಿ.ಪಂ ಸದಸ್ಯ ರಾಮಣ್ಣ ಚೌಡ್ಕಿ, ತಾ.ಪಂ ಅಧ್ಯಕ್ಷ ಮಹ್ಮದ್ ರಫಿ ಇದ್ದರು.

https://fb.watch/43jd4UC9pI/https://fb.watch/43jd4UC9pI/

https://fb.watch/43j8HIWcLv/

Please follow and like us: