ಕೊಪ್ಪಳ : ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ೩೧ ವ?ಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ದ್ವಿತೀಯ ದರ್ಜೆ ಸಹಾಯಕಿ ಗಂಗಮ್ಮ ಡಿ.ಡೊಳ್ಳಿನ ಅವರನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ್ ಹೊಸಮನಿ ಸನ್ಮಾನಿಸಿ,ಬೀಳ್ಕೊಟ್ಟರು.
ನಗರದ ಕಿನ್ನಾಳ ರಸ್ತೆಯ ಮಹಾಲಕ್ಷ್ಮೀ ಲೇಔಟ್ ನ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರವಿವಾರ ( ಫೆ.೨೮ ರಂದು) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಸತೀಶಕುಮಾರ ಹೊಸಮನಿ ಮಾತನಾಡಿ, ಗಂಗಮ್ಮ ಡೊಳ್ಳಿನ ಹಾಗೂ ನಮ್ಮದೇ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ದೇವೇಂದ್ರಪ್ಪ ಎನ್.ಡೊಳ್ಳಿನ ಅವರ ಒಟ್ಟು ಕುಟುಂಬ ಇಲಾಖೆಗೆ ಅಕ್ಷರ ಜಗತ್ತಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೊಪ್ಪಳದ ಅಶೋಕ ಸರ್ಕಲ್ ಹತ್ತಿರವಿರುವ ಗ್ರಂಥಾಲಯ ಕಟ್ಟಡ ನಿರ್ಮಾಣವಾಗುವಲ್ಲಿ ದೇವೇಂದ್ರಪ್ಪ ಡೊಳ್ಳಿನ ಅವರ ಸೇವೆ ಸ್ಮರಣೀಯವಾಗಿದೆ ಎಂದರು.
ಮುಖ್ಯ ಗ್ರಂಥಾಲಯಾಧಿಕಾರಿ ಎಮ್.ಎಸ್.ರೆಬಿನಾಳ ಮಾತನಾಡಿ , ದಿ.ದೇವೇಂದ್ರಪ್ಪ ಎನ್. ಡೊಳ್ಳಿನ ಅವರೊಂದಿನ ಒಡನಾಟ ಸ್ಮರಿಸಿದರು. ಅವಿಭಜಿತ ರಾಯಚೂರು ಜಿಲ್ಲೆಯಾಗಿದ್ದಾಗ ೧೯೮೦ ರಲ್ಲಿ ಸಿಂಧನೂರಿನಲ್ಲಿ ಮತ್ತು ೧೯೮೩ ರಲ್ಲಿ ಕೊಪ್ಪಳದಲ್ಲಿ ಶಾಖಾ ಗ್ರಂಥಾಲಯ ಪ್ರಾರಂಭಿಸಿದವರು ಡೊಳ್ಳಿನ ಅವರು ಎಂದು ಗತಕಾಲದ ನೆನಪುಗಳನ್ನು ಮೆಲುಕು ಹಾಕಿ, ನಿವೃತ್ತರಿಗೆ ಶುಭ ಹಾರೈಸಿದರು.
ಇಲಾಖೆಯ ಪ್ರಥಮ ದರ್ಜೆ ಸಹಾಯಕ ನರಸಿಂಹಮೂರ್ತಿ ಮಾತನಾಡಿದರು.
ಉಪ ನಿರ್ದೇಶಕರಾದ ಸಿ.ಜೆ.ವೆಂಕಟೇಶ, ಚಂದ್ರಶೇಖರ, ಮುಖ್ಯ ಗ್ರಂಥಾಲಯಾಧಿಕಾರಿಗಳಾದ ತಿಪ್ಪೇಸ್ವಾಮಿ, ವೆಂಕಟೇಶ್ವರಿ, ಸಾಹಿತಿಗಳಾದ ಡಾ.ಗವಿಸಿದ್ಧಪ್ಪ ಹೆಚ್. ಪಾಟೀಲ ಸೇರಿದಂತೆ ಕೊಪ್ಪಳ, ಬಳ್ಳಾರಿ, ರಾಯಚೂರು, ಹಾವೇರಿ, ಗದಗ, ಯಾದಗಿರ, ಹೊಸಪೇಟೆಯ ಮುಖ್ಯ ಗ್ರಂಥಾಲಯಾಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕವಿತಾ ಮುರಾಳ ಪ್ರಾರ್ಥಿಸಿದರು.ನಾಗರಾಜ ನಾಯಕ ಡೊಳ್ಳಿನ ನಿರೂಪಿಸಿದರು. ಗ್ರಂಥಪಾಲಕ ಶಿವನಗೌಡ ಪಾಟೀಲ ವಂದಿಸಿದರು.