“ಬಾಯಿ ಮುಚ್ಚಿಕೊಂಡಿರಿ” – ದಿನೇಶ್ ಕುಮಾರ್ ಎಸ್.ಸಿ.

ಅವರು ಕೊಟ್ಟಿರುವ ಸಂದೇಶ ಬಹಳ ಸ್ಪಷ್ಟವಾಗಿದೆ ಮತ್ತು ಗಟ್ಟಿಯಾದ ಧ್ವನಿಯಿಂದಲೇ ಹೇಳಲಾಗಿದೆ.

ಈ ಸಂದೇಶ ಎಲ್ಲರಿಗೂ, ವಿಶೇಷವಾಗಿ ಯುವಜನತೆಗೆ.

ಶಾಲೆ, ಕಾಲೇಜುಗಳಲ್ಲಿ ಏನನ್ನು ಕಲಿಸುತ್ತಾರೋ ಓದ್ಕೊಳ್ಳಿ. ಅಪ್ಪ-ಅಮ್ಮ ಗಟ್ಟಿಯಾಗಿದ್ದರೆ ಉಂಡು, ತಿರುಗಿ ಹಾಯಾಗಿರಿ. ಇಲ್ಲದಿದ್ದರೆ ಉಪವಾಸವೇ ಇರಿ. ಓದು ಮುಗಿಸಿದ ಮೇಲೆ ಕೆಲಸ ಸಿಕ್ಕರೆ ಮಾಡಿ, ಇಲ್ಲದಿದ್ದರೆ ಹಾಗೇ ಸಾಯಿರಿ. ಮದುವೆಯಾದರೆ ಮಕ್ಕಳು, ಮರಿ‌ ಮಾಡಿಕೊಳ್ಳಿ, ಧರ್ಮರಕ್ಷಣೆ ಮಾಡಿ. ಸರ್ವಶಕ್ತ ನಾಯಕನನ್ನು ಆರಾಧನೆ ಮಾಡಿ. ದೇಶವೆಂದರೆ ಸರ್ಕಾರ, ದೇಶವೆಂದರೆ ಐವತ್ತಾರು ಇಂಚಿನೆದೆಯ ನಾಯಕ. ಅವರು ಹೇಳಿದಾಗ ದೀಪ, ಕ್ಯಾಂಡಲ್ ಹಚ್ಚಿ, ತಟ್ಟೆ ಬಡಿಯಿರಿ, ಕಟ್ಟಡ ಕಟ್ಟಲು ವಂತಿಗೆ ಕೊಡಿ. ಅವರ ಮನದ ಮಾತುಗಳನ್ನು ಆಗಾಗ ಕೇಳುತ್ತಿರಿ.

ಮಾತಾಡಬೇಡಿ, ಯಾವ ಕಾರಣಕ್ಕೂ ಮಾತಾಡಬೇಡಿ. ಕಾಲೇಜಿನ ಶುಲ್ಕ ಹೆಚ್ಚಾದರೆ ಮಾತಾಡಬೇಡಿ. ಪೆಟ್ರೋಲ್-ಡೀಜೆಲ್ ರೇಟು ಹೆಚ್ಚಾದರೆ ಮಾತಾಡಬೇಡಿ. ದೇಶದ ಸಂಪತ್ತು ಲೂಟಿಯಾದರೆ ಮಾತಾಡಬೇಡಿ. ರೈತರು ಆತ್ಮಹತ್ಯೆ ಮಾಡಿಕೊಂಡರೆ, ಕಾರ್ಮಿಕರು ಬೀದಿಗೆ ಬಿದ್ದರೆ ಮಾತಾಡಬೇಡಿ.‌ ಸಹಮನುಷ್ಯರನ್ನು ಬೀದಿಯಲ್ಲಿ ಎಳೆದಾಡಿ, ಹರಿದು ಸಾಯಿಸಿದರೂ ಮಾತಾಡಬೇಡಿ. ಬಡವರಿಗಾಗುವ ಅನ್ಯಾಯಗಳ ಬಗ್ಗೆ ಮಾತಾಡಬೇಡಿ. ಮೌಢ್ಯ, ಮತಾಂಧತೆಗಳ ಕುರಿತು ಮಾತಾಡಬೇಡಿ.

ಮಾತಾಡಬೇಡಿ, ಪುಟ್ಟ ಬಾಲೆಯರು ಅತ್ಯಾಚಾರಕ್ಕೆ ಒಳಗಾದರೆ ಮಾತಾಡಬೇಡಿ. ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಪೌರಕಾರ್ಮಿಕರು ಸತ್ತರೆ ಮಾತಾಡಬೇಡಿ. ಅಸ್ಪೃಶ್ಯನೊಬ್ಬ ಕುದುರೆ ಮೇಲೇರಿದ ಎಂಬ ಕಾರಣಕ್ಕೆ ಸೀಳಿ ಕೊಂದರೆ ಮಾತಾಡಬೇಡಿ.

ಮಾತಾಡಬೇಡಿ, ಕಾರ್ಪೊರೇಟ್ ಕುಳಗಳ ಕುರಿತಂತೂ ಮಾತಾಡಲೇಬೇಡಿ. ಅವರಿಗೆಂದೇ ತರಲಾದ ಕಾನೂನುಗಳ ಕುರಿತು ಮಾತಾಡಬೇಡಿ. ರೈತರು ಬೀದಿಯಲ್ಲಿ ಬಂದು ಪ್ರತಿಭಟಿಸಿದರೆ ಮಾತಾಡಬೇಡಿ, ನೂರಾರು ರೈತರು ಕೊರೆಯುವ ಚಳಿಯಲ್ಲಿ ನಡುಗಿ ಸತ್ತರೂ ಮಾತಾಡಬೇಡಿ. ಅವರ ಬೆನ್ನು ಹುರಿ ಮುರಿಯುವಂತೆ ಹೊಡೆದಾಗಲೂ ಮಾತಾಡಬೇಡಿ.

ನೀವು ಏನನ್ನು ತಿನ್ನಬೇಕು, ಏನನ್ನು ಕುಡಿಯಬೇಕು, ಏನನ್ನು ಧರಿಸಬೇಕು, ಯಾವ ಭಾಷೆ ಮಾತಾಡಬೇಕು, ಎಲ್ಲವನ್ನೂ ಅವರು ನಿರ್ಧರಿಸುತ್ತಾರೆ. ನಿಮ್ಮ ಮೆದುಳನ್ನು ಅವರ ಕೈಗೆ ಕೊಟ್ಟುಬಿಡಿ, ನಿಮ್ಮ ಬದುಕು ಪೂರ್ತಿ ಅವರದು, ಅದರ ಮೇಲೆ ನಿಮಗೆ ಹಕ್ಕಿಲ್ಲ.

ಪರಿಸರ, ಹವಾಮಾನ ಇತ್ಯಾದಿಗಳ ಕುರಿತಂತೂ ಮಾತಾಡಲೇಬೇಡಿ. ಅದು ದೇಶ ಒಡೆಯುವ ವಿದೇಶಿ ಕುತಂತ್ರ ಎಂಬುದನ್ನು ಮರೆಯಬೇಡಿ.

ಹೊಸಪೀಳಿಗೆಯ ಜನರಿಗೆ ಸಂದೇಶ ಕೊಟ್ಟಾಗಿದೆ. ಬಾಯಿಗೆ ಬೀಗ ಹಾಕಿಕೊಂಡಿರಿ, ಬಾಯಿ ತೆರೆದಿರೋ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ..

ಭಿನ್ನಮತವೆಂಬುದು ದೇಶಪ್ರೇಮದ ಅತ್ಯುನ್ನತ ರೂಪವೆಂಬುದು ಸುಳ್ಳು. ಭಿನ್ನಮತವೆಂಬುದು ದೇಶದ್ರೋಹ! ಈ ಹೊಸ ವ್ಯಾಖ್ಯಾನವನ್ನು ಎಲ್ಲರ ಹಣೆಗಳ ಮೇಲೆ ಬರೆದಿಟ್ಟುಕೊಳ್ಳಿ.

-ದಿನೇಶ್ ಕುಮಾರ್ ಎಸ್.ಸಿ.

Please follow and like us: